ಸನ್ಮಾರ್ಗ ವಾರ್ತೆ
ಅಲ್ಮೈಡಾ ಗ್ಲಾಡ್ಸನ್
ನಾ ಖಾವೂಂಗಾ, ನಾ ಖಾನೇ ದೂಂಗಾ ಅನ್ನೋದು ಬೀಫ್ಗೆ ಮಾತ್ರ ಮೀಸಲು ಅಂತಾ ಹೇಳಿ ಸಾಕಾಯಿತು. ಯಾಕಂದ್ರೆ ಮಿಕ್ಕೆಲ್ಲಾ ಕಡೆ ಕಮಿಷನ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ಹೊರತರಬೇಕಾದವರು ಮಾತ್ರ ಸರ್ಕಾರಿ ಮೂಳೆಯನ್ನು ಬಾಯಲ್ಲಿಟ್ಟುಕೊಂಡು ಸ್ತುತಿಗಾನಗಳಲ್ಲಿ, ಉರುಳು ಸೇವೆಯಲ್ಲಿ ನಿರತರಾಗಿದ್ದಾರೆ. ಹಾಗಾಗಿಯೇ ಈ ಹೊಸ ಸೇರ್ಪಡೆ ಈಗ ಈ ಕೊರೋನಾ ಹಗರಣ.
ಚೀನಾದಿಂದ ತರಿಸಿದ ಕೋವಿಡ್ ಟೆಸ್ಟ್ ಕಿಟ್ ಮಕಾಡೆ ಮಲಗಿದೆ. ಕಿಟ್ಗಳು ದೋಷಪೂರಿತವಾಗಿದ್ದು, 95% ಪರೀಕ್ಷೆಗಳನ್ನು ತಪ್ಪಾಗಿ ಕೊಡುತ್ತಿದ್ದರಿಂದ ICMR ರಾಜ್ಯ ಸರಕಾರಗಳಿಗೆ ಕಿಟ್ ಉಪಯೋಗವನ್ನು ನಿಲ್ಲಿಸುವಂತೆ ಐದಾರು ದಿನಗಳ ಹಿಂದೆ ಆದೇಶ ಕೊಟ್ಟಿತ್ತು. ಅಷ್ಟಕ್ಕೂ ಈ ಕಿಟ್ಗಳನ್ನು ತರಿಸಿದ್ದೂ ICMR, ಅದೂ ಪರೀಕ್ಷೆ ಮಾಡಿದ ನಂತರ. ಏನ್ ಪರೀಕ್ಷೆ ಮಾಡಿದ್ದರೋ ದೇವರೇ ಬಲ್ಲ. ಆರೂವರೆ ಲಕ್ಷ ಕಿಟ್ಗಳಲ್ಲಿ ಸುಮಾರು ಎರಡೂವರೆ ಲಕ್ಷ ಈಗಾಗಲೇ ಭಾರತಕ್ಕೆ ಬಂದಾಗಿದೆ. ಸರ್ಕಾರ ಇವತ್ತು ಉಳಿದ ಕಿಟ್ಗಳ ಆಮದನ್ನು ರದ್ದುಗೊಳಿಸಿದೆ. ಸಾಂಕ್ರಾಮಿಕ ರೋಗ ಭಯಂಕರವಾಗಿ ವ್ಯಾಪಿಸಿರೋವಾಗ ಸರಕಾರಕ್ಕೆ, ಅದರ ಅಧೀನದಲ್ಲಿರುವ ಸಂಸ್ಥೆಗಳದ್ದು ಬೆಕ್ಕಾಟ.
ಈಗ ದೆಹಲಿ ಹೈಕೋರ್ಟ್ ಈ ಆಮದಿನಲ್ಲಿ ನಡೆದ ಗೋಲ್ಮಾಲನ್ನು, ಕಮಿಷನ್ ದಂಧೆಯನ್ನು ಬಯಲಿಗೆಳೆದಿದೆ. ಈ ಕಿಟ್ಗಳನ್ನು ಚೀನಾದ Wondfo ಎಂಬ ಕಂಪನಿಯಿಂದ ತರಲು ICMR ಓರ್ಡರ್ ಕೊಟ್ಟಿತ್ತು. ಇದನ್ನು ಚೀನಾದಲ್ಲಿರುವ ರಾಯಭಾರಿ ಕಛೇರಿಯ ಮಧ್ಯಸ್ಥಿಕೆಯಲ್ಲಿ Wondfo ಕಂಪನಿಯಿಂದ ನೇರವಾಗಿ ಖರೀದಿಸಿ ಭಾರತಕ್ಕೆ ತರಬಹುದಿತ್ತು. ನೇರವಾಗಿ ಖರೀದಿಸಿದರೆ ಈ ಕಿಟ್ನ ಬೆಲೆ 245 ರೂ ಪ್ಲಸ್ ಜಿಎಸ್ಟಿ ಹಾಗೂ ಇನ್ನಿತರ ಖರ್ಚೆಲ್ಲಾ ಸೇರಿ ICMR ಕೈ ಸೇರುವಾಗ ಒಂದು ಕಿಟ್ಗೆ ಸುಮಾರು 275 ರೂಪಾಯಿ ಆಗಿರುತ್ತಿತ್ತು. ಆದರೆ ಕಮಿಷನ್ ಬೇಕಲ್ವಾ? ಹಾಗಾಗಿ ಈ ಕಿಟ್ ಆಮದು ಮಾಡಿಕೊಳ್ಳಲು Matrix Labs ಎಂಬ ಕಂಪನಿಯ ನೇಮಕವಾಗುತ್ತೆ. ಈ Matrix Labs 245 ರೂ ಗೆ Wondfoದಿಂದ ಕಿಟ್ ಖರೀದಿಸಿ ಭಾರತಕ್ಕೆ ತಂದಿದೆ. ಭಾರತಕ್ಕೆ ತಂದನಂತರವಾದರೂ ಅದನ್ನು ICMR, Matrix Labsನಿಂದ ನೇರವಾಗಿ ಖರೀದಿಸಿದಿಯೇ? ಇಲ್ಲ. ಬದಲಾಗಿ Matrix Labs ಈ ಕಿಟ್ಟನ್ನು Rare Metabolics Life Sciences ಹಾಗೂ Aark Pharmaceuticals ಎನ್ನುವ ಕಂಪನಿಗಳಿಗೆ 400 ರೂಪಾಯಿಗೆ ಒಂದಂರಂತೆ ಮಾರಿದೆ. ಈ Rare Metabolics Life Sciences ಹಾಗೂ Aark Pharmaceuticals, ಡಿಸ್ಟ್ರಿಬ್ಯೂಷನ್ ಕಂಪನಿಗಳು. ಈ Rare Metabolics Life Sciences ಹಾಗೂ Aark Pharmaceuticalsನಿಂದ ICMR ಅರ್ಥಾತ್ ಕೇಂದ್ರ ಸರಕಾರ ಇದೇ ಕಿಟ್ಟನ್ನು 600 ರೂಪಾಯಿ ಪ್ಲಸ್ ಜಿಎಸ್ಟಿಯಂತೆ ಖರೀದಿಸಿದೆ. ಅಂದರೆ ಪ್ರತೀ ಕಿಟ್ ಮೇಲೆ 245 ರೂಪಾಯಿಯ ಕಿಟ್ ಮೇಲೆ 355 ಲಾಭ ಹಂಚಿಕೊಂಡಿವೆ ಮಧ್ಯದ ಎರಡು ಕಂಪನಿಗಳು. ಈ ಕಂಪನಿಗಳಿಲ್ಲದೇ ಕಿಟ್ಟನ್ನು ನೇರವಾಗಿ ಚೀನಾದಿಂದ ಆಮದು ಮಾಡಿಕೊಳ್ಳುವ ಅವಕಾಶ ಸರ್ಕಾರಕ್ಕಿದ್ದರೂ, ಈ ಎರಡು ದಲ್ಲಾಳಿಗಳನ್ನು ಮಧ್ಯದಲ್ಲಿರಿಸಿದ್ದು ಯಾಕೆಂದು ಬೇರೆ ಹೇಳಬೇಕಾಗಿಲ್ಲ.
ಈಗಾಗಲೇ ಸುಮಾರು ಎರಡೂವರೆ ಲಕ್ಷ ಕಿಟ್ಗಳು ಬಂದಿದ್ದು, ಅದರ ಹಣಪಾವತಿ ವಿಷಯದಲ್ಲಿ Metabolics Life Sciences ಮತ್ತು Rare Metabolics Life Sciences ನಡುವೆ ತಕರಾರೆದ್ದಿದ್ದು, ವಿಷಯ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಅಲ್ಲಿ ನ್ಯಾಯಮೂರ್ತಿಗಳು ಈ ಕಮಿಷನ್ ದಂಧೆಯನ್ನು ಕಂಡುಹಿಡಿದಿದ್ದಾರೆ ಮಾತ್ರವಲ್ಲ, ಪ್ರತೀ ಕಿಟ್ಗೆ 400 ರೂಪಾಯಿಗಿಂತ ಹೆಚ್ಚು ವಿಧಿಸುವಂತಿಲ್ಲ ಎಂದು ಎರಡೂ ಕಂಪನಿಗಳಿಗೆ ಆದೇಶ ಕೊಟ್ಟಿದೆ. ನ್ಯಾಯಮೂರ್ತಿ ಗುಡುಗುತ್ತಲೇ ಎರಡೂ ದಲ್ಲಾಳಿಗಳು ಪತರುಗುಟ್ಟಿ, ಕೋರ್ಟ್ ಆದೇಶಕ್ಕೆ ಅಸ್ತು ಎಂದಿವೆ. ಮೊದಲನೆಯದಾಗಿ ಸರ್ಕಾರಕ್ಕೆ ಈ ಎರಡು ಕಂಪನಿಗಳ ಸಹಾಯವಿಲ್ಲದೆ ನೇರವಾಗಿ 245 ರೂಪಾಯಿಗೆ ಕಿಟ್ ಖರೀದಿಸುವ ಅವಕಾಶವಿತ್ತು. ಎರಡನೆಯದಾಗಿ ಎರಡರಲ್ಲಿ ಒಂದು ಕಂಪನಿಯನ್ನು ಮಾತ್ರ ನೇಮಿಸಿ 400 ರೂಪಾಯಿಗೆ ಖರೀದಿಸಬಹುದಿತ್ತು. ಅದನ್ನೂ ಮಾಡದೇ ಒಟ್ಟು ಸುಮಾರು 12.75 ಕೋಟಿ ರೂಪಾಯಿಗೆ ಸಿಗಬಹುದಿದ್ದ ಕಿಟ್ಗಳನ್ನು 30 ಕೋಟಿಗೆ ಖರೀದಿಸುವ ಡೀಲ್ ಬೈ ಡೀಲ್ ಮಾಸ್ಟರ್ಸ್. ಮಾಧ್ಯಮಗಳು ಎಂದಿನಂತೆ ಬಾಯಿಗೆ ಬೆಣೆ ಹಾಕ್ಕೊಂದು ಕೂತಿವೆ. ಒಂದೆರಡು ವೆಬ್ಸೈಟ್ಗಳು ಇದನ್ನು ವರದಿ ಮಾಡಿದ್ದು ಬಿಟ್ಟರೆ ಮಿಕ್ಕವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಾಂಗ್ರೇಸ್ ಎಂದು ಒದರುತ್ತಿವೆ…
( ಈ ಕುರಿತಂತೆ www.businesstoday.in ಬ್ಯುಸಿನೆಸ್ ಟುಡೇ ಪತ್ರಿಕೆಯು Massive 145% profiteering exposed in coronavirus rapid test kits sold to ICMR ಎಂಬ ಶೀರ್ಷಿಕೆಯಲ್ಲಿ ವಿವರಣಾತ್ಮಕ ವರದಿ ಬರೆದಿದೆ- ಸಂಪಾದಕ.)
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












