ಮಕ್ಕಳನ್ನು ಮಾರುವ ತಂಡ ಬೆಂಗಳೂರಿನಲ್ಲಿ ಸೆರೆ

0
204

ಸನ್ಮಾರ್ಗ ವಾರ್ತೆ

ಬೆಂಗಳೂರು: ತಮಿಳುನಾಡಿನಿಂದ ಮಕ್ಕಳನ್ನು ಅಕ್ರಮವಾಗಿ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ ತಂಡವನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಅವರ ಕೈಯಿಂದ 20 ದಿನದ ಗಂಡು ಮಗುವನ್ನು ರಕ್ಷಿಸಿದ್ದಾರೆ.

ಆರೋಪಿಗಳು ತಮಿಳುನಾಡಿನಿಂದ 20 ದಿನದ ಮಗುವನ್ನು ಕಳ್ಳಸಾಗಣೆ ಮಾಡಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ದಂಪತಿಗೆ ಮಾರಾಟ ಮಾಡಲು ಮಗುವನ್ನು ತಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಪರಾಧ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸಲು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರನ್ನು ನೋಡಿ ಕಾರಿನಲ್ಲಿ ತಪ್ಪಿಸಿಕೊಳ್ಳಲು ಈ ತಂಡ ಯತ್ನಿಸಿದರೂ ಸಾಹಸಿಕವಾಗಿ ಬೆಂಬತ್ತಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆಯೇ ಈ ಗುಂಪಿನ ನಾಯಕಿಯಾಗಿದ್ದು, ತನ್ನ ಮೂವರು ಮಕ್ಕಳನ್ನು ಈ ರೀತಿ ಮಾರಾಟ ಮಾಡಿದ್ದಾಳೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಹೇಳಿದ್ದಾರೆ. ತಮಿಳುನಾಡಿನಿಂದ ಶಿಶುಗಳನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುವುದು ಆರೋಪಿಗಳ ಕಾರ್ಯವೈಖರಿಯಾಗಿದೆ ಎಂದು ಆಯುಕ್ತರು ವಿವರಿಸಿದರು.

ಬಂಜೆತನ ಚಿಕಿತ್ಸಾಲಯಗಳಿಗೆ ಭೇಟಿ ನೀಡುವ ದಂಪತಿಗಳನ್ನು ತಂಡವು ಸಂಪರ್ಕಿಸುತ್ತದೆ. 10 ಲಕ್ಷ ರೂಪಾಯಿ ಕೊಟ್ಟರೆ ಮಗುವನ್ನು ಕೊಡಿಸುತ್ತೇವೆ ಎಂದು ಭರವಸೆ ನೀಡುತ್ತದೆ. ನಂತರ ತಮಿಳ್ನಾಡಿನಿಂದ ಮಗುವನ್ನು ಇವರು ತರುತ್ತಾರೆ. ಕದ್ದೊ ಹಣಕೊಟ್ಟೋ ಅಂತು ಇವರು ಮಗು ಬೇಕಾದವರಿಗೆ ಮಗುವನ್ನು ತಂದು ಕೊಡುತ್ತಾರೆ. ಆರ್ಥಿಕ ತೊಂದರೆ ಸೇರಿದಂತೆ ನಾನಾ ಕಾರಣಗಳಿಂದ ಗರ್ಭಪಾತಕ್ಕೆ ಯತ್ನಿಸುವವರು, ಹುಟ್ಟಿದ ಮಗುವನ್ನು ಸಾಕಲು ಕಷ್ಟಪಡುವವರನ್ನು ಸಂಪರ್ಕಿಸುತ್ತಾರೆ. ಅವರಿಂದ ಮಗುವನ್ನು ಖರೀದಿಸಿ ಬೆಂಗಳೂರಿಗೆ ತರುತ್ತಾರೆ. ಅದೇ ರೀತಿ ಇವರು ಆಸ್ಪತ್ರೆಗಳಿಂದ ಮಗುವನ್ನು ಅಪಹರಿಸುತ್ತಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಈ ತಂಡ ಸುಮಾರು 10 ಶಿಶುಗಳನ್ನು ಮಾರಿರಬಹುದು ಎಂದು ಅಂದಾಜಿಸಲಾಗಿದೆ. ಕಾನೂನು ಪ್ರಕ್ರಿಯೆಗಳನ್ನು ತಪ್ಪಿಸಲು ಗುಂಪು ಸ್ವತಃ ನಕಲಿ ಜನನ ಪ್ರಮಾಣ ಪತ್ರ ಮತ್ತು ಇತರ ಪ್ರಮಾಣ ಪತ್ರಗಳನ್ನು ತಯಾರಿಸುತ್ತದೆ ಎಂದು ಆಯುಕ್ತರು ಹೇಳಿದರು.

ತಮಿಳುನಾಡಿನ ಕೆಲವು ಆಸ್ಪತ್ರೆಗಳು ಮತ್ತು ವೈದ್ಯರು ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅವರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ.