ವಿಧಾನ ಸಭೆ ಚುನಾವಣೆ ಹಿನ್ನೆಲೆ: ‘ವಿದ್ಯಾರ್ಥಿ ಪ್ರಣಾಳಿಕೆ’ ಬಿಡುಗಡೆಗೊಳಿಸಿದ SIO

0
221

ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಆಗ್ರಹ

ಸನ್ಮಾರ್ಗ ವಾರ್ತೆ

ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಎಸ್.ಐ.ಓ ಕರ್ನಾಟಕದ ವತಿಯಿಂದ ಶಾಸಕರ ಭವನದಲ್ಲಿ ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ-ಯುವಜನರ ಬೇಡಿಕೆಯ ವಿಚಾರಗಳನ್ನು ಸೇರಿಸಲು ಮತ್ತು ಈ ಹಕ್ಕೊತ್ತಾಯಗಳೇ ಯುವಜನರ ಮತಗಳನ್ನು ನಿರ್ಣಯಿಸುವಂತೆ ಜನಾಭಿಪ್ರಾಯ ಮೂಡಿಸಲು ಎಸ್.ಐ.ಓ ಕರ್ನಾಟಕವು ಶಿಕ್ಷಣದ ಮೂಲಭಾಗಿದಾರರೊಂದಿಗೆ ಸಮಾಲೋಚಿಸಿ “ವಿದ್ಯಾರ್ಥಿ ಪ್ರಣಾಳಿಕೆ”ಯನ್ನು ತಯಾರುಗೊಳಿಸಿದ್ದು, ಪಕ್ಷಗಳು ಈ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮತ್ತು ಬದ್ಧತೆಯನ್ನು ಖಚಿತಪಡಿಸಬೇಕು ಎಂದು ಎಸ್.ಐ.ಓ ಕರ್ನಾಟಕ ಆಗ್ರಹಿಸಿದೆ.

ಆರ್ಟಿಕಲ್ 21a ಮೂಲಕ ಸಂವಿಧಾನಬದ್ಧ ಮೂಲಭೂತ ಹಕ್ಕಾದ ಶಿಕ್ಷಣವು ಸರ್ಕಾರದ ಸ್ವಾಮ್ಯದಿಂದ ದಿನೇ ದಿನೇ ದುರ್ಬಲಗೊಳ್ಳುತ್ತ ಹೋಗುತ್ತಿರುವುದು ಶೋಚನೀಯ. ಮೂಲಭೂತ ಹಕ್ಕುಗಳು ಇವತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ದುರಂತ ಕಾಲದಲ್ಲಿ ಸಂವಿಧಾನ ಖಾತರಿಪಡಿಸಿದ ಶಿಕ್ಷಣದ ಹಕ್ಕನ್ನು (‘ಆರ್ಟಿಇ’ಯನ್ನು) ಸಮರ್ಪಕವಾಗಿ ಜಾರಿ ಮಾಡಬೇಕು.

ಶಾಲಾ ಪೂರ್ವ ಶಿಕ್ಷಣದ ಮೂಲಕ ಮಕ್ಕಳ ಅಪೌಷ್ಟಿಕತೆ ನಿವಾರಣೆ ಮತ್ತು ಕಲಿಕಾ ಪ್ರಕ್ರಿಯೆಯತ್ತ ತಯಾರುಗೊಳಿಸುವ ಅಂಗನವಾಡಿ ವ್ಯವಸ್ಥೆಯನ್ನು ಸಶಕ್ತಗೊಳಿಸಿ, ಅಪೌಷ್ಟಿಕತೆ ನಿವಾರಣೆಗೆ ಫಲಿತಾಂಶ ಆಧಾರಿತ ಕಾಲಾತೀತ ಕಾರ್ಯಕ್ರಮ ರೂಪಿಸಬೇಕಾಗಿದೆ. ಗ್ರಾಮೀಣ ಮಕ್ಕಳ ಮತ್ತು ವಲಸೆ ಹಾಗೂ ಅಸಂಘಟಿತ ಕಾರ್ಮಿಕರ ಮಕ್ಕಳ ಶಾಲಾ ಹೊರಗುಳಿಯುವಿಕೆ (ಡ್ರಾಪ್ ಔಟ್) ದರವನ್ನು ತಡೆಗಟ್ಟಲು ಕಡ್ಡಾಯ ಶಿಕ್ಷಣ ಹಕ್ಕನ್ನು ಖಾತರಿಪಡಿಸಬೇಕು. ಮಕ್ಕಳ ಶಾಲಾ ದಾಖಲಾತಿಯನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಹಕಾರಿಯಾಗುವ ಸ್ಕಾಲರ್ಶಿಪ್ ಮತ್ತು ಶಾಲಾ ಸಮವಸ್ತ್ರ ದಂತಹ ಯೋಜನೆಗಳನ್ನು ಸಕಾಲಕ್ಕೆ ನೀಡಿ, ಶಾಲಾ ಕಾಲೇಜುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಮತ್ತು ಸೂಕ್ತ ಕಲಿಕಾ ಸಂಪನ್ಮೂಲ ಒದಗಿಸುವ ಮೂಲಕ ಶಾಲಾ ಚಟುವಟಿಕೆಗಳಲ್ಲಿನ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಗೆ ಕಲಿಕಾ ವಾತಾವರಣವನ್ನು ಕಲ್ಪಿಸಬೇಕು ಹಾಗೂ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಬೇಕು.

ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸಬೇಕು ಹಾಗೂ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಲು ಹಾಗೂ ಕಲಿಕಾ ವಾತಾವರಣವನ್ನು ನಿರ್ಮಿಸಬೇಕು.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸರಿಸುಮಾರು 50% ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಶೀಘ್ರವೇ ತುಂಬಬೇಕು ಹಾಗೂ ಸರ್ಕಾರದ ವಾರ್ಷಿಕ ಬಜೆಟ್ ಹಂಚಿಕೆಯಲ್ಲಿ ಕೊಠಾರಿ ಆಯೊಗದ ಶಿಫಾರಸ್ಸಿನ ಅನ್ವಯ GDP ಯ 6% ರಷ್ಟು ಅನುದಾನವನ್ನು ಶಿಕ್ಷಣ ವಲಯಕ್ಕೆ ಬಜೆಟ್ ನಲ್ಲಿ ಮೀಸಲಿರಿಸಬೇಕು.

ರಾಜ್ಯದ ಉನ್ನತ ಶಿಕ್ಷಣದ ವ್ಯವಸ್ಥೆಯು ತೀರಾ ಚಿಂತಾಜನಕವಾಗಿದ್ದು, ರಾಜ್ಯದ ಬಹುತೇಕ ವಿವಿಗಳು ಸರ್ಕಾರದ ಸರಿಯಾದ ಅನುದಾನ ಮತ್ತು ನಿರ್ವಹಣೆ ಇಲ್ಲದೇ, ಅವುಗಳು ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ವಿಫಲವಾಗುತ್ತಿವೆ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಿವಿಗಳ ಸೂಕ್ತ ನಿರ್ವಹಣೆಗಾಗಿ ಮತ್ತು ಉನ್ನತೀಕರಣಕ್ಕಾಗಿ ವಿಶೇಷ ಗಮನ ಹರಿಸುವುದು ಅಗತ್ಯವಿದೆ. ಎನ್ಇಪಿ-2020ರಲ್ಲಿ ಪ್ರಸ್ತಾಪಿಸಿದಂತೆ ಫಾರೀನ್ (ವಿದೇಶಿ) ಖಾಸಗಿ ವಿವಿಗಳನ್ನು ಭಾರತದಲ್ಲಿ ಹೊಸದಾಗಿ ಪ್ರಾರಂಭಿಸುವುದಕ್ಕಿಂತ ಚಾಲ್ತಿಯಲ್ಲಿರುವ ವಿವಿಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸಲು, ಫಾರೀನ್ ನ ಪ್ರಾಧ್ಯಾಪಕರನ್ನು ವಿಶೇಷ ಅಥವಾ ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಬೇಕು ಹಾಗೂ ರಾಜ್ಯದ ಮಟ್ಟದ ಮತ್ತು ಕೇಂದ್ರಿಯ ವಿವಿಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿ, ಇಲ್ಲಿನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು.

ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯವು ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ, ಶಾಲಾ-ಕಾಲೇಜು ಕ್ಯಾಂಪಸ್ ಗಳು ದೇಶದ ಭವಿಷ್ಯ ರೂಪಿಸುವ ತಾಣಗಳಾಗಿವೆ, ಕ್ಯಾಂಪಸ್ ಗಳಲ್ಲಿ ಜಾತಿ ಮತ್ತು ಧರ್ಮದ ನಿಂದನೆ ಹಾಗೂ ತಾರತಮ್ಯದಂತಹ ಅನೇಕ ಘಟನೆಗಳು ಇತ್ತಿಚೆಗೆ ವರದಿಯಾಗುತ್ತಿರುವುದು ಆಘಾತಕಾರಿ, ಇದನ್ನು ತಡೆಹಿಡಿಯಲು ಮತ್ತು ಪರಸ್ಪರರ ನಡುವೆ ಸಹೋದರತೆ ಹಾಗೂ ಸಾಮರಸ್ಯವನ್ನು ಖಾಯಂಗೊಳಿಸಬೇಕಾಗಿದೆ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಪ್ರಾರಂಭಿಸಿ, ಆ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಉನ್ನತ ಶಿಕ್ಷಣದಲ್ಲಿನ ಸಾಮಾನ್ಯ ದಾಖಲಾತಿ ಅನುಪಾತ ಜಿಇಆರ್-GER 2019-20 ರಲ್ಲಿ 32% ಇದ್ದು, ಅದನ್ನು ಹೆಚ್ಚಿಸಲು ಮತ್ತು ಉನ್ನತ ಶಿಕ್ಷಣದತ್ತ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಅಗತ್ಯ “ವಿದ್ಯಾರ್ಥಿ ವೇತನ” ನೀಡಬೇಕು.

ಅಗಾಧ ಮಾನವ ಸಂಪನ್ಮೂಲವನ್ನು ಅದರಲ್ಲೂ ಅತಿ ಹೆಚ್ಚು ಯುವಜನರನ್ನು ಹೊಂದಿರುವ ಭಾರತ ದೇಶವು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ, ಪ್ರತಿ ವರ್ಷವೂ ಶಿಕ್ಷಣವನ್ನು ಪೊರೈಸಿ, ಔದ್ಯೋಗಿಕ ರಂಗಕ್ಕೆ ಕಾಲಿಡುವ ಅನೇಕರಲ್ಲಿ ಬಹುತೇಕ ನಿರುದ್ಯೋಗದಿಂದ ಬೇಸೆತ್ತು ಹೋಗಿದ್ದಾರೆ, ಅರ್ಹತೆಗೆ ತಕ್ಕಂತೆ ಕೆಲಸಗಳು ಸಿಗದೆ ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಮತ್ತು ಮಾನಸಿಕ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತ್ವರಿತ ಮತ್ತು ಪಾರದರ್ಶಕ ನೇಮಕಾತಿ ಮಾಡಬೇಕಾಗಿದೆ, ಮತ್ತು ವಿವಿಧ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿಗಳ ಹುದ್ದೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಿ, ಇಲ್ಲಿನ ಜನತೆಗೆ ನ್ಯಾಯ ಒದಗಿಸಬೇಕು.

ರಾಜ್ಯದಲ್ಲಿ ವಿವಿಧ ಹೆಸರಿನಡಿ ಅಥವಾ ನಿರ್ದಿಷ್ಟ ವಿಷಯಗಳಲ್ಲಿ ಗುಂಪು ಹಲ್ಲೆ ಮತ್ತು ನೈತಿಕ ಪೋಲಿಸ್ ಗಿರಿ ಹೆಚ್ಚುತ್ತಿದೆ ಹಾಗೂ ಅಸಂವಿಧಾನಿಕ ಮಾತುಗಳ ಮೂಲಕ ದ್ವೇಷ ಭಾಷಣ ಮತ್ತು ಮತೀಯ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಸಂವಿಧಾನದ ಮೌಲ್ಯಗಳನ್ನು ಒಂದೊಂದಾಗಿ ನಗಣ್ಯ ಮಾಡಲಾಗುತ್ತಿರುವ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ವ್ಯಕ್ತಿ ಘನತೆ ಮತ್ತು ಗೌರವದ ಬದುಕಿಗೆ ದಕ್ಕೆ ಬಾರದ ಆಗೆ ನೋಡಿಕೊಳ್ಳುವ ಮತ್ತು ರಾಜ್ಯದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ರಾಜ್ಯದ ಆಡಳಿತವನ್ನು ಹಿಡಿಯುವವರು ಈ ಬಗ್ಗೆ ವಿಶೇಷ ಕಾಳಜಿಯನ್ನು ತೋರಬೇಕು ಎಂದು ಎಸ್‌ಐಓ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಎಸ್.ಐ.ಓ ಕರ್ನಾಟಕ ರಾಜ್ಯಾಧ್ಯಕ್ಷ ಜೀಶಾನ್ ಆಖಿಲ್ ಸಿದ್ದಿಕಿ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಸೀರ್, ರಾಜ್ಯ ಸಂಪರ್ಕ ಕಾರ್ಯದರ್ಶಿ ಅಫ್ವಾನ್ ಹೂಡೆ, ಸಮೀರ್ ಪಾಷಾ(ಎಸ್‌ಐಓ ರಾಜ್ಯ ಕಾರ್ಯದರ್ಶಿ), ಚಂದ್ರು ಪೇರಿಯಾರ್ (ಅಧ್ಯಕ್ಷರು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ), ಮಹಮ್ಮದ್ ಪೀರ್ ಲಟಗೇರಿ (ರಾಜ್ಯ ಕಾರ್ಯದರ್ಶಿ ಎಸ್.ಐ.ಓ ಕರ್ನಾಟಕ), ಲೋಕೇಶ್ (ಪದಾಧಿಕಾರಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ), ಪೂಜಾ ಯಶೋಧರೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.