ಸನ್ಮಾರ್ಗ ವಾರ್ತೆ
ಇರಾನಿಗೆ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಯನ್ನು ಮಾರಾಟ ಮಾಡಲು ಚೀನಾ ಮುಂದಾಗಿರುವುದಕ್ಕೆ ಅಮೆರಿಕ ಆತಂಕ ವ್ಯಕ್ತಪಡಿಸಿದೆ. ಮುಂದಿನ ಕೆಲವೇ ವಾರಗಳಲ್ಲಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳು ಇರಾನಿಗೆ ತಲುಪುವ ಸೂಚನೆ ಇದೆ ಎಂದು ಅಮೆರಿಕಾದ ಗುಪ್ತಚರ ಏಜೆನ್ಸಿಗಳು ವರದಿ ಮಾಡಿವೆ.
ಈ ಶಸ್ತ್ರಾಸ್ತ್ರಗಳನ್ನು ನೇರವಾಗಿ ಇರಾನಿಗೆ ತಲುಪಿಸುವ ಬದಲು ಮೂರನೇ ರಾಷ್ಟ್ರಕ್ಕೆ ತಲುಪಿಸಿ ಆ ಮೂಲಕ ಇರಾನಿಗೆ ರವಾನಿಸುವ ತಂತ್ರಕ್ಕೆ ಚೀನಾ ಇಳಿದಿದೆ ಎಂದು ವರದಿಯಲ್ಲಿದೆ.
ಭುಜದಲ್ಲಿಟ್ಟು ಬಳಸಬಹುದಾದ ರೀತಿಯಲ್ಲಿ ಇರುವ ಶಸ್ತ್ರಾಸ್ರಗಳು ಇವುಗಳಲ್ಲಿದ್ದು ವಿಮಾನಗಳನ್ನು ಗುರಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಆಯುಧಗಳು ಪಶ್ಚಿಮ ಏಷ್ಯಾದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಹಾರುವ ಅಮೆರಿಕಾದ ಯುದ್ಧ ವಿಮಾನಗಳ ಪಾಲಿಗೆ ಅಪಾಯಕಾರಿಯಾಗಿದೆ. ಈ ಶಸ್ತ್ರಾಸ್ರಗಳಲ್ಲದೆ ಬ್ಯಾಲೆಸ್ಟಿಕ್ ಮಿಸೈಲುಗಳನ್ನು ನಿರ್ಮಿಸಲು ಉಪಯೋಗಿಸುವ ಅಮೋನಿಯಂ ಪೆರ್ಕ್ಲೋರೇಟ್ ರೀತಿಯ ರಾಸಾಯನಿಕಗಳು ಹಾಗೂ ಅಸಂಸ್ಕರಿತ ವಸ್ತುಗಳನ್ನು ಕೂಡ ಚೀನಾ ಇರಾನಿಗೆ ಮಾರಾಟ ಮಾಡುತ್ತಿರುವುದಾಗಿ ವರದಿಯಾಗಿದೆ.
ಇರಾನಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಯಾವುದೇ ರಾಷ್ಟ್ರದ ವಿರುದ್ಧ 50% ತೆರಿಗೆ ಹಾಕುವುದಾಗಿ ಟ್ರಂಪ್ ಹೇಳಿರುವ ಬಳಿಕ ಈ ವರದಿ ಪ್ರಕಟವಾಗಿದೆ.












