ಪೌರತ್ವ ತಿದ್ದುಪಡಿ ಮಸೂದೆ: ಹಿಂದೂ, ಮುಸ್ಲಿಮರನ್ನು ವಿಭಜಿಸುತ್ತಿದೆ-ಶಿವಸೇನೆ

0
726

ಸನ್ಮಾರ್ಗ ವಾರ್ತೆ-

ಮುಂಬೈ, ಡಿ. 9: ದೇಶದಲ್ಲಿ ಧರ್ಮಯುದ್ಧಕ್ಕೆ ಕಾರಣವಾಗಲಿದೆ ಎಂದು ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಶಿವಸೇನೆ ತನ್ನ ನಿಲುವು ವ್ಯಕ್ತಪಡಿಸಿದೆ. ಈ ಮಸೂದೆಯಿಂದ ವೋಟು ಬ್ಯಾಂಕ್ ಸೃಷ್ಟಿಸಲು ಉದ್ದೇಶಿಸಲಾಗಿದೆ. ಇದು ದೇಶಕ್ಕೆ ಪ್ರಯೋಜನಕರವಾಗಿಲ್ಲ ಎಂದು ಸಾಮ್ನಾದಲ್ಲಿ ಶಿವಸೇನೆ ಹೇಳಿದೆ. ಸಾಮ್ನಾ ಶಿವಸೇನೆಯ ಮುಖವಾಣಿಯಾಗಿದೆ.

ಇಂದು ಲೋಕಸಭೆಯಲ್ಲಿ ಮಸೂದೆ ಮಂಡಿಸಲಿದ್ದು ಸೇನೆ ತನ್ನ ನಿಲುವನ್ನು ಬಹಿರಂಗಪಡಿಸಿದೆ. ಅನಧಿಕೃತ ಹಿಂದೂ ವಲಸಿಗರನ್ನು ಸ್ವೀಕರಿಸುವುದು ದೇಶದಲ್ಲಿ ಧರ್ಮ ಯುದ್ಧಕ್ಕೆ ಕಾರಣವಾಗಲಿದೆ ಎಂಬ ಹೆದರಿಕೆಯಿಂದ ಈ ಕ್ರಮವನ್ನು ಪ್ರಶ್ನಿಸುತ್ತಿರುವುದಾಗಿ ಶಿವಸೇನೆ ತಿಳಿಸಿದೆ. ಮಸೂದೆ ಹಿಂದೂ ಮುಸ್ಲಿಮರನ್ನು ಅದೃಶ್ಯ ವಿಭಜನೆಗೆ ಒಯ್ಯಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಭಾರತ ಬಿಟ್ಟು ಬೇರೆಲ್ಲಿಯೂ ಹಿಂದೂಗಳಿಗೆ ಬೇರೆಲ್ಲೂ ದೇಶವಿಲ್ಲ ಎನ್ನುವುದು ಸರಿಯಾಗಿದೆ. ಆದರೆ ಅನಧಿಕೃತ ವಲಸೆಗಾರರ ನಡುವೆ ಹಿಂದೂಗಳು ಮಾತ್ರ ಸ್ವೀಕಾರಾರ್ಹರು ಎನ್ನುವುದು ಧರ್ಮಯುದ್ಧಕ್ಕೆ ಕಾರಣವಾಗದೇ? ಎಂದು ಶಿವಸೇನೆ ಪ್ರಶ್ನಿಸಿದೆ. ವೋಟು ಬ್ಯಾಂಕ್ ರಾಜಕೀಯಕ್ಕೆ ಯತ್ನಿಸುವುದಾದರೆ ಅದು ದೇಶದ ಹಿತಕ್ಕಾಗಿರುವುದಿಲ್ಲ. ಭಾರತ ಎದುರಿಸುವ ಅನೇಕ ಸಮಸ್ಯೆಗಳಿವೆ. ಅದರಲ್ಲಿ ಯಾವುದೇ ಕ್ರಮ ಜರಗಿಸದೆ ಪೌರತ್ವ ಮಸೂದೆ ಜಾರಿಗೊಳಿಸಲು ಕೇಂದ್ರ ಸರಕಾರ ಹೋಗುತ್ತಿರುವುದನ್ನು ಶಿವಸೇನೆ ಪ್ರಶ್ನಿಸಿದೆ. ಬಿಹಾರ, ಪಶ್ಚಿಮ ಬಂಗಾಲ ಸಹಿತ ಹೆಚ್ಚಿನ ಈಶಾನ್ಯ ದೇಶಗಳು ಮಸೂದೆಯನ್ನು ವಿರೋಧಿಸುತ್ತಿದೆ. ಮುಂದಿನ 25 ವರ್ಷಗಳಿಗೆ ಹೊಸ ಪೌರರ ಮತಹಕ್ಕು ರದ್ದುಪಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಶಿವಸೇನೆ ಆಗ್ರಹಿಸಿದೆ. ಪಾಕಿಸ್ತಾನದ ವಿರುದ್ಧ ಕ್ರಮ ಜರಗಿಸಿದಂತೆ ಹಿಂದೂಗಳ ಮೇಲೆ ದೌರ್ಜನ್ಯವೆಸಗುವ ನೆರೆಯ ಕೆಲವು ದೇಶಗಳ ವಿರುದ್ಧ ಕ್ರಮ ಜರಗಿಸಬೇಕೆಂದು ಪ್ರಧಾನಿಯನ್ನು ನರೇಂದ್ರ ಮೋದಿಯನ್ನು ಶಿವಸೇನೆ ಆಗ್ರಹಿಸಿತು.