NRC: ವಾಸ್ತವ-ಅವಾಸ್ತವಗಳ ನಡುವೆ

0
1177

ಶೌಕತ್ ಅಲಿ, ಮಂಗಳೂರು

NRC ಅಥವಾ (National Register of Citizens of India) ಕುರಿತಾದ ಚರ್ಚೆ ಇಡೀ ದೇಶಕ್ಕೆ ವ್ಯಾಪಿಸಿದೆ. ಇಡೀ ದೇಶದಲ್ಲಿ NRC ಅನ್ವಯವಾಗಲಿದೆ ಎಂಬ ಚರ್ಚೆ, ಭಯ, ವಾಗ್ವಾದ ಎಲ್ಲವೂ ಒಂದಲ್ಲೊಂದು ನೆಲೆಯಲ್ಲಿ ನಡೆಯುತ್ತಾ ಇದೆ. ಪರ ವಿರೋಧ ಚರ್ಚೆಗಳನ್ನು ನಾವು ಸೋಷಿಯಲ್ ಮೀಡಿಯಾ ದಲ್ಲಿ ನೋಡುತ್ತಿದ್ದೇವೆ. ಕೆಲವರು NRCಯನ್ನು ನಾವು ಬಹಿಷ್ಕರಿಸಬೇಕು ಎಂಬ ವಾದವನ್ನು ಮಂಡಿಸುತ್ತಾ ಇದ್ದಾರೆ. ಇನ್ನು ಕೆಲವರು ನಾವು ನಮ್ಮ ದಾಖಲೆಗಳನ್ನು ಸರಿಪಡಿಸಿ ಇಟ್ಟು ಅದರ ಬಗ್ಗೆ ಪೂರ್ವಭಾವಿ ತಯಾರಿ ನಡೆಸಬೇಕು ಇದು ಕೇವಲ ಮುಸ್ಲಿಮರ ಸಮಸ್ಯೆಯಲ್ಲ, ಇದು ಇಡೀ ಭಾರತದ ಸಮಸ್ಯೆ ಎಂದು ಹೇಳುತ್ತಾರೆ.

ನಿಜವಾಗಿ ಹೇಳುವುದಾದರೆ What is NRC? ಎಂದು ಸಾಮಾನ್ಯ ವ್ಯಕ್ತಿಗೆ ಕೇಳಿದರೆ ಡಾಕುಮೆಂಟ್ ಇಲ್ಲದವರನ್ನು ದೇಶದಿಂದ ಗಡೀಪಾರು ಮಾಡುತ್ತಾರೆ ಅಥವಾ ಬಂಧನ ಗೃಹದಲ್ಲಿ (detention centre) ಇಡುತ್ತಾರೆ ಎಂದಷ್ಟೇ ಅವರಿಗೆ ತಿಳಿದಿದೆ ಅಥವಾ ಇನ್ನೂ ಹೇಳಬೇಕೆಂದರೆ What is NRC? ಎಂದು ಸಾಮಾನ್ಯ ಎಜುಕೇಟೆಡ್ ವ್ಯಕ್ತಿಯೊಂದಿಗೆ ಕೇಳಿದರೂ ಅವರಿಗೆ ಅದರ ಬಗ್ಗೆ ಸರಿಯಾದ ತಿಳುವಳಿಗೆ ಇಲ್ಲದ್ದು ಕಾಣಬಹುದು. ಇದು ಯಾಕೆಂದರೆ ನಮ್ಮ ದೇಶದಲ್ಲಿ ನಡೆಯುವ ಉದ್ದೇಶಿತ ಪ್ರಚಾರದ (propaganda) ಪ್ರಭಾವ ಮತ್ತು ವಾಸ್ತವದ ಸರಿಯಾದ ಚಿತ್ರಣದ ಬಗ್ಗೆ ಭಾರತೀಯರಿಗೆ ಇರುವ ಗೊಂದಲವೇ ಇದಕ್ಕೆ ಮೂಲ ಕಾರಣ ಎನ್ನಬಹುದು.

ಪೌರತ್ವ ಎಂಬುದರ ಬಗ್ಗೆ ಧರ್ಮಗಳ ನಿಲುವುವೇನು? (religious stand)

ಭಾರತೀಯ ಸಮಾಜ ಬಹುಧರ್ಮೀಯ ಸಮಾಜ. ಪ್ರತಿಯೊಬ್ಬರಿಗೂ ಅವರದೇ ಆದ ವಿಶ್ವಾಸ ವಿಚಾರ ಆರಾಧನೆಯನ್ನು ಒಪ್ಪುವ ಪ್ರಚಾರ ಮಾಡುವ ಮುಕ್ತ ಸ್ವಾತಂತ್ರ್ಯ ನಮ್ಮ ಸಂವಿಧಾನ ಕಲ್ಪಿಸಿದೆ. ಪೌರತ್ವದ ಬಗ್ಗೆಯೂ ಭಾರತ ಅಮೆರಿಕ ದೇಶಗಳ ಸಂವಿಧಾನ ಉದಾರ ಧೋರಣೆಯನ್ನು ತಳೆದಿದೆ. ಒಂದು ವೇಳೆ ಒಬ್ಬ ಪೌರನಲ್ಲದಿದ್ದರೂ ಅವನಿಗೆ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಒಬ್ಬ ವ್ಯಕ್ತಿಗೆ ಪೌರತ್ವ ನೀಡಲು ಅದೇ ದೇಶದವನು ಆಗಿರಬೇಕೆಂಬ ನಿಲುವು ಅಮೆರಿಕದಲ್ಲಿ ಇಲ್ಲ. ಲಂಡನ್‍ನಲ್ಲಿ ಇಲ್ಲ. ಆದ್ದರಿಂದ ಬಹಳಷ್ಟು ಭಾರತೀಯರು ಆ ದೇಶಗಳಲ್ಲಿ ತಮ್ಮ ಪೌರತ್ವನ್ನು ಹೊಂದಿದ್ದಾರೆ. ಇದು ಆಧುನಿಕತೆಯ ಶಿಕ್ಷಣದ ಉದಾರೀಕರಣದ ಕೊಡುಗೆ ಎಂದು ಹೇಳಬಹುದು. ಇನ್ನು ಕೆಲವು ದೇಶಗಳು ಪೌರತ್ವದ ಬಗ್ಗೆ ಜಿಗುಟು ಧೋರಣೆ ಯನ್ನು ತಳೆದಿವೆ. ಸೌದಿ ಅರೇಬಿಯಾದಂತಹ ದೇ ಶಗಳು. ಯಾವ ದೇಶಗಳಿಂದ ಪೌರತ್ವದ ಉದಾರೀಕರಣವನ್ನು ಜನರು ಕಲಿಯಬೇಕಿತ್ತೋ, ಯಾವ ಧರ್ಮ ಪೌರತ್ವದ ಉದಾರ ಕಲ್ಪನೆ ಅಥವಾ ಜೀವಿಸುವ ಹಕ್ಕನ್ನು ಜನರಿಗೆ ಆರನೇ ಶತಮಾನದಲ್ಲಿ ನೀಡಿತ್ತೋ, ಅಂತಹ ದೇಶಗಳು ಪೌರತ್ವದ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವುದು ದೌರ್ಭಗ್ಯಕರ ಮತ್ತು ಮನುಷ್ಯನ ಜೀವಿಸುವ ಮೂಲಭೂತ ಹಕ್ಕುಗಳ ಹರಣ ಎಂದರೂ ತಪ್ಪಾಗಲಾರದು.

ವಸುದೈವ ಕುಟುಂಬಕಂ ಎಂದರೆ ಈ ಜಗತ್ತೇ ಒಂದು ಕುಟುಂಬ ಎಂದು ಸಾರುತ್ತದೆ. ಸರ್ವೋ ಜನ ಸುಖಿನೋ ಭವಂತು ಕೂಡ ಇದಕ್ಕಿಂತ ಭಿನ್ನವಲ್ಲ. ವಸುದೈವ ಕುಟುಂಬಕಂ- ಇಡೀ ವಿಶ್ವವೇ ಒಂದು ಕುಟುಂಬ- ಇದು ಇತ್ತೀಚೆಗೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ವಾಕ್ಯ. ಮಹಾ ಉಪನಿಷತ್ತಿನ ಈ ವಾಕ್ಯ, ಭಾರತದ ಸಾಮಾನ್ಯ ಜನತೆಯಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದವರೆಗೂ ಪ್ರಚಲಿತದಲ್ಲಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಎಲ್ಲರೂ ಒಂದಾಗಿ ಬಾಳೋಣ ವೆಂದು ದೇಶ-ವಿದೇಶಗಳ ನಾಯಕರು ಅಂತರಾ ಷ್ಟ್ರೀಯ ಸಭೆಗಳಲ್ಲಿ ಹೇಳುತ್ತಿದ್ದಾರೆ. ಉದಾರ ಚರಿತಾನಾಂತು ವಸುದೈವ ಕುಟುಂಬಕಂ. ಉದಾರ ಮನಸ್ಸಿದ್ದವನಿಗೆ ಇಡೀ ವಿಶ್ವವೇ ಒಂದು ಕುಟುಂಬ. ಇದು ಪೂರ್ಣವಾಕ್ಯ. ಉದಾರತೆಯಿಲ್ಲದಿದ್ದರೆ 10 ಮಂದಿಯ ಗುಂಪು ಕೂಡ ಕುಟುಂಬವಾಗುವುದಿಲ್ಲ. ಅದನ್ನೇ ಕುವೆಂಪು ಹೇಳಿದರು- ವಿಶ್ವ ಮಾನವನಾಗು.

ಇಸ್ಲಾಂ ಧರ್ಮದ ಪ್ರಕಾರ ಮನುಷ್ಯನಿಗೆ ಜೀವಿಸುವ ಹಕ್ಕು ಕೊಡಬೇಕು. ಯಾವುದೇ ಒಂದು ದೇಶದಲ್ಲಿ ಮನುಷ್ಯರ ಮೇಲೆ ಹಿಂಸೆ ಯಾಗುವುದಾದರೆ ಅವರು ಯಾವ ಧರ್ಮದವರೇ ಆಗಲಿ ಅವರು ದಾರುಲ್ ಅಮನ್ ಅಥವಾ ಶಾಂತಿಯ ದೇಶದೊಳಗೆ ಬಂದು ಅಭಯ ಪಡೆದುಕೊಳ್ಳಬಹುದು. ಆದರೆ ಈ ಪೌರತ್ವ, ಪಾಸ್ಪೋರ್ಟ್‍ಗಳು, ಮನುಷ್ಯರ ಅನುಕೂಲಕ್ಕಾಗಿ ಮಾಡಿದ್ದಾರೆಯೇ ಹೊರತು ಯಾವುದೇ ಮನುಷ್ಯರ ಮೂಲಭೂತ ಹಕ್ಕು ಆಗಿರುವ ಜೀವಿಸುವ ಹಕ್ಕನ್ನೇ ಕಸಿಯುತ್ತದೆ ಎಂದಾದರೆ ಇದರಷ್ಟು ದೊಡ್ಡ ದೌರ್ಭಗ್ಯಕರ ಅಂಶ ಬೇರೆ ಏನಿದೆ? ಇದನ್ನು ನಾವು ರೋಹಿಂಗ್ಯನ್ನರ ವಿಚಾರದಲ್ಲಿ ನೋಡಿದ್ದೇವೆ. ಒಂದೆಡೆ ಅವರ ಮೇಲೆ ಹಿಂಸೆ ಇನ್ನೊಂದೆಡೆ ಅವರಿಗೆ ಅಭಯ ಕೊಡಲು ಯಾವುದೇ ದಾರುಲ್ ಅಮನ್ ಅಥವಾ ಅಭಯ ರಾಷ್ಟ್ರ ಇಲ್ಲ. ಪ್ರವಾದಿ ಮುಹಮ್ಮದ್ ಅಥವಾ ಉಮರ್ ರ ಆಡಳಿತದಲ್ಲಿ ಹಾಗಾಗಿರು ತ್ತಿದ್ದರೆ ಅವರು ತಮ್ಮ ಜೀವಿಸುವ ಹಕ್ಕನ್ನು ಪಡೆಯಲು ಯಾವುದೇ ಮುಲಾಜಿಲ್ಲದೆ ಯಾವುದೇ ಧರ್ಮದ ಸೀಮಿತತೆಯಿಲ್ಲದೆ ಆ ದೇಶದಲ್ಲಿ ಬಂದು ಜೀವಿಸುವ ಹಕ್ಕು ಸಿಗುತ್ತಿತ್ತು.

ಪಕ್ಷಿಗಳಿಗೆ ಯಾವುದೇ ಸೀಮೆಯಿಲ್ಲ, ಎಲ್ಲಿ ಬೇಕಾದರೂ ಯಾವ ದೇಶಕ್ಕೆ ಬೇಕಾದರೂ ಅವು ಹಾರಿ ಹೋಗಿ ಜೀವಿಸುತ್ತದೆ. `ಪಂಚಿ ನದಿಯ ಪವನ್ ಕೆ ಜೊಂಕೆ ಕೊಯಿ ಸರ್ಹಾದ್ ನಾ ಇನ್ಹೇ ರೋಕೆ’ ಎಂಬ ಪ್ರಸಿದ್ಧ ಹಾಡನ್ನು ನಾವೆಲ್ಲರೂ ಕೇಳಿದ್ದೇವೆ. ಅವುಗಳಿಗೆ ಯಾವುದೇ ಪೌರತ್ವ, ಪಾಸ್‍ಪೋರ್ಟ್ ಅಗತ್ಯ ಇಲ್ಲ. ಭಾರತವನ್ನು ಅಖಂಡ ಭಾರತ ಎಂದು ವಾದಿಸುವವರೂ ಈ ದೇಶದಲ್ಲಿ ಇದ್ದಾರೆ. ಬಲಪಂಥೀಯ ವಿಚಾರಧಾರೆಯ ಫಿಲಾಸಫರ್‍ಗಳು ಅಖಂಡ ಭಾರತದ ಪರಿಕಲ್ಪನೆಯನ್ನು ಮಂಡಿಸು ತ್ತಾರೆ. ದೀನ್ ದಯಾಲ್ ಉಪಾಧ್ಯಾಯರ ಪ್ರಕಾರ ನಾವು ನೆರೆ ರಾಷ್ಟ್ರಗಳೊಂದಿಗೆ ಮೊದಲು ಉತ್ತಮ ವ್ಯಾಪಾರ ಸಂಬಂಧವನ್ನು ಸ್ಥಾಪಿಸಬೇಕು ಎಂದಾಗಿದೆ.

ದೇಶವಾಸಿಗಳು ಫ್ಯಾಕ್ಟ್ ಮತ್ತು ಕಾಲ್ಪನಿಕತೆ (fact and fiction))ಯ ಮೇಲೆ ಅಂತರ ಮಾಡಬೇಕು

ಸತ್ಯ ಎಷ್ಟು ಮತ್ತು ಕಾಲ್ಪನಿಕತೆ ಎಷ್ಟು ಎಂಬ ಬಗ್ಗೆ ನಾವು ವಿವೇಚನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶದಲ್ಲಿ ಯಾವುದೇ ವಿಷಯಗಳು ರಾಜಕೀಯ ಹಿತಾಸಕ್ತಿಯ ವಿಷಯವಾಗಿರುತ್ತದೆಯೇ ಹೊರತು ಸತ್ಯ ಆಗಿರುವುದಿಲ್ಲ. ಸಮಾನ ಸಿವಿಲ್ ಕೋಡ್ ಅನುಷ್ಠಾನಕ್ಕೆ ಬಂದರೆ ದೇಶದ ಬಡತನ, ಅನಕ್ಷರತೆ, ರೈತರ ಆತ್ಮಹತ್ಯೆ, ಆರ್ಥಿಕ ಕುಸಿತ, ಹಿಂದುಳಿದವರ ಸಮಸ್ಯೆ ಇವೆಲ್ಲವೂ ಪರಿಹಾರವಾಗಬಹುದೇ? ಜಿಡಿಪಿ 5 ಕ್ಕೆ ಕುಸಿದ್ದದ್ದು ಮೇಲಕ್ಕೆ ಸಾಗಬಹುದೇ. ಇದಕ್ಕೆಲ್ಲ ಸಮಾನ ಸಿವಿಲ್ ಕೋಡ್ ಪರಿಹಾರವೇ? ಸತ್ಯ ಮತ್ತು ಕಾಲ್ಪನಿಕತೆಯ ಅಂತರ ಮಾಡಿ ಚಿಂತಿಸಿ ನೋಡಿ. ಬಹು ಪತ್ನಿತ್ವದ ಬಗ್ಗೆ ಪ್ರಚಾರ ಮಾಡಲಾಗುತ್ತದೆ. ಹೆಚ್ಚಿನ ಮುಸ್ಲಿಮರಿಗೆ ನಾಲ್ಕು ಪತ್ನಿಯರು, ಎಲ್ಲರೂ ತ್ರಿವಳಿ ತಲಾಕ್ ಕೊಡುತ್ತಿದ್ದಾರೆ… ಈ ಬಗೆಯ ಪ್ರಚಾರ ಹಿಂದಿನಿಂದಲೇ ನಡೆಯುತ್ತಿದೆ.

ಇತ್ತೀಚಿಗೆ ಓರ್ವ ವೈದ್ಯರು ನನ್ನಲ್ಲಿ ಈ ವಿಷಯ ಪ್ರಸ್ತಾಪ ಮಾಡಿದರು. ಅವರು ಸುಮಾರು 40 ವರ್ಷಗಳಿಂದ ಮದ್ದು ಕೊಡುತ್ತಿದ್ದಾರೆ. ಅವರ ಹೆಚ್ಚಿನ ರೋಗಿಗಳು ಮುಸ್ಲಿಮರು. ಎಲ್ಲರ ಕುಟುಂಬವನ್ನೂ ಆತ್ಮೀಯವಾಗಿ ಬಲ್ಲವರು. ಅವರಲ್ಲಿ ಕೇಳಿದೆ, ನಿಮ್ಮ ಮುಸ್ಲಿಂ ರೋಗಿಗಳಲ್ಲಿ ಎಷ್ಟು ಮಂದಿ ನಾಲ್ಕು ಮದುವೆಯಾಗಿದ್ದಾರೆ? ನಿಮ್ಮ ಈ 40 ವರ್ಷದಲ್ಲಿ ಎಷ್ಟು ಮಂದಿಗೆ ಚಿಕಿತ್ಸೆ ಕೊಟ್ಟಿದ್ದೀರಿ? ಅವರು ಹೇಳಿದರು- ಇಲ್ಲ ಒಬ್ಬರೂ ಇಲ್ಲ. ಇದು ಫ್ಯಾಕ್ಟ್. ನಿಮ್ಮ ಮನಸ್ಸಿನಲ್ಲಿ ಫಿಕ್ಷನ್ ಇದೆ ಎಂದು ಹೇಳಿದೆ. ಹೀಗೆ ಪ್ರತಿ ಯೊಬ್ಬರೂ ಚಿಂತಿಸಿ. ನಾವು ಯಾರದೇ ವಿಷಯ ದಲ್ಲಿ ಫಿಕ್ಷನ್ ಆಗಿ ಚಿಂತಿಸಿದರೆ ನಾವು ತಪ್ಪು ಭಾವಿಸುತ್ತೇವೆ. ಫ್ಯಾಕ್ಟ್ ನಮ್ಮ ಮುಂದೆ ಬಂದರೆ ನಮಗೆ ಆಶ್ಚರ್ಯ ಆಗಬಹುದು. ಎನ್‍ಆರ್‍ಸಿ (ಭಾರತದ ನಾಗರಿಕರ ರಾಷ್ಟ್ರೀಯ ನೋಂದಣಿ) ವಿಷಯ ಕೂಡ ಇದಕ್ಕೆ ಭಿನ್ನವಾಗಿಲ್ಲ. ಗುಡ್ಡ ಅಗೆದು ಇಲಿ ಸಿಕ್ಕಿದಂತಹ ಫ್ಯಾಕ್ಟ್ ನಮ್ಮ ಮುಂದೆ ಬರುತ್ತಿದೆ. ಆದ್ದರಿಂದ ದೇಶದಲ್ಲಿ ಫ್ಯಾಕ್ಟ್ ಮತ್ತು ಕಲ್ಪನೆಯ ವಿಷಯದಲ್ಲಿ ಪಾಠ ಕಲಿಯಬೇಕು. ಇಲ್ಲಿಯವೆಗೆ ಬಾಂಗ್ಲಾ ದೇಶದಿಂದ ಎಷ್ಟು ಮಂದಿ ಭಾರತಕ್ಕೆ ಬಂದಿದ್ದಾರೆ ಎಂಬ ಸರಿಯಾದ ಅಂಕಿ ಅಂಶ ಯಾರಲ್ಲೂ ಇಲ್ಲ. ಈ ವಿಷಯದಲ್ಲಿ ಯಾವುದೇ ಬಿಜೆಪಿ ಅಥವಾ ಯಾವುದೇ ಒಂದು ಪಕ್ಷವನ್ನು ಆರೋಪಿಸಿ ಫಲವಿಲ್ಲ. ಇದರಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಸೇರಿದಂತೆ ಮಾಧ್ಯಮಗಳ ಪಾತ್ರವೂ ಗಣನೀಯವಾಗಿದೆ. ಅಮಿತ್ ಶಾ ಸ್ವತಃ ಹೇಳಿದ್ದಾರೆ, ಇಡೀ NRC ಕಾಂಗ್ರೆಸ್ ಸರಕಾರ ಪ್ರಾರಂಭಿಸಿದ್ದು. UPA ಸರಕಾರ ಇದ್ದಾಗ ಗೃಹ ಸಚಿವರಾಗಿದ್ದುದು ಇಂದ್ರಜೀಜ್ ಗುಪ್ತ ಆಗಿದ್ದರು. ಇವರು ಕಮ್ಯುನಿಸ್ಟ್ ಆಗಿದ್ದರು. ಇವರು 10 ಮಿಲಿಯನ್ ಅಥವಾ ಒಂದು ಕೋಟಿ ಅಕ್ರಮ ವಲಸಿಗರಿದ್ದಾರೆ ಎಂದು ಹೇಳಿದ್ದರು. ಇಂಡಿಯಾ ಟುಡೇಯಲ್ಲಿ ಬಂದ ವರ ದಿಯ ಪ್ರಕಾರ 4 ಮಿಲಿಯನ್ ಅಕ್ರಮ ವಲಸಿಗರಿದ್ದಾರೆ. 1998, ನವೆಂಬರ್ 8ಕ್ಕೆ ಲೆಫ್ಟಿನಂಟ್ ಗವರ್ನರ್ ಎಸ್.ಕೆ. ಸಿನ್ಹಾ ಅವರು, ಅಕ್ರಮ ವಲಸಿಗರಿಂದ ದೇಶಕ್ಕೆ ಮಾರಕವಾಗಿದೆ, ಇದರ ಮಧ್ಯೆ ಸೆಕ್ಯುಲರಿಸಮ್ ಬರಬಾರದು ಎಂದು ರಿಪೋರ್ಟ್ ಮಾಡಿದ್ದರು. ಮಾತ್ರವಲ್ಲ ಬಲಪಂಥೀಯ ವಿಚಾರಧಾರೆಯೂ ಅಕ್ರಮ ವಲಸಿಗರ ಬಗ್ಗೆ ತುಂಬಾ ಗಂಭೀರವಾಗಿ ಅಭಿಯಾನ ನಡೆಸಿದೆ. ಅಂದರೆ ಒಂದು ಕೋಟಿ, 50 ಲಕ್ಷ ಅಕ್ರಮ ವಲಸಿಗರಿದ್ದಾರೆ ಎಂದು ಹೇಳುತ್ತಿದ್ದ ಅಂಕಿ ಅಂಶಗಳು ಓಖಅ ಅನ್ವಯ ವಾದ ಬಳಿಕ ಈ ಪ್ರಚಾರಗಳು ತಪ್ಪು ಎಂದು ಬೆಳಕಿಗೆ ಬಂದಿದೆ. ಅಂದರೆ ಗುಡ್ಡ ಅಗೆದು ಇಲಿ ಸಿಕ್ಕಿದಂತಹ ಪರಿಸ್ಥಿತಿ ಈಗ ಉಂಟಾಗಿದೆ. ಕಳೆದ ಐದು ವರ್ಷಗಳಲ್ಲಿ ಅಸ್ಸಾಂ ರಾಜ್ಯ ಕೇವಲ ಡಾಕ್ಯುಮೆಂಟ್ ಹುಡುಕಾಟದಲ್ಲೇ ನಿರತವಾಗಿತ್ತು. ದೇಶದಲ್ಲಿ ತಮ್ಮ ಪೌರತ್ವ ಸಾಬೀತು ಪಡಿಸಲು ಲಕ್ಷಾಂತರ ಮಂದಿ ಡಾಕ್ಯುಮೆಂಟ್‍ಗಳ ಹಿಂದೆ ನಿರತರಾಗಿದ್ದರು. ಕೊನೆಗೆ 19 ಲಕ್ಷ ಜನರು NRCಗೆ ಒಳಪಟ್ಟಿಲ್ಲ. ಅಂದರೆ ಅವರು ಅಕ್ರಮ ವಲಸಿಗರು ಎಂದು ಸಾಬೀತು ಆಗಿಲ್ಲ. ಬದಲಾಗಿ ಅವರಿಗೆ ಡಾಕ್ಯುಮೆಂಟ್ ಸಂಪೂರ್ಣ ಸಲ್ಲಿಸಲು ಸಾಧ್ಯವಾಗಿಲ್ಲ. ಈ 19 ಲಕ್ಷದಲ್ಲಿ ಸುಮಾರು 4 ಲಕ್ಷ ಮಂದಿಯಲ್ಲಿ ನಿರಾಶ್ರಿತ ಪ್ರಮಾಣ ಪತ್ರ (refugee certificate) ಇದೆ. ಇನ್ನುಳಿದವರಲ್ಲಿ 4 ಲಕ್ಷ ಮಂದಿ NRC ಪ್ರಕ್ರಿಯೆಗೆ ಹಾಜರಾಗಿಲ್ಲ. ಅಂದರೆ ಹಿಂದೆ ಮರಣ ಹೊಂದಿದವರ ಹೆಸರೂ ಅದರಲ್ಲಿ ಬಂದಿರಬಹುದು. ಇನ್ನುಳಿದವ ರಲ್ಲಿ ಬಹುಸಂಖ್ಯಾತರು ಸ್ಥಳೀಯ ಅಸ್ಸಾಮಿಗರು. ಸುಮಾರು ಆರು ಲಕ್ಷದಷ್ಟು ಬಂಗಾಳಿ ಹಿಂದೂಗಳಿದ್ದಾರೆ. ಬಂಗಾಳಿ ಮತ್ತು ಅಸ್ಸಾಮಿ ಎರಡೂ ಭಾಷೆಯಲ್ಲದವರು, ಯುಪಿ ಬಿಹಾರಿಗಳು ಇದ್ದಾರೆ. ಹೀಗೆ ಮುಂದೆ ಎಲ್ಲ ರೀತಿಯ ಟ್ರಿಬ್ಯೂನಲ್ ಅಥವಾ ನ್ಯಾಯಾಂಗ ಪ್ರಕ್ರಿಯೆ ನಡೆದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಬೇಡಿಕೆಗಳು ಎಲ್ಲವೂ ನಡೆದು ಅದರ ಸಂಖ್ಯೆ ಇನ್ನೂ ಬಹಳ ಕಡಿಮೆಯಾಗಬಹುದು. ಮೂರು ಲಕ್ಷದಷ್ಟು ಬರಲೂ ಬಹುದು. ಅಂದರೆ 80 ಲಕ್ಷ ಎಂದು ಹೇಳುತ್ತಿದ್ದುದ್ದು ಕಾಲ್ಪನಿಕ ಆಗಿತ್ತು. ನಾವು ಈ ದೇಶದ ಪ್ರಜೆಗಳು ಎಂದು ಧೈರ್ಯದಿಂದ ಹೇಳುವ ಪರಿಸ್ಥಿತಿ NRCಗೆ ಒಳಪಟ್ಟವರಿಗೆ ಬಂದಿದೆ. ಇದರಲ್ಲಿ ಮುಸ್ಲಿಮರಿಗೆ ಪ್ರಯೋಜವೇ ಆಗಿದೆ.

ಡಾಕ್ಯುಮೆಂಟ್ ಇಲ್ಲದಿರಲು ಸಾಕಷ್ಟು ಕಾರಣಗಳು ಇರಬಹುದು. ಅಸ್ಸಾಮ್ ಹಲವು ಬಾರಿ ತೀವ್ರ ನೆರೆಗೆ ಪ್ರವಾಹಕ್ಕೆ ತುತ್ತಾಗಿದೆ. ಅಸ್ಸಾಂ ನಲ್ಲಿ ಬಾಲ್ಯ ವಿವಾಹ ಪದ್ದತಿಗೆ ತುತ್ತಾದ ಬಹಳಷ್ಟು ಮಂದಿ ಪೀಡಿತ ಮಹಿಳೆಯರಿದ್ದಾರೆ. ಡಾಕ್ಯುಮೆಂಟ್ ಏನೆಂದು ತಿಳಿಯದ ಬಡ ಬಗ್ಗರಿದ್ದಾರೆ. ಇವರೆಲ್ಲರೂ ಈ ಪ್ರಕ್ರಿಯೆಯ ಬಲಿಪಶುಗಳು. ತಮ್ಮ ಪೌರತ್ವ ಸಾಬೀತು ಪಡಿಸಲು ಇವರಿಗೆ 400 ಕಿಲೋ ಮೀಟರ್ ಪ್ರಯಾಣ ಬೆಳೆಸಬೇಕಾದ ಪರಿಸ್ಥಿತಿಯೂ ಎದುರಾಗಿತ್ತು. ತಿನ್ನಲು ಇಲ್ಲದ ಈ ಬಡ ಬಗ್ಗರು ಎಲ್ಲಿಂದ ಇಷ್ಟೊಂದು ಖರ್ಚು ಮಾಡಿ ಪ್ರಯಾಣ ಬೆಳೆಸುವುದು? ಅಂತಹ ಜ್ಞಾನವೂ ಅವರ ಬಳಿ ಇಲ್ಲ. ಇಂತಹ ಪರಿಸ್ಥಿತಿ ಕೇವಲ ಮುಸ್ಲಿಮರಿಗೆ ಅಲ್ಲ. ಎಲ್ಲ ಧರ್ಮೀಯರಿಗೂ ಎದುರಾಗಿದೆ. 21 ನೇ ಶತಮಾನದಲ್ಲಿ ತಮ್ಮ ಪೌರತ್ವ ಸಾಬೀತು ಪಡಿಸಲು ಕಳೆದ ಐದು ವರ್ಷಗಳಲ್ಲಿ ಈ ದೇಶದಲ್ಲಿ ಅವರು ಅಲೆದಾಡಿದ್ದಾರೆ. NRC ಅನ್ವಯ ಆದ ಬಳಿಕ ಸುಮಾರು 11 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿಯನ್ನು ಗಡೀಪಾರು ಮಾಡಲಾಗಿದೆ ಮತ್ತು ಕಳೆದ ಮೂವತ್ತು ವರ್ಷಗಳಲ್ಲೂ ಕೆಲವೇ ಕೆಲವು ಮಂದಿಯನ್ನು ಗಡೀಪಾರು ಮಾಡಲು ಸಾಧ್ಯವಾಗಿದೆ ಎಂದು ವರದಿ ಹೇಳುತ್ತದೆ. ಆಲ್ ಅಸ್ಸಾಂ ಸ್ಟೂಡೆಂಟ್ ಯೂನಿಯನ್ ಈ ವಿಷಯದಲ್ಲಿ ರಾಜಕೀಯ ಮಾಡಿ ಮಹಾಂತ ಮುಖ್ಯಮಂತ್ರಿಯಾದರು. ಬಳಿಕ ಬಿಜೆಪಿ ಸರಕಾರ ರಚಿಸಿತು. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಸರಕಾರ ರಚಿಸಬಹುದು. ಬಳಿಕ ಆ ರಾಜ್ಯದ ಎಲ್ಲ ಪ್ರಜೆಗಳು ಅವರ ಜವಾಬ್ದಾರಿಯಾಗಿರುತ್ತಾರೆ. ಅದು ರಾಜಧರ್ಮವೂ ಹೌದು. ಮಾಜಿ ಪ್ರಧಾನಿ ವಾಜ ಪೇಯಿಯವರು ರಾಜಧರ್ಮವನ್ನು ಪಾಲಿಸಬೇಕು ಎಂದು ಬಹಳ ಕಟ್ಟು ನಿಟ್ಟಾಗಿ ಹೇಳುತ್ತಿದ್ದರು. ಯಾವುದೇ ಸರಕಾರಗಳು ರಾಜಕೀಯ ಹಿತಾಸಕ್ತಿಗಾಗಿ ರಾಷ್ಟ್ರಕ್ಕೆ ನಷ್ಟವುಂಟು ಮಾಡುವುದಾದರೆ ಅದು ಬಹಳ ಅಪಾಯಕಾರಿ. ಅದು ಯಾರೇ ಆಗಲಿ ಅದರಲ್ಲಿ ರಾಜಕೀಯ ಮಾಡಬಾರದು. ಅದು ದೇಶದ ಹಿತಕ್ಕೆ ಮಾರಕ.