ಕೊರೋನಾದಿಂದ ತಂದೆಯನ್ನು ಕಳಕೊಂಡ ಮಗನಿಗೆ ಭಾರೀ ಬಿಲ್ ಕೊಟ್ಟು ಆಘಾತ‌ ನೀಡಿದ ಆಸ್ಪತ್ರೆ

0
854

ಸನ್ಮಾರ್ಗ ವಾರ್ತೆ

ಮುಂಬೈ: ಮಹಾರಾಷ್ಟ್ರ, ಪ್ರಮುಖವಾಗಿ ಮುಂಬಯಿಯಲ್ಲಿ ಕೊರೊನಾ ವೈರಸ್‌ ಸೋಂಕಿನ ಅಟ್ಟಹಾಸ ಮಿತಿ ಮೀರಿದ್ದು, ಹಲವಾರು ಮಂದಿ ಬಲಿಯಾಗಿದ್ದಾರೆ. ಕೋವಿಡ್‌ – 19ಗೆ ವ್ಯಕ್ತಿಯೊಬ್ಬರು ತಂದೆಯನ್ನು ಕಳೆದುಕೊಂಡಿದ್ದಲ್ಲದೆ, ಆಸ್ಪತ್ರೆಯು ನೀಡಿದ 16 ಲಕ್ಷ ರೂ. ಯ ಬಿಲ್‌ ಆಘಾತವನ್ನುಂಟು ಮಾಡಿದ ಬಗ್ಗೆ ವರದಿಯಾಗಿದೆ.

ಮುಂಬೈಯ ಸಾಂತಾ ಕ್ರೂಸ್‌ ನಿವಾಸಿಯ 74 ವರ್ಷದ ತಂದೆ ಕೋವಿಡ್‌ – 19ಗೆ ಬಲಿಯಾಗಿದ್ದರು. 15 ದಿನಗಳ ಕಾಲ ಅವರ ತಂದೆ ಐಸಿಯುನಲ್ಲಿದ್ದ ಕಾರಣ ಖಾಸಗಿ ಆಸ್ಪತ್ರೆಯವರು 16 ಲಕ್ಷ ರೂ. ಬಿಲ್‌ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪುತ್ರ, ಯಾವುದೇ ಮಧ್ಯಮ ವರ್ಗದ ವ್ಯಕ್ತಿಯು ದಿನಕ್ಕೆ ಒಂದು ಲಕ್ಷ ರೂಪಾಯಿ ಮೌಲ್ಯದ ಚಿಕಿತ್ಸೆಯನ್ನು ಪಡೆಯಬಹುದೆಂದು ನಾನು ಭಾವಿಸುವುದಿಲ್ಲ. ಈ ಬಿಲ್‌ ನಮಗೆ ದೊಡ್ಡ ಆಘಾತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ, ಹೆಚ್ಚು ಬಿಲ್‌ ನೀಡಿರುವುದನ್ನು ಆಸ್ಪತ್ರೆಯ ನಿರ್ದೇಶಕ ನಿರಾಕರಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜುಹು ಪ್ರದೇಶದ ನಾನಾವತಿ ಆಸ್ಪತ್ರೆಯ ನಿರ್ದೇಶಕ ಮನ್‌ಪ್ರೀತ್‌ ಸೋಹಲ್‌, ಮಾರ್ಚ್ 31ರಂದು ಅನೇಕ ಸಹ-ಅಸ್ವಸ್ಥತೆಗಳು ಮತ್ತು ಬಹು-ಅಂಗಗಳ ವೈಫಲ್ಯದೊಂದಿಗೆ ರೋಗಿಯನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿ ನಮ್ಮಲ್ಲಿಗೆ ಕರೆತರಲಾಯಿತು. ಅತ್ಯುತ್ತಮ ಕ್ಲಿನಿಕಲ್ ಕ್ರಮಗಳ ಹೊರತಾಗಿಯೂ, ಅವರು ನಿಧನರಾದರು ಎಂದು ಅವರು ಹೇಳಿದರು.

ಕೋವಿಡ್-ಸಂಬಂಧಿತ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ಲಾಭ ಮಾಡಿಕೊಳ್ಳುತ್ತಿವೆ ಎಂದು ಹಲವಾರು ಕುಟುಂಬಗಳು ದೂರು ನೀಡುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆಯು ಕಳೆದ ವಾರ ಕೋವಿಡ್ ಮತ್ತು ಕೋವಿಡ್ ಅಲ್ಲದ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಆರೋಗ್ಯ ವಿಮೆ ಇಲ್ಲದ ರೋಗಿಗಳಿಗೆ ಚಿಕಿತ್ಸೆಯ ಶುಲ್ಕವನ್ನು ವಿಧಿಸುವ ಅಧಿಸೂಚನೆಯನ್ನು ಹೊರಡಿಸಿತ್ತು.

16 ಲಕ್ಷದಲ್ಲಿ ಔಷಧಿ ಹಾಗೂ ಸೇವಿಸಬಹುದಾದ ವಸ್ತುಗಳಿಗೆ 8.6 ಲಕ್ಷ ರೂ. ಖರ್ಚಾಗಿದೆ ಎಂದು ತಿಳಿದುಬಂದಿದ್ದು, ಕೋವಿಡ್ ಶುಲ್ಕ 2.8 ಲಕ್ಷ ರೂ. ಎಂದು ಮೃತ ರೋಗಿಯ ಪುತ್ರ ಹೇಳಿದ್ದಾರೆ. ಅಧಿಕಾರಿಗಳು ಹಲವು ರೀತಿಯ ಶುಲ್ಕಗಳ ಮೇಲೆ ನಿಯಂತ್ರಣ ಹೇರಿದ್ದರೂ ಆಸ್ಪತ್ರೆಗಳು ಅನಿಯಂತ್ರಿತವಾಗಿ ಶುಲ್ಕ ವಿಧಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಇನ್ನೊಂದೆಡೆ, ಅವರ ತಂದೆ ಆಸ್ಪತ್ರೆಯಲ್ಲಿದ್ದಾಗ, ಕುಟುಂಬವು ಕ್ಯಾರಂಟೈನ್‌ನಲ್ಲಿತ್ತು. ಹೀಗಾಗಿ ಅವರು ಮನೆಯಿಂದ ಹೊರಹೋಗಲು ಸಾಧ್ಯವಾಗಲಿಲ್ಲ. ಅಲ್ಲದೆ, ಆಸ್ಪತ್ರೆಯವರು ಖರ್ಚು ಎಷ್ಟಾಗಬಹುದೆಂದು ಮೊದಲು ಯಾವುದೇ ಸೂಚನೆ ನೀಡಿರಲಿಲ್ಲ ಎಂದು ಕುಟುಂಬವು ಆರೋಪಿಸಿದೆ.

ಫೋನ್‌ ಹಾಗೂ ಇ ಮೇಲ್‌ ಮೂಲಕ ಆಸ್ಪತ್ರೆಯೊಂದಿಗೆ ನಡೆಸಿದ ಸಂವಹನದಲ್ಲಿ ಆಸ್ಪತ್ರೆಗೆ ದಾಖಲಾಗುವ ವೇಳೆ ನಾನು 60,000 ರೂ. ಪಾವತಿಸಿದ್ದೇನೆ. ಒಂದು ದಿನದ ನಂತರ, ನನ್ನ ತಂದೆಗೆ ಡಯಾಲಿಸಿಸ್ ಮತ್ತು ವೆಂಟಿಲೇಟರ್ ಹಾಕಬೇಕಾಗುತ್ತದೆ ಎಂದು ನನಗೆ ತಿಳಿಸಲಾಯಿತು. ನಾನು ಒಪ್ಪಿಗೆ ನೀಡಿದ್ದೆ ಎಂದು ಪುತ್ರ ಹೇಳಿದರು.

ಆಸ್ಪತ್ರೆಗೆ ದಾಖಲಾಗುವ ಒಂದೆರಡು ದಿನಗಳ ಮೊದಲು ತನ್ನ ತಂದೆಯ ರಕ್ತ ಪರೀಕ್ಷೆಯ ಫಲಿತಾಂಶಗಳು ಕ್ರಿಯೇಟಿನಿನ್‌ (ಮೂತ್ರಪಿಂಡದ ಕ್ರಿಯೆಯ ಪರೋಕ್ಷ ಅಳತೆ) ಸಾಮಾನ್ಯವೆಂದು ತೋರಿಸಿತ್ತು ಎಂದು ಅವರು ಹೇಳಿದರು. ನಾನು 3.4 ಲಕ್ಷ ರೂ. ಪಾವತಿಸಿದೆ ಮತ್ತು ಒಂದೆರಡು ದಿನಗಳ ನಂತರ ನನಗೆ ಆಸ್ಪತ್ರೆಯಿಂದ ಕರೆ ಮಾಡಿ, ನಾನು ಹಣ ಪಾವತಿಸದಿದ್ದರೆ ಚಿಕಿತ್ಸೆ ನಿಲ್ಲಿಸುವುದಾಗಿ ಹೇಳಿದ್ದರು ಮತ್ತು ಆಸ್ಪತ್ರೆಯು ತನ್ನ ತಂದೆಯ ದೇಹವನ್ನು ಆ್ಯಂಬುಲೆನ್ಸ್ ಮೂಲಕ ಶವಾಗಾರಕ್ಕೆ ಕಳುಹಿಸಲು 8,000 ರೂ. ಬಿಲ್‌ ಮಾಡಿದೆ ಎಂದು ತಿಳಿಸಿದ್ದಾರೆ.

ಹೆಚ್ಚು ಬಿಲ್‌ ಮಾಡಿರುವುದನ್ನು ಸಮರ್ಥಿಸಿಕೊಂಡ ಆಸ್ಪತ್ರೆಯವರು, ಈ ಮೊದಲು ರೋಗಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅವರು ಆಸ್ಪತ್ರೆಗೆ ದಾಖಲಾದ ಬಳಿಕ ತೀವ್ರವಾದ ಉಸಿರಾಟದ ವೈಫಲ್ಯ ಹೆಚ್ಚಾಯಿತು. ವೆಂಟಿಲೇಟರ್ ಅಗತ್ಯವಿತ್ತು. ಮೂತ್ರಪಿಂಡ ವೈಫಲ್ಯದಿಂದಾಗಿ ಏಳು ದಿನಗಳವರೆಗೆ ಉನ್ನತ ಮಟ್ಟದ ನಿರಂತರ ಮೂತ್ರಪಿಂಡ ಬದಲಿ ಚಿಕಿತ್ಸೆಯ ಅಗತ್ಯವಿತ್ತು ಎಂದು ಹೇಳಿಕೊಂಡಿದ್ದಾರೆ.

ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.