ಮಕ್ಕಳನ್ನು ಹೇಗೆ ಬೆಳೆಸುತ್ತೀರೋ ಹಾಗೆ ಬೆಳೆಯುತ್ತವೆ…

0
234

ಸನ್ಮಾರ್ಗ ವಾರ್ತೆ

✍️ ಆಯಿಷಾ, ಶಿವಮೊಗ್ಗ

ಒಂದು ಘಟನೆ ನನ್ನನ್ನು ಈ ಲೇಖನ ಬರೆಯುವಂತೆ ಮಾಡಿತು. ಏನಾಯ್ತು ಅಂದರೆ, ಆ ತಾಯಿ ತರಕಾರಿ ಗಾಡಿಗೆ ಕಾಯ್ತಾ ಇದ್ರು. ಬಹಳ ಹೊತ್ತು ಕಾದರೂ ಬರದಿದ್ದುದಕ್ಕಾಗಿ ಒಳ ಹೋದ್ರು. ಆಗ ಗಾಡಿಯವ ಬಂದ. ಆ ತಾಯಿ ಬಾಲ್ಕನಿಯಿಂದ ಕೆಳಗೆ ನೋಡಿದ್ರು. ಅಲ್ಲಿ ಕೆಲವು ಹೆಂಗಸರು ಪರಿಚಿತ ಮಕ್ಕಳೂ ನಿಂತಿದ್ದರು. ಅವರು ಓರ್ವ ಹುಡುಗನಿಗೆ ಮೇಲಿನಿಂದ ಒಂದು ಚೀಲ ಮತ್ತು ಹಣವನ್ನು ಎಸೆದು ಮಗಾ, ಇಂತಿಂಥ ತರಕಾರಿ ತಗೋ ಅಂದ್ರು. ಆ ಹುಡುಗ ಖರೀದಿಗೆ ಮುಂದಾದ. ಆದರೆ ಆತನ ತಾಯಿ ಆತನನ್ನು ಗದರಿಸಿದಳು. ನೀನೇನು ಕೆಲಸದವನಾ ಎಂದು ಪ್ರಶ್ನಿಸಿದಳು. ಕೊನೆಗೆ ಆ ತಾಯಿಯೇ ಕೆಳಗೆ ಬಂದು ಅವರೆಕಾಯಿ ಪಡಕೊಂಡು ಹೋದರು.

ಆದರೆ, ಆ ತಾಯಿಯೇನೂ ಕೆಟ್ಟವರಲ್ಲ. ಮಕ್ಕಳನ್ನು ಬೇಗನೇ ಎಬ್ಬಿಸಿ ಮಸೀದಿಗೆ ಕಳಿಸುವುದು, ಕುರ್‌ಆನ್ ಓದಿಸುವುದು, ಆಗಾಗ್ಗೆ ಮನೆಯಲ್ಲಿ ಕುರ್‌ಆನ್ ಪಠಣವನ್ನು ಮಾಡಿಸುವುದು ಇದನ್ನೆಲ್ಲಾ ಮಾಡಿಸುತ್ತಿದ್ದರು. ಆದರೆ ಒಂದು ಚಿಕ್ಕ ಸಾಮಾನು ತಂದು ಕೊಡುವುದಕ್ಕೆ ಹೋದ ಹುಡುಗನೊಂದಿಗೆ ಅವರೇಕೆ ಹೀಗೆ ಮಾಡಿದ್ರು ಅಂತ ಅನಿಸ್ತು. ಕುರ್‌ಆನ್ ಇತರರಿಗೆ ಸಹಾಯ ಮಾಡುವುದನ್ನು ಕಲಿಸುತ್ತದೆ. ಅಂತಹದ್ದರಲ್ಲಿ ಈ ಮಕ್ಕಳಿಗೆ ಮದ್ರಸಾಗಳು ಶಾಲೆಗಳು ಏನು ಕಲಿಸುತ್ತವೆ? ಅದು ಎರಡನೇ ಮಾತು. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಅನ್ನುತ್ತಾರೆ. ಏಕೆಂದರೆ ನಿಜವಾದ ನೈತಿಕ, ಸಾಮಾಜಿಕ, ಕೌಟುಂಬಿಕ, ಧಾರ್ಮಿಕ ಶಿಕ್ಷಣ ಪ್ರಾರಂಭವಾಗುವುದು ಮನೆಯಿಂದಲೇ.

ಒಬ್ಬ ತಾಯಿ ಇತರರಿಗೆ ಸಹಾಯ ಮಾಡುವಂತೆ ಮಕ್ಕಳಿಗೆ ಕಲಿಸಬೇಕು. ಹಾಗಾದಾಗ ಆ ಮಗು ಮುಂದೆ ಬೆಳೆದು ದೊಡ್ಡವರಾದಾಗಲೂ ಸಹ ಇತರರಿಗೆ ಸಹಾಯ ಮಾಡಲು ಮುಂದೆ ಬರುತ್ತದೆ. ತಡೆದರೆ ಆ ಮಗುವಿನ ಮನಸ್ಸಿನಲ್ಲಿ ಬೇರೆಯವರಿಗೆ ಸಹಾಯ ಮಾಡುವುದು ತಪ್ಪು, ಮಾಡಿದರೆ ನನ್ನಮ್ಮ ಬಯ್ತಾರೆ ಅನ್ನೋ ಭಯ ಇರುತ್ತದೆ. ಮಕ್ಕಳ ಮನಸ್ಸು ಬಹಳ ಶುಭ್ರವಾಗಿರುತ್ತದೆ. ಚಿಕ್ಕಂದಿನಲ್ಲಿಯೇ ಆ ಮಕ್ಕಳಿಗೆ ಪ್ರವಾದಿಗಳ ಚರಿತ್ರೆ, ಸಜ್ಜನರ ಕಥೆ ಮತ್ತು ಸಹಾಬಿವರ್ಯರ ಧೀರೋದಾತ್ತ ಮಹತ್ ಕಾರ್ಯಗಳ ಬಗ್ಗೆ, ತರಬೇತಿ, ಸಂಸ್ಕರಣೆ, ಚರಿತ್ರೆ ನಿರ್ಮಾಣ ಮತ್ತು ಧರ್ಮಾಸಕ್ತಿಗಳ ಬೆಳವಣಿಗೆಗೆ ಪ್ರಯತ್ನಿಸಬೇಕು. ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ದೀನದಲಿತರ ಬಗ್ಗೆ ಪ್ರೇಮಾನುಕಂಪ, ದಾನ-ಧರ್ಮದ ಭಾವನೆ ಬೆಳೆಸಲಿಕ್ಕಾಗಿ ಅವರ ಕೈಯಿಂದ ಬಡಬಗ್ಗರಿಗೆ ದಾನ ಮಾಡಿಸುವುದು, ಅಣ್ಣ ತಮ್ಮಂದಿರಿಗೆ ಹಂಚಿ ತಿನ್ನುವ ಅಭ್ಯಾಸ ಬೆಳೆಸಲಿಕ್ಕಾಗಿ ಅವರಲ್ಲಿ ತಿಂಡಿಕೊಟ್ಟು ಹಂಚಿಸುವುದು, ನೆರೆಹೊರೆಯವರೊಂದಿಗೆ ಅವರ ಮಕ್ಕಳೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವಂತೆ ಪ್ರೋತ್ಸಾಹಿಸುವುದು, ಒಬ್ಬರು ಇನ್ನೊಬ್ಬರ ಕಷ್ಟಕ್ಕೆ ಸಹಾಯ ಮಾಡುವಂತೆ ತಿಳಿ ಹೇಳುತ್ತಿರುವುದು, ಅವರೊಂದಿಗೆ ಹೊಂದಾಣಿಕೆ ಸಹಬಾಳ್ವೆಯಿಂದ ಇರುವಂತೆ ಹೇಳುವುದು, ಪರಸ್ಪರರ ಹಕ್ಕು ಬಾಧ್ಯತೆಗಳನ್ನು ಅರಿಯುವಂತೆ ನ್ಯಾಯ ನೀತಿಯನ್ನು ಪಾಲಿಸುವಂತೆ ತಾಕೀತು ಮಾಡುತ್ತಾ ಬರುವುದೂ ಸಹ ತಂದೆ ತಾಯಿಯ ಕರ್ತವ್ಯವಾಗಿರುತ್ತದೆ.

“ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ನೀಡುವ ಅತ್ಯುತ್ತಮ ಕೊಡುಗೆ ಉತ್ತಮ ಶಿಕ್ಷಣ ತರಬೇತಿಯಾಗಿದೆ” ಎಂದು ಪ್ರವಾದಿ(ಸ) ಹೇಳಿರುವರು. ಪ್ರವಾದಿ(ಸ) ಹೀಗೇ ಹೇಳಿರುವರು. ಮನುಷ್ಯನು ತೀರಿಕೊಂಡಾಗ ಅವನ ಕರ್ಮಗಳು ಮುಗಿಯುತ್ತವೆ. ಆದರೆ ಮೂರು ವಿಧದ ಪುಣ್ಯಗಳ ಪ್ರತಿಫಲವು ಮರಣಾ ನಂತರವೂ ಸಿಗುತ್ತಿರುತ್ತದೆ.

1.ಅವನು ಮಾಡಿದ ಶಾಶ್ವತ ಸ್ವಭಾವದ ದಾನ-ಧರ್ಮ

2.ಅವನು ಬಿಟ್ಟು ಹೋದ ಫಲಪ್ರದ ವಿದ್ಯೆ

3.ಅವರಿಗಾಗಿ ಪ್ರಾರ್ಥಿಸುತ್ತಿರುವ ಸಜ್ಜನರಾದ ಸಂತಾನ (ಮುಸ್ಲಿಮ್).

ನಿಜ ಹೇಳಬೇಕೆಂದರೆ ನಮ್ಮ ನಂತರ ಅಂದರೆ ತಂದೆ-ತಾಯಿಗಳ ನಂತರ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಶಿಕ್ಷಣ ಮತ್ತು ಏಕದೇವತ್ವದ ಸಂದೇಶವನ್ನು ಜೀವಂತವಾಗಿಡುವ ಮಾಧ್ಯಮ ನಮ್ಮ ಮಕ್ಕಳೇ ಆಗಿರುತ್ತಾರೆ.

ಆದ್ದರಿಂದ ಅವರಿಗೆ ಚಿಕ್ಕಂದಿನಲ್ಲಿಯೇ ಉತ್ತಮ ಸಂಸ್ಕಾರವನ್ನು ಕೊಡುವುದು ಪ್ರತಿಯೊಬ್ಬ ತಂದೆ-ತಾಯಿಗಳ ಕರ್ತವ್ಯ. ಚಿಕ್ಕಂದಿನಲ್ಲಿಯೇ ನಾವು ಆ ಮಕ್ಕಳನ್ನು ಅನಗತ್ಯ ಪ್ರೀತಿಯನ್ನೋ, ಕಠಿಣತೆಯನ್ನೋ ತೋರಿಸುವುದು, ಚಿಕ್ಕ ಪುಟ್ಟ ಕೆಲಸಗಳಿಗೂ ನೌಕರರನ್ನು ಅವಲಂಬಿಸುವುದು… ಇದರಿಂದ ಮಕ್ಕಳು ಸೋಮಾರಿಗಳಾಗುತ್ತಾರೆ. ಆಲಸಿಯಾಗುತ್ತಾರೆ. ಸಾಧ್ಯವಾದಷ್ಟು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ, ತಮ್ಮ ಕೆಲಸಗಳನ್ನು ಸಾಧ್ಯವಾದಷ್ಟು ತಮ್ಮ ಕೈಗಳಿಂದ ತಾವೇ ಮಾಡಿಕೊಳ್ಳುವಂತೆ ಮಾಡಲು ಪ್ರೇರೇಪಿಸಿದರೆ ಅವರು ಚುರುಕಾಗುತ್ತಾರೆ. ಇಲ್ಲದಿದ್ದರೆ ಮೈ ಜಡ್ಡು ಹಿಡಿಯುತ್ತೆ. ಎಲ್ಲದಕ್ಕೂ ಪರಾವಲಂಬಿಗಳಾಗುತ್ತಾರೆ.

ತಂದೆ-ತಾಯಿಗಳು ಮಕ್ಕಳಿಗೆ ಸದಾ ಮಾದರಿಯಾಗಬೇಕು. ಏಕೆಂದರೆ ಕೇಳುವುದರಿಂದ ಕಲಿಯುವುದು ಕಡಿಮೆ. ನೋಡಿ ಕಲಿಯುವುದು ಹೆಚ್ಚು. ಮಕ್ಕಳು ತಂದೆ-ತಾಯಿಗಳ ನಡೆ ನುಡಿ, ಹಾವಭಾವ, ನೀವು ಮಾಡುವ ಎಲ್ಲಾ ಕರ್ಮಗಳನ್ನು ನೋಡುತ್ತಿರುತ್ತವೆ. ನಿಮ್ಮನ್ನು ಅವರು ಅನುಸರಿಸಲು ಪ್ರಯತ್ನಿಸುತ್ತಾರೆ. ನೀವೇ ಸತ್ಯ ನೀವೇ ನಿತ್ಯವೆಂದು ನಂಬಿ ನೀವು ಹೇಳಿ ಕೊಡುವುದನ್ನು ಕಲಿಯುತ್ತಾರೆ. ಹಾಗಾಗಿ ಸಾಧ್ಯವಾದಷ್ಟು ನಮ್ಮ ನಡೆ-ನುಡಿಗಳು ಮಕ್ಕಳಿಗೆ ಮಾದರಿಯಬೇಕೇ ಹೊರತು ದಾರಿ ತಪ್ಪುವ ಬೋಧನೆಗಳಾಗಬಾರದು.

ಅಂದಹಾಗೆ,
ಯಾರು ಎಷ್ಟೇ ಧರ್ಮೀಷ್ಟರಾಗಲಿ ಅವರ ವ್ಯವಹಾರ ನೆರೆಹೊರೆಯರೊಂದಿಗೆ, ಕುಟುಂಬದವರೊಂದಿಗೆ, ಸಂಬಂಧಿಕರೊಂದಿಗೆ, ಸಹ ಧರ್ಮೀಯರೊಂದಿಗೆ ಚೆನ್ನಾಗಿಲ್ಲದಿದ್ದರೆ ಬೇರೆಲ್ಲವೂ ವ್ಯರ್ಥವಾಗಬಹುದು.