ಸನ್ಮಾರ್ಗ ವಾರ್ತೆ
✍️ ಏ ಕೆ ಕೆ
ಒಂದು ಕಡೆ ಉತ್ತರಾಖಂಡದಲ್ಲಿ ದೇಶದಲ್ಲೇ ಮೊದಲ ಬಾರಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಿರುವಾಗ ಇನ್ನೊಂದು ಕಡೆ ಅಖಂಡ ಹಿಂದೂ ರಾಷ್ಟ್ರಕ್ಕಾಗಿ 501 ಪುಟಗಳ ಸಂವಿಧಾನ ಸಿದ್ದಗೊಂಡಿರುವುದಾಗಿ ವರದಿಯಾಗಿದೆ.
ಮಹಾ ಕುಂಭಮೇಳದಲ್ಲಿ ಫೆಬ್ರವರಿ ಮೂರರಂದು ಈ ಸಂವಿಧಾನವನ್ನು ಬಹಿರಂಗ ಮಾಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶಂಕರಾಚಾರ್ಯರ ನಾಲ್ಕು ಪೀಠಗಳ ಪೀಠಾಧಿಪತಿಗಳು ಒಪ್ಪಿಗೆ ನೀಡಿದ ಬಳಿಕ ಈ ಸಂವಿಧಾನವನ್ನ ಕೇಂದ್ರ ಸರಕಾರಕ್ಕೆ ಕಳುಹಿಸಲಾಗುತ್ತದೆ ಎಂದು ವರದಿಯಾಗಿದೆ.
ಈ ಸಂವಿಧಾನದ ಪ್ರಕಾರ ಸನಾತನ ಧರ್ಮನುಯಾಯಿಗಳು ಮಾತ್ರವೇ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಗುರುಕುಲ ಪದ್ದತಿಯಲ್ಲಿ ವೇದಾಧ್ಯಯನ ಮಾಡಿದವರು ಮಾತ್ರವೇ ಚುನಾವಣೆಯಲ್ಲಿ ಅಭ್ಯರ್ಥಿಯಾಗಬಹುದು ಸನಾತನ ಧರ್ಮವೂ ಸೇರಿ ಭಾರತ ಉಪಖಂಡದ ಧರ್ಮಗಳಾದ ಜೈನ ಸಿಖ್ ಬೌದ್ಧ ಅನುಯಾಯಿಗಳಿಗೆ ಮಾತ್ರವೇ ಮತದಾನದ ಹಕ್ಕು ಇರುವುದು.
ಪ್ರತಿಯೊಬ್ಬ ನಾಗರಿಕನೂ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ, ಏಕ ಪತ್ನಿಗೆ ಮಾತ್ರ ಅವಕಾಶ, ಹಿಂದೂ ನ್ಯಾಯಾಂಗ ವ್ಯವಸ್ಥೆ ಜಾರಿ, ಗುರುಕುಲ ಪದ್ಧತಿ ಮರುಜಾರಿ, ಆಧುನಿಕ ಶಿಕ್ಷಣ ಪದ್ಧತಿಯ ಆಂಗ್ಲ ಮಾಧ್ಯಮ ಶಾಲೆಗಳನ್ನು ಗುರುಕುಲಗಳನ್ನಾಗಿ ಮಾರ್ಪಡಿಸುವುದು ಮತ್ತು ಸರ್ಕಾರದ ಆರ್ಥಿಕ ನೆರವಿನಿಂದ ನಡೆಯುತ್ತಿರುವ ಎಲ್ಲಾ ಮದರಸಗಳಿಗೆ ಬೀಗ ಹಾಕುವುದೆಲ್ಲ ಈ ಸಂವಿಧಾನದಲ್ಲಿದೆ.
ಹಾಗಂತ ಇದು ಆಗುವ ಹೋಗುವ ವಿಷಯವಾ ಎಂದು ನಿರ್ಲಕ್ಷಿಸಬಹುದು. ಸದ್ಯಕ್ಕೆ ಇದು ಜಾರಿಗೆ ಬರಲಾರದು ಅನ್ನೋದು ಈ ಸಂವಿಧಾನವನ್ನು ರಚಿಸಿದವರಿಗೂ ಗೊತ್ತು. ಆದರೆ ಇಂಥದ್ದೊಂದು ಸಂವಿಧಾನದ ಬಗ್ಗೆ ಪ್ರಚಾರ ಮಾಡುವುದು, ಆ ಬಳಿಕ ಅಲ್ಲಲ್ಲಿ ಸಭೆಗಳನ್ನ ನಡೆಸುವುದು, ಅಭಿಯಾನ ನಡೆಸುವುದು, ಕೇಂದ್ರ ಸರಕಾರದ ಮೇಲೆ ಒತ್ತಡವನ್ನು ಹೇರುವುದೆಲ್ಲಾ ಮುಂದಿನ ದಿನಗಳಲ್ಲಿ ನಡೆಯಲಿದೆ.
ಆ ಬಳಿಕ ಈ ವಿಷಯವನ್ನು ರಾಜಕಾರಣಿಗಳು ಎತ್ತಿಕೊಳ್ಳುತ್ತಾರೆ. ತಮ್ಮ ಚುನಾವಣಾ ಭಾಷಣಗಳಲ್ಲಿ ಈ ಸಂವಿಧಾನದ ಪರ ಬ್ಯಾಟ್ ಬೀಸತೊಡಗುತ್ತಾರೆ. ಈ ಸಂವಿಧಾನ ಜಾರಿಗೆ ಬಂದರೆ ಈ ದೇಶ ಹೇಗೆ ವಿಶ್ವಗುರು ಆಗಲಿದೆ ಮತ್ತು ಭಾರತ ಹೇಗೆ ಜಾಗತಿಕವಾಗಿ ಮಾದರಿ ಆಗಲಿದೆ ಎಂದೆಲ್ಲಾ ಕನಸುಗಳನ್ನು ಕಟ್ಟತೊಡಗುತ್ತಾರೆ. ಹೀಗೆ ಮಾತಾಡುತ್ತಾ ಮಾತಾಡುತ್ತಾ ಮಾಧ್ಯಮಗಳಲ್ಲಿ ಇದುವೇ ಚರ್ಚೆಗೆ ಒಳಗಾಗುತ್ತೆ ಆ ಬಳಿಕ ಉಳಿದೆಲ್ಲ ವಿಷಯಗಳು ಬದಿಗೆ ಸರಿದು ಕೇವಲ ಈ ಸಂವಿಧಾನವೊಂದೇ ಈ ದೇಶದ ಚರ್ಚೆಯಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತದೆ.
2013ರಲ್ಲಿ ನರೇಂದ್ರ ಮೋದಿಯವರು ಇಂಥದ್ದೇ ಕನಸನ್ನ ಭಾಷಣಗಳಲ್ಲಿ ಹಂಚಿಕೊಂಡಿದ್ದರು. ತಾನು ಅಧಿಕಾರಕ್ಕೆ ಬಂದರೆ ಈ ದೇಶವನ್ನ ವಿಶ್ವಗುರು ಮಾಡುತ್ತೇನೆ, ಡಾಲರ್ ಮುಂದೆ ರೂಪಾಯಿಯ ಮೌಲ್ಯವನ್ನು ಹೆಚ್ಚಿಸುತ್ತೇನೆ, ವರ್ಷಕ್ಕೆ ಎರಡು ಕೋಟಿ ಉದ್ಯೋಗವನ್ನ ಕೊಡಿಸುತ್ತೇನೆ, ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನೆಲ್ಲ ಭಾರತಕ್ಕೆ ತರುತ್ತೇನೆ, ಪಾಕಿಸ್ತಾನವನ್ನು ಪುಡಿ ಪುಡಿ ಮಾಡುತ್ತೇನೆ.. ಎಂದೆಲ್ಲ ಅದ್ಭುತವಾಗಿ ಭಾಷಣ ಮಾಡಿದ್ದರು. ಇದಾಗಿ 11 ವರ್ಷಗಳೇ ಕಳೆದಿವೆ. ಸ್ವಿಸ್ ಬ್ಯಾಂಕಿನ ಹಣ ಇನ್ನೂ ಭಾರತಕ್ಕೆ ಬಂದಿಲ್ಲ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಠುಸ್ ಆಗಿದೆ, ಡಾಲರ್ ಎದುರು ರೂಪಾಯಿ ದಿನೇ ದಿನೇ ಕುಸೀತಾನೂ ಇದೆ.
ನಿಜವಾಗಿ ಈ ಹೊಸ ಸಂವಿಧಾನ ಅತ್ಯಂತ ಯೋಜಿತವಾಗಿ ಹೆಣೆದ ಸಂಚಿನ ಭಾಗ. ಮುಸ್ಲಿಮರನ್ನು ಚುನಾವಣಾ ಅಭ್ಯರ್ಥಿತನಕ್ಕೆ ಅನರ್ಹಗೊಳಿಸುವುದು, ಮತದಾನಕ್ಕೆ ಅನರ್ಹಗೊಳಿಸುವುದು ಮತ್ತು ಮದರಸಗಳಿಗೆ ಬೀಗ ಹಾಕುವುದೇ ಈ ಸಂವಿಧಾನದ ಬಹುಮುಖ್ಯ ಭಾಗ. ಇದು ಯಾಕೆಂದರೆ ಬಹುಸಂಖ್ಯಾತ ಹಿಂದೂಗಳನ್ನು ಇದರ ಪರ ಒಲಿಸಬೇಕಾದರೆ ಮುಸ್ಲಿಮರಿಗೆ ಹೊಡೆತ ಕೊಡುವುದು ಅಗತ್ಯ ಎಂದು ಈ ಮಂದಿ ಭಾವಿಸಿದಂತಿದೆ. ಮುಂದಿನ ದಿನಗಳಲ್ಲಿ ಮುಸ್ಲಿಮರನ್ನು ತೋರಿಸಿ ಈ ಸಂವಿಧಾನವನ್ನು ಸಮರ್ಥಿಸುವ ವಾದಗಳು ಬರಲಿದೆ. ಅಂದ ಹಾಗೆ ಒಂದು ಸಮುದಾಯವನ್ನು ದ್ವೇಷಿಸುವ ಗುರಿಯಿಟ್ಟುಕೊಂಡೆ ಸಂವಿಧಾನ ರಚನೆಯಾಗುವುದಾದರೆ ಮತ್ತು ಅದರ ಆಧಾರದಲ್ಲಿ ದೇಶ ನಡೆಯುವುದಾದರೆ ಆ ದೇಶ ವಿನಾಶವನ್ನಲ್ಲದೆ ಇನ್ನೇನನ್ನು ಕಾಣದು.












