ಸಮಾನ ನಾಗರಿಕ ಸಂಹಿತೆ ದೇಶವಿರೋಧಿ, ತ್ರಿವಳಿ ತಲಾಕ್ ಮಸೂದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ: AIMPLB

0
588

ಸನ್ಮಾರ್ಗ ವಾರ್ತೆ-

ಲಕ್ನೋ: ಸೆ. 14- ಏಕರೂಪದ ನಾಗರಿಕ ಸಂಹಿತೆ(ಯುಸಿಸಿ) ಪರಿಕಲ್ಪನೆಯು ಭಾರತದ ವೈವಿಧ್ಯತೆಗೆ ಅಪಾಯಕಾರಿಯಾಗಿದೆ ಮತ್ತು ಇದು “ರಾಷ್ಟ್ರ ವಿರೋಧಿ” ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಹೇಳಿದೆ. ಅಯೋಧ್ಯೆಯ ಬಾಬರಿ ಮಸೀದಿಯ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಒಪ್ಪಿಸುವುದೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಲಕ್ನೋದ ನಡ್ವಾದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯ ನಂತರ AIMPLB ಹೇಳಿಕೆ ನೀಡಿದೆ.

ಯುಸಿಸಿಯ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಮಂಡಳಿ, ಭಾರತದಲ್ಲಿ ಬಹುಸಾಂಸ್ಕೃತಿಕ ಮತ್ತು ಬಹು-ಧಾರ್ಮಿಕ ಜನರು ವಾಸಿಸುತ್ತಿದ್ದಾರೆ ಮತ್ತು ಪ್ರತಿ ಗುಂಪು ತನ್ನ ಗುರುತನ್ನು ಉಳಿಸಿಕೊಳ್ಳಲು ಸಾಂವಿಧಾನಿಕ ಹಕ್ಕುಗಳನ್ನು ಹೊಂದಿದೆ.

ಯುಸಿಸಿಯ ಪರಿಕಲ್ಪನೆಯು ಭಾರತದ ವೈವಿಧ್ಯತೆಗೆ ಅಪಾಯಕಾರಿಯಾಗಿದೆ ಮತ್ತು ಅದನ್ನು ಪ್ರಜಾಪ್ರಭುತ್ವ ಮತ್ತು ಶಾಂತಿಯುತ ವಿಧಾನಗಳಿಂದ ವಿರೋಧಿಸುವುದು ಮಂಡಳಿಯ ಕರ್ತವ್ಯವಾಗಿದೆ ಎಂದು ಅದು ಹೇಳಿದೆ. ಏಕರೂಪದ ನಾಗರಿಕ ಸಂಹಿತೆಯ ಕಲ್ಪನೆಯನ್ನು “ರಾಷ್ಟ್ರ ವಿರೋಧಿ” ಎಂದು ಹೇಳಿದ ಮಂಡಳಿಯು, ಇದು ಕೇವಲ ಅಲ್ಪಸಂಖ್ಯಾತರ ಮೇಲೆ ಮಾತ್ರವಲ್ಲದೆ ಬುಡಕಟ್ಟು ಜನಾಂಗದವರ ಸಾಮಾಜಿಕ ಹಕ್ಕುಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ವಿವರಿಸಿದೆ.

ಅಯೋಧ್ಯ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆ ಪ್ರಮುಖ ಮುಸ್ಲಿಂ ಬುದ್ಧಿಜೀವಿಗಳ ಗುಂಪೊಂದು ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಮಂಡಳಿಯು, ಮಸೀದಿಗೆ ಮೀಸಲಾಗಿರುವ ಭೂಮಿಯನ್ನು ಬದಲಾಯಿಸಲು ಅಥವಾ ಯಾವುದೇ ರೀತಿಯಲ್ಲಿ ವರ್ಗಾಯಿಸಲು ಷರಿಯಾ ಪ್ರಕಾರ ಅವಕಾಶವಿಲ್ಲ ಎಂದಿದೆ. ಯಾವುದೇ ಮಂದಿರ ಅಥವಾ ಯಾವುದೇ ಪೂಜಾ ಸ್ಥಳವನ್ನು ಕೆಡವದೆ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಐತಿಹಾಸಿಕ ಸಂಗತಿಗಳು ನಮಗೆ ಆಧಾರವಾಗಿದೆ ಎಂದು ಮಂಡಳಿ ಹೇಳಿದೆ. ಈ ಪ್ರಕರಣವು ಅಂತಿಮ ಹಂತದಲ್ಲಿದೆ ಮತ್ತು ಯಾವುದೇ ಮಧ್ಯಸ್ಥಿಕೆಯ ಸಾಧ್ಯತೆಗಳಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ವಿವಾದಿತ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಜಮೀನಿನ 2.77 ಎಕರೆ ಪ್ರದೇಶದಲ್ಲಿನ ಒಡೆತನದ ಮೊಕದ್ದಮೆಯ ವಿಚಾರಣೆಯು ಮುಗಿದು, ಕೊನೆಗೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಮುಸ್ಲಿಮರ ಪರವಾಗಿರುತ್ತದೆ ಎಂದು ಮಂಡಳಿ ಭರವಸೆ ವ್ಯಕ್ತಪಡಿಸಿದೆ.

“ನ್ಯಾಯಾಲಯದ ಮುಂದೆ ಮುಸ್ಲಿಂಮರನ್ನು ಪ್ರತಿನಿಧಿಸುವ ಹಿರಿಯ ವಕೀಲರು ಮಂಡಿಸಿರುವ ಪುರಾವೆಗಳಬಗ್ಗೆ ಸಮಿತಿ ಸದಸ್ಯರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರು ಬಲವಾದ ಸಾಕ್ಷ್ಯಗಳನ್ನು ಹೊಂದಿದ್ದಾರೆ ಮತ್ತು ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಪರವಾಗಿರಲಿದೆ ಎಂದು ನಾವು ಭಾವಿಸುತ್ತೇವೆ” ಎಂದು ಮಂಡಳಿಯು ತಿಳಿಸಿದೆ.

ಇದೇವೇಳೆ, ತ್ರಿವಳಿ ತಲಾಕ್ (ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣೆ ಕಾಯ್ದೆ, 2019) ಮಸೂದೆಯ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಲು AIMPLB ನಿರ್ಧರಿಸಿದೆ. ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಈ ಕಾಯ್ದೆ ರಕ್ಷಿಸುವುದಿಲ್ಲ ಮತ್ತು ಮುಸ್ಲಿಂ ಮಹಿಳೆಯರನ್ನು ನಿರ್ಗತಿಕರನ್ನಾಗಿ ಮಾಡುತ್ತದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.