ಸನ್ಮಾರ್ಗ ವಾರ್ತೆ
✍️ಅಮಾನ್ ಕೆ
ದಿನಗಳ ಹಿಂದೆ ತುಷಾರ್ ಮೆಹತಾ ಎಂಬ ವೈದ್ಯ ಟ್ವಿಟರ್ ನಲ್ಲಿ ಒಂದು ಘಟನೆಯನ್ನ ಹಂಚಿಕೊಂಡ. ಈತ ಹರಿಯಾಣದ ಗುರ್ಗಾಂವ್ ನಲ್ಲಿ ಆರ್ಥೋಪೆಡಿಕ್ಸ್ ಸರ್ಜನಾಗಿ ಕೆಲಸ ಮಾಡ್ತಾ ಇದ್ದಾನೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಕ್ಲಿಯರೆನ್ಸ್ ಆದ ಬಳಿಕ ನಾನು ನನ್ನ ವಸ್ತುಗಳನ್ನು ಪಡೀತಾ ಇದ್ದೆ. ನೋಡಿದ್ರೆ ನನ್ನ ಆಪಲ್ ವಾಚ್ ಕಾಣೆಯಾಗಿತ್ತು. ಇದನ್ನು ಸೆಕ್ಯೂರಿಟಿಯ ಗಮನಕ್ಕೆ ತಂದೆ. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ನನ್ನ ಹಿಂದೆ ಅನುಮಾನವಾಗಿ ಇಬ್ರು ನಡೀತಾ ಇರುವುದನ್ನ ಗಮನಿಸಿದೆ. ಅವರನ್ನು ಹಿಂಬಾಲಿಸಿ ಹಿಡ್ಕೊಂಡೆ. ಅವರ ಜೇಬಿಗೆ ಕೈ ಹಾಕಿದೆ. ನೋಡಿದ್ರೆ ಕಾಣೆಯಾಗಿದ್ದ ಆಪಲ್ ವಾಚ್ ಅವನ ಜೇಬಿನಲ್ಲಿತ್ತು. ವಾಚ್ ಕದ್ದವ ಮತ್ತು ಅವನ ಜೊತೆಗಿದ್ದವನ ಹೆಸರು ಸಾಕಿಬ್ ಮತ್ತು ಶೋಯೆಬ್ ಎಂದಾತ ತನ್ನ ಪೋಸ್ಟ್ ನಲ್ಲಿ ಬರೆದಿದ್ದ.
ಈ ಪೋಸ್ಟಿಗೆ ಬಾರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಲಕ್ಷ ಮಂದಿಯನ್ನ ರೀಚ್ ಆಯ್ತು. ಇಂಡಿಯಾ ಟುಡೇ ಎನ್ಡಿ ಟಿವಿ, ABP ಲೈವ್, ಟೈಮ್ಸ್ ನೌ, ಹಿಂದೂಸ್ತಾನ್ ಟೈಮ್ಸ್, ಜಾಗರಣ್, ರಿಪಬ್ಲಿಕ್ ವರ್ಲ್ಡ್, ಬಾರ್ AND ಬೆಂಚ್, ಸಹಿತ ಹತ್ತು ಹಲವು ಪತ್ರಿಕೆಗಳು ಈ ಸುದ್ದಿಯ ಪ್ರಕಟಿಸಿ ಭಾರಿ ಕವರೇಜ್ ನೀಡಿದವು. ಬಲಪಂಥೀಯ ವೆಬ್ ತಾಣವಾದ ವೋಪ್ ಇಂಡಿಯಾ ಅಂತೂ ಸಾಕಿಬ್ ಮತ್ತು ಶೋಯಬ್ ಎಂಬ ಹೆಸರನ್ನು ಟೈಟಲ್ ನಲ್ಲಿ ಉಲ್ಲೇಖಿಸಿತ್ತು. ಹೀಗೆ ಪ್ರಕರಣ ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಪೊಲೀಸರ ಗಮನ ಸೆಳೆಯಿತು. ಪೊಲೀಸರು ಪರಿಶೀಲನೆಗೆ ಮುಂದಾದ್ರು.
ಈ ವಿಷಯಕ್ಕೆ ಟ್ವಿಸ್ಟ್ ಸಿಕ್ಕಿದ್ದೇ ಆಗ. ಪೊಲೀಸರು ಸಿಸಿಟಿವಿ ಫುಟೇಜ್ ನೋಡಿದರು. ದಂಗಾದ್ರು. ಯಾಕೆಂದರೆ ಈ ಡಾಕ್ಟರ್ ಪೋಸ್ಟಲ್ಲಿ ಏನನ್ನು ಬರೆದಿದ್ದಾರೋ ಅದರ ಯಾವ ಕುರುಹೂ ಸಿಸಿಟಿವಿ ಫೂಟೆಜ್ ನಲ್ಲಿ ಕಾಣ್ತಾ ಇರಲಿಲ್ಲ. ಮಾತ್ರ ಅಲ್ಲ ಸೆಕ್ಯೂರಿಟಿ ಕ್ಲಿಯರೆನ್ಸ್ ಆಗಿ ಡಾಕ್ಟರ್ ಏರ್ ಪೋರ್ಟ್ ನಿಂದ ಹೊರಗೆ ಹೋಗುವವರೆಗೆ ಆಪಲ್ ವಾಚ್ ಅವರ ಕೈಯಲ್ಲೇ ಇರುವುದನ್ನು ಸಿಸಿಟಿವಿ ಫೂಟೇಜಿನಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿತ್ತು. ಆ ಬಳಿಕ ದೆಹಲಿ ಪೊಲೀಸರು ಚುರುಕಾದ್ರು. ಈ ಅತುಲ್ ಮೆಹತಾ ಎಂಬ ವೈದ್ಯ ಹೇಳಿರುವುದು ಅಪ್ಪಟ ಸುಳ್ಳು ಅನ್ನುವುದನ್ನು ಸೋಶಿಯಲ್ ಮೀಡಿಯಾದಲ್ಲಿ ದೆಹಲಿ ಪೊಲೀಸರೇ ಬಹಿರಂಗಪಡಿಸಿದ್ರು. ಮಾತ್ರ ಅಲ್ಲ ಇಂತಹ ಸುಳ್ಳು ಸುದ್ದಿಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಹರಡಬೇಡಿ ಎಂದು ಈ ವೈದ್ಯನಿಗೆ ಪೊಲೀಸರು ಎಚ್ಚರಿಕೆ ನೀಡಿದ್ರು.
ಇದು ಆ ಡಾಕ್ಟರ್ ಗೂ ಗೊತ್ತಾಯಿತು. ತಾನು ಹೇಳಿರುವ ಸುಳ್ಳನ್ನ ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಗೊತ್ತಾದ ಕೂಡಲೇ ಈ ಡಾಕ್ಟರ್ ತನ್ನ ಪೋಸ್ಟ್ ಅನ್ನೇ ಡಿಲೀಟ್ ಮಾಡಿದ.
ಅಂದಹಾಗೆ ಈ ಡಾಕ್ಟರ್ ಇಂಥದೊಂದು ಸುಳ್ಳನ್ನು ಯಾಕೆ ಹೇಳಿದ ಅನ್ನುವ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಅದರಲ್ಲೂ ಇಬ್ಬರು ಮುಸ್ಲಿಮರ ಹೆಸರನ್ನೇ ಆತ ಯಾಕೆ ಬರೆದ ಅನ್ನುವ ಜಿಜ್ಞಾಸೆಯೂ ನಿಮ್ಮಲ್ಲಿ ಮೂಡಬಹುದು. ಇದನ್ನೇ ಇಸ್ಲಾಮಿ ಫೋಬಿಯ ಅನ್ನೋದು. ಮುಸ್ಲಿಮರ ಬಗ್ಗೆ ಹತ್ತು ಹಲವು ಭೀತಿ ಕಾರಕ ಸುಳ್ಳುಗಳನ್ನ ಹರಡಿ ಸಮಾಜದಲ್ಲಿ ಭಯವನ್ನ ಹರಡುವುದು ಇವರ ಕಾಯಕ. ಅದಕ್ಕೆ ಡಾಕ್ಟರ್ ಲಾಯರ್ ಪೊಲಿಟಿಷಿಯನ್ ಟೀಚರ್ ಎಂಬ ಭೇದ ಏನೂ ಇಲ್ಲ. ಮುಸ್ಲಿಮರ ವಿರುದ್ಧ ಸುಖಾ ಸುಮ್ಮನೆ ಸುಳ್ಳನ್ನ ಹರಡುವುದು, ಅವರನ್ನು ಕೆಟ್ಟವರನ್ನಾಗಿ ಬಿಂಬಿಸುವುದೇ ಇವರ ಕಾಯಕ. ಇದೊಂದು ಕಾಯಿಲೆ. ಇದೀಗ ಈ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನುವ ಒತ್ತಾಯ ಜೋರಾಗಿ ಕೇಳಿ ಬಂದಿದೆ.
ಆದ್ದರಿಂದ ಯಾವ ಸುದ್ದಿಯನ್ನೂ ಪರಾಂಬರಿಸದೆ ತಕ್ಷಣಕ್ಕೆ ಒಪ್ಪಿಕೊಳ್ಳಬೇಡಿ ಮತ್ತು ತಕ್ಷಣ ಯಾವ ನಿರ್ಧಾರಕ್ಕೂ ಬರಬೇಡಿ ಎಂದು ಸನ್ಮಾರ್ಗ ವೀಕ್ಷಕರಲ್ಲಿ ಕೋರಿಕೊಳ್ಳುತ್ತದೆ.












