ದೇಶದಲ್ಲಿ 10 ಲಕ್ಷ ದಾಟಿದ ಕೋವಿಡ್ ಪ್ರಕರಣಗಳು; ಜಿಲ್ಲೆಗಳಲ್ಲಿ ಹೆಚ್ಚು ಹೆಚ್ಚು ಆ್ಯಂಟಿಜೆನ್ ಪರೀಕ್ಷೆ ನಡೆಸುವಂತೆ ಐಸಿಎಂಆರ್ ಕರೆ: ಬಿಹಾರ ಚುನಾವಣಾ ಪ್ರಚಾರ ಕುರಿತು ಪಕ್ಷಗಳಿಂದ ಸಲಹೆ ಕೇಳಿದ ಚುನಾವಣಾ ಆಯೋಗ

0
734
ಈ ಫೋಟೋ ದೆಹಲಿಯ ಕಾಮನ್‌ವೆಲ್ತ್ ಕ್ರೀಡಾಕೂಟದ ಗ್ರಾಮದ ಕ್ರೀಡಾ ಸಂಕೀರ್ಣದ್ದಾಗಿದ್ದು, ಇಲ್ಲಿನ ಐಸೋಲೇಷನ್ ವಾರ್ಡ್‌ನಲ್ಲಿ 50 ಕ್ಕೂ ಹೆಚ್ಚು ರೋಗಿಗಳಿಗೆ ವೈದ್ಯರು ಪ್ರತಿದಿನ ಯೋಗ ತರಬೇತಿಯನ್ನು ನೀಡುತ್ತಿರುವುದು ಹೀಗೆ ಕಂಡು ಬಂತು.

ಸನ್ಮಾರ್ಗ ವಾರ್ತೆ

ನವದೆಹಲಿ,ಜು.18: ದೇಶದಲ್ಲಿ ಕೊರೋನಾ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈವರೆಗೆ 10, 40,089 ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಅಂಕಿಅಂಶಗಳು covid19india.org ನ್ನು ಆಧರಿಸಿವೆ. ದೇಶದಲ್ಲಿ ಶುಕ್ರವಾರ 676 ಜನರು ಸಾವನ್ನಪ್ಪಿದ್ದು ಇದುವರೆಗೆ ಕೊರೋನಾ ಸೋಂಕಿನಿಂದಾಗಿ 26,285 ರೋಗಿಗಳು ಅಸುನೀಗಿದ್ದಾರೆ.

ದೇಶದಲ್ಲಿ ಈವರೆಗೆ 1 ಕೋಟಿ 34 ಲಕ್ಷದ 33 ಸಾವಿರದ 742 ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಅದೇ ಸಮಯದಲ್ಲಿ, ಕಳೆದ 24 ಗಂಟೆಗಳಲ್ಲಿ 3, 61,024 ಸ್ವ್ಯಾಬ್ ಪರೀಕ್ಷೆಗಳನ್ನು ಮಾಡಲಾಗಿದೆ.

ಕಳೆದ 24 ಗಂಟೆಗಳಲ್ಲಿ 34,884 ಪ್ರಕರಣಗಳು ವರದಿಯಾಗಿದ್ದು, 671 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 10,38, 716ಕ್ಕೆ ಏರಿದೆ. ಅವುಗಳಲ್ಲಿ 3,58,792 ಸಕ್ರಿಯ ಪ್ರಕರಣಗಳಿವೆ. ಅದೇ ಸಮಯದಲ್ಲಿ, 6,53,751 ರೋಗಿಗಳನ್ನು ಗುಣಪಡಿಸಲಾಗಿದೆ. ದೇಶದಲ್ಲಿ ಈವರೆಗೆ 26,273 ರೋಗಿಗಳು ಅಸುನೀಗಿದ್ದಾರೆ.

ಏತನ್ಮಧ್ಯೆ, ಹೆಚ್ಚು ಹೆಚ್ಚು ಸೋಂಕಿತರನ್ನು ಬಹುಬೇಗನೇ ಗುರುತಿಸಲು ಜಿಲ್ಲೆಗಳಲ್ಲಿ ತ್ವರಿತವಾಗಿ ಪ್ರತಿಜನಕ( ಆ್ಯಂಟಿಜೆನ್) ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಐಸಿಎಂಆರ್ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ್ ಅವರು ಶನಿವಾರ ರಾಜ್ಯಗಳಿಗೆ ನಿರ್ದೇಶಿಸಿದರು.

ಸಾಂಕ್ರಾಮಿಕ ರೋಗದ ನಡುವೆ ಚುನಾವಣಾ ಪ್ರಚಾರ ಮತ್ತು ಸಾರ್ವಜನಿಕ ಸಭೆಗಳ ವಿಧಾನ ಹೇಗಿರಬೇಕು ಎಂದು ಚುನಾವಣಾ ಆಯೋಗವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಂದ ಸಲಹೆಗಳನ್ನು ಕೋರಿದೆ. ಎಲ್ಲಾ ಪಕ್ಷಗಳು ಜುಲೈ 31ರೊಳಗೆ ಸಲಹೆಗಳನ್ನು ಕಳುಹಿಸಬಹುದು.

ವಾಸ್ತವವಾಗಿ, ಬಿಹಾರದ 9 ಪಕ್ಷಗಳು ಚುನಾವಣಾ ಆಯೋಗಕ್ಕೆ ಕೊಒರೋನಾ ಸೋಂಕಿನ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಪತ್ರ ಬರೆದಿದ್ದವು. ಕೊರೋನಾ ಸ್ಫೋಟಕ್ಕೆ ಇಡೀ ಚುನಾವಣಾ ಪ್ರಕ್ರಿಯೆ ಕಾರಣವಾಗುವುದಿಲ್ಲ ಎಂದು ಆಯೋಗವು ಬಿಹಾರದ ಜನರಿಗೆ ಭರವಸೆ ನೀಡಬೇಕು ಎಂದು ಅದು ಹೇಳಿದೆ. ಈ ವರ್ಷದ ಕೊನೆಯಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.

‌ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.