ಸನ್ಮಾರ್ಗ ವಾರ್ತೆ
ಕೊಲ್ಕತ್ತಾ: ಕೋವಿಡ್-19 ಎರಡನೆ ಅಲೆಯ ಅಸಮರ್ಪಕ ನಿರ್ವಹಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜೀನಾಮೆ ನೀಡಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಒತ್ತಾಯಿಸಿದ್ದಾರೆ. ಸೋಂಕು ಪ್ರಕರಣಗಳು ಹೆಚ್ಚಾಗದಂತೆ ತಡೆಯಲು ಯೋಜನೆಗಳನ್ನು ರೂಪಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಎರಡನೇ ಅಲೆ ಈ ವರ್ಷ ಹರಡುವ ಮುನ್ನ ಐದಾರು ತಿಂಗಳುಗಳಲ್ಲಿ ಸಂಭಾವ್ಯ ವೈದ್ಯಕೀಯ ಆಕ್ಸಿಜನ್ ಪೂರೈಕೆಯಲ್ಲಿ ಸಂಭವನೀಯ ಬಿಕ್ಕಟ್ಟನ್ನು ಸ್ಪಲ್ಪ ಪರಿಹರಿಸಬಹುದಿತ್ತು ಆದರೆ, ಮೋದಿಯವರು ದೇಶದಲ್ಲಿಯೇ ಕೊರತೆಗಳಿರುವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇತರ ರಾಷ್ಟ್ರಗಳಿಗೆ ವ್ಯಾಕ್ಸಿನ್ನ್ನು ರಪ್ತು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿ ಎಲ್ಲ ನಾಗರಿಕರಿಗೆ ಉಚಿತ ವ್ಯಾಕ್ಸಿನ್ ಪೂರೈಕೆಯ ಬೇಡಿಕೆಗೆ ಪ್ರಧಾನಿಯವರು ಈ ವರೆಗೂ ಸ್ಪಂದಿಸದ ಕುರಿತು ಅವರು ಈ ಸಂದರ್ಭದಲ್ಲಿ ಮಾತನಾಡಿದರು.












