ತೀವ್ರ ಚಳಿಗೆ ಹೆಪ್ಪುಗಟ್ಟಿ ಮೃತಪಟ್ಟ ಮಗು ಸೇರಿದಂತೆ ನಾಲ್ವರೂ ಭಾರತೀಯರು ಎಂದು ಕೆನಡಾ ಅಧಿಕಾರಿಗಳು ದೃಢಪಡಿಸಿದ್ದಾರೆ: ಹೈಕಮಿಷನ್

0
373

ಸನ್ಮಾರ್ಗ ವಾರ್ತೆ

ಟೊರೊಂಟೊ: ಕೆನಡಾ-ಯುಎಸ್ ಗಡಿಯ ಬಳಿಯ ಜನವರಿ 19 ರಂದು ಮ್ಯಾನಿಟೋಬಾದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ಮಗು ಸೇರಿದಂತೆ ನಾಲ್ವರ ಮೃತದೇಹಗಳ ಗುರುತು ಪತ್ತೆಹಚ್ಚಲಾಗಿದ್ದು, ಎಲ್ಲರೂ ಭಾರತೀಯರು ಎಂಬುದಾಗಿ ಕೆನಡಾದ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಕುರಿತು ಇಲ್ಲಿನ ಭಾರತದ ಹೈಕಮಿಷನ್ ಮಾಹಿತಿ ನೀಡಿದೆ.

ಕೆನಡಾದ ಅಧಿಕಾರಿಗಳು ಗುರುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಮೃತರನ್ನು ಜಗದೀಶ್ ಬಲದೇವ್‌ಭಾಯ್ ಪಟೇಲ್ (39), ವೈಶಾಲಿ ಬೆನ್ ಜಗದೀಶ್‌ಕುಮಾರ್ ಪಟೇಲ್(37), ವಿಹಂಗಿ ಜಗದೀಶ್‌ಕುಮಾರ್ ಪಟೇಲ್(11), ಧಾರ್ಮಿಕ್ ಜಗದೀಶ್‌ಕುಮಾರ್ ಪಟೇಲ್(3) ಎಂದು ಗುರುತಿಸಿರುವುದಾಗಿ ತಿಳಿಸಿದ್ದಾರೆ.

ತೀವ್ರ ಚಳಿಗೆ ಹೆಪ್ಪುಗಟ್ಟಿ ಮೃತಪಟ್ಟ ನಾಲ್ವರೂ ಭಾರತೀಯ ಪ್ರಜೆಗಳಾಗಿದ್ದಾರೆ. ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ. ವೈದ್ಯಕೀಯ ಪರೀಕ್ಷೆಯ ನಂತರ, ನಾಲ್ವರೂ ಹೊರಗಿನ ಭೀಕರ ಚಳಿಗೆ ಒಡ್ಡಿಕೊಂಡಿದ್ದರಿಂದ ಸಾವಿಗೀಡಾಗಿದ್ದಾರೆ ಎಂದು ಕೆನಡಾ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಇಂಡಿಯನ್ ಹೈಕಮಿಷನ್ ತಿಳಿಸಿದೆ.