ಸನ್ಮಾರ್ಗ ವಾರ್ತೆ
ತಮಿಳುನಾಡು,ಆ.27: ಸಣ್ಣದಾದೊಂದು ವಾಹನ ಅಪಘಾತದಿಂದ ನಾಗಪಟ್ಟಣಂ ಜಿಲ್ಲೆಯ ವೇದಾರಣ್ಯ ಪರಿಸರ ಮತ್ತು ಪದ್ರೇಶದಲ್ಲಿ ಸಂಘರ್ಷ ಪರಿಸ್ಥಿತಿ ನಿರ್ಮಾಣವಾಗಿದೆ. ಘರ್ಷಣೆ ನಡೆಯುವ ಪ್ರದೇಶದಲ್ಲಿ ದಲಿತ-ಮೇಲ್ಜಾತಿ ವಿಭಾಗಗಳು ಪರಸ್ಪರ ಹೊಡೆದಾಡುತ್ತಿವೆ. ರವಿವಾರ ಸಂಜೆ ಐದು ಗಂಟೆಗೆ ಗಲಭೆ ಸ್ಫೋಟವಾಗಿತ್ತು. ಮುಕುಲತ್ತೊರ್ ಜಾತಿಯ ಪಾಂಡ್ಯನ್ ಚಲಾಯಿಸುತ್ತಿದ್ದ ಜೀಪ್ ದಲಿತ ಸಮುದಾಯದ ರಾಮಚಂದ್ರನ್ ಕಾರಿಗೆ ಢಿಕ್ಕಿಯಾಗಿತ್ತು. ಇಲ್ಲಿಂದ ಗಳಭೆ ಆರಂಭವಾಗಿದೆ. ಮೊದಲು ಮಾತಿನ ಚಕಮಕಿ ನಡೆದು ಪಾಂಡ್ಯನ್ ರಾಮಚಂದ್ರನ್ರನ್ನು ಮರದ ತುಂಡಿನಿಂದ ಹೊಡೆದಿದ್ದಾನೆ. ರಾಮಚಂದ್ರನ್ರನ್ನು ತಿರುವಾರೂರ್ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ನಡುವೆ ಪಾಂಡ್ಯನ್ ವೇದಾರಣ್ಯ ಪೊಲೀಸ ಠಾಣೆಯ ಮೊರೆ ಹೋಗಿದ್ದಾನೆ. ಸ್ಥಳಕ್ಕೆ ಬಂದ ತಂಡವೊಂದು ಪಾಂಡ್ಯನ್ನ ಜೀಪ್ಗೆ ಬೆಂಕಿ ಹಾಕಿತು. ಪೊಲೀಸ್ ಠಾಣೆಗೆ ಕಲ್ಲೆಸೆಯಿತು. ಈ ನಡುವೆ ಮೇಲ್ಜಾತಿಯವರು ಬಸ್ಸ್ಟ್ಯಾಂಡ್ ಸಮೀಪದಲಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಪುಡಿ ಮಾಡಿದರು. ಇದರೊಂದಿಗೆ ಗಲಭೆ ತೀವ್ರವಾಗಿ ವ್ಯಾಪಿಸಿತು.
ಸೋಮವಾರ ಬೆಳಗ್ಗೆ ಪ್ರತಿಮೆ ಧ್ವಂಸಗೊಂಡ ಅದೇ ಸ್ಥಳದಲ್ಲಿ ರೆವೆನ್ಯೂ ಅಧಿಕಾರಿಗಳು ಅಂಬೇಡ್ಕರ್ ಪ್ರತಿಮೆಯನ್ನು ಮರುಸ್ಥಾಪಿಸಿದರು. ಜೊತೆಗೆ ಪೊಲೀಸ್ ರಕ್ಷಣೆ ಒದಗಿಸಿದರು. ಗಲಭೆಗೆ ಸಂಬಂಧಿಸಿ ಎರಡು ವಿಭಾಗಗಳ ನೂರರಷ್ಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವೇದಾರಣ್ಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸ್ ಡಿಐಜಿ ಎಲ್.ಲೋಕನಾಥನ್ ತಿಳಿಸಿದರು. ವಿಡುದಲೈ ಚಿರುತಗಳ್ ಕಕ್ಷಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೋಯಮತ್ತೂರ್, ವಿರುತಾಚಲಂ ಮುಂತಾದ ಹಲವು ಕಡೆಗಳಲ್ಲಿ ಸರಕಾರಿ ಬಸ್ಸಿಗೆ ಕಲ್ಲೆಸೆಯಲಾಗಿದೆ.












