✍️ ಪಿ.ಕೆ. ನಿಯಾಝ್
ಮಲೇಷ್ಯಾ ಇಂದು ರಾಜಕೀಯ ಸ್ಥಿರತೆ, ಆರ್ಥಿಕ ಪ್ರಗತಿ ಮತ್ತು ಬಹುತ್ವದ ಸೌಹಾರ್ದತೆಯಲ್ಲಿ ವಿಶ್ವದ ಯಾವುದೇ ಮುಸ್ಲಿಂ ದೇಶಗಳಿಗಿಂತ ಮುಂದಿದೆ. ಇಸ್ಲಾಮಿಕ್ ಮೌಲ್ಯಗಳನ್ನು ಆಧುನಿಕತೆಯೊಂದಿಗೆ ಬೆಸೆದು, ಮಲಯ, ಚೀನೀ ಮತ್ತು ಭಾರತೀಯ ವಂಶಜರು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿರುವ ಈ ದೇಶವು ಬಹುಸಂಸ್ಕೃತಿಯ ಸಮಾಜಕ್ಕೆ ಅತ್ಯುತ್ತಮ ಮಾದರಿಯನ್ನು ಸೃಷ್ಟಿಸಿದೆ. ಇಸ್ಲಾಮಿಕ್ ಸಹಕಾರ ಸಂಘಟನೆ(OIC)ಯಲ್ಲಿ ಮಲೇಷ್ಯಾ ಸಕ್ರಿಯ ಪಾತ್ರ ವಹಿಸುತ್ತಿದ್ದು, ಫಲೆಸ್ತೀನ್ ಮತ್ತು ರೋಹಿಂಗ್ಯಾ ಮುಸ್ಲಿಮರ ಹಕ್ಕುಗಳಿಗಾಗಿ ಜಾಗತಿಕ ವೇದಿಕೆಯಲ್ಲಿ ಅಚಲವಾಗಿ ಧ್ವನಿ ಎತ್ತುತ್ತಿದೆ.
ಫಲೆಸ್ತೀನ್ ಜನತೆಯ ಹಕ್ಕುಗಳನ್ನು ಪ್ರತಿರೋಧಿಸುವಲ್ಲಿ ಅನ್ವರ್ ಇಬ್ರಾಹೀಮ್ ಅವರ ನಿಲುವು ಅತ್ಯಂತ ದೃಢವಾದುದು. ಅನೇಕ ಅರಬ್ ರಾಷ್ಟ್ರಗಳು ಇಸ್ರೇಲ್ ಅನ್ನು ಟೀಕಿಸಲು ಕೂಡ ಹಿಂಜರಿಯುತ್ತಿದ್ದಾಗ, ಪೂರ್ವ ಏಷ್ಯಾದ ದೇಶಗಳ ಧ್ವನಿಯಾಗಿ ಮಲೇಷ್ಯಾ ಮತ್ತು ಅನ್ವರ್ ಇಬ್ರಾಹೀಮ್ ದೃಢವಾಗಿ ನಿಂತರು. ಹಮಾಸ್ ನಾಯಕತ್ವದೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಮಲೇಷ್ಯಾದ ಪ್ರಾರ್ಥನೆ ಮತ್ತು ಬೆಂಬಲವನ್ನು ತಿಳಿಸಲು ಅನ್ವರ್ ಮುಂಚೂಣಿಯಲ್ಲಿದ್ದರು. ಇಸ್ರೇಲ್ ವಿರುದ್ಧದ ಇಂತಹ ಕಠಿಣ ಟೀಕೆಗಳಿಗಾಗಿ ಪಾಶ್ಚಿಮಾತ್ಯ ದೇಶಗಳಿಂದ ತಮಗೆ ಬೆದರಿಕೆಗಳು ಬಂದಿವೆ ಎಂದು ಅವರು ಕಳೆದ ಅಕ್ಟೋಬರ್ನಲ್ಲಿ ಬಹಿರಂಗಪಡಿಸಿದ್ದರು. “ನನ್ನನ್ನು ಬೆದರಿಸುವವರು ನೀವು ತಪ್ಪು ವ್ಯಕ್ತಿಯನ್ನು ಆರಿಸಿಕೊಂಡಿದ್ದೀರಿ, ಇಂತಹ ಬೆದರಿಕೆಗಳಿಗೆ ನಾನು ಮಣಿಯುವುದಿಲ್ಲ, ಫಲೆಸ್ತೀನಿಯರಿಗಾಗಿ ನಮ್ಮ ಹೋರಾಟ ಮುಂದು ವರಿಯುತ್ತದೆ” ಎಂದು ಅವರು ಮಲೇಷ್ಯಾ ಫಲೆಸ್ತೀನ್ ಪರ' ಎಂಬ ಬೃಹತ್ ರಾಲಿಯಲ್ಲಿ ಘೋಷಿಸಿದ್ದರು.
ಮೊಸಾದ್ ಗುಪ್ತಚರ ಸಂಸ್ಥೆಯು ದೇಶದೊಳಗೆ ಕಾರ್ಯಾಚರಿಸುವ ಸುದ್ದಿಗಳ ಬಗ್ಗೆಯೂ ಅವರು ತೀವ್ರ ಎಚ್ಚರಿಕೆ ನೀಡಿದ್ದರು. ಜಾಗತಿಕ ಮುಸ್ಲಿಂ ನಾಯಕರಲ್ಲಿ ಅನೇಕರು ಫಲೆಸ್ತೀನ್ ಸಮಸ್ಯೆ ಬಗೆಹರಿಸುವುದು ಕಷ್ಟದ ಕೆಲಸ ಎಂದು ಒಪ್ಪಿಕೊಂಡಿದ್ದರೂ, ಅನ್ವರ್ ಈ ವಿಷಯದಲ್ಲಿ ರಾಜಿ ಇಲ್ಲದ ಹೋರಾಟವನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ಮಲೇಷ್ಯಾ ಆಸಿಯಾನ್ (ASEAN) ಶೃಂಗಸಭೆಗೆ ಆತಿಥ್ಯ ವಹಿಸುವ ಮೂಲಕ ಅನ್ವರ್ ಇಬ್ರಾಹೀಮ್ ಅವರ ನಾಯಕತ್ವದಲ್ಲಿ ಮಹತ್ವದ ರಾಜತಾಂತ್ರಿಕ ಮತ್ತು ಆರ್ಥಿಕ ಸಾಧನೆಗಳನ್ನು ಮಾಡಿದೆ. ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವೆ ದಶಕಗಳಿಂದ ಇದ್ದ ಗಡಿ ವಿವಾದವನ್ನು ಬಗೆಹರಿಸಿ ಕೌಲಾಲಂಪುರ್ ಶಾಂತಿ ಒಪ್ಪಂದ’ಕ್ಕೆ ಸಹಿ ಹಾಕಿಸಿದ್ದು 2025ರ ಆಸಿಯಾನ್ ಅಧ್ಯಕ್ಷ ರಾಷ್ಟ್ರವಾಗಿ ಮಲೇಷ್ಯಾದ ದೊಡ್ಡ ಯಶಸ್ಸಾಗಿದೆ.
ಪೂರ್ವ ತೈಮೂರ್ (East Timor) ದೇಶವನ್ನು ಆಸಿಯಾನ್ನ ಹನ್ನೊಂದನೇ ಸದಸ್ಯ ರಾಷ್ಟ್ರವಾಗಿ ಸೇರಿಸುವ ನಿರ್ಧಾರವನ್ನು ಈ ಶೃಂಗಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಅಮೆರಿಕ ಅಧ್ಯಕ್ಷರು, ಚೀನಾ ಪ್ರಧಾನಿ, ರಷ್ಯಾ ಮತ್ತು ಬ್ರಿಕ್ಸ್ ರಾಷ್ಟ್ರಗಳ ಪ್ರತಿನಿಧಿಗಳು ಸೇರಿದಂತೆ ಜಾಗತಿಕ ನಾಯಕರನ್ನು ಶೃಂಗಸಭೆಗೆ ಕರೆತರುವಲ್ಲಿ ಯಶಸ್ವಿಯಾದದ್ದು ಮಲೇಷ್ಯಾದ ಜಾಗತಿಕ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಆಸಿಯಾನ್ ದೇಶವಾಗಿ ಮಲೇಷ್ಯಾ ಹೊರಹೊಮ್ಮಿದೆ. ಶೃಂಗ ಸಭೆಯನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ, ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಆಸಿಯಾನ್ ಅನ್ನು ಸ್ಥಿರತೆ ಮತ್ತು ಬೆಳವಣಿಗೆಯ ಕೇಂದ್ರವನ್ನಾಗಿ ಮಾಡುವಲ್ಲಿ ಮಲೇಷ್ಯಾ ತನ್ನ ನಾಯಕತ್ವವನ್ನು ಸಾಬೀತುಪಡಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡ ಅನ್ವರ್ ಇಬ್ರಾಹೀಮ್ ಅವರ ಈ ದೂರದೃಷ್ಟಿಯ ನಡೆಗಳನ್ನು ಶ್ಲಾಘಿಸಿದ್ದಾರೆ.
ಅನ್ವರ್ ಇಬ್ರಾಹೀಮ್ ಎಂಬ ದಕ್ಷ ಮತ್ತು ಅನುಭವಿ ರಾಜಕಾರಣಿಯ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಮಲೇಷ್ಯಾದ ಒಕ್ಕೂಟ ಸರ್ಕಾರವು ಯಾವುದೇ ದೊಡ್ಡ ಅಡೆತಡೆಗಳಿಲ್ಲದೆ ಮುನ್ನಡೆಯುತ್ತಿತ್ತು. ಆದರೆ ಇತ್ತೀಚಿನ ವಾರಗಳಲ್ಲಿ ಸಂಭವಿಸಿದ ಎರಡು ಪ್ರಮುಖ ಘಟನೆಗಳು ಅನ್ವರ್ ಅವರ ಮೈತ್ರಿ ಸರ್ಕಾರಕ್ಕೆ ಭಾರೀ ಆಘಾತವನ್ನುಂಟು ಮಾಡಿವೆ. ನವೆಂಬರ್ 29 ರಂದು ಸಬಾಹ್ ರಾಜ್ಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಅನ್ವರ್ ಅವರ ಪಕಾತನ್ ಹರಪನ್' ಮೈತ್ರಿ ಕೂಟಕ್ಕೆ ಭಾರಿ ಹಿನ್ನಡೆಯಾಗಿದೆ.
ಒಟ್ಟು 78 ಸ್ಥಾನಗಳ ಪೈಕಿ ಮೈತ್ರಿಕೂಟವು ಸ್ಪರ್ಧಿಸಿದ 20 ಸ್ಥಾನಗಳಲ್ಲಿ ಕೇವಲ ಒಂದೇ ಒಂದು ಸ್ಥಾನದಲ್ಲಿ ಜಯಗಳಿಸಿದ್ದು, ಈ ಸೋಲು ಕೇಂದ್ರ ಸರ್ಕಾರದ ಮೇಲೆ ಜನರಿಗಿರುವ ಅತೃಪ್ತಿಯನ್ನು ಪ್ರತಿಬಿಂಬಿಸಿದೆ. ಸಬಾಹ್ ಚುನಾವಣೆಯ ಫಲಿತಾಂಶವು ಅನ್ವರ್ ಅವರಿಗೆ ಭವಿಷ್ಯದ ಆತಂಕವನ್ನು ತಂದೊಡ್ಡಿದೆ. ವಿಶೇಷವಾಗಿ, "ಸಬಾಹ್ ಅನ್ನು ಸಬಾಹ್ ನಿವಾಸಿಗಳೇ ಆಳಬೇಕು" ಎಂಬ ಪ್ರಾದೇಶಿಕ ಘೋಷಣೆಯೊಂದಿಗೆ ಕಣಕ್ಕಿಳಿದ ವಾಡಿಸನ್ ಪಕ್ಷವು 25 ಸ್ಥಾನಗಳೊಂದಿಗೆ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ಸಬಾಹ್ ಮತ್ತು ಸರವಾಕ್ ರಾಜ್ಯಗಳು ಕೇಂದ್ರ ಸರ್ಕಾರದಿಂದ ಹೆಚ್ಚಿನ ಆರ್ಥಿಕ ಸಂಪನ್ಮೂಲ ಮತ್ತು ಸ್ವಾಯತ್ತತೆಯನ್ನು ಬಯಸುತ್ತಿವೆ. ಕೇಂದ್ರಕ್ಕೆ ಸಬಾಹ್ ರಾಜ್ಯದಿಂದ ಬರುವ ಒಟ್ಟು ಆದಾಯದಲ್ಲಿ 40 ಪ್ರತಿಶತವನ್ನು ರಾಜ್ಯಕ್ಕೇ ನೀಡಬೇಕೆಂಬ ಅರ್ಧ ಶತಮಾನದ ಹಿಂದಿನ ಒಪ್ಪಂದವನ್ನು ಪಾಲಿಸದಿರುವ ಬಗ್ಗೆ ಅಲ್ಲಿನ ಜನರಲ್ಲಿ ತೀವ್ರ ಅಸಮಾಧಾನವಿದೆ. ಈ ರಾಜ್ಯಗಳು ಪಶ್ಚಿಮ ಮಲೇಷ್ಯಾದಿಂದ ಭೌಗೋಳಿಕವಾಗಿ ಬೇರ್ಪಟ್ಟಿದ್ದು, ಇಲ್ಲಿಗೆ ಹೋಗಲು ಮಲೇಷ್ಯಾದ ನಾಗರಿಕರಿಗೇ ವಿಶೇಷ ಇಮಿಗ್ರೇಷನ್ ಅನುಮತಿಯ ಅಗತ್ಯವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಗಳ ಬಲವರ್ಧನೆಯು ಅನ್ವರ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ತಲೆನೋವಾಗಿ ಪರಿಣಮಿಸಿದೆ.
ಇದರ ಜೊತೆಗೆ, ಅನ್ವರ್ ಅವರ ಅತ್ಯಂತ ನಿಕಟವರ್ತಿ ಮತ್ತು ರಾಜಕೀಯ ಕಾರ್ಯದರ್ಶಿಯಾಗಿದ್ದ ಶಂಸುಲ್ ಇಸ್ಕಂದರ್ ಅವರು ಗಣಿಗಾರಿಕೆ ಪರವಾನಗಿ ಕೊಡಿಸಲು ಲಂಚ ಪಡೆದ ಆರೋಪದ ಮೇಲೆ ಭ್ರಷ್ಟಾಚಾರ ವಿರೋಧಿ ಕಮಿಷನ್ನಿಂದ ಬಂಧನಕ್ಕೊಳಗಾಗಿರುವುದು ಅನ್ವರ್ ಅವರಭ್ರಷ್ಟಾಚಾರ ಮುಕ್ತ’ ಆಡಳಿತದ ವರ್ಚಸ್ಸಿಗೆ ದೊಡ್ಡ ಹೊಡೆತ ನೀಡಿದೆ.
ಅನ್ವರ್ ಇಬ್ರಾಹಿಂ ಅವರು ಜಾರಿಗೆ ತಂದ ‘ಮಲೇಷ್ಯಾ ಮದಾನಿ’ ಎಂಬ ಆಡಳಿತ ವ್ಯವಸ್ಥೆಯು ಸುಸ್ಥಿರತೆ, ನಂಬಿಕೆ, ಕರುಣೆ ಮತ್ತು ಗೌರವದಂತಹ ಆರು ಸ್ತಂಭಗಳ ಮೂಲಕ ಭ್ರಷ್ಟಾಚಾರ ರಹಿತ ಮತ್ತು ಸಾಮಾಜಿಕ ನ್ಯಾಯವುಳ್ಳ ಆಧುನಿಕ ರಾಷ್ಟ್ರ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಆದರೆ ವಿರೋಧ ಪಕ್ಷವಾದ ಪಾಸ್ (PAS) ಅನ್ವರ್ ಅವರ ಈ ಪರಿಕಲ್ಪನೆಯನ್ನು ಟೀಕಿಸುತ್ತಿದ್ದು, ಅವರು ಇಸ್ಲಾಮಿಕ್ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಿದೆ. ವಿಶೇಷವಾಗಿ ಫಲೆಸ್ತೀನ್ ವಿಷಯದಲ್ಲಿ ಅನ್ವರ್ ತಳೆದಿರುವ ದೃಢ ನಿಲುವು ಅವರಿಗೆ ಇಡೀ ಮುಸ್ಲಿಂ ಜಗತ್ತಿನಲ್ಲಿ ದೊಡ್ಡ ಮಟ್ಟದ ಗೌರವ ತಂದುಕೊಟ್ಟಿದೆ. ಪಾಶ್ಚಾತ್ಯ ರಾಷ್ಟ್ರಗಳ ಬೆದರಿಕೆಗೂ ಜಗ್ಗದ ಅವರು, ಫಲೆಸ್ತೀನಿಯರ ಹಕ್ಕುಗಳಿಗಾಗಿ ತಾವು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸಿದ್ದಾರೆ.
ಹಾಗಿದ್ದರೂ, ಆಂತರಿಕವಾಗಿ ಮಲಯ ಸಮುದಾಯದ ನಡುವೆಪಾಸ್’ ಪಕ್ಷದ ಪ್ರಭಾವ ಹೆಚ್ಚುತ್ತಿರುವುದು ಮತ್ತು ಮೈತ್ರಿ ಸರ್ಕಾರದೊಳಗಿನ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಅನ್ವರ್ ಅವರ ಹಾದಿ ಯನ್ನು ಕಠಿಣಗೊಳಿಸಿವೆ. 1MDB ಹಗರಣದ ಕಹಿ ನೆನಪಿರುವ ಮಲೇಷ್ಯಾದ ಜನರು ಸಣ್ಣ ಭ್ರಷ್ಟಾಚಾರವನ್ನೂ ಸಹಿಸದ ಮನಸ್ಥಿತಿಯಲ್ಲಿದ್ದು, ಅನ್ವರ್ ಅವರು ತಮ್ಮ ಆಪ್ತರ ಮೇಲಿರುವ ಆರೋಪಗಳನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಮೈತ್ರಿಕೂಟವನ್ನು ಹೇಗೆ ಒಗ್ಗಟ್ಟಾಗಿ ಕಾಯ್ದುಕೊಳ್ಳುತ್ತಾರೆ ಎಂಬುದರ ಮೇಲೆ ಮಲೇಷ್ಯಾದ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.












