ಸನ್ಮಾರ್ಗ ವಾರ್ತೆ
ಉಡುಪಿ: ಹಲವಾರು ವರ್ಷಗಳ ಬೇಡಿಕೆಯಾಗಿರುವಂತಹ ಸರಕಾರಿ ವೈದ್ಯಕೀಯ ಕಾಲೇಜು ಇನ್ನೂ ಕೂಡ ಉಡುಪಿ ಜಿಲ್ಲೆಗೆ ಒದಗಿ ಬಂದಿಲ್ಲ. ಒಂದು ವಿದ್ಯಾರ್ಥಿ ಅವನ ಶಾಲಾ ಜೀವನದಲ್ಲಿ ಇರುವಾಗಲೇ ಆತನೊಬ್ಬ ವೈದ್ಯನಾಗಬೇಕೆಂಬ ಕನಸನ್ನು ಇಟ್ಟುಕೊಂಡು ಅದರ ಹಿಂದೆ ಬಹಳಷ್ಟು ಶ್ರಮವಹಿಸುತ್ತಾನೆ. ಆದರೆ ನೀಟ್ ಪರೀಕ್ಷೆ ಬರೆದ ನಂತರ ಕಾಲೇಜು ಪ್ರವೇಶ ಸಮಯದಲ್ಲಿ ಅಲ್ಲಿಯ ಶುಲ್ಕ ರಚನೆ ನೋಡಿದಾಗ ಅವನ ಕನಸನ್ನು ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಗಟ್ಟಲೆ ಫೀಸು ನೀಡಲು ಸಾಧ್ಯವಾಗದೆ ಮತ್ತು ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಇಲ್ಲದೆ ಇರುವುದರಿಂದ ಆ ವಿದ್ಯಾರ್ಥಿ ಶಿಕ್ಷಣದಿಂದ ಹಿಂಜರಿಯುತ್ತಾನೆ. ಈ ವಿಚಾರದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಸರಕಾರಕ್ಕೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ವಿಷಯವನ್ನು ಉಲ್ಲೇಖಿಸಬೇಕೆಂದು ಮನವಿ ಮಾಡಲಾಯಿತು.
ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಕಡೆಗಳಲ್ಲಿ ಸರಕಾರಿ ಭೂಮಿ ಇದ್ದರೂ ಕೂಡ ಜಿಲ್ಲಾಧಿಕಾರಿ ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ಸರ್ಕಾರದ ಭೂಮಿ ಇಲ್ಲ ಎಂದು ಹೇಳುವ ಮೂಲಕ ಬೇಜವಾಬ್ದಾರಿ ಉತ್ತರ ನೀಡಿರುವುದಾಗಿ ಸಿಎಫ್ಐ ಆರೋಪಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿ ಈ ರೀತಿಯ ಉತ್ತರ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಕ್ಯಾಂಪಸ್ ಫ್ರಂಟ್ ಪ್ರಶ್ನಿಸಿದೆ.
ರಾಜ್ಯದಲ್ಲಿ ಸುಮಾರು 19 ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳು ಇದೆ. ಯಾವ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಇಲ್ಲವೋ, ಅಲ್ಲಿ ಇರುವಂತಹ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಇಂತಿಷ್ಟು ಶೇಕಡದಷ್ಟು ಸರ್ಕಾರದ ಕೋಟಾ ಇದೆ.
ಒಂದು ಬುದ್ಧಿವಂತರ ಜಿಲ್ಲೆ ಎಂದು ಖ್ಯಾತ ಪಡೆದ ಉಡುಪಿ ಜಿಲ್ಲೆಗೆ ಒಂದು ಸರಕಾರಿ ವೈದ್ಯಕೀಯ ಕಾಲೇಜು ಕೂಡ ಇಲ್ಲ, ಇಲ್ಲಿರುವಂತಹ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರದ ಕೋಟಾ ಕೂಡ ಇಲ್ಲ. ಇದೊಂದು ಉಡುಪಿ ಜಿಲ್ಲೆಗೆ ಆಗಿರುವಂತಹ ದೊಡ್ಡ ಅವಮಾನ ಮತ್ತು ದೊಡ್ಡ ಅನ್ಯಾಯ ಎಂದು ಕ್ಯಾಂಪಸ್ ಫ್ರಂಟ್ ನ ನಾಯಕರು ತಿಳಿಸಿದ್ದಾರೆ.
ಈಗಾಗಲೇ ಈ ವಿಚಾರದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ತಯಾರಾಗಿದೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ #UdupiDemandsGovtMedicalCollege ಎಂಬ ಚಳುವಳಿಯನ್ನು ಆರಂಭಿಸಿದ್ದು, ಇದರ ಭಾಗವಾಗಿ ಈಗಾಗಲೇ ಹಲವಾರು ಜನಸಾಮಾನ್ಯರನ್ನು, ಪ್ರಗತಿಪರ ಚಿಂತಕರನ್ನು ಮತ್ತು ಇಲ್ಲಿರುವಂತಹ ವಿವಿಧ ಸಾಮಾಜಿಕ ಮತ್ತು ವಿದ್ಯಾರ್ಥಿ ಸಂಘಟನೆಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಎಲ್ಲರೂ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ, ಮುಂದಿನ ದಿನಗಳಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಒಂದು ಐತಿಹಾಸಿಕ ಆಂದೋಲನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನೇತೃತ್ವದಲ್ಲಿ ನಡೆಯಲಿದೆ ಎಂದು ಸಿಎಫ್ಐ ಜಿಲ್ಲಾ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ನಾಯಕ ನವಾಝ್ ಉಡುಪಿ, ಜಿಲ್ಲಾಧ್ಯಕ್ಷ ಅಸೀಲ್ ಅಕ್ರಂ, ಜಿಲ್ಲಾ ಕಾರ್ಯದರ್ಶಿ ಮಸೂದ್ ಮನ್ನಾ, ಅನ್ಫಾಲ್ ಗಂಗೊಳ್ಳಿ, ಝಮ್ ಝಮ್ ಉಪಸ್ಥಿತರಿದ್ದರು.













