ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಮನೆ ಮೇಲೆ ಸಿಬಿಐ ದಾಳಿ

0
370

ಸನ್ಮಾರ್ಗ ವಾರ್ತೆ

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಸಂಸತ್‌ನಿಂದ ಉಚ್ಚಾಟಿತ ಸಂಸದೆ ಮಹುವಾ ಮೋಯಿತ್ರಾ ಅವರ ಕೋಲ್ಕತ್ತಾ ಮತ್ತು ಇತರ ನಗರಗಳಲ್ಲಿನ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಲೋಕಪಾಲ್, ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸೂಚಿಸಿದೆ. ಸದ್ಯ ಸಿಬಿಐ ಅಧಿಕಾರಿಗಳು ಶನಿವಾರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಲೋಕಪಾಲ್ ನಿರ್ದೇಶನದ ಮೇರೆಗೆ ಮೊಯಿತ್ರಾ ವಿರುದ್ಧ ಸಿಬಿಐ ಗುರುವಾರ ಎಫ್‌ಐಆರ್ ದಾಖಲಿಸಿದೆ. ಆರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಿಬಿಐಗೆ ಲೋಕಪಾಲ್‌ ಸೂಚಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಬಿಐ ತಂಡಗಳು ಶನಿವಾರ ಮುಂಜಾನೆ ಕೋಲ್ಕತ್ತಾ ಮತ್ತು ಇತರ ನಗರಗಳಲ್ಲಿನ ಮೊಯಿತ್ರಾ ಅವರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, “ಈ ಹಿಂದೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರು ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ” ಎಂದು ಆರೋಪಿಸಿದ್ದರು.

ನಿಶಿಕಾಂತ್ ದುಬೆ ನೀಡಿದ ದೂರಿನ ಆಧಾರದ ಪ್ರಕರಣ ದಾಖಲಾಗಿದೆ. ಮೊಯಿತ್ರಾ ವಿರುದ್ಧದ ಆರೋಪಗಳ ಪ್ರಾಥಮಿಕ ತನಿಖೆ ವರದಿಗಳನ್ನು ಪಡೆದಿರುವ ಲೋಕಪಾಲ್, ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿದೆ. ಈ ಪ್ರಕರಣದಲ್ಲಿ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಹೊರಹಾಕಲಾಗಿದೆ. ಟಿಎಂಸಿ ನಾಯಕಿ ತನ್ನ ಉಚ್ಚಾಟನೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.