ಕುರ್‌ಆನನ್ನು ಅನುಸರಿಸುವುದು ಕಷ್ಟವೇ?

0
381

ಸನ್ಮಾರ್ಗ ವಾರ್ತೆ

✍️ಸಬೀಹಾ ಫಾತಿಮಾ
ಉಪಸಂಪಾದಕಿ, ಅನುಪಮ ಮಾಸಿಕ

ರಮಝಾನ್ ಪವಿತ್ರ ಕುರ್‌ಆನ್ ಅವತೀರ್ಣವಾದ ತಿಂಗಳು. ಅಲ್ಲಾಹನ ಅಪಾರವಾದ ಅನುಗ್ರಹಗಳಿಂದ ಈ ಅನುಗ್ರಹೀತ ತಿಂಗಳಲ್ಲಿ ನಾವಿದ್ದೇವೆ. ಪವಿತ್ರ ರಮಝಾನ್ ತಿಂಗಳಿಗೆ ಶ್ರೇಷ್ಠತೆ ಬಂದಿರುವುದು ಕುರ್‌ಆನ್‌ನ ಕಾರಣದಿಂದಾಗಿ. ಅದನ್ನೇ ಪವಿತ್ರ ಕುರ್‌ಆನಿನ ಎರಡನೇ ಅಧ್ಯಾಯ ಸೂರಃ ಅಲ್‌ಬಕರದ 185ನೇ ವಚನದಲ್ಲಿ ಹೀಗೆ ಹೇಳಲಾಗಿದೆ, “ಮಾನವರಿಗೆ ಸಾದ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯತೆಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳೊ ನ್ನೊಳಗೊಂಡಿರುವ ಕುರ್‌ಆನ್' ಅವತೀರ್ಣಗೊಂಡ ತಿಂಗಳುರಮಝಾನ್’ ಆಗಿರುತ್ತದೆ. ಆದುದರಿಂದ ಯಾವನಾ ದರೂ ಈ ತಿಂಗಳನ್ನು ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು. ಯಾವನಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣಿಕನಾಗಿದ್ದರೆ ಆತನು ಇತರ ದಿನಗಳಲ್ಲಿ ಉಪವಾಸ ದಿನಗಳ ಸಂಖ್ಯೆಯನ್ನು ಪೂರ್ತಿಗೊಳಿಸಬೇಕು. ಅಲ್ಲಾಹ್ ನಿಮಗೆ ಸೌಲಭ್ಯವನ್ನೀಯಲು ಬಯಸುತ್ತಾನೆ. ನಿಮ್ಮನ್ನು ಕಷ್ಟಕ್ಕೀಡು ಮಾಡಲು ಬಯಸುವುದಿಲ್ಲ. ನೀವು ಉಪವಾಸದ ಸಂಖ್ಯೆಯನ್ನು ಪೂರ್ತಿಗೊಳಿಸಲು ಅನುಕೂಲವಾಗುವಂತೆಯೂ ಸನ್ಮಾರ್ಗದರ್ಶನದ ಮೂಲಕ ನಿಮ್ಮನ್ನು ಪ್ರತಿಷ್ಠಿತಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾ ಅವನಿಗೆ ಕೃತಜ್ಞರಾಗಿರಲಿಕ್ಕಾಗಿಯೂ ಈ ವಿಧಾನವನ್ನು ತೋರಿಸಿಕೊಡಲಾಗಿದೆ.”

ಪವಿತ್ರ ಕುರ್‌ಆನ್‌ನ ಮಾರ್ಗದರ್ಶನದ ಪ್ರಕಾರ ಬಾಳಿದ ವ್ಯಕ್ತಿಗಳು ಈ ಜಗತ್ತಿನ ಮೇಲೆ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಜೀವಿಸಿ ನಿರ್ಗಮಿಸಿದ್ದಾರೆ. ಇಂದು ಪವಿತ್ರ ಕುರ್‌ಆನ್‌ನ ಮಾರ್ಗದರ್ಶನದ ಬೆಳಕಿನಲ್ಲಿ ಅದನ್ನು ಅನುಸರಿಸುತ್ತಾ ಜೀವಿಸುತ್ತಿರುವ ಕೋಟಿಗಟ್ಟಲೆ ಜನರು ಜಗತ್ತಿನಾದ್ಯಂತ ಹರಡಿಕೊಂಡಿದ್ದಾರೆ. ಪವಿತ್ರ ಕುರ್‌ಆನ್‌ನಂತೆ ಜೀವನವನ್ನು ಸಾಗಿಸಲು ತರಬೇತಿಯ ರೂಪದಲ್ಲಿ ವರ್ಷಂಪ್ರತಿ ಒಂದು ತಿಂಗಳು ಸಂಪೂರ್ಣವಾಗಿ ಉಪವಾಸ ವ್ರತವನ್ನು ಆಚರಿಸುತ್ತಾರೆ. ದೇಹ ಮತ್ತು ಮನಸ್ಸನ್ನು ಏಕಕಾಲದಲ್ಲಿ ನಿಯಂತ್ರಿಸಿ ಜೀವಿಸುವುದು ಹೇಗೆ ಎಂಬ ಮಹಾ ಪಾಠವು ಇದರ ಮೂಲಕ ಅವರಿಗೆ ಲಭ್ಯವಾಗುತ್ತದೆ.

ಪವಿತ್ರ ಕುರ್‌ಆನ್ ಒಂದು ತೆರೆದ ಪುಸ್ತಕವಾಗಿದೆ. ಇದರ ಮಾರ್ಗದರ್ಶನದಂತೆ ಬದುಕ ಬಯಸಿದವರಿಗೆ ಅದು ಮಾರ್ಗದರ್ಶನ ನೀಡುವುದು ಮಾತ್ರವಲ್ಲ, ಅದರ ಬದುಕನ್ನು ಸುಂದರವಾಗಿಸುತ್ತದೆ ಮತ್ತು ಸಂಪನ್ನವಾಗಿಸುತ್ತದೆ. ಅಲ್ಲಾಹನ ಮೇಲೆ ವಿಶ್ವಾಸವಿಡುವ ಯಾರಿಗೇ ಆದರೂ ಕುರ್‌ಆನನ್ನು ಅನುಸರಿಸುವುದು ಕಷ್ಟವಾಗುವುದಿಲ್ಲ. ಏಕೆಂದರೆ ಈ ಗ್ರಂಥದಲ್ಲಿ ನಮ್ಮ ಪ್ರಕೃತಿಯೊಂದಿಗೆ ಸೆಣಿಸುವ ಯಾವುದೇ ವಿಷಯಗಳಿಲ್ಲ. ಉದಾಹರಣೆಗೆ ಹಸಿವು ಬಾಯಾರಿಕೆ, ನಿದ್ರೆಯಂತೆ ಅನಿವಾರ್ಯವಾದ ಮನುಷ್ಯನ ಬೇಡಿಕೆ ಲೈಂಗಿಕತೆಯಾಗಿದೆ. ಅದನ್ನು ಸಂಪೂರ್ಣವಾಗಿ ತೊರೆದು ನಿಗ್ರಹಿಸಿಕೊಂಡು ಜೀವಿಸಿದರೆ ಮಾತ್ರ ದೇವಸಂಪ್ರೀತಿ ಲಭ್ಯವಾಗುತ್ತದೆ ಎಂದು ಪವಿತ್ರ ಕುರ್‌ಆನ್ ಎಲ್ಲಿಯೂ ಹೇಳುವುದಿಲ್ಲ. ಬದಲಾಗಿ ಪವಿತ್ರ ಕುರ್‌ಆನ್ ವಿವಾಹ ಸಂಬಂಧದ ಮೂಲಕ ಆ ಬಯಕೆಯನ್ನು ಈಡೇರಿಸುವುದನ್ನು ಪುಣ್ಯ ಕಾರ್ಯವೆಂದು ಕಲಿಸಿಕೊಡುತ್ತದೆ. ಹೀಗೆ ಬದುಕಿನ ಯಾವ ವಿಷಯದೊಂದಿಗೂ ವಿಚಾರದೊಂದಿಗೂ ಸಂಘರ್ಷಿಸದೆ ಒಂದು ಸರಳವಾದ, ನೇರವಾದ ಮತ್ತು ಪ್ರಕೃತಿದತ್ತವಾದ ಜೀವನ ವಿಧಾನವನ್ನು ಪವಿತ್ರ ಕುರ್‌ಆನ್ ಪರಿಚಯಿಸುತ್ತದೆ.

ಪವಿತ್ರ ಕುರ್‌ಆನ್‌ನಂತೆ ಸಂಪೂರ್ಣವಾಗಿ ಬದುಕಿ ತೋರಿಸಿದ ಒಂದು ಮಾದರಿಯನ್ನು ಅಲ್ಲಾಹನು ನಮ್ಮ ಮುಂದಿರಿಸಿದ್ದಾನೆ. ಪ್ರವಾದಿ ಮುಹಮ್ಮದ್(ಸ)ರ ಆ ಜೀವಂತ ಮಾದರಿಯಾಗಿದ್ದಾರೆ. ಅವರ ಪತ್ನಿ ಹ. ಆಯಿಶಾ(ರ)ರೊಂದಿಗೆ ಪ್ರವಾದಿಯವರ(ಸ) ಜೀವನ ಹೇಗಿತ್ತು ಎಂದು ಪ್ರಶ್ನಿಸಿದಾಗ, “ನೀವು ಪವಿತ್ರ ಕುರ್‌ಆನನ್ನು ಓದಿಲ್ಲವೇ? ಅವರ ಜೀವನ ಪವಿತ್ರ ಕುರ್‌ಆನ್ ಆಗಿತ್ತು” ಎಂದು ಉತ್ತರಿಸಿದ್ದರು. ಇನ್ನೊಂದರ್ಥದಲ್ಲಿ ಪ್ರವಾದಿ ಮುಹಮ್ಮದ್(ಸ) ನಡೆದಾಡುವ ಕುರ್‌ಆನ್ ಆಗಿದ್ದರು.

ಪವಿತ್ರ ರಮಝಾನ್ ತಿಂಗಳ ಈ ಪವಿತ್ರ ದಿನಗಳಲ್ಲಿ ನಾವು ಎಷ್ಟರ ಮಟ್ಟಿಗೆ ಪವಿತ್ರ ಕುರ್‌ಆನ್‌ನ ಆದೇಶಗಳ ಪ್ರಕಾರ ಬದುಕುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನಕ್ಕೆ ಒಳ ಪಡಿಸಬೇಕು. ಏಕೆಂದರೆ ಇದು ಆತ್ಮಾವಲೋಕನದ ತಿಂಗಳು ಕೂಡಾ ಆಗಿದೆ.

ಪವಿತ್ರ ಕುರ್‌ಆನ್‌ನಲ್ಲಿ ಅಲ್ಲಾಹನ ಹಕ್ಕುಗಳ ಜೊತೆಗೆ ಇತರ ಮನುಷ್ಯರ ಹಕ್ಕುಗಳ ಬಗ್ಗೆಯೂ ಬಾರಿ ಬಾರಿ ಪ್ರಸ್ತಾಪಿಸಲಾಗಿದೆ. ಅಲ್ಲಾಹನ ಮೇಲೆ ವಿಶ್ವಾಸ ಹೊಂದಿರುವ ನಾವು ಅಲ್ಲಾಹನ ಹಕ್ಕುಗಳಲ್ಲಿ ಚ್ಯುತಿಯಾಗದಂತೆ ಗರಿಷ್ಠ ಜಾಗರೂಕತೆ ಪಾಲಿಸುತ್ತೇವೆ. ನಮ್ಮ ಶಿರವು ಅಲ್ಲಾಹನ ಹೊರತು ಬೇರೆ ಯಾರ ಮುಂದೆಯೂ ಬಾಗುವುದಿಲ್ಲ. ಅಲ್ಲಾಹನ ಹೊರತು ನಾವು ಬೇರೆ ಯಾರನ್ನೂ ಯಾವುದನ್ನೂ ಆರಾಧಿಸುವುದಿಲ್ಲ. ಯಾರ ಮುಂದೆಯೂ ಸಾಷ್ಟಾಂಗವೆರಗುವುದಿಲ್ಲ. ಅಲ್ಲಾಹನನ್ನು ಮಾತ್ರ ನಮ್ಮ ಒಡೆಯ, ಆರಾಧ್ಯ, ಸೃಷ್ಟಿಕರ್ತ, ಪರಿಪಾಲಕ ಮುಂತಾಗಿ ವಿಶ್ವಾಸವಿಡುತ್ತೇವೆ. ಅಲ್ಲಾಹನ 99 ಗುಣನಾಮಗಳ ಸ್ಪಷ್ಟವಾದ ಪರಿಚಯವಿದೆ. ಆರಾಧನೆಗಳಾದ ನಮಾಝನ್ನು ಏಕಾಗ್ರತೆಯೊಂದಿಗೆ ಸಮಯ ಪ್ರಜ್ಞೆಯೊಂದಿಗೆ ಸಂಘಟಿತವಾಗಿ ನೆರವೇರಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇವೆ. ರಮಝಾನ್ ತಿಂಗಳ ಉಪವಾಸ ವ್ರತವನ್ನು ಚಾಚೂ ತಪ್ಪದೆ ಪಾಲಿಸಲು ಪ್ರಯತ್ನಿಸುತ್ತೇವೆ. ಹಜ್ಜ್ ಗೆ ಹೋಗುವ ಸಾಧನಾನುಕೂಲತೆಗಳಿದ್ದವರು ವಯಸ್ಸಿನ ಭೇದವಿಲ್ಲದೆ ಹಜ್ಜ್ ಗೆ ತೆರಳುತ್ತಾರೆ.

ಇತ್ತೀಚೆಗೆ ಸಣ್ಣ ಪ್ರಾಯದಲ್ಲಿಯೇ ಹಜ್ಜ್ ಗೆ ಹೋಗುವ ಉತ್ತಮ ಬೆಳವಣಿಗೆ ಕಂಡು ಬರುತ್ತಿದೆ. ಹಿಂದೆಲ್ಲ ಎಲ್ಲ ಜವಾಬ್ದಾರಿಗಳನ್ನು ಮುಗಿಸಿಕೊಂಡು ಮನೆ, ಮಕ್ಕಳ ಮದುವೆ ಎಲ್ಲ ಮುಗಿದಾದ ಮೇಲೆ ಹಜ್ಜ್ ಕರ್ಮಕ್ಕೆ ಸಮಯವಿಡುತ್ತಿದ್ದರು. ಈಗ ಈ ಮನೋಭಾವದಲ್ಲಿ ವಿಶೇಷ ಬದಲಾವಣೆ ಬಂ ದಿದೆ. ಆದರೆ ಪವಿತ್ರ ಕುರ್‌ಆನ್‌ನ ಅನುಕರಣೆ ಝಕಾತ್‌ನ ವಿಷಯದಲ್ಲಿ ಯಥಾವತ್ತಾಗಿ ನಡೆಯುತ್ತಿಲ್ಲ. ಒಂದುವೇಳೆ ಪವಿತ್ರ ಕುರ್‌ಆನಿನ ಆದೇ ಶದ ಪ್ರಕಾರ ಪ್ರವಾದಿ ಮುಹಮ್ಮದ್(ಸ)ರ ಮಾದರಿಯಂತೆ ಝಕಾತ್‌ನ ವಿತರಣೆಯಾಗುತ್ತಿದ್ದರೆ ಇಂದು ಸಮಾಜದಲ್ಲಿ ಬಡಬಗ್ಗರು ಮತ್ತು ದರಿದ್ರರರ ಸಂಖ್ಯೆ ಈ ಮಟ್ಟದಲ್ಲಿ ಹೆಚ್ಚುತ್ತಿರಲಿಲ್ಲ. ಲೆಕ್ಕಾಚಾರ ಪ್ರಕಾರ ಒಂದು ಊರಿನಲ್ಲಿರುವ ಸಿರಿವಂತರು ತಮ್ಮ ಝಕಾತ್‌ನ ಸರಿಯಾದ ಪ್ರಮಾಣವನ್ನು ಸಂಘಟಿತವಾಗಿ ಸಂಗ್ರಹಿಸಿ ಅದನ್ನು ಸರಿಯಾದ ರೀತಿಯಲ್ಲಿ ವಿತರಣೆ ಮಾಡಿದರೆ ಆ ಊರಿನ ಎಲ್ಲರ ಆರ್ಥಿಕ ಸಮಸ್ಯೆಗಳಿಗೆ ತಕ್ಕಮಟ್ಟಿನ ಪರಿಹಾರ ಖಂಡಿತ ಸಿಗುತ್ತದೆ.

ಪವಿತ್ರ ಕುರ್‌ಆನ್‌ನಲ್ಲಿ ಅಲ್ಲಾಹನ ಹಕ್ಕುಗಳ ಬಳಿಕ ಸಹ ಜೀವಿಗಳ ಹಕ್ಕುಗಳ ಬಗ್ಗೆ ಬಹಳ ದೃಢವಾದ ಸ್ವರದಲ್ಲಿ ಹೇಳಲಾಗಿದೆ. ಅವುಗಳಲ್ಲಿ ಈ ಬಡಬಗ್ಗರ, ದರಿದ್ರರ, ಪ್ರಯಾಣಿಕರ, ನೆರೆಹೊರೆಯವರ, ಅನಾಥರ ಸಂಬಂಧಿಕರ ಹಕ್ಕು ಸೇರುತ್ತದೆ.

ಪವಿತ್ರ ಕುರ್‌ಆನನ್ನು ಅನುಸರಿಸುವುದು ಎಂದರೆ ಅದರಲ್ಲಿ ಬಂದಿರುವ ಮಾರ್ಗದರ್ಶನದ ಪ್ರಕಾರ ಬದುಕುವುದು. ಅಲ್ಲಾಹನ ಹಕ್ಕುಗಳನ್ನು ಪ್ರಸ್ತಾಪಿಸಿದ ಬಳಿಕ ಪ್ರಥಮವಾಗಿ ಪ್ರಸ್ತಾಪಿಸಿರುವುದು ಹೆತ್ತವರ ಹಕ್ಕುಗಳ ಬಗ್ಗೆ. ಒಂದು ವೇಳೆ ಅವರನ್ನು ಗೌರವ ಮತ್ತು ಪ್ರೀತ್ಯಾದರಗಳೊಂದಿಗೆ ನೋಡಿಕೊಳ್ಳುವ ಒಂದು ತಲೆಮಾರು ಬೆಳೆದು ಬಂದರೆ ಇಂದು ಅಸ್ತಿತ್ವದಲ್ಲಿರುವ ವೃದ್ಧಾಶ್ರಮಗಳಿಗೆ ಬೀಗ ಜಡಿಯಬೇಕಾಗಿ ಬಂದೀತು.

ಕುಟುಂಬದ ಮೇಲ್ವಿಚಾರಕನ ಸ್ಥಾನವನ್ನು ಪುರುಷನಿಗೆ ನೀಡಲಾಗಿದೆ. ಅದು ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಅವನು ಆರ್ಥಿಕವಾದ ಎಲ್ಲ ಹೊಣೆಗಾರಿಕೆಗಳನ್ನು ಹೊತ್ತು ಕೊಂಡು, ದೈಹಿಕವಾಗಿ ಹೆಣ್ಣಿಗಿಂತ ಬಲಶಾಲಿಯಾಗಿರುವುದರಿಂದ ಅವರನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ನೀಡಲಾಗಿದೆ. ಒಂದು ವೇಳೆ ಈ ಎರಡೂ ಜವಾಬ್ದಾರಿಗಳಿಂದ ನುಣುಚಿ ಕೊಂಡರೆ ಪುರುಷನು ಮೇಲ್ವಿಚಾರಕನ ಸ್ಥಾನಕ್ಕೆ ಅರ್ಹನೆನಿಸುವುದಿಲ್ಲ. ಈ ರೀತಿ ಪ್ರೀತಿ ವಾತ್ಸಲ್ಯದೊಂದಿಗೆ ಕುಟುಂಬವನ್ನು ನೋಡಿಕೊಳ್ಳುವಾಗ ಸಹಜವಾಗಿಯೇ ಪತ್ನಿಯರು ಅನುಸರಣಾ ಶೀಲರಾಗಿರಬೇಕು ಎಂದು ಕುರ್‌ಆನ್ ಬಯಸುತ್ತದೆ. ದೇವನ ಆದೇಶಗಳಿಗೆ ವಿರುದ್ಧವಲ್ಲದ ಪತಿಯ ಎಲ್ಲ ಆದೇಶಗಳನ್ನು ಪಾಲಿಸಬೇಕೆಂದು ಅದು ಕಲಿಸುತ್ತದೆ. ಆಗ ಅಲ್ಲಿ ಸುಂದರ ಕುಟುಂಬ ಜೀವನ ಅಸ್ತಿತ್ವಕ್ಕೆ ಬರುತ್ತದೆ. ಅಲ್ಲಿ ತಂದೆ-ತಾಯಿಯ ಪ್ರೀತಿಯ ವರ್ತನೆ, ಸರಸ, ಪ್ರಣಯ, ಗೌರವ ನೀಡುವಿಕೆಯನ್ನು ಗಮನಿಸಿದ ಮಕ್ಕಳು ಹೆತ್ತವರ ಒಡನಾಟದಲ್ಲಿ ಸುರಕ್ಷೆಯನ್ನು ಅನುಭವಿಸುತ್ತಾರೆ. ಹೀಗೆ ಪವಿತ್ರ ಕುರ್‌ಆನ್‌ನಂತೆ ವೈವಾಹಿಕ, ಕೌಟುಂಬಿಕ ಜೀವನವನ್ನು ನಡೆಸಲು ಮನಸ್ಸು ಮಾಡಿದರೆ ಅಲ್ಲಿ ಅರಳುವ ಮೊಗ್ಗುಗಳಾದ ಮಕ್ಕಳು ಕೂಡಾ ಅತ್ಯುತ್ತಮ ತರಬೇತಿಯೊಂದಿಗೆ ಮುಂದೊಂದು ದಿನ ಹೊಸ ಕುಟುಂಬ ಜೀವನವನ್ನು ಆರಂಭಿಸಲು ಶಕ್ತರಾಗುತ್ತಾರೆ.

ಆರ್ಥಿಕ ಜೀವನದಲ್ಲಿ ಪವಿತ್ರ ಕುರ್‌ಆನ್‌ನ ಅನುಸರಣೆಯು ಜೀವನದಲ್ಲಿ ಸಮೃದ್ಧಿಯನ್ನು ನೀಡುತ್ತದೆ. ಅಲ್ಪ ಸಂಪಾದನೆಯಲ್ಲಿಯೂ ಮನಸ್ಸಮಾಧಾನದೊಂದಿಗೆ ಗೌರವಯುತವಾಗಿ ಬದುಕಲು ಅನುಕೂಲ ಮಾಡಿಕೊಡುತ್ತದೆ. ಸಂಪತ್ತನ್ನು ಎಷ್ಟು ಸಂಗ್ರಹಿಸಬಹುದು, ಸಂಪಾದಿಸಬಹುದು ಎಂಬುದಕ್ಕೆ ಪವಿತ್ರ ಕುರ್‌ಆನ್ ಇತಿಮಿತಿಯನ್ನು ಇರಿಸಿಲ್ಲ. ಆದರೆ ಅದನ್ನು ಹೇಗೆ ಸಂಪಾದಿಸಬೇಕು ಮತ್ತು ಯಾವ ರೀತಿ ಖರ್ಚು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಆದುದರಿಂದಲೇ ಪ್ರವಾದಿಯವರ(ಸ) ಕಾಲದಲ್ಲಿ ಅಬ್ದರ‍್ರಹ್ಮಾನ್ ಬಿನ್ ಔಫ್ ಮತ್ತು ಉಸ್ಮಾನ್ ಬಿನ್ ಅಫ್ಫಾನ್‌ರಂತಹ ಅತೀ ಶ್ರೀಮಂತ ಸಹಾಬಿಗಳು ಪ್ರವಾದಿಯವರ ಅನುಯಾಯಿಗಳಾಗಿದ್ದರು.

ಸಂಪತ್ತನ್ನು ಅಪಾರವಾಗಿ ಕೂಡಿಡದೆ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುತ್ತಿರಬೇಕು. ಯಾರು ಮನಸ್ಸಿನ ಸಂಕುಚಿತತೆಯಿಂದ ಮುಕ್ತನಾದನೋ ಅವನು ವಿಜಯ ಹೊಂದಿದನು ಎಂದು ಪವಿತ್ರ ಕುರ್‌ಆನ್ ಹೇಳುತ್ತದೆ. ಅದೇ ರೀತಿ ದಾನ-ಧರ್ಮ ಗಳು ನಿಮ್ಮ ಸಂಪತ್ತಿನಲ್ಲಿ ಸಮೃ ದ್ಧಿಯನ್ನು ಉಂಟು ಮಾಡುತ್ತದೆ ಎಂದೂ ಹೇಳುತ್ತದೆ. “ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪ ತ್ತನ್ನು ಖರ್ಚು ಮಾಡುವವರ ಖರ್ಚಿನ ಉಪಮೆ ಒಂದು ಕಾಳನ್ನು ಬಿತ್ತಿ ಅದರಿಂದ ಏಳು ತೆನೆಗಳು ಹೊರಟು, ಪ್ರತೀ ತೆನೆಯಲ್ಲಿ ನೂರು ಕಾಳುಗಳಿರುವಂತಿದೆ. ಇದೇ ರೀತಿಯಲ್ಲಿ ಅಲ್ಲಾಹ್ ತಾನುದ್ದೇಶಿಸಿದವನ ಕರ್ಮಗಳಿಗೆ ವೃದ್ಧಿಯನ್ನು ದಯಪಾಲಿಸುತ್ತಾನೆ. ಅವನು ಅತ್ಯಂತ ಉದಾರಿಯೂ ಸರ್ವಜ್ಞನೂ ಆಗಿರುತ್ತಾನೆ.” (ಪವಿತ್ರ ಕುರ್‌ಆನ್ ಅಲ್‌ಬಕರ: 261)

ಜಿಪುಣತೆಯನ್ನು ಕಠಿಣ ಪದಗಳಲ್ಲಿ ವಿರೋಧಿಸುವ ಕುರ್‌ಆನ್ ಯಾವತ್ತೂ ಜಿಪುಣತೆಯನ್ನು ತೋರಬಾರದು ಎಂದು ಆದೇಶಿಸುತ್ತದೆ. ಬದಲಾಗಿ ಉದಾರಿಗಳಾಗಬೇಕು ಎಂದು ಅದು ಕಲಿಸುತ್ತದೆ. ಪವಿತ್ರ ಕುರ್‌ಆನ್‌ನ ಆದೇಶವನ್ನು ಅನುಸರಿಸುವುದು ಕಷ್ಟದ ಕೆಲಸವೆಂದು ತೋರಿದರೂ ಅದು ಪ್ರಾಯೋಗಿಕವಾಗಿ ಕಷ್ಟ ಕಾರ್ಯವಲ್ಲ. ಇತರರಿಗೆ ನೀಡಿದಾಗ ಸಿಗುವ ಸಂತೋಷಕ್ಕೆ ಪರ್ಯಾಯವಾಗಿ ಬೇರೆ ಏನೂ ಇರಲಿಕ್ಕೆ ಸಾಧ್ಯವಿಲ್ಲ.

ಯಾರಿಗೂ ತನ್ನಿಂದ ಅನ್ಯಾಯವಾಗದಂತೆ ನೋಡಿಕೊಳ್ಳುವುದರ ಜೊತೆಗೆ ನ್ಯಾಯದ ಪರವಾಗಿ ನಿಲ್ಲಬೇಕು ಎಂಬ ಆದೇಶವೂ ಕುರ್‌ಆನ್‌ನಲ್ಲಿದೆ. ನ್ಯಾಯ ಮತ್ತು ಸತ್ಯದ ಧ್ವಜ ವಾಹಕರಾಗಬೇಕು. ಕೋಪವನ್ನು ನುಂಗಿಕೊಳ್ಳುವುದು, ಇತರರ ತಪ್ಪುಗಳನ್ನು ಕ್ಷಮಿಸುವುದು, ವಿನಯವಂತರಾಗುವುದು ಅಹಂಕಾರವನ್ನು ಬಳಿಯಲ್ಲಿ ಸುಳಿಯಲೂ ಬಿಡದಿರುವುದು. ಅಶ್ಲೀಲ ಕೃತ್ಯಗಳಿಂದ ನಮ್ಮನ್ನು ದೂರವಿರಿಸಲು ಸಹಕಾರಿಯಾದ ಲಜ್ಜೆಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಪವಿತ್ರ ಕುರ್‌ಆನ್‌ನ ಆದೇಶ ಪ್ರಕಾರ ಮಾಡುವ ವಸ್ತ್ರಧಾರಣೆಯು ಜೀವನದಲ್ಲಿ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಪೂರಕವಾಗಿದೆ; ಅದು ಹೃದಯ ಮತ್ತು ಶರೀರ ಶುದ್ಧಿಯನ್ನು ನೀಡುತ್ತದೆ.

ಪವಿತ್ರ ಕುರ್‌ಆನ್‌ನ 49ನೇ ಅಧ್ಯಾಯ ಅಲ್ ಹುಜರಾತ್‌ನ 11 ಮತ್ತು 12ನೇ ವಚನಗಳಲ್ಲಿ ಹೀಗಿದೆ, “ಸತ್ಯವಿಶ್ವಾಸಿಗಳೇ, ಪುರುಷರು ಇತರ ಪುರುಷರನ್ನು ಅಪಹಾಸ್ಯ ಮಾಡಬಾರದು. ಅವರು ಇವರಿಗಿಂತ ಉತ್ತಮರಿರಲೂ ಬಹುದು. ಸ್ತ್ರೀಯರು ಇತರ ಸ್ತ್ರೀಯರನ್ನು ಅಪಹಾಸ್ಯ ಮಾಡಬಾರದು. ಅವರು ಇವರಿಗಿಂತ ಉತ್ತಮರಿರಲೂಬಹುದು. ಪರಸ್ಪರರನ್ನು ನಿಂದಿಸಬೇಡಿರಿ ಮತ್ತು ಒಬ್ಬರು ಇನ್ನೊಬ್ಬರನ್ನು ಅಡ್ಡ ಹೆಸರಿನಿಂದ ಕರೆಯಬೇಡಿರಿ. ಸತ್ಯವಿಶ್ವಾಸ ಸ್ವೀಕರಿಸಿದ ಬಳಿಕ ಕರ್ಮಭ್ರಷ್ಟತೆಯಲ್ಲಿ ಹೆಸರು ಗಳಿಸುವುದು ಬಹಳ ಕೆಟ್ಟದು. ಈ ನಿಲುಮೆಯನ್ನು ತೊರೆಯದವರು ಅಕ್ರಮಿಗಳಾಗಿರುವರು. ಸತ್ಯವಿಶ್ವಾಸಿಗಳೇ ಹೆಚ್ಚಿನ ಗುಮಾನಿಗಳಿಂದ ದೂರವಿರಿ. ನಿಶ್ಚಯವಾಗಿಯೂ ಕೆಲವು ಗುಮಾನಿಗಳು ಪಾಪವಾಗಿವೆ. ದೋಷಾನ್ವೇಷಣೆ ಮಾಡದಿರಿ. ನಿಮ್ಮಲ್ಲಿ ಯಾರೂ ಯಾರ ಬಗ್ಗೆಯೂ ಪರಧೂಷಣೆ ಮಾಡಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವುದನ್ನು ಇಷ್ಟಪಡುವನೇ? ನೀವು ಸ್ವತಃ ಇದನ್ನು ಅಸಹ್ಯ ಪಡುತ್ತೀರಿ. ಅಲ್ಲಾಹನ್ನು ಭಯಪಡಿರಿ. ಅಲ್ಲಾಹ್ ಪಶ್ಚಾತ್ತಾಪ ಸ್ವೀಕರಿಸುವವನೂ ಕರುಣಾನಿಧಿಯೂ ಆಗಿರುತ್ತಾನೆ.”

ಈ ಮೇಲಿನ ಪ್ರತಿಯೊಂದು ವಚನವನ್ನು ಚಾಚೂ ತಪ್ಪದೆ ಅನುಸರಿಸಬೇಕು. ಮನುಷ್ಯ ಸಹಜವಾಗಿ ನಮ್ಮಲ್ಲಿರುವ ಕುಂದು-ಕೊರತೆಗಳನ್ನು ಗುರುತಿಸಿ ಇಲ್ಲದಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅದರ ಜೊತೆಗೆ ನಮ್ಮಲ್ಲಿ ಇಲ್ಲದಿರುವ ಒಳಿತುಗಳನ್ನು ಅಳವಡಿಸಿಕೊಳ್ಳಲು ಕೂಡಾ ಪ್ರಯತ್ನ ಮಾಡಬೇಕು. ಆಗ ಕುರ್‌ಆನ್‌ನ ಬದುಕು ನಮ್ಮದಾಗುವುದು. ಪವಿತ್ರ ಕುರ್‌ಆನ್ ಜೂಜು, ಮದ್ಯಪಾನ, ಅಮಲು ಬರಿಸುವ ವಸ್ತುಗಳ ಸೇವನೆ, ಬಡ್ಡಿ, ಹಂದಿ ಮಾಂಸ ಮುಂತಾದ ವಿಷಯಗಳನ್ನು ನಿಷೇಧಿಸಿದೆ. ಇವೆಲ್ಲವುಗಳೂ ಹಾನಿಕಾರಕವಾಗಿದೆ. ಆದುದರಿಂದಲೇ ಇದಕ್ಕೆ ನಿಷೇಧವಿದೆ. ಕುರ್‌ಆನ್ ನಿಷೇಧಿಸಿದ ವಸ್ತುಗಳಿಂದ ಕಡ್ಡಾಯವಾಗಿ ದೂರ ಉಳಿಯಬೇಕು.