ದ.ಕ: ಶಾಲೆಗಳಲ್ಲಿ 5 ಕೋವಿಡ್ ಪ್ರಕರಣ ವರದಿಯಾದಲ್ಲಿ ಒಂದು ವಾರ ಶಾಲೆ ಬಂದ್ ಮಾಡುವಂತೆ ಡಿಎಚ್‍ಒ, ಡಿಡಿಪಿಐ ಸೂಚನೆ

0
207

ಸನ್ಮಾರ್ಗ ವಾರ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅವುಗಳು ಈ ರೀತಿ ಇವೆ:
ಶಾಲೆಗಳಲ್ಲಿ 5ಕ್ಕಿಂತ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾದರೆ ಒಂದು ವಾರ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಬೇಕು

ವಿದ್ಯಾರ್ಥಿಗಳಿಗೆ ಆನ್‍ಲೈನ್ ಅಥವಾ ಆಫ್‍ ಲೈನ್ ಮೂಲಕ ಬೋಧನೆ ಮಾಡುವ ವಿಷಯ ಬಗ್ಗೆ ಆಯ್ಕೆ ನೀಡಬೇಕು

ತರಗತಿಗಳನ್ನು ನಡೆಸುವ ಬಗ್ಗೆ ಕೋವಿಡ್ ಮುನ್ನೇಚ್ಚರಿಕಾ ಕ್ರಮಗಳನ್ನು ಶಾಲೆಯಲ್ಲಿ ನಿರ್ವಹಿಸುವ ಬಗ್ಗೆ ಪೋಷಕ ಮತ್ತು ಶಿಕ್ಷಕರ ಸಭೆ ಮೂಲಕ ವಿವರ ಮಾಹಿತಿ ನೀಡಬೇಕು.

ಡಿಡಿಪಿಐಯವರಿಂದ ಮಾಹಿತಿ:

ಜಿಲ್ಲೆಯ ವಿದ್ಯಾಸಂಸ್ಥೆಗಳಲ್ಲಿ ಕೋವಿಡ್ ಸೋಂಕು ಕುರಿತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಕುರಿತು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಜಿಲ್ಲೆಯ ವಿದ್ಯಾ ಸಂಸ್ಥೆಗಳಲ್ಲಿ ತರಗತಿಗಳನ್ನು ನಡೆಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸ್ಪಷ್ಟೀಕರಣ ನೀಡಿದ್ದಾರೆ.

ಅವುಗಳು ಇಂತಿವೆ:

ಜಿಲ್ಲೆಯ ಯಾವುದೇ ವಿದ್ಯಾಸಂಸ್ಥೆಗಳಲ್ಲಿ 5ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು, ಕೋವಿಡ್ ಪಾಸಿಟಿವ್ ಎಂದು ಕಂಡುಬಂದರೆ, ಅಂತಹ ವಿದ್ಯಾಸಂಸ್ಥೆಗಳನ್ನು ಒಂದು ವಾರಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಆನ್‍ಲೈನ್ ಮೂಲಕ ತರಗತಿಗಳನ್ನು ನಡೆಸಬೇಕು.

ವಿದ್ಯಾಸಂಸ್ಥೆಗಳು ತರಗತಿಗೆ ಹಾಜರಾಗಲು ಆಸಕ್ತಿ ಹೊಂದಿಲ್ಲದಿರುವ ಅಥವಾ ಹಾಜರಾಗಲು ಅಸಮರ್ಥರಾಗುವ ವಿದ್ಯಾರ್ಥಿಗಳಿಗಾಗಿ ಭೌತಿಕ ತರಗತಿಗಳೊಂದಿಗೆ ಆನ್ ಲೈನ್ ತರಗತಿಗಳನ್ನು ಆಯೋಜಿಸಬೇಕು.

ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ತಕ್ಷಣ ಪೋಷಕರ ಸಭೆ ಕರೆದು ಶಾಲೆಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳು, ಮಗುವಿನ ಸುರಕ್ಷತೆಯ ಕುರಿತು ಹಾಗೂ ಪೋಷಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚಿಂತನ-ಮಂಥನ ಕಾರ್ಯಕ್ರಮವನ್ನು ನಡೆಸಲು ತುರ್ತು ಕ್ರಮ ಕೈಗೊಳ್ಳುವುದು.

ಈ ಸಭೆಯಲ್ಲಿ ವ್ಯಕ್ತವಾದ ಪೋಷಕರ ಅಭಿಪ್ರಾಯವನ್ನು ಗೌರವಿಸಿ ಮುಂದಿನ ಕ್ರಮದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜ.21ರೊಳಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ವರದಿ ನೀಡುವಂತೆ ಡಿಡಿಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.