✍️ ಏ.ಕೆ. ಕುಕ್ಕಿಲ
‘After 2.5 years, can we handle the truth about Oct. 7th’ ಎಂಬ ಶೀರ್ಷಿಕೆಯಲ್ಲಿ ಅಮೇರಿಕದ ಖ್ಯಾತ ಪತ್ರಕರ್ತ ಲೀ ಕ್ಯಾಂಪ್ ಅವರು 2026 ಮಾರ್ಚ್ 30ರಂದು ಬರೆದಿರುವ ಲೇಖನವು ಇಸ್ರೇಲ್ ಮೇಲೆ 2023 ಅಕ್ಟೋಬರ್ 7ರಂದು ಹಮಾಸ್ ನಡೆಸಿರುವ ದಾಳಿಯ ಕುರಿತಾದ ಅನುಮಾನಗಳನ್ನು ಇನ್ನಷ್ಟು ಬಲಪಡಿಸಿದೆ.
ಅಕ್ಟೋಬರ್ 7ರ ಹಮಾಸ್ ದಾಳಿಯ ಮಾಹಿತಿಯು ಇಸ್ರೇಲ್ಗೆ ಮುಂಚಿತವಾಗಿಯೇ ತಿಳಿದಿತ್ತು ಎಂದು ಇವರು ಬರೆದಿದ್ದಾರೆ. ಮಾತ್ರವಲ್ಲ, ಇಸ್ರೇಲಿನ 1200 ನಾಗರಿಕರನ್ನು ಹಮಾಸ್ ಹತ್ಯೆ ಮಾಡಿದೆ ಎಂಬ ಆರೋಪವನ್ನು ಇವರು ನಿರಾಕರಿಸಿದ್ದು, ಈ ಹತ್ಯೆಯಲ್ಲಿ ಇಸ್ರೇಲ್ ಸೈನಿಕರ ಪಾತ್ರ ಬಹಳ ದೊಡ್ಡದಿದೆ ಎಂದೂ ಬರೆದಿದ್ದಾರೆ. ತನ್ನ ಈ ವಾದಕ್ಕೆ ಪೂರಕವಾಗಿ ಮಾಧ್ಯಮ ವರದಿಗಳನ್ನೂ ಉಲ್ಲೇಖಿಸಿದ್ದಾರೆ. ಲೀ ಕ್ಯಾಂಪ್ಗೆ ಅವರು ರಾಜಕೀಯ ಕಾಮೆಂಟೇಟರ್ ಪಾಡ್ಕಾಸ್ಟರ್ ಮತ್ತು ಸ್ಟ್ಯಾಂಡ್ಅಪ್ ಕಾಮಿಡಿಯನ್ ಆಗಿ ಅಮೇರಿಕದಲ್ಲಿ ದೊಡ್ಡ ಹೆಸರಿದ್ದು, ಸಾಹಿತಿಯೂ ಆಗಿದ್ದಾರೆ. ಹಾಗಂತ,
ಇವರ ಬರಹವನ್ನು ಸಾದಾ ಸೀದಾ ಒಪ್ಪಿಕೊಳ್ಳದೇ ಮಾಹಿತಿಗಳಿಗಾಗಿ ಹುಡುಕಾಡಿದೆ. ಮಾಧ್ಯಮ ವರದಿಗಳನ್ನು ಪರಿಶೀಲಿಸ ತೊಡಗಿದೆ. ಆಗ ಈ ಲೀ ಕ್ಯಾಂಪ್ ಎತ್ತಿರುವ ಅನುಮಾನಗಳನ್ನು ಪುಷ್ಟೀಕರಿಸುವ ಸಾಲುಸಾಲು ಮಾಹಿತಿಗಳೇ ಕಣ್ಣೆದುರು ಬಂತು. ಇದರಲ್ಲಿ ಮೊದಲನೆಯದ್ದು, ಅಕ್ಟೋಬರ್ 7ರ ಹಮಾಸ್ ದಾಳಿಗೆ ಸಂಬಂಧಿಸಿ ಇಸ್ರೇಲ್ನ ರಕ್ಷಣಾ ಸಚಿವರಾಗಿದ್ದ ಯೋವ್ ಗ್ಯಾಲಂಟ್ ನೀಡಿರುವ ಹೇಳಿಕೆ. ‘ಹಮಾಸ್ ದಾಳಿಯ ಸಮಯದಲ್ಲಿ ಇಸ್ರೇಲಿ ಒತ್ತೆಯಾಳುಗಳಾಗಿರುವ ನಾಗರಿಕರನ್ನು ಹತ್ಯೆ ಮಾಡು ವಂತೆ ಮಿಲಿಟರಿಗೆ ಆದೇಶ ನೀಡಲಾಗಿತ್ತು..’ ಎಂದು ಅವರು ಇಸ್ರೇಲ್ನ ಚಾನೆಲ್ 12ಕ್ಕೆ ನೀಡಿದ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದರು. ಘಟನೆಯ ಸುಮಾರು ಒಂದೂವರೆ ವರ್ಷಗಳ ಬಳಿಕ ಇವರು ಈ ಹೇಳಿಕೆ ನೀಡಿದ್ದರು ಮತ್ತು 2025 ಫೆಬ್ರವರಿ 7ರಂದು ಎಕ್ಸ್ ಜಾಲತಾಣದಲ್ಲಿ ಅವರ ಹೇಳಿಕೆಯ ವೀಡಿಯೋ ಕಾಣಿಸಿಕೊಂಡಿತ್ತು. ‘Ex Israel Army chief admits using Hannibal Directive against own soldiers’ ಎಂಬ ಶೀರ್ಷಿಕೆಯಲ್ಲಿ ಫೆಬ್ರವರಿ 9ರಂದು ಎನ್ಡಿಟಿವಿ ಈ ಕುರಿತಂತೆ ವರದಿಯನ್ನೂ ಪ್ರಕಟಿಸಿತ್ತು. ಅಂದಹಾಗೆ,
ತನ್ನದೇ ನಾಗರಿಕರನ್ನು ಹತ್ಯೆ ಮಾಡುವುದಕ್ಕೆ ಇಸ್ರೇಲ್ ಯಾಕೆ ಆದೇಶಿಸಿದೆ ಎಂಬ ಪ್ರಶ್ನೆ ಸಹಜವಾದದ್ದು. ನಿಜವಾಗಿ,
ಇದು ಇಸ್ರೇಲಿನ ಸೇನಾ ನೀತಿಯಾಗಿದೆ. ಈ ನೀತಿಯನ್ನು ಹ್ಯಾನಿಬಲ್ ನಿರ್ದೇಶನ (Hannibal Directive) ಎಂದು ಕರೆಯಲಾಗುತ್ತದೆ. ಹಮಾಸ್ ಮತ್ತು ಹಿಝ್ಬುಲ್ಲಾಗಳು ಇಸ್ರೇಲಿ ಸೈನಿಕರನ್ನು ಅಪಹರಿಸುವುದನ್ನು ಸರ್ವ ರೀತಿಯಿಂದಲೂ ತಡೆಯುವುದಕ್ಕಾಗಿ ಈ ನಿಯಮವನ್ನು 1980ರಲ್ಲಿ ರಚಿಸಲಾಗಿದೆ. ತಮ್ಮ ಸೈನಿಕರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡು ಒತ್ತಡ ಹೇರುವ ಸನ್ನಿವೇಶ ಸೃಷ್ಟಿಯಾಗದಂತೆ ನೋಡಿಕೊಳ್ಳುವುದಕ್ಕಾಗಿ ಅಪಹರಣದ ಸಮಯದಲ್ಲೇ ತನ್ನದೇ ಸೈನಿಕರನ್ನು ಹತ್ಯೆ ಮಾಡುವುದಕ್ಕೆ ಈ ನೀತಿ ಅವಕಾಶ ಮಾಡಿಕೊಡುತ್ತದೆ. ಈ ಮೂಲಕ ಅಪಹರಣಕಾರರು ಮತ್ತು ತನ್ನ ಸೈನಿಕರು- ಇಬ್ಬರ ಹತ್ಯೆಯೂ ನಡೆಯುತ್ತದೆ. ಆದರೆ,
ಹಮಾಸ್ ದಾಳಿಯ ವೇಳೆ ಈ ನೀತಿಯನ್ನು ನಾಗರಿಕರ ಮೇಲೂ ಪ್ರಯೋಗಿಸಲಾಯಿತು. ಇಸ್ರೇಲ್ ಗಡಿ ದಾಟಿ ಗಾಝಾಕ್ಕೆ ಹೋಗುವ ವಾಹನಗಳನ್ನು ಹೆಲಿಕಾಪ್ಟರ್ಗಳು, ಡ್ರೋನ್ಗಳು ಮತ್ತು ಟ್ಯಾಂಕ್ಗಳು ಸ್ಫೋಟಿಸಿದ್ದವು. ಇಂಥ ಸುಮಾರು 70ರಿಂದ 80ರಷ್ಟು ವಾಹನಗಳನ್ನು ಹೀಗೆ ಸ್ಫೋಟಿಸಲಾಗಿದೆ ಎಂಬ ವರದಿಯಿದೆ. ಗಡಿಯಿಂದ ಒಂದೂ ವಾಹನ ಗಾಝಾಕ್ಕೆ ಹೋಗ ಬಾರದು ಎಂಬ ಕಟ್ಟಾಜ್ಞೆಯನ್ನು ಮಾಡಲಾಗಿತ್ತು. ಈ ಎಲ್ಲ ವಾಹನಗಳಲ್ಲಿ ಇಸ್ರೇಲಿ ನಾಗರಿಕರನ್ನು ಗಾಝಾಕ್ಕೆ ಕೊಂಡೊಯ್ಯಲಾಗುತ್ತಿತ್ತು ಎಂದೂ ಹೇಳಲಾಗುತ್ತಿದೆ. ಒಂದು ವಾಹನದಲ್ಲಿ 5 ಮಂದಿ ಇದ್ದಾರೆ ಎಂದು ಅಂದುಕೊಂಡರೂ ಈ 70-80 ವಾಹನಗಳ ಮೇಲಿನ ದಾಳಿಯಲ್ಲಿ ಆಗಿರಬಹುದಾದ ಜೀವಹಾನಿಯನ್ನು ಅಂದಾಜಿಸಬಹುದು. ಕಿಬ್ಬುಟ್ಜ್ ಬೀರಿ ಎಂಬ ಪ್ರದೇಶದಲ್ಲಿ ಹಮಾಸ್ ಹೋರಾಟಗಾರರು 14 ಇಸ್ರೇಲಿ ನಾಗರಿಕರನ್ನು ಒಂದು ಮನೆಯಲ್ಲಿ ಒತ್ತೆಯಾಳಾಗಿ ಇರಿಸಿ ಕೊಂಡಿದ್ದರು. ಇಸ್ರೇಲಿ ಪಡೆಗಳು ಶೆಲ್ ದಾಳಿ ನಡೆಸಿತು ಮತ್ತು ಯಾಸ್ಮೀನ್ ಪೊರಾಟ್ ಎಂಬ ಮಹಿಳೆಯ ಹೊರತು ಉಳಿದ 13 ಮಂದಿಯೂ ಹತ್ಯೆಗೀಡಾದರು. ಈ ಬಗ್ಗೆ ಅವರೇ ಸಾಕ್ಷ್ಯವನ್ನು ನುಡಿದಿದ್ದಾರೆ. ಅಂದರೆ,
ಇಸ್ರೇಲ್ನ ಒಳಗಿನಿಂದ ಹಮಾಸ್ ಹೋರಾಟಗಾರರು ಯಾರನ್ನೂ ಒತ್ತೆಯಾಳಾಗಿ ಕೊಂಡೊಯ್ಯದಂತೆ ತಡೆಯುವುದಕ್ಕಾಗಿ ಸೇನಾಪಡೆಗಳು ಹ್ಯಾನಿಬಲ್ ನಿರ್ದೇಶವನ್ನು ಪ್ರಬಲವಾಗಿ ಜಾರಿಗೊಳಿಸಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ನೋವಾ ಹಬ್ಬದ ಸಂಭ್ರಮದಲ್ಲಿದ್ದವರ ಮೇಲೆ ಹಮಾಸ್ ಹೋರಾಟಗಾರರು ದಾಳಿ ಮಾಡಿ 1200 ಮಂದಿಯನ್ನು ಕೊಂದಿದ್ದಾರೆ ಎಂದು ಇಸ್ರೇಲ್ ಪ್ರಚಾರ ಮಾಡಿದ್ದರೂ ನಿಜಕ್ಕೂ ಈ ಹತ್ಯೆಯಲ್ಲಿ ಹಮಾಸ್ ಪಾಲೆಷ್ಟು ಮತ್ತು ಇಸ್ರೇಲ್ನ ‘ಹ್ಯಾನಿಬಲ್ ಡೈರೆಕ್ಟಿವ್’ ನೀತಿಯ ಪಾಲೆಷ್ಟು ಎಂಬುದು ಇನ್ನೂ ಬಹಿರಂಗಕ್ಕೆ ಬಂದಿಲ್ಲ. ಈ ಕುರಿತಾದ ಸಮಗ್ರ ಸಿಸಿಟಿವಿ ದೃಶ್ಯಾವಳಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸಿಲ್ಲ ಎಂದು ಹೇಳಲಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿದ್ದವರನ್ನು ಹತ್ಯೆ ಮಾಡುವ ಉದ್ದೇಶ ಹಮಾಸ್ಗೆ ಇತ್ತೇ ಅಥವಾ ಅಪಹರಿಸುವುದಾಗಿತ್ತೇ ಎಂಬ ಪ್ರಶ್ನೆ ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಇದೇ ಅವಕಾಶವನ್ನು ಬಳಸಿಕೊಂಡು ಹ್ಯಾನಿಬಲ್ ಡೈರೆಕ್ಟಿವ್ ನೀತಿಯನ್ನು ಇಸ್ರೇಲ್ ಕ್ರೂರವಾಗಿ ಜಾರಿಗೊಳಿಸುವ ತಂತ್ರವನ್ನು ಅನುಸರಿಸಿತ್ತೇ ಮತ್ತು ಹತ್ಯಾಕಾಂಡದ ಅಪವಾದವನ್ನು ಜಾಣ ತನದಿಂದ ಹಮಾಸ್ ಮೇಲೆ ವರ್ಗಾಯಿಸಿತ್ತೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಅಂದಹಾಗೆ,
ಈ ಅನುಮಾನಕ್ಕೆ ಬಲವಾದ ಇತರ ಕಾರಣಗಳೂ ಇವೆ. ಅದೇನೆಂದರೆ,
ಹಮಾಸ್ ದಾಳಿ ಯೋಜನೆಯ ಬಗ್ಗೆ ಇಸ್ರೇಲಿ ಗುಪ್ತಚರ ಏಜೆನ್ಸಿಗಳು ಮುಂಚಿತವಾಗಿಯೇ ಮಾಹಿತಿಯನ್ನು ಪಡೆದಿದ್ದವು ಎಂಬುದು. 2023 ನವೆಂಬರ್ 30ರಂದು ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವರದಿ ಮಾಡಿತ್ತು. ಹಮಾಸ್ನ 40 ಪುಟಗಳ ಬ್ಯಾಟಲ್ ಪ್ಲ್ಯಾನ್ ಅನ್ನು ಒಂದು ವರ್ಷಕ್ಕೂ ಮುಂಚೆ ಅಂದರೆ 2022ರಲ್ಲಿ ಇಸ್ರೇಲಿ ಅಧಿಕಾರಿಗಳು ಪಡೆದಿದ್ದರು. ಅದರಲ್ಲಿ ಹಮಾಸ್ ಹೋರಾಟಗಾರರು ಗಡಿ ದಾಟುವುದು, ನಗರಗಳ ಮೇಲೆ ದಾಳಿ ನಡೆಸುವುದು ಮತ್ತು ಒತ್ತೆಯಾಳಾಗಿ ಇರಿಸಿಕೊಳ್ಳುವುದು ಇತ್ಯಾದಿಗಳ ವಿವರ ಇತ್ತು. ಆದರೆ, ಈ ಮಾಹಿತಿಯನ್ನು ಇಸ್ರೇಲಿ ಗುಪ್ತಚರ ಅಧಿಕಾರಿಗಳು ಅಸಾಧ್ಯವಾದದ್ದು ಮತ್ತು ಊಹೆ ಆಧಾರಿತ ಎಂದು ತಿರಸ್ಕರಿಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ನ ವರದಿಯಲ್ಲಿತ್ತು. ಅಕ್ಟೋಬರ್ 4 ಮತ್ತು 5ರ ನಡುವೆ ಈಜಿಪ್ಟ್ ಗುಪ್ತಚರ ಏಜೆನ್ಸಿ ಕೂಡಾ ಸಂಭಾವ್ಯ ಹಮಾಸ್ ದಾಳಿ ಸಿದ್ಧತೆಯ ಬಗ್ಗೆ ಇಸ್ರೇಲ್ನೊಂದಿಗೆ ಮಾಹಿತಿಯನ್ನು ಹಂಚಿಕೊಂಡಿತ್ತು ಎಂದು ಬಿಬಿಸಿ ಮತ್ತು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಗಾಝಾದಲ್ಲಿ ರಾಕೆಟ್ ದಾಳಿ ಮತ್ತು ಹಿಂಸೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು 2023 ಸೆಪ್ಟೆಂಬರ್ 28 ಮತ್ತು ಅಕ್ಟೋಬರ್ 5ರಂದು ಅಮೇರಿಕದ ಗುಪ್ತಚರ ಸಂಸ್ಥೆಯಾದ ಸಿಐಎಯು ಇಸ್ರೇಲ್ಗೆ ಎಚ್ಚರಿಕೆ ನೀಡಿತ್ತು ಎಂಬುದಾಗಿ ನ್ಯೂಯಾರ್ಕ್ ಟೈಮ್ಸ್ ಮತ್ತು ಸಿಎನ್ಎನ್ ಸುದ್ದಿ ಸಂಸ್ಥೆಗಳು ವರದಿ ಮಾಡಿತ್ತು. ಇದರ ಜೊತೆಗೆ,
ಗಡಿ ಭಾಗದಲ್ಲಿ ಹಮಾಸ್ ಅಸಾಮಾನ್ಯ ಚಟುವಟಿಕೆ ನಡೆಸುತ್ತಿರುವುದನ್ನು ಮತ್ತು ಅಕ್ಟೋಬರ್ 6ರಂದು ಇಸ್ರೇಲಿ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಮಾಡುತ್ತಿರುವುದನ್ನು ಇಸ್ರೇಲಿ ಗುಪ್ತಚರ ಸಂಸ್ಥೆ ಗಮನಿಸಿತ್ತು. ಆದರೆ,
ಈ ಯಾವುದನ್ನೂ ಇಸ್ರೇಲ್ ಗಂಭೀರವಾಗಿ ಪರಿಗಣಿಸಲಿಲ್ಲ ಎಂಬುದೇ ಅಚ್ಚರಿಯಾಗಿ ಕಾಣಿಸುತ್ತದೆ. ಹಮಾಸ್ ಯುದ್ಧವನ್ನು ಬಯಸಲಾರದು ಎಂಬ ನಂಬಿಕೆ ಸೇನೆಯದ್ದಾಗಿತ್ತು ಎಂಬುದಾಗಿ 2025ರಲ್ಲಿ ಹಂಚಿಕೊಳ್ಳಲಾದ ಇಸ್ರೇಲಿ ಸೇನೆಯ ಆಂತರಿಕ ತನಿಖೆ ಮಾಹಿತಿಗಳು ಸಮರ್ಥಿಸುತ್ತವಾದರೂ ಇದನ್ನು ಎಷ್ಟರಮಟ್ಟಿಗೆ ನಂಬಬಹುದು ಎಂಬ ಪ್ರಶ್ನೆಯೂ ಇದೆ. ತನ್ನ ಗ್ರೇಟರ್ ಇಸ್ರೇಲ್ ಗುರಿಯನ್ನು ಈಡೇರಿಸಿಕೊಳ್ಳುವುದಕ್ಕೆ ಹಮಾಸ್ನಿಂದ ಇಂಥದ್ದೊಂದು ಕಾರ್ಯಾ ಚರಣೆಯನ್ನು ಇಸ್ರೇಲ್ ಬಯಸಿತ್ತೇ ಮತ್ತು ಈ ಕಾರ್ಯಾಚರಣೆಗೆ ಪೂರಕ ಸನ್ನಿವೇಶವನ್ನು ಉದ್ದೇಶ ಪೂರ್ವಕವಾಗಿ ನಿರ್ಮಿಸಿತ್ತೇ ಎಂಬ ಅನುಮಾನವೂ ಉಂಟಾಗುತ್ತದೆ. ಈ ಅನುಮಾನಕ್ಕೆ ಇನ್ನೊಂದು ಬಲವಾದ ಕಾರಣ ಏನೆಂದರೆ,
1200 ಮಂದಿಯ ಹತ್ಯೆಯ ವೀಡಿಯೋ ಫೂಟೇಜ್ಗಳನ್ನು ಇಸ್ರೇಲ್ ಈವರೆಗೆ ಸಮಗ್ರವಾಗಿ ಹಂಚಿಕೊಂಡಿಲ್ಲ ಎಂಬ ಆರೋಪ. ನಿಜಕ್ಕೂ ಅಲ್ಲಾಹನು ನಡೆದಿದೆ? ಈ ಹತ್ಯಾಕಾಂಡವನ್ನು ಹಮಾಸ್ ನಡೆಸಿತ್ತೇ? ಹಮಾಸ್ಗೆ ಅದರಿಂದಾಗುವ ಲಾಭ ಏನು? ಅಥವಾ ಹಮಾಸ್ನಿಂದ ಅಂಥದ್ದೊಂದು ಅಪರಾಧ ಉಂಟಾಗುವ ಸನ್ನಿವೇಶ ಸೃಷ್ಟಿಸಲಾಯಿತೇ? ಗೊತ್ತಿಲ್ಲ. ಹಾಗಂತ,
ಈವರೆಗೆ ತಿಳಿದಿರುವಂತೆ ಹಮಾಸ್ನ ಗುರಿ ಇಸ್ರೇಲ್ ನಾಗರಿಕರಲ್ಲ. ಸೇನೆಯನ್ನೇ ಗುರಿ ಮಾಡಿ ಈವರೆಗೆ ಅದು ಹೋರಾಟ ಮಾಡುತ್ತಾ ಬಂದಿದೆ. 1990-2000ದ ಮಧ್ಯೆ ಅದು ಆತ್ಮಹತ್ಯಾ ದಾಳಿಯ ಮೊರೆ ಹೋಗಿದ್ದರೂ ಆ ಬಳಿಕದಿಂದ ಅದು ಈ ವಿಧಾನವನ್ನು ಕೈಬಿಟ್ಟಿತ್ತು. ಮಾತ್ರವಲ್ಲ, 2023 ಅಕ್ಟೋಬರ್ 7ರ ದಾಳಿಯಲ್ಲೂ ಆತ್ಮಹತ್ಯಾ ಬಾಂಬ್ ವಿಧಾನವನ್ನು ಅದು ಬಳಸಿಲ್ಲ ಎಂಬುದೂ ದೃಢಪಟ್ಟಿದೆ. ಈ ನೆಲೆಯಲ್ಲಿ ನೋಡುವಾಗ, 2023 ಅಕ್ಟೋಬರ್ 7ರ ದಾಳಿ ಮತ್ತು ಆ ಬಳಿಕದ ಬೆಳವಣಿಗೆಗಳು ನಿಗೂಢವಾಗಿಯೇ ಉಳಿಯುತ್ತವೆ.
ಆದರೆ,
ಈ ದಾಳಿಯ ಬಳಿಕ ಕಾರ್ಯಾಚರಣೆಗೆ ಇಳಿದ ಇಸ್ರೇಲ್, ಈವರೆಗೂ ವಿರಾಮವನ್ನೇ ಪಡೆದಿಲ್ಲ. ಗಾಝಾವನ್ನು ಬಹುತೇಕ ಅದು ನಾಶ ಮಾಡಿದೆ. ಇಡೀ ಗಾಝಾವನ್ನೇ ಒತ್ತುವರಿ ಮಾಡಿಕೊಳ್ಳುವ ಉದ್ದೇಶವನ್ನೂ ಹೊಂದಿದೆ. ಇದರ ಜೊತೆಗೇ ಲೆಬನಾನ್ನಲ್ಲಿ ಭಾರೀ ಪ್ರಮಾಣದ ಕಾರ್ಯಾಚರಣೆ ನಡೆಸಿದೆ. ಸಾವಿರಕ್ಕಿಂತಲೂ ಅಧಿಕ ಮಂದಿಯನ್ನು ಸಾಯಿಸಿದೆ. 20 ಲಕ್ಷಕ್ಕಿಂತಲೂ ಅಧಿಕ ಮಂದಿ ವಲಸೆ ಹೋಗುವಂತೆ ಮಾಡಿದೆ. ಇಲ್ಲಿಯ ಕಾರ್ಯಾಚರಣೆ ಇನ್ನೂ ನಿಂತಿಲ್ಲ. ಇಲ್ಲಿಯ ಭೂಭಾಗಗಳ ಮೇಲೂ ಅದು ನಿಯಂತ್ರಣ ಸಾಧಿಸಿದೆ. ಲೆಬನಾನ್ ನೆಲದ ಮೇಲೆ ತನ್ನ ಸೇನಾ ಉಪಸ್ಥಿತಿಯನ್ನು ಘೋಷಿಸಿದೆ. ಇದರ ಬೆನ್ನಿಗೇ ಇರಾನಿನ ಮೇಲೂ ದಾಳಿ ಪ್ರಾರಂಭಿಸಿದೆ. 2025 ಜೂನ್ನಲ್ಲಿ 12 ದಿನಗಳ ಕಾಲ ಇರಾನಿನ ಮೇಲೆ ಇಸ್ರೇಲ್ ಯುದ್ಧ ಸಾರಿತ್ತು.
ಇದೀಗ ಪೂರ್ಣ ಪ್ರಮಾಣದ ಯುದ್ಧ ನಡೆಸುತ್ತಿದೆ. ಈ ಯುದ್ಧದಿಂದಾಗಿ 30 ಲಕ್ಷಕ್ಕಿಂತಲೂ ಅಧಿಕ ಇರಾನಿಯರು ವಲಸೆ ಹೋಗುವಂತಾಗಿದೆ. ಸಾವಿರಾರು ಮಂದಿ ನೆಲೆ-ಬೆಲೆ ಕಳಕೊಂಡಿದ್ದಾರೆ. ಇದರ ನಡುವೆಯೇ ಸಿರಿಯಾದ ಮೇಲೆ ಹಲವು ಬಾರಿ ಇಸ್ರೇಲ್ ದಾಳಿ ನಡೆಸಿದೆ. ಹೂತಿಗಳ ನೆಪದಲ್ಲಿ ಯಮನ್ ಮೇಲೆಯೂ ದಾಳಿ ನಡೆಸಿದೆ. ಅಲ್ಲದೇ, ಅಮೇರಿಕದ ಮುಂದಿನ ಗುರಿ ಕ್ಯೂಬಾ ಆದರೆ, ಇಸ್ರೇಲ್ನ ಮುಂದಿನ ಗುರಿ ಟರ್ಕಿ ಅಥವಾ ಈಜಿಪ್ಟ್ ಎಂದೂ ಹೇಳಲಾಗುತ್ತಿದೆ. ಈ ಎಲ್ಲವನ್ನೂ ಜೊತೆಗಿಟ್ಟು ನೋಡಿದರೆ, ಒಂದು ಸಣ್ಣ ಮ್ಯಾಪ್ ಸಿಗುತ್ತದೆ. ಅದುವೇ,
ಗ್ರೇಟರ್ ಇಸ್ರೇಲ್ ಮ್ಯಾಪ್.
ಈಜಿಪ್ಟ್, ಲೆಬನಾನ್, ಫೆಲೆಸ್ತೀನ್, ಸೌದಿ, ಸಿರಿಯಾ, ಜೋರ್ಡಾನ್, ಇರಾಕ್, ಕುವೈತ್ ಇತ್ಯಾದಿ ರಾಷ್ಟ್ರಗಳ ಭೂಭಾಗಗಳನ್ನು ಒಳಗೊಂಡ ಸಮಗ್ರ ರಾಷ್ಟ್ರ ರಚಿಸುವ ಕನಸೊಂದು ಇಸ್ರೇಲ್ಗಿದೆ. ಯಹೂದಿಯರ ಧರ್ಮ ಗ್ರಂಥ ತೋರಾದಲ್ಲಿ ವಾಗ್ದಾನ ಮಾಡ ಲಾದ ಭೂಮಿ ಎಂಬ ಸಮರ್ಥನೆ ಈ ಮ್ಯಾಪ್ಗಿದೆ. ಇಸ್ರೇಲ್ ಪ್ರಧಾನಿ ನೇತನ್ಯಾಹು ಅವರು 2025 ಆಗಸ್ಟ್ 12ರಂದು ಇಸ್ರೇಲಿ ಟಿವಿ ಚಾನೆಲ್ ಐ24 ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಗ್ರೇಟರ್ ಇಸ್ರೇಲ್ ಮೇಲೆ ನಂಬಿಕೆ ಇರುವುದನ್ನು ಒತ್ತಿ ಹೇಳಿದ್ದರು. ಇದು ಅರಬ್ ರಾಷ್ಟ್ರಗಳಲ್ಲಿ ತೀವ್ರ ಅಸಮಾಧಾನಕ್ಕೂ ಕಾರಣವಾಗಿತ್ತು.
ಆದರೆ,
ಸದ್ಯದ ಬೆಳವಣಿಗೆಯನ್ನು ನೋಡಿದರೆ, ಇಸ್ರೇಲ್ ತನ್ನ ಕನಸನ್ನು ಈಡೇರಿಸಿಕೊಳ್ಳುವ ಧಾವಂತದಲ್ಲಿದೆಯಾ ಎಂಬ ಅನುಮಾನ ಉಂಟಾಗುತ್ತದೆ. ಇಸ್ರೇಲಿನ ಕನಸಿಗೆ ಅಡ್ಡಿಯಾಗಿದ್ದದ್ದು ಇರಾನ್ ಮಾತ್ರ. ಇದೀಗ ಇರಾನನ್ನು ದುರ್ಬಲಗೊಳಿಸುವ ಕಾರ್ಯಾಚರಣೆಗೆ ಇಸ್ರೇಲ್ ಮುಂದಾಗಿದೆ. ಅದಕ್ಕೆ ಅಮೇರಿಕ ಬೆಂಬಲವನ್ನೂ ನೀಡುತ್ತಿದೆ. ಒಂದುವೇಳೆ, ಇರಾನ್ ದುರ್ಬಲಗೊಂಡರೆ ಆ ಬಳಿಕ ಇಸ್ರೇಲ್ಗೆ ಸವಾಲಾಗುವ ಒಂದೇ ಒಂದು ರಾಷ್ಟ್ರ ಕೊಲ್ಲಿ ಪ್ರದೇಶದಲ್ಲಿಲ್ಲ. ಈ ಸತ್ಯವನ್ನು ಮನಗಂಡೇ ಇಸ್ರೇಲ್ ಬೃಹತ್ ತಂತ್ರ ವನ್ನು ಹೆಣೆದಿತ್ತೇ? ಈಗಿನ ಕಾರ್ಯಾ ಚರಣೆಗಳೆಲ್ಲ ಆ ಯೋಜನೆಯಂತೆ ನಡೆಯುತ್ತಿದೆಯೇ?
ಅನುಮಾನಕ್ಕಂತೂ ಅವಕಾಶ ಇದೆ.












