ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಜಾಗತಿಕವಾಗಿ ಸುಮಾರು 34ಲಕ್ಷಕ್ಕೂ ಮಿಕ್ಕಿ ಜನರಿಗೆ ಬಾಧಿಸಿರುವ ಕೊರೋನಾ ಬಗ್ಗೆ ಅಮೆರಿಕಾದಲ್ಲಿ 1ಲಕ್ಷದ 52 ಸಾವಿರ ಕೋಟಿ ರೂಪಾಯಿಯ ಮೊಕದ್ದಮೆಯನ್ನು ಚೀನಾದ ವಿರುದ್ಧ ಹೂಡಲಾಗಿದೆ. ಚೀನಾದ ಜೈವಿಕ ಅಸ್ತ್ರ ಇದು ಎಂಬುದು ಈ ಮೊಕದ್ದಮೆಯ ಮುಖ್ಯ ಭಾಗವಾಗಿದೆ. ಅಮೆರಿಕದ ವಕೀಲ ಲ್ಯಾರಿ ಲೈಮನ್ ಮತ್ತು ಅವರ ತಂಡವು ಈ ಮೊಕದ್ದಮೆಯನ್ನು ಹೂಡಿದ್ದು ಮೊಕದ್ದಮೆಯಲ್ಲಿ ಪ್ರತಿವಾದಿಗಳಾಗಿ ಚೀನಾದ ಸೇನೆ ಮತ್ತು ಅದರ ನಾಯಕರಾದ ಚೆನ್ ವೂಯ್, ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಅದರ ನಿರ್ದೇಶಕರಾದ ಜಂಗ್ಲಿ ಅವರನ್ನು ಹೆಸರಿಸಲಾಗಿದೆ ಎಂದು NDTV ವರದಿ ಮಾಡಿದೆ.
ವಿಶೇಷ ಏನೆಂದರೆ ಮೊಕದ್ದಮೆ ಹೂಡಿದವರು ಬೇಡಿಕೆ ಇಟ್ಟಿರುವ ಪರಿಹಾರದ ಮೊತ್ತವು ಚೀನಾದ ಜಿಡಿಪಿ ಗಿಂತಲೂ ಹೆಚ್ಚಿನದಾಗಿದೆ. ಭಯೋತ್ಪಾದನೆಗೆ ಬೆಂಬಲ, ಶಸ್ತ್ರಾಸ್ತ್ರಗಳ ರವಾನೆ, ಅಮೆರಿಕದ ನಾಗರಿಕರ ಸಾವಿಗೆ ಪಿತೂರಿ, ಜನರ ಮೇಲಿನ ಹಲ್ಲೆ ಮತ್ತು ಬೇಜವಾಬ್ದಾರಿತನ ಇತ್ಯಾದಿ ಹಲವು ಆರೋಪಗಳನ್ನು ಈ ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ.
ಜನರನ್ನು ಸಾಮೂಹಿಕವಾಗಿ ಕೊಲ್ಲುವುದಕ್ಕಾಗಿಯೇ ಕೊರೋನಾವನ್ನು ತಯಾರಿಸಲಾಗಿದ್ದು ಇದು ವುಹಾನ್ ನ ವೈರಾಲಜಿ ಸಂಸ್ಥೆಯಿಂದಲೇ ಸೋರಿಕೆಯಾಗಿದೆ ಎಂದು ದೂರುದಾರರು ದೂರಿಕೊಂಡಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ಕೊರೋನಾ ಮೊದಲು ಕಂಡುಬಂದ ವುಹಾನ್ ಪಟ್ಟಣದಲ್ಲೇ ವೈರಾಲಜಿ ಸಂಸ್ಥೆ ಇದೆ. ಅದು ಜೈವಿಕಾಸ್ತ್ರ ತಯಾರಿಯ ಕೇಂದ್ರ ಎಂದು ಹೇಳಲಾಗುತ್ತದೆ. ಕೊರೋನ ವೈರಸ್ಸಿನ ಮಾದರಿಯ ಸುಧಾರಿತ ವೈರಸ್ ಗಳನ್ನು ಅಲ್ಲಿ ಸೃಷ್ಟಿಸಲಾಗಿದ್ದು ಈ ಕುರಿತಾದ ಮಾಹಿತಿಯನ್ನು ಚೀನಾ ಬಚ್ಚಿಡುತ್ತಿದೆ ಎಂಬ ದೂರಿದೆ.
ಸದ್ಯ ಈ ವೈರಸ್ ಜಗತ್ತಿನ 189 ರಾಷ್ಟ್ರಗಳಿಗೆ ತಲುಪಿದ್ದು ಅತ್ಯಂತ ಅಪಾಯಕಾರಿ ಕಾಯಿಲೆಯೆಂದು ಬಿಂಬಿತಗೊಂಡಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದ್ದು ಸೂಕ್ತ ಲಸಿಕೆಯನ್ನು ಸಂಶೋಧಿಸಲಾಗಿಲ್ಲ.












