ಸನ್ಮಾರ್ಗ ವಾರ್ತೆ
ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಎಕಾನಮಿ ಕ್ಲಾಸ್ನ ಪ್ರಯಾಣಿಕರಿಗೆ ಬಿಸಿನೆಸ್ ಕ್ಲಾಸ್ನ ಶೌಚಾಲಯಗಳನ್ನು ಬಳಸುವುದರಿಂದ ನಿರ್ಬಂಧಿಸಿದ್ದಕ್ಕಾಗಿ ಕೋಝಿಕೋಡ್-ದೆಹಲಿ ಏರ್ ಇಂಡಿಯಾ ವಿಮಾನದ ಸಿಬ್ಬಂದಿಗಳು ಆಫ್ ಡ್ಯೂಟಿ ಏರ್ ಇಂಡಿಯಾ(ಎಐ) ಎಕ್ಸ್ಪ್ರೆಸ್ ಪೈಲಟ್ ವಿರುದ್ಧ ದೂರು ದಾಖಲಿಸಿದ ಘಟನೆ ವರದಿಯಾಗಿದೆ.
“ಸಹಪ್ರಯಾಣಿಕರೊಬ್ಬರು ಅಸ್ವಸ್ಥರಾಗಿದ್ದು, ಅವರ ನಾಡಿಮಿಡಿತ ಮತ್ತು ರಕ್ತದೊತ್ತಡ ಕಡಿಮೆಯಾದ ಕಾರಣದಿಂದಾಗಿ ವಿಮಾನದಲ್ಲಿದ್ದ ವೈದ್ಯರಿಂದ ತುರ್ತು ಸಹಾಯ ಪಡೆಯಲಾಗಿತ್ತು. ಅಸ್ವಸ್ಥ ಪ್ರಯಾಣಿಕನ ಆರೋಗ್ಯ ಸ್ಥಿತಿಯು ಚೇತರಿಕೆಯಾದ ಬೆನ್ನಲ್ಲೇ, ವೈದ್ಯರು ಆತನನ್ನು
ಆತನ ಆಸನದಿಂದ ಕರೆದೊಯ್ದು ಹಜಾರದಲ್ಲಿ ಮಲಗಿಸಿದ್ದರು ಇದರಿಂದಾಗಿ ಇಕಾನಮಿ ಕ್ಲಾಸ್ ಶೌಚಾಲಯದ ಬಳಿಯ ಮಾರ್ಗವು ಮುಚ್ಚಲ್ಪಟ್ಟಿದ್ದವು”.
ಬೇರೆ ದಾರಿ ಕಾಣದೇ, ಸಿಬ್ಬಂದಿಗಳು ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಬಿಸಿನೆಸ್ ಕ್ಲಾಸ್ ವಾಶ್ ರೂಂ ಬಳಸಲು ಅವಕಾಶ ನೀಡಿದರು. ಆದರೆ, ಆಫ್ ಡ್ಯೂಟಿ ಪೈಲಟ್ ಆಕ್ಷೇಪ ವ್ಯಕ್ತಪಡಿಸಿ 15 ನಿಮಿಷಗಳ ಕಾಲ ರಂಪಾಟ ಮಾಡಿದ್ದಾನೆ. ಎಕಾನಮಿ ಕ್ಲಾಸ್ ವಾಶ್ರೂಮ್ಗಳನ್ನು ನಿರ್ಬಂಧಿಸಿರುವುದರಿಂದ ಪ್ರಯಾಣಿಕರಿಗೆ ಬಿಸಿನೆಸ್ ಕ್ಲಾಸ್ ವಾಶ್ರೂಮ್ ಬಳಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಎಂದು ಪ್ರಯಾಣಿಕರು ಹೇಳಿದ್ದಾರೆ.
ಏರ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಜಿತೇಂದರ್ ಭಾರ್ಗವ ಮಾತನಾಡಿ, “ಬಿಸಿನೆಸ್ ಕ್ಲಾಸ್ ಪ್ರಯಾಣಿಕರು ಹೆಚ್ಚಿನ ದರವನ್ನು ಪಾವತಿಸುವುದರಿಂದ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಬಿಸಿನೆಸ್ ಕ್ಲಾಸ್ನಲ್ಲಿ ವಾಶ್ರೂಮ್ಗಳನ್ನು ಬಳಸಲು ಅನುಮತಿಸಲಾಗುವುದಿಲ್ಲ. ಆದರೆ, ಅಸಾಧಾರಣ ಸಂದರ್ಭಗಳಲ್ಲಿ ಈ ನಿಯಮವು ಅನ್ವಯಿಸುವುದಿಲ್ಲ” ಎಂದು ಹೇಳಿದ್ದಾರೆ.
ಪೈಲಟ್ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ಪ್ರತಿಕ್ರಿಯಿಸಲು ಏರ್ ಇಂಡಿಯಾ ನಿರಾಕರಿಸಿದೆ.












