ಕತಾರ್ ಮಧ್ಯಸ್ಥಿಕೆಯಲ್ಲಿ ಸಂಘರ್ಷಕ್ಕೆ ವಿರಾಮ: ಒಪ್ಪಂದ ಮಾಡಿಕೊಂಡ ಹಮಾಸ್

0
505

ಸನ್ಮಾರ್ಗ ವಾರ್ತೆ

ಜೆರುಸಲೇಂ,ಸೆ.2: ಇಸ್ರೇಲ್-ಫೇಲಸ್ತೀನ್ ನಡುವೆ ಒಂದು ತಿಂಗಳವರೆಗೆ ಮುಂದುವರಿಯುತ್ತಿರುವ ಸಂಘರ್ಷಕ್ಕೆ ವಿರಾಮಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹಮಾಸ್ ತಿಳಿಸಿದೆ.

ಕತಾರ್‌ನ ಮಧ್ಯಸ್ಥಿಕೆಯಲ್ಲಿ ನಡೆಯುವ ಚರ್ಚೆಯಲ್ಲಿ ಆಗಸ್ಟ್ 6ರಿಂದ ಮುಂದುರಿದ ಸಂಘರ್ಷವನ್ನು ಕೊನೆಗೊಳಿಸುವ ಮಾರ್ಗವನ್ನು ಹುಡುಕಿಕೊಳ್ಳಲಾಗಿದೆ ಎಂದು ಹಮಾಸ್ ನಾಯಕ ಯಹ್ಯ ಸಿನ್ವಾರ್‌‌ ರವರ ಕಚೇರಿ ತಿಳಿಸಿದೆ.

ಆಗಸ್ಟ್ 6 ರಿಂದ ಇಸ್ರೇಲ್ ಗಾಝದಲ್ಲಿ ವಾಯುದಾಳಿ ಮತ್ತು ಟ್ಯಾಂಕ್ ಉಪಯೋಗಿಸಿ ದಾಳಿ ಮಾಡಿತ್ತು. ಗಾಝದಿಂದ ದಕ್ಷಿಣ ಇಸ್ರೇಲ್‍ಗೆ ಸ್ಫೋಟಕ ಬಲೂನ್‍ಗಳ ರವಾನೆ, ರ‌್ಯಾಕೆಟ್ ದಾಳಿ ನಡೆದಿತ್ತು.

ಇದರ ನಡುವೆ ಕತಾರ್ ಪ್ರತಿನಿಧಿ ಮುಹಮ್ಮದ್ ಎಲ್‍ಮಾದಿಯವರ ನೇತೃತ್ವದಲ್ಲಿ ಮಧ್ಯಸ್ಥಿಕೆ ಚರ್ಚೆ ಆರಂಭವಾಗಿತ್ತು. ಆದರೆ ಈ ಕುರಿತು ಇಸ್ರೇಲ್ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

ಗಾಝಕ್ಕೆ ಸಾಮಗ್ರಿಗಳ ಸಾಗಾಟ, ಅಲ್ಲಿನ ಒಂದೇ ವಿದ್ಯುತ್ ಪ್ಲಾಂಟಿಗೆ ಇಂಧನ ತಲುಪಿಸಲು ಇಸ್ರೇಲ್ ಅನುಮತಿಸಬೇಕು ಮತ್ತು ಮೆಡಿಟೇರಿನಿಯನ್‍ನಲ್ಲಿ ಮೀನುಗಾರಿಕೆಗೆ ಹೇರಿದ ನಿಷೇಧವನ್ನು ತೆರವುಗೊಳಿಸಬೇಕೆಂದು ಹಮಾಸ್‍ನ ಬೇಡಿಕೆಯಾಗಿದೆ.

ಈ ವಿಷಯದಲ್ಲಿ ಖಚಿತವಾದರೆ ಸ್ಫೋಟಕ ಬಲೂನುಗಳನ್ನು ಹಾರಿ ಬಿಡುವುದನ್ನು ನಿಲ್ಲಿಸುವುದಾಗಿ ಹಮಾಸ್ ಹೇಳಿದೆ. ಗಾಝಕ್ಕೆ ಕತಾರ್ 30 ದಶಲಕ್ಷ ಡಾಲರ್‌ನ ನೆರವು ನೀಡಿದೆ. ಟೆಲ್ ಅವೀವ್‍ನಲ್ಲಿ ಇಸ್ರೇಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.