ಗೋಹತ್ಯೆ ನಿಷೇಧ ಕಾಯ್ದೆಯನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೆ ಹೋಗಿರೋದ್ರಿಂದ ಅನುಷ್ಠಾನಕ್ಕೆ ತೊಂದರೆ ಆಗಿದೆ: ಸಚಿವ ಸುನೀಲ್ ಕುಮಾರ್

0
206

ಸನ್ಮಾರ್ಗ ವಾರ್ತೆ

ಮಂಗಳೂರು: ರಾಜ್ಯದಲ್ಲಿ ನಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಆದ್ಯತೆ ಮತ್ತು ಬದ್ಧತೆಯ ಮೇರೆಗೆ ಜಾರಿಗೆ ತಂದಿದೆ. ಕೆಲವರು ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಹೀಗಾಗಿ ಅನುಷ್ಠಾನದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ನ್ಯಾಯಾಲಯದ ಕಾರಣದಿಂದ ಆಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್‌ ಕುಮಾರ್‌ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿ ನೇಮಕವಾದ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರ್ ಕದ್ರಿಯಲ್ಲಿರುವ ಮಂಜುನಾಥನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಆಗಮಿಸಿದ ಸಚಿವರಿಗೆ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಸ್ವಾಗತ ಕೋರಿ ಗೌರವಿಸಿ ಸನ್ಮಾನ ಮಾಡಲಾಯಿತು.

ಇದೇ ವೇಳೆ ಮಾತನಾಡಿದ ಅವರು, ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬಿಜೆಪಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಗೆ ಭೇಟಿ ನೀಡಿದ್ದು, ಬಳಿಕ ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವುದಾಗಿ ಹೇಳಿದರು‌. ಮಾತ್ರವಲ್ಲ ಪಕ್ಷದ ಹಿರಿಯ ಮುಖಂಡರ ಹಾಗು ಸಮಾನ ಮನಸ್ಕರ ಸಲಹೆ ಸಹಕಾರ ತೆಗೆದುಕೊಂಡು ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಿದ್ದೇನೆ ಎಂದರು. ಆದಷ್ಟು ಬೇಗ ಗೋ ಹತ್ಯೆ ನಿಷೇಧಕ್ಕಿರುವ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ನಾವು ಯಾವ ಬದ್ಧತೆಯಿಂದ ತರುತ್ತೇವೆಯೋ ಅದೇ ಬದ್ದತೆಯಿಂದ ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆ. ಪೂರಕವಾಗಿ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಿಸಲು ಸ್ಥಳ ಗುರುತಿಸಿ ಅನುದಾನ ನೀಡಲು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.