✍️ ನೌಶಾದ್ ಬತ್ತೇರಿ
ಭಾರತದ ಹಿಂದುಳಿದ ಸಮುದಾಯಗಳ ಏಳಿಗೆ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯೇ ಹ್ಯೂಮನ್ ವೆಲ್ಫೇರ್ ಫೌಂಡೇಶನ್ (HWF).
ಈ ಸಂಸ್ಥೆಯು ತನ್ನ ಮಹತ್ವಾಕಾಂಕ್ಷೆಯ ವಿಷನ್ 2026' ಯೋಜನೆಯ ಮೂಲಕ ದೇಶದಾದ್ಯಂತ ಮೌನ ಕ್ರಾಂತಿ ಮಾಡುತ್ತಿದೆ.
ರಾಜಸ್ಥಾನದ ಬಾರ್ಮರ್ನ ಮರಳಿನ ಹಾಸಿನಲ್ಲಿ ಸುಮಾರು 150 ರಿಂದ 200 ಅಡಿಗಳಷ್ಟು ಆಳದ 52ಕ್ಕೂ ಹೆಚ್ಚು ಬಾವಿಗಳನ್ನು ಫೌಂಡೇಶನ್ ಈಗಾಗಲೇ ಯಶಸ್ವಿಯಾಗಿ ನಿರ್ಮಿಸಿದೆ. ಮರಳು ಕುಸಿಯದಂತೆ ಅತ್ಯಂತ ಕಟ್ಟುನಿಟ್ಟಿನ ತಾಂತ್ರಿಕತೆಯೊಂದಿಗೆ ನಿರ್ಮಿಸಲಾದ ಈ ಬಾವಿಗಳು ಇಂದು ಸಾವಿರಾರು ಕುಟುಂಬಗಳ ಜೀವನಾಡಿಯಾಗಿವೆ.
ಹ್ಯೂಮನ್ ವೆಲ್ಫೇರ್ ಫೌಂಡೇಶನ್ ನೇತೃತ್ವದಲ್ಲಿ ನಡೆಯುತ್ತಿರುವ ಮಿಷನ್ 2026ರ ಪ್ರಾಜೆಕ್ಟ್ಗಳ ಡಾಕ್ಯುಮೆಂಟರಿ ಸಿದ್ಧಪಡಿಸಲು ರಾಜಸ್ಥಾನಕ್ಕೆ ಪಯಣಿಸಿದ ಲೇಖಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಬಾರ್ಮರ್ನ ಗ್ರಾಮಸ್ಥರ ನಡುವೆ ಪ್ರಚಲಿತದಲ್ಲಿರುವ ಒಂದು ಕಥೆಯಿದೆ. ಒಂದಾನೊಂದು ಕಾಲದಲ್ಲಿ ಎರಡು ಜಿಂಕೆಗಳು ದೂರದ ಕಾಡಿನಿಂದ ಬಾರ್ಮರ್ನ ಮರುಭೂಮಿಗೆ ಬಂದು ಸೇರಿದವು. ಬಿಸಿಲಿನ ತಾಪಕ್ಕೆ ಜಿಂಕೆಗಳಿಗೆ ವಿಪರೀತ ಬಾಯಾರಿಕೆಯಾಯಿತು. ನೀರಿಗಾಗಿ ಅವು ಮರುಭೂಮಿಯ ತುಂಬೆಲ್ಲಾ ಅಲೆದಾಡಿದವು. ದಣಿದು ವಿವಶವಾದ ಅವುಗಳಿಗೆ ಕೊನೆಗೂ ಒಂದು ಕಡೆ ಅಲ್ಪಸ್ವಲ್ಪ ನೀರು ಕಂಡಿತು. ಆದರೆ ಆ ಎರಡು ಜಿಂಕೆಗಳು ಪರಸ್ಪರ ಅತಿಯಾದ ಪ್ರೀತಿಯಿಂದಾಗಿ "ಮೊದಲು ನೀನು ಕುಡಿ" ಎಂದು ಒಬ್ಬರಿಗೊಬ್ಬರು ಒತ್ತಾಯಿಸುತ್ತಾ ನಿಂತವು. ಅಷ್ಟರಲ್ಲಿ ಆ ಸ್ವಲ್ಪ ನೀರು ಬತ್ತಿಹೋಗಿ, ನೀರು ಕುಡಿಯಲು ಸಾಧ್ಯವಾಗದೆ ಆ ಎರಡು ಜಿಂಕೆಗಳು ಅಲ್ಲಿಯೇ ಪ್ರಾಣ ಬಿಟ್ಟವು.
ಬಾರ್ಮರ್ ರಾಜಸ್ಥಾನದ ಮೂರನೇ ಅತೀದೊಡ್ಡ ಮತ್ತು ಭಾರತದ ಐದನೇ ಅತೀದೊಡ್ಡ ಜಿಲ್ಲೆ. ರಾಜಸ್ಥಾನದ ಪಶ್ಚಿಮ ಭಾಗದಲ್ಲಿರುವ ಈ ಜಿಲ್ಲೆ ಥಾರ್ ಮರುಭೂಮಿಯ ಒಂದು ಭಾಗ. ಪಾಕಿಸ್ತಾನದ ಗಡಿಯನ್ನು ಹಂಚಿಕೊಳ್ಳುವ ಈ ಜಿಲ್ಲೆಯ ಬಹುಭಾಗ ಮರುಭೂಮಿಯಾಗಿದೆ. ನಮ್ಮ ಪ್ರಯಾಣವು ದೆಹಲಿಯಿಂದ ಬಾರ್ಮರ್ಗೆ ರೈಲಿನ ಮೂಲಕ ಆರಂಭವಾಯಿತು. ಮುಂಜಾನೆ ನಾವು ಬಾರ್ಮರ್ ರೈಲ್ವೆ ನಿಲ್ದಾಣ ತಲುಪಿದೆವು. ಅಲ್ಲಿಂದ ಮುನಾಬಾವೊಗೆ ಹೋಗುವ ರೈಲನ್ನು ಹತ್ತಬೇಕಿತ್ತು. ಮುನಾಬಾವೊ ಎಂಬುದು ಭಾರತದ ಗಡಿಯಲ್ಲಿರುವ ಕೊನೆಯ ರೈಲ್ವೆ ನಿಲ್ದಾಣ. ಅಲ್ಲಿಂದ ಹದಿನೈದು ಕಿಲೋಮೀಟರ್ ಮುಂಚೆಯೇ ಗಾಗ್ರಿಯಾ ಎಂಬ ನಿಲ್ದಾಣದಲ್ಲಿ ನಾವು ಇಳಿದೆವು. ನಿಲ್ದಾಣವೆಂದು ಹೇಳಲು ಅಲ್ಲಿ ಒಂದು ಪ್ಲಾಟ್ಫಾರ್ಮ್ ಅಥವಾ ಕಟ್ಟಡವೂ ಇರಲಿಲ್ಲ.
ಹ್ಯೂಮನ್ ವೆಲ್ಫೇರ್ ಫೌಂಡೇಶನ್ ನೇತೃತ್ವದಲ್ಲಿ ನಡೆಯುತ್ತಿರುವ ವಿಷನ್ 2026′ ಯೋಜನೆಯ ಡಾಕ್ಯುಮೆಂಟರಿ ತಯಾರಿಸಲು ನಾವು ಈ ಯಾತ್ರೆ ಕೈಗೊಂಡಿದ್ದೆವು. ಬಾರ್ಮರ್ ಜಿಲ್ಲೆಯ ಪ್ರಮುಖ ಸಮಸ್ಯೆ ಎಂದರೆ ಕುಡಿಯುವ ನೀರು ಲಭ್ಯವಿಲ್ಲದಿರುವುದು. ಇಲ್ಲಿನ ಜನರು, ವಿಶೇಷವಾಗಿ ಮಹಿಳೆಯರು ತಮ್ಮ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ನೀರು ಸಂಗ್ರಹಿಸುವುದಕ್ಕಾಗಿಯೇ ವ್ಯಯಿಸುತ್ತಾರೆ. ಒಂದು ಹೆಣ್ಣು ಮಗುವಿಗೆ ಐದು ವರ್ಷ ತುಂಬುವಷ್ಟರಲ್ಲಿ ಅವಳು ನೀರು ತರುವ ಕೆಲಸವನ್ನು ಕಲಿಯಬೇಕಾಗುತ್ತದೆ. ಎಪ್ಪತ್ತೈದು-ಎಂಭತ್ತು ವರ್ಷದ ವಯಸ್ಸಿನವರೆಗೂ ಇಲ್ಲಿನ ಮಹಿಳೆಯರು ಈ ಕಷ್ಟದ ಕೆಲಸವನ್ನು ಮಾಡುತ್ತಲೇ ಇರುತ್ತಾರೆ.
“ನಿಮಗೆ ಅತ್ಯಂತ ಜಿಗುಪ್ಸೆ ಮೂಡಿಸುವ ಕೆಲಸ ಯಾವುದು?” ಎಂದು ಕೇಳಿದರೆ ಅವರು ನೀಡುವ ಏಕೈಕ ಉತ್ತರ- “ನೀರು ತರುವುದು”. “ನಿಮ್ಮ ಆಸೆ ಏನು?” ಎಂದು ಕೇಳಿದರೆ, “ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುವುದು” ಎನ್ನುತ್ತಾರೆ. ಗರ್ಭಿಣಿಯಾದ ಮಹಿಳೆಯರು ಸಹ ಎಂಟು ತಿಂಗಳವರೆಗೆ ಮೈಲುಗಟ್ಟಲೆ ನಡೆದು ನೀರು ಹೊತ್ತು ತರುತ್ತಾರೆ. ಪ್ರಸವದ ನಂತರ ಕೇವಲ ಒಂದು ತಿಂಗಳು ಕಳೆಯುವುದರೊಳಗೆ ಅವರು ಮತ್ತೆ ಅದೇ ಕೆಲಸಕ್ಕೆ ಮರಳುತ್ತಾರೆ.
ʻಬೆರಿ'ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಜಲಮೂಲಗಳು ಮಾತ್ರ ಇಲ್ಲಿನ ಜೀವನಾಧಾರ. ಮಳೆ ಸುರಿದಾಗ ಮಾತ್ರ ಈ ಬೆರಿಗಳಲ್ಲಿ ನೀರು ತುಂಬಿರುತ್ತದೆ. ಗ್ರಾಮಸ್ಥರು ತಮ್ಮ ದಿನನಿತ್ಯದ ಅಗತ್ಯಗಳಿಗೆ ಮತ್ತು ಜಾನುವಾರುಗಳಿಗೆ ಇದೇ ನೀರನ್ನು ಬಳಸುತ್ತಾರೆ. ಇಲ್ಲಿನವರು ನೀರಿಗೆ ಚಿನ್ನಕ್ಕಿಂತಲೂ ಹೆಚ್ಚಿನ ಬೆಲೆಯನ್ನು ಕಲ್ಪಿಸುತ್ತಾರೆ. ಮನೆಗೆ ಅತಿಥಿಗಳು ಬಂದರೆ ಹಾಲು ಅಥವಾ ಮಜ್ಜಿಗೆಯನ್ನು ಕೇಳಿ ಪಡೆಯಿರಿ ಆದರೆ ನೀರು ಕೇಳಬೇಡಿ ಎಂದು ಅವರು ವಿನಯದಿಂದ ಕೇಳಿಕೊಳ್ಳುತ್ತಾರೆ. ನೀರಿನ ಕಳ್ಳತನ ತಡೆಯಲು ನೀರಿನ ಟ್ಯಾಂಕ್ಗಳಿಗೆ ಬೀಗ ಹಾಕಿರುವುದನ್ನು ನಾವು ಇಲ್ಲಿ ಕಾಣಬಹುದು. ನೀರಿನ ಅಭಾವದಿಂದಾಗಿ ಇಲ್ಲಿನ ಮಹಿಳೆಯರು ಶೌಚಾಲಯದ ಬದಲಾಗಿ ಮರಳನ್ನೇ ಬಳಸಬೇಕಾದ ಪರಿಸ್ಥಿತಿಯಿದೆ. ಸ್ನಾನ ಮಾಡುವುದು ಇಲ್ಲಿ ಬಹಳ ಅಪರೂಪದ ಸಂಗತಿ.
ಗೀತಾ ಎಂಬುವವರು ನಗರದಿಂದ ವಿವಾಹವಾಗಿ ಇಲ್ಲಿಗೆ ಬಂದವರು. ಮದುವೆಯಾದ ಎರಡನೇ ದಿನದಿಂದಲೇ ಆಕೆ ನೀರು ತರುವ ಕೆಲಸಕ್ಕೆ ಇಳಿಯಬೇಕಾಯಿತು. ಅವರ ಮನೆಯಲ್ಲಿ ಅಂತಹ ಅಭ್ಯಾಸವಿರಲಿಲ್ಲ. ಆದರೆ ಬಾರ್ಮರ್ನಲ್ಲಿ ಮದುವೆಯಾಗಿ ಬರುವ ಹೆಣ್ಣಿನ ಮುಖ್ಯ ಅರ್ಹತೆಯೇ ನೀರು ತರುವುದು! ಅವಳು ದಿನಕ್ಕೆ ಹತ್ತು-ಹದಿನೈದು ಕಿಲೋಮೀಟರ್ ನೀರು ಹೊತ್ತು ನಡೆಯುತ್ತಾಳೆ. ಮೊದಲ ಮಗುವಿನ ಗರ್ಭಿಣಿಯಾಗಿದ್ದಾಗಲೂ ಅವಳು ಈ ಕೆಲಸ ಮಾಡಲೇಬೇಕಾಯಿತು. ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದರೂ ಮನೆಯಲ್ಲಿ ಬೇರೆ ಯಾರೂ ಇಲ್ಲದ ಕಾರಣ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗಲೂ ತಲೆಯ ಮೇಲೆ ಬಿಂದಿಗೆ ಹೊತ್ತು ನೀರು ತಂದಿದ್ದಳು.
ಒಬ್ಬ ಮಹಿಳೆಯು ವರ್ಷಕ್ಕೆ ಸರಾಸರಿ 1,400 ಗಂಟೆಗಳನ್ನು ನೀರು ತರಲು ವ್ಯಯಿಸುತ್ತಾಳೆ ಮತ್ತು ಸುಮಾರು 4,000 ಕಿಲೋ ಮೀಟರ್ ನಡೆಯುತ್ತಾಳೆ ಎಂದು ವರದಿಗಳು ಹೇಳುತ್ತವೆ. ಏಳು ವರ್ಷದ ಸುಮಯ್ಯ ಎಂಬ ಮಗು ಶಾಲೆಗೆ ಹೋಗದೆ ತನ್ನ ತಾಯಿಯೊಂದಿಗೆ ನೀರು ತರಲು ಹೋಗುತ್ತಾಳೆ. ಯಾಕೆ ಶಾಲೆಗೆ ಹೋಗಿಲ್ಲ ಎಂದು ಕೇಳಿದರೆ, "ಶಾಲೆ ಬಹಳ ದೂರದಲ್ಲಿದೆ, ಬೆಳಿಗ್ಗೆ ನೀರು ತರಲು ಹೋಗಬೇಕು, ಎರಡು ಕೆಲಸಗಳನ್ನು ಒಟ್ಟಿಗೆ ಮಾಡಲು ಹೇಗೆ ಸಾಧ್ಯ?" ಎಂದು ಮುಗ್ಧವಾಗಿ ಪ್ರಶ್ನಿಸುತ್ತಾಳೆ. ಇಲ್ಲಿನ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಪ್ರಾಥಮಿಕ ಶಿಕ್ಷಣದ ನಂತರದ ಗೈರು ಹಾಜರಿ ದರವು ಶೇಕಡಾ 98 ರಷ್ಟಿದೆ.
ಬಾರ್ಮರ್ನಲ್ಲಿ ಮಳೆಯ ಪ್ರಮಾಣ ಬಹಳ ಕಡಿಮೆ, ವರ್ಷಕ್ಕೆ ಕೇವಲ 270 ಮಿಲಿ ಮೀಟರ್ ಮಾತ್ರ. ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ವಿಷನ್ 2026′ ಯೋಜನೆಯಡಿ ಹ್ಯೂಮನ್ ವೆಲ್ಫೇರ್ ಫೌಂಡೇಶನ್ ನಿರ್ಮಿಸುತ್ತಿರುವ ತೆರೆದ ಬಾವಿಗಳು ಜನರ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತಿವೆ. ಮರಳಿನ ನೆಲದಲ್ಲಿ ಬಾವಿ ತೋಡುವುದು ಸುಲಭವಲ್ಲ, ಸುಮಾರು ನೂರೈವತ್ತು ಅಡಿ ಆಳಕ್ಕೆ ಹೋದರೆ ಮಾತ್ರ ಶುದ್ಧ ನೀರು ಸಿಗುತ್ತದೆ. ಪ್ರತಿ ಇಂಚಿಗೂ ಕಾಂಕ್ರಿಟ್ ಹಾಕಿ ಬಾವಿ ನಿರ್ಮಿಸಲು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಹಣ ಖರ್ಚಾಗುತ್ತದೆ.
ಈ ಬಾವಿಗಳು ಬಂದ ನಂತರ ಸೈರಾ ಬಾನು ಎಂಬ ಯುವತಿ ಈಗ ಪದವಿ ಓದುತ್ತಿದ್ದಾಳೆ. ಆಕೆ ಹೇಳುತ್ತಾಳೆ, “ಹಿಂದೆ ನಾನು ದಿನವಿಡೀ ನೀರು ತರುವ ಕೆಲಸದಲ್ಲೇ ಇರುತ್ತಿದ್ದೆ, ಈಗ ಬಾವಿ ಹತ್ತಿರವೇ ಇರುವುದರಿಂದ ನನಗೆ ಓದಲು ಸಮಯ ಸಿಗುತ್ತಿದೆ. ನನ್ನ ತಾಯಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಮತ್ತು ನಮಗಾಗಿ ರುಚಿಕರವಾದ ಊಟ ತಯಾರಿಸುತ್ತಿದ್ದಾರೆ. ನಾನೀಗ ಬಹಳ ಸಂತೋಷವಾಗಿದ್ದೇನೆ.”
ಬಾರ್ಮರ್ನ ಹಳ್ಳಿಗಳಲ್ಲಿ ಇಂದು ಸೈರಾ ಬಾನು ಅವರಂತಹ ಅನೇಕ ಹೆಣ್ಣು ಮಕ್ಕಳು ಈ ಬಾವಿಗಳಿಂದಾಗಿ ಹೊಸ ಜೀವನ ಕಂಡುಕೊಂಡಿದ್ದಾರೆ. ಇಂದು ಈ ಗ್ರಾಮಗಳಿಗೆ ಹೋದರೆ ತಾಯಂದಿರು ಮತ್ತು ಹೆಣ್ಣು ಮಕ್ಕಳು ನಗುಮುಖದಿಂದ ನಿಮ್ಮನ್ನು ಸ್ವಾಗತಿಸುತ್ತಾರೆ. ಕುಡಿಯುವ ನೀರಿನ ಈ ಬಾವಿಗಳು ಅವರ ಪಾಲಿಗೆ ಕೇವಲ ಬಾವಿಗಳಲ್ಲ, ಅವು ಅವರ ಜೀವನವೇ ಆಗಿವೆ.












