ಹೃದಯಾಘಾತ, ಅವಘಡ ಸಾವಿಗೆ ನೆಪ ಮಾತ್ರ

0
1216

ಲೇಖಕಿ: ಶಮೀರ ಜಹಾನ್

ಕೊರೊನಾ ವ್ಯಾಕ್ಸಿನ್ ನಿಂದ ಹೃದಯಾಘಾತವಾಗಿ ಸಾವು ಸಂಭವಿಸುತ್ತಿದೆ ಎನ್ನುತ್ತಾರೆ. ಸರಿಯೋ ತಪ್ಪೋ ಊಹೆ ಮಾತ್ರ. ವಾಸ್ತವಿಕತೆ ಯಾರಿಗೂ ಗೊತ್ತಿಲ್ಲ. ವ್ಯಾಕ್ಸಿನ್ ಪಡೆದ ಎಷ್ಟೋ ವೃದ್ಧರು ಕೂಡ ಆರೋಗ್ಯದಲ್ಲಿದ್ದಾರೆ. ನಮ್ಮ ಕಣ್ಣೆದುರೇ ನಡೆದಾಡುತ್ತಿರುತ್ತಾರೆ. ಒತ್ತಡ, ಜಂಕ್ ಫುಡ್ ಅಸಂತುಲಿತ ಜೀವನ ಶೈಲಿ, ಮೊಬೈಲ್ ಅತಿಯಾದ ಬಳಕೆ, ದೇಹ ತೂಕ ಕಡಿಮೆ ಮಾಡುವ ಔಷಧಿಗಳು, ಹರ್ಬಲ್ ಚಿಕಿತ್ಸೆ, ಅತಿಯಾದ ವರ್ಕೌಟ್‌ಗಳು ಹೃದಯಾಘಾತಕ್ಕೆ ಕಾರಣವಾಗಿರಬಹುದು ಅನಿಸುವುದಿಲ್ಲವೇ?

ವ್ಯಾಕ್ಸಿನ್ ಬಗ್ಗೆ ನಮ್ಮ ಮಂಗಳೂರಿನ ಪ್ರಾಮಾಣಿಕ ತಜ್ಞ ವೈದ್ಯರುಗಳೊಂದಿಗೆ ಸಮಾಲೋಚಿಸಿದಾಗ ಅವರೂ ವ್ಯಾಕ್ಸಿನ್ ಬಗ್ಗೆ ಹೆದರಬೇಡಿ ಸುಳ್ಳು ಪ್ರಚಾರ ಎಂದಿದ್ದರು.
ತಜ್ಞರು ಸಮಾಲೋಚನೆ ಮಾಡದೆ ಹೆಜ್ಜೆ ಮುಂದಿಡಲಾರರು. ವ್ಯಾಕ್ಸಿನ್ ನಂತರ ದಿನಂಪ್ರತಿ ಶ್ವಾಸ ಸಂಬಂಧಿ ತೊಂದರೆಯಿಂದ ಸಾಯುತ್ತಿದ್ದವರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾದದ್ದು ಸುಳ್ಳಲ್ಲ.

ಕೋವಿಡ್ ಕಾಲಕ್ಕೆ ಹೋಲಿಸಿದರೆ ಕೋವಿಡ್ ನಂತರದ ಸಾವು ಕಡಿಮೆ ಅನಿಸುತ್ತದೆ. ಅನಾರೋಗ್ಯ, ಆಪತ್ತು ಸಾವಿಗೆ ನೆಪ ಮಾತ್ರ. ಸಮಯವಾದಾಗ ಎಲ್ಲಿದ್ದರೂ ಸಾವು ಬರಲೇಬೇಕು. ಕೊರೊನಾ ಕಾಲದಲ್ಲಿ ಕೊರೊನಾ ಬಾಧಿಸದವರು ಯಾರೂ ಇರಲಿಕ್ಕಿಲ್ಲ. ಕೊರೊನಾ ವೈರಸ್ ಎಲ್ಲರನ್ನೂ ಆಂತರಿಕವಾಗಿ ದುರ್ಬಲಗೊಳಿಸಿದೆ. ಎಷ್ಟೋ ವೃದ್ಧರು ನರದೌರ್ಬಲ್ಯಕ್ಕೆ ಒಳಗಾದರು ಎಂಬ ವರದಿ ವ್ಯಾಕ್ಸಿನ್ ಗಿಂತ ಮುಂಚಿನದ್ದು. ಆಗ ವ್ಯಾಕ್ಸಿನ್ ಇರಲಿಲ್ಲ. ಒಬ್ಬನು ಕೊರೊನಾ ಸೋಂಕನ್ನು ಹಲವು ಮಂದಿಗೆ ಹರಡುವನು ಎಂಬುದು ಸತ್ಯವೇ ಆಗಿದ್ದರೆ ಸಮಾಜದ ಒಳಿತಿಗಾಗಿ ವ್ಯಾಕ್ಸಿನ್ ಕೊಟ್ಟವರೇ ನನ್ನ ಪ್ರಕಾರ ಸರಿಯಾದ ತೀರ್ಮಾನ ಕೈಗೊಂಡವರು. ಹಾಗಂತ ವ್ಯಾಕ್ಸಿನ್ ತೆಗೆದುಕೊಳ್ಳದವರು ಸರಿಯಾದ ತೀರ್ಮಾನ ಕೈಗೊಂಡಿಲ್ಲ ಎಂಬುದು ಇದರ ಅರ್ಥವಲ್ಲ. ಎರಡನ್ನೂ ಗೌರವಿಸುತ್ತೇನೆ.