ಸನ್ಮಾರ್ಗ ವಾರ್ತೆ
ಮಂಗಳೂರು ಮೇ 8- ಬಟ್ಟೆ ಅಂಗಡಿಗಳನ್ನು ತೆರೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ಗುರುವಾರದಿಂದ ಅನುಮತಿ ನೀಡಿರುವುದಕ್ಕೆ ಮುಸ್ಲಿಂ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಕೊರೋನಾದೊಂದಿಗೆ ಜಿಲ್ಲಾಡಳಿತ ಚೆಲ್ಲಾಟವಾಡುತ್ತಿದೆ ಎಂಬ ದೂರು ವ್ಯಾಪಕವಾಗಿದೆ ಮಾತ್ರವಲ್ಲ, ಸಮುದಾಯ ಯಾರೂ ಬಟ್ಟೆ ಖರೀದಿಸಲು ಅಂಗಡಿಗಳಿಗೆ ತೆರಳಬೇಡಿ ಎಂಬ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಜಿಲ್ಲಾಡಳಿತದ ನಿರ್ಧಾರಕ್ಕೆ ಶಾಸಕ ಯು ಟಿ ಖಾದರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಸಮಯದಲ್ಲಿ ಇಂತಹ ನಿರ್ಧಾರದ ಅಗತ್ಯವೇನಿತ್ತು ಎಂದವರು ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜವಳಿ ಅಂಗಡಿ, ಮದ್ಯದಂಗಡಿ ತೆರೆಸುವುದರಲ್ಲೇ ಜಿಲ್ಲಾಡಳಿತ ಆಸಕ್ತಿ ವಹಿಸಿದೆ. ಯಾವುದೇ ಸೂಚನೆ ನೀಡದೆ ದಿಡೀರ್ ಆಗಿ ಉಸ್ತುವಾರಿ ಸಚಿವರು ಅಂಗಡಿ ತೆರೆಯಲು ಅವಕಾಶ ಕೊಟ್ಟಿದ್ದಾರೆ. ಇದರ ಉದ್ದೇಶವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಅಶ್ರಫ್ ಕೆ ಅವರು ಕೂಡ ಬಟ್ಟೆಯಂಗಡಿ ತೆರೆಯುವುದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದಾರೆ.
ಈದ್ ಸಮೀಪಿಸುತ್ತಿರುವ ವೇಳೆ ಬಟ್ಟೆ, ಫ್ಯಾನ್ಸಿ ಮತ್ತು ಪಾದರಕ್ಷೆಯ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬಾರದು ಎಂದು ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಕಾಝಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಅದಕ್ಕೆ ಸ್ಪಂದಿಸದೆ ಅನುಮತಿ ನೀಡಿರುವುದು ಮುಸ್ಲಿಂ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಮುಸ್ಲಿಂ ಸಮುದಾಯವು ಈವರೆಗೆ ಸರಕಾರದೊಂದಿಗೆ ಸಂಪೂರ್ಣ ಸಹಕಾರ ತೋರಿದೆ. ಸರಕಾರದ ಎಲ್ಲ ಕ್ರಮಗಳಿಗೂ ಬದ್ಧವಾಗಿ ನಡೆದುಕೊಂಡಿದೆ. ಮಸೀದಿಯ ಬದಲು ಮನೆಯಲ್ಲಿಯೇ ಮುಸ್ಲಿಂ ಸಮುದಾಯದ ಮಂದಿ ನಮಾಜ್ ನಿರ್ವಹಿಸುತ್ತಿದ್ದಾರೆ. ಆದ್ದರಿಂದ, ಕೆಲವು ಬಟ್ಟೆ ವ್ಯಾಪಾರಿಗಳ ಒತ್ತಡಕ್ಕೆ ಮಣಿದು ಜವಳಿ ಅಂಗಡಿಗಳನ್ನು ತೆರೆಯಲು ಅನುಮತಿ ಕೊಟ್ಟಿರುವುದು ಸರಿಯಲ್ಲ, ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹಾಗೆಯೇ, ಮಂಗಳೂರು ಸೆಂಟ್ರಲ್ ಕಮಿಟಿ ಕೂಡ ಬಟ್ಟೆ ಅಂಗಡಿ ತೆರೆಯುವುದಕ್ಕೆ ವಿರೋಧ ಸೂಚಿಸಿದ್ದು, ಈ ಬಾರಿ ಅತ್ಯಂತ ಸರಳವಾಗಿ ಈದ್ ಆಚರಿಸೋಣ ಎಂದು ಕರೆ ಕೊಟ್ಟಿದೆ. ಕಾಝಿಗಳು ಕೂಡ ರಮಜಾನ್ ಮುಗಿಯುವರೆಗೆ ಬಟ್ಟೆ ಅಂಗಡಿಗಳನ್ನು ತೆರೆಯುವುದು ಬೇಡ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಜಿಲ್ಲಾಡಳಿತ ಉದ್ದೇಶಪೂರ್ವಕವಾಗಿ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟು ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಈ ನಡೆ ಖಂಡನೀಯ ಎಂದು ಮಂಗಳೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲಿ ಹಸನ್ ತಿಳಿಸಿದ್ದಾರೆ.
ದ ಕ ಮುಸ್ಲಿಂ ಜಸ್ಟಿಸ್ ಫೋರಮ್ ಕೂಡ ಬಟ್ಟೆ ಅಂಗಡಿ ತೆರೆಯಲು ಅನುಮತಿ ನೀಡಿರುವುದನ್ನು ವಿರೋಧಿಸಿದೆ. ಉಸ್ತುವಾರಿ ಸಚಿವರು ಬಟ್ಟೆ ಅಂಗಡಿ ತೆರೆಯಲು ಅನುಮತಿ ನೀಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ನೋವನ್ನುಂಟು ಮಾಡಿದ್ದಾರೆ ಎಂದು ಮುಸ್ಲಿಂ ಜಸ್ಟಿಸ್ ಫೋರಮ್ ನ ಕಾರ್ಯದರ್ಶಿ ವಹಾಬ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕೂಡ ಪ್ರಕಟಣೆಯನ್ನು ಹೊರಡಿಸಿದ್ದು ಈ ಬಾರಿ ಹೊಸಬಟ್ಟೆ ಖರೀದಿಸದೆ ಸರಳವಾಗಿ ಈದ್ ಆಚರಿಸೋಣ ಎಂದು ಕರೆ ಕೊಟ್ಟಿದೆ.
ಸಾಮೂಹಿಕ ನಮಾಜ್ ಇಲ್ಲದ, ಜುಮಾ ಇಲ್ಲದ, ಸಾಮೂಹಿಕ ತರಾವೀಹ್ ಇಲ್ಲದೆ ರಮಜಾನ್ ಆಚರಿಸುತ್ತಿರುವ ಮುಸ್ಲಿಮರಿಗೆ ಬಟ್ಟೆ ಖರೀದಿಯಿಂದ ಹಬ್ಬದ ಸಂತೋಷ ಸಿಗಲು ಸಾಧ್ಯವಿಲ್ಲ. ಈ ಬಾರಿ ಇಲ್ಲದವರೊಂದಿಗೆ ಹಂಚಿ ತಿನ್ನುವ ಮೂಲಕ ಈದ್-ಉಲ್-ಫಿತರ್ ಆಚರಿಸೋಣ. ತೀರ ಆರ್ಥಿಕ ಒತ್ತಡದಲ್ಲಿರುವ ಆದರೆ ಬಾಯಿಬಿಟ್ಟು ಕೇಳಲು ಮುಜುಗರ ಪಡುವ ಸಂಬಂಧಿಕರು ಮಿತ್ರರು ಸಹೋದ್ಯೋಗಿಗಳು ನೆರೆಹೊರೆಯವರು ಬಗ್ಗೆ ಗಮನಹರಿಸೋಣ. ಇದ್ದುದರಲ್ಲೇ ಉತ್ತಮ ಬಟ್ಟೆಯನ್ನು ಧರಿಸೋಣ. ಹೊಸ ಬಟ್ಟೆ ಖರೀದಿಗೆ ಹೋಗದಿರೋಣ. ಹಾಗಂತ ಇದು ಮನವಿ ಮಾತ್ರ. ಮಸೀದಿಗಳು, ಜಮಾಅತ್ ಗಳು, ಸಂಘ-ಸಂಸ್ಥೆಗಳು, ಸಂಘಟನೆಗಳು ಈ ನಿಟ್ಟಿನಲ್ಲಿ ಯಾರನ್ನೂ ಒತ್ತಡದಿಂದ ತಡೆಯಬಾರದು ಎಂದು ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ವೇಳೆ ಗುರುವಾರದಂದು ಮಂಗಳೂರಿನ ಮುಸ್ಲಿಂ ಮಾಲಕತ್ವದ ಬಟ್ಟೆ ಅಂಗಡಿಗಳು ಲಾಕ್ ಡೌನ್ ಮುಂದುವರಿಸುವ ಮೂಲಕ ಗಮನಸೆಳೆದಿವೆ. ಈ ಮೊದಲು ಕಾಝಿಗಳ ಮನವಿಗೆ ಸ್ಪಂದಿಸಿ, ರಮಜಾನ್ ಮುಗಿಯುವವರೆಗೆ ಬಟ್ಟೆ ಅಂಗಡಿಗಳನ್ನು ತೆರೆಯುವುದಿಲ್ಲ ಎಂದು ಮುಸ್ಲಿಂ ಜವಳಿ ಅಂಗಡಿ ವ್ಯಾಪಾರಸ್ಥರು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಮುಸ್ಲಿಂ ಮಾಲಕತ್ವದ ಬಟ್ಟೆ ಅಂಗಡಿಗಳು ಬಾಗಿಲು ತೆರೆಯದೇ ಇರುವ ಮೂಲಕ ಕಾಝಿಗಳ ಮನವಿಗೆ ಬೆಂಬಲ ಸೂಚಿಸಿವೆ.
ಹಾಗೆಯೇ ಬಟ್ಟೆ ಅಂಗಡಿಗಳನ್ನು ತೆರೆಯಲು ನೀಡಿರುವ ಅನುಮತಿಯನ್ನು ಮರು ಪರಿಶೀಲಿಸಬೇಕು ಎಂದು ಹಂಪನಕಟ್ಟೆಯ ವ್ಯಾಪಾರಿ ಸಂಘಟನೆಯಾದ ಕೆಟಿಎ ಯೂತ್ ಫಾರಂ ನಿಯೋಗವು ಗುರುವಾರ ದಕ್ಷಿಣಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ರಮಜಾನ್ ಮುಗಿಯುವವರೆಗೆ ಯಾವುದೇ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಬಾರದು. ಈದ್ ಸಮಯದಲ್ಲಿ ಮುಸ್ಲಿಮರು ಹೊಸಬಟ್ಟೆಗಳನ್ನು ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಕಷ್ಟ. ಆದ್ದರಿಂದ ಈಗಾಗಲೇ ನೀಡಿರುವ ಅವಕಾಶದ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಎಂದು ನಿಯೋಗವು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಕೆಟಿಎ ಸಂಘಟನೆಯ ಮುಖಂಡರಾದ ಮೌಶೀರ್ ಅಹಮದ್ ಸಾಮಾಣಿಗೆ, ಸಿರಾಜ್ ಅಭಯ, ಇರ್ಫಾನ್ ಕುದ್ರೋಳಿ, ರಹಮಾನ್ ಸಾಗರ್, ನೌಶಾದ್ ಬಂಟ್ವಾಳ, ರಾಝಿಕ್, ರಿಯಾಜ್ ಆರ್ಕೆ, ರಶೀದ್, ಸಿದ್ದಿಕ್ ಮುಂತಾದವರು ಉಪಸ್ಥಿತರಿದ್ದರು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












