ಆಕ್ಸಿಜನ್ ಕೊರತೆಯಿಂದ ರೋಗಿಗಳ ಸಾವು ಸರಕಾರದ ವತಿಯಿಂದ ನಡೆದ ಕಗ್ಗೊಲೆ: ಎಸ್.ಡಿ.ಪಿ.ಐ ಆಕ್ರೋಶ

0
337

ಸನ್ಮಾರ್ಗ ವಾರ್ತೆ

ಚಾಮರಾಜನಗರ: ಚಾಮರಾಜನಗರ ಕೊವಿಡ್ ಆಸ್ಪತ್ರೆ ಯಲ್ಲಿ 24 ರೋಗಿಗಳ ಸಾವು ಆಗಿರುವುದಕ್ಕೆ ಸರಕಾರವೇ ನೇರ ಹೊಣೆ ಎಂದು ಎಸ್ ಡಿ ಪಿ ಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಾಮಾನ್ಯ ಘಟನೆ ಅಲ್ಲ. ಸರಕಾರದ ನಿರ್ಲಕ್ಷ್ಯತೆಯಿಂದ ಆದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಕ್ಸಿಜನ್ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲದಿರುವುದರಿಂದ ಈ ದುರ್ಘಟನೆ ಜರುಗಿದೆ. ಆದುದರಿಂದ ಮುಖ್ಯ ಮಂತ್ರಿಗಳು ಸೇರಿದಂತೆ ಸಂಸದರು, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದವರು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಸಶಸ್ತ್ರಜ್ಙರನ್ನು ಸೇವೆಯಿಂದ ತಕ್ಷಣ ವಜಾಗೊಳಿಸಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸ ಬೇಕು ಎಂದು ಮಜೀದ್ ಆಗ್ರಹಿಸಿದ್ದಾರೆ.

ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ನಿಗಾವಹಿಸಬೇಕು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಕ್ಸಿಜನ್ ಪೂರೈಕೆ ಕೊರತೆಯಿಂದ ಸಾವುಗಳು ಆಗುತ್ತಿದೆ ಎಂದು ಮಾಹಿತಿ ಬರುತ್ತಿದೆ. ಈ ರೀತಿಯ ದುರಾಡಳಿತದೊಂದಿಗೆ ಸರಕಾರ ತನ್ನ ಕಾರ್ಯ ನಿರ್ವಹಿಸಿದರೆ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯ ಬಳಿಕ ದೊಡ್ಡ ಹೊಮ್ಮ ಗ್ರಾಮಕ್ಕೆ ಭೇಟಿ ನೀಡಿದ ಅವರು, ಮೃತಪಟ್ಟ ವ್ಯಕ್ತಿಯೋರ್ವರ ಹೆಂಡತಿ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಬ್ರಾರ್ ಆಹಮದ್, ರಾಜ್ಯ ಸಮಿತಿ ಸದಸ್ಯರಾದ ಅಮ್ಜದ್, ಚಾಮರಾಜನಗರ ಜಿಲ್ಲಾಧ್ಯಕ್ಷ ಖಲೀಲುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್. ಎಂ, ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರಿಫ್ ಹಾಗೂ ನಗರಸಭಾ ಸದಸ್ಯರಾದ ಸಮೀವುಲ್ಲಾ ಮತ್ತು ಮೊಹಮ್ಮದ್ ಅಮೀಕ್ ಉಪಸ್ಥಿತರಿದ್ದರು.