ಸನ್ಮಾರ್ಗ ವಾರ್ತೆ
ನವದೆಹಲಿ, ಮಾ. 28- ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, 853 ಮಂದಿಗೆ ಸೋಂಕು ದೃಢವಾಗಿದೆ ಮತ್ತು ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ದೇಶದಲ್ಲಿ 140ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಈ ನಡುವೆ 66 ಮಂದಿ ಕೊರೋನಾದಿಂದ ಗುಣಮುಖರಾಗಿ ಮನೆಗೆ ಮರಳಿದ್ದು ಆಶಾದಾಯಕ ಬೆಳವಣಿಗೆಯಾಗಿದೆ. ಇವರೆಲ್ಲರಿಗೂ 14 ದಿನಗಳ ಕಡ್ಡಾಯ ಹೋಮ್ ಕ್ವಾರಂಟೈನ್ ಅನ್ನು ಆಡಳಿತ ಸೂಚಿಸಿದೆ.
ಮಹಾರಾಷ್ಟ್ರ ಗುಜರಾತ್, ಶ್ರೀನಗರ ಮತ್ತು ಕರ್ನಾಟಕಗಳಲ್ಲಿ ಸೋಂಕಿನಿಂದ ಸಾವುಗಳು ಸಂಭವಿಸಿವೆ. ಗುಜರಾತಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ 9 ಮಂದಿಯಲ್ಲಿ ಹೊಸದಾಗಿ ಕೊರೋನಾ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 38 ಆಗಿದೆ.
ಇದೇ ವೇಳೆ ಜಾಗತಿಕವಾಗಿ ಕೊರೋನಾ ಭೀತಿಕಾರಕ ಸ್ವರೂಪವನ್ನು ಪಡೆಯುತ್ತಿದ್ದು ಇದುವರೆಗೆ ೫,76,859 ಮಂದಿಗೆ ಸೊಂಕು ದೃಢಪಟ್ಟಿದ್ದು, 26,450 ಜನರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 3462 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ.
ಸ್ಮೈನ್ ನಲ್ಲಿ ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದು 4,852 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಒಂದೇ ದಿನ 769 ಮಂದಿ ಸಾವಿಗೀಡಾಗಿದ್ದಾರೆ. ಯುರೋಪಿನಲ್ಲಿ ಮೂರು ಲಕ್ಷ ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರಕರಣಗಳು ಇಟಲಿ ಮತ್ತುಸ್ಪೈನ್ ನಲ್ಲಿ ಕಂಡುಬಂದಿವೆ.












