ಅಪರಾಧ ಮತ್ತು ಶಿಕ್ಷೆ: ಲೌಕಿಕ ಮತ್ತು ಅಲೌಕಿಕ ನ್ಯಾಯ

0
42

✍️ ಶಾಹಿದ್ ಮೆಮನ್‌, ಬೆಳಗಾಂ

ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಗಳು ಅತ್ಯಂತ ಕಳವಳಕಾರಿಯಾಗಿವೆ. ಸೆಪ್ಟೆಂಬರ್ 2026ರ ವರದಿಯ ಪ್ರಕಾರ, Krupa Health Care ಸಂಸ್ಥೆಯು ನಕಲಿ ಕ್ಯಾನ್ಸರ್ ಔಷಧಿಗಳನ್ನು ತಯಾರಿಸಿ, ಶೇ. 50ರಷ್ಟು ರಿಯಾಯಿತಿಯಲ್ಲಿ 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಸಿದೆ. ಮತ್ತೊಂದು ಏಪ್ರಿಲ್ 2026ರ ವರದಿಯು, ಪ್ರತಿ ವಯಲ್‌ಗೆ `1.5 ಲಕ್ಷ ಬೆಲೆಯ ದುಬಾರಿ ಕ್ಯಾನ್ಸರ್ ಔಷಧಿ Keytruda ಕಳ್ಳತನವಾಗುತ್ತಿರುವುದನ್ನು ಬಹಿರಂಗಪಡಿಸಿದೆ. ಖಾಲಿಯಾದ ಔಷಧಿ ವಯಲ್‌ಗಳಿಗೆ ನಕಲಿ ಔಷಧಿಗಳನ್ನು ತುಂಬಿ, ಪ್ರತಿಷ್ಠಿತ ಆಸ್ಪತ್ರೆಗಳಲ್ಲಿಯೂ ರೋಗಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬುದು ವರದಿಯ ಸಾರಾಂಶ. ದುರದೃಷ್ಟವಶಾತ್, ಇಂತಹ ಘಟನೆಗಳು ನಮ್ಮ ದೇಶಕ್ಕೆ ಹೊಸತೇನಲ್ಲ.

ಅಪ್ರಾಮಾಣಿಕತೆ, ದುರಾಸೆ, ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದಿಂದ ಉಂಟಾದ ಅನೇಕ ಹಗರಣಗಳು ಹಾಗೂ ದುರಂತಗಳಿಗೆ ನಮ್ಮ ದೇಶ ಸಾಕ್ಷಿಯಾಗಿದೆ. ನಕಲಿ ಕ್ಯಾನ್ಸರ್ ಮತ್ತು ಜೀವ ಉಳಿಸುವ ಔಷಧಿಗಳಿಂದ ರೋಗಿಗಳು ಸಂಕಟ ಅನುಭವಿಸಿ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.

ಕಲಬೆರಕೆ ಆಹಾರ, ಹಾಲಿನಲ್ಲಿ ಯೂರಿಯಾ, ಅರಿಶಿನ ಪುಡಿಯಲ್ಲಿ ಸೀಸ (Lead), ಹಣ್ಣು ಮತ್ತು ತರಕಾರಿಗಳಲ್ಲಿ ವಿಷಕಾರಿ ರಾಸಾಯನಿಕಗಳು ಹಾಗೂ ಕೀಟನಾಶಕಗಳ ಬಳಕೆಯಿಂದ ಕ್ಯಾನ್ಸರ್ ಮತ್ತು ಮೂತ್ರಪಿಂಡಗಳ ಹಾನಿಯಂತಹ ಗಂಭೀರ ಸಮಸ್ಯೆಗಳು ಉಂಟಾಗುತ್ತಿವೆ.

ಇಪ್ಪತ್ತಕ್ಕೂ ಹೆಚ್ಚು ಶಂಕಿತ ಕೊಲೆಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗಿರುವ Vyapam ನೇಮಕಾತಿ ಹಗರಣ; ನೂರಾರು ಅಸಹಾಯಕ ಬಾಲಕಿಯರ ಮೇಲೆ ದೀರ್ಘಕಾಲ ನಡೆದ ಲೈಂಗಿಕ ದೌರ್ಜನ್ಯದ Muzaffarpur ಆಶ್ರಯಧಾಮ ಪ್ರಕರಣ- ಪರಿಸರವನ್ನು ನಾಶಮಾಡಿ, ಲಕ್ಷಾಂತರ ಜನರಿಗೆ ರೋಗ ಮತ್ತು ಸಂಕಟವನ್ನು ಉಂಟುಮಾಡಿದ Bellary ಅಕ್ರಮ ಗಣಿಗಾರಿಕೆ; ಕೆರೆಗಳ ಒತ್ತುವರಿ, ಅರಣ್ಯಗಳು ಮತ್ತು ಮ್ಯಾಂಗ್ರೋವ್ ಕಾಡುಗಳ ನಾಶದಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಅಪಾಯ ಹೆಚ್ಚುತ್ತಿರುವುದು-ಇವೆಲ್ಲವೂ ನಮ್ಮ ಮುಂದಿರುವ ಗಂಭೀರ ಸಮಸ್ಯೆಗಳಾಗಿವೆ.

ಗುಜರಾತಿನ Morbi ಸೇತುವೆ ಕುಸಿತ, ಪದೇಪದೇ ಸಂಭವಿಸುವ ಕಟ್ಟಡಗಳ ಕುಸಿತ, ಹೊಸದಾಗಿ ನಿರ್ಮಿಸಲಾದ ರಸ್ತೆಗಳು ಮತ್ತು ಹೆದ್ದಾರಿಗಳು ಹಾಳಾಗುವುದು ಹಾಗೂ ಇದರಿಂದ ಉಂಟಾಗುವ ಅಸಂಖ್ಯಾತ ಅಪಘಾತಗಳು ಮತ್ತೊಂದು ಆತಂಕಕಾರಿ ವಾಸ್ತವವನ್ನು ಬಯಲಿಗೆಳೆಯುತ್ತವೆ. ಇಂತಹ ಘಟನೆಗಳಿಗೆ ಕಳಪೆ ನಿರ್ಮಾಣ ಕಾಮಗಾರಿ ಮತ್ತು ಗುತ್ತಿಗೆಗಳನ್ನು ಭ್ರಷ್ಟ ರೀತಿಯಲ್ಲಿ ನೀಡಿರುವುದೇ ಕಾರಣವೆಂದು ಅನೇಕ ಬಾರಿ ಹೇಳಲಾಗುತ್ತದೆ.

ಇಂತಹ ದುರಂತಗಳ ಅತೀ ದೊಡ್ಡ ಬೆಲೆಯನ್ನು ಅಮಾಯಕರು ತೆರಬೇಕಾಗುತ್ತದೆ: ಪ್ರಾಣ ಕಳೆದುಕೊಳ್ಳುವ ಮಕ್ಕಳು, ದುರಂತದಿಂದ ಛಿದ್ರವಾಗುವ ಕುಟುಂಬಗಳು, ನಕಲಿ ಔಷಧಿಗಳಿಂದ ವಂಚನೆಗೊಳಗಾಗುವ ರೋಗಿಗಳು, ಜೀವನೋಪಾಯ ಕಳೆದುಕೊಳ್ಳುವ ಸಮುದಾಯಗಳು ಮತ್ತು ಭ್ರಷ್ಟಾಚಾರ ಹಾಗೂ ನಿರ್ಲಕ್ಷ್ಯದ ಪರಿಣಾಮಗಳನ್ನು ಅನಿವಾರ್ಯವಾಗಿ ಅನುಭವಿಸಬೇಕಾಗುವುದು ಸಾಮಾನ್ಯ ನಾಗರಿಕರು.

CRISIL ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞರಾದ ಡಿ.ಕೆ. ಜೋಶಿ ಅವರು ಗಮನಿಸಿದಂತೆ: “ನಮ್ಮಲ್ಲಿ ಕಾಗದದ ಮೇಲೆ ಅತ್ಯುತ್ತಮ ಯೋಜನೆಗಳಿವೆ. ಆದರೆ ಅವುಗಳನ್ನು ಕಾರ್ಯಗತ ಗೊಳಿಸುವಲ್ಲಿ ಮತ್ತು ಜನರಿಗೆ ತಲುಪಿಸುವಲ್ಲಿ ನಾವು ಶೋಚನೀಯವಾಗಿ ವಿಫಲರಾಗುತ್ತೇವೆ. ನಮ್ಮ ಸಾರ್ವಜನಿಕ ನೀತಿಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯೇ ಕಾಣೆಯಾಗಿವೆ.”

ಈ ಜಗತ್ತಿನಲ್ಲಿ ಹಣ, ಭ್ರಷ್ಟಾಚಾರ, ರಾಜಕೀಯ ಪ್ರಭಾವ ಅಥವಾ ವ್ಯವಸ್ಥೆಯ ದುರುಪಯೋಗದ ಮೂಲಕ ಪ್ರಭಾವಿಗಳು ಅನೇಕ ಬಾರಿ ನ್ಯಾಯದಿಂದ ತಪ್ಪಿಸಿಕೊಳ್ಳುತ್ತಾರೆ. ಸಾಕ್ಷ್ಯಗಳನ್ನು ಮುಚ್ಚಿಡಬಹುದು, ತನಿಖೆಗೆ ಅಡ್ಡಿಪಡಿಸಬಹುದು ಮತ್ತು ತಪ್ಪಿತಸ್ಥರನ್ನು ರಕ್ಷಿಸಬಹುದು.

ಇದು ಒಂದು ಮೂಲಭೂತ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ: ಜನರ ಹೃದಯ ಮತ್ತು ಮನಸ್ಸಿನಲ್ಲಿ ಹೊಣೆಗಾರಿಕೆಯ ಪ್ರಜ್ಞೆಯನ್ನು ಹೇಗೆ ಬೆಳೆಸಬಹುದು? ಹೊಣೆಗಾರಿಕೆಯಿಲ್ಲದೆ ಒಂದು ರಾಷ್ಟ್ರ ನಿಜವಾದ ಪ್ರಗತಿಯನ್ನು ಸಾಧಿಸಲು ಸಾಧ್ಯವೇ? ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ನಂಬಿಕೆ ಮತ್ತು ಅಧಿಕಾರದ ದುರುಪಯೋಗವನ್ನು ಹೇಗೆ ತಡೆಯಬಹುದು?

ಈ ಸವಾಲನ್ನು ಎದುರಿಸುವಲ್ಲಿ ಧರ್ಮವು ಸಕಾರಾತ್ಮಕ ಮತ್ತು ಮಹತ್ವದ ಪಾತ್ರ ವಹಿಸ ಬಲ್ಲದು.

ಈ ಲೋಕದ ಜೀವನದಲ್ಲಿ ನಾವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು; ಆದರೆ ನಮ್ಮ ಒಡೆಯನೂ ಸೃಷ್ಟಿಕರ್ತನೂ ಆದ, ಇಡೀ ವಿಶ್ವದ ಸಾರ್ವಭೌಮನಾದ ದೇವರ ಮುಂದೆ ನಡೆಯುವ ವಿಚಾರಣೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತಿಮ ತೀರ್ಪಿನ ಈ ವಾಸ್ತವವನ್ನು ನಿರಾಕರಿಸಲಾಗದು.

ಪವಿತ್ರ ಕುರ್‌ಆನ್ ನಮಗೆ ನೆನಪಿಸುತ್ತದೆ: “ನೀವು ಅಲ್ಲಾಹನ ಕಡೆಗೆ ಮರಳಿಸಲ್ಪಡುವ ಒಂದು ದಿನದ ಬಗ್ಗೆ ಭಯಪಡಿರಿ. ಅನಂತರ ಪ್ರತಿಯೊಬ್ಬನಿಗೂ ಅವನು ಸಂಪಾದಿಸಿದ್ದರ ಪೂರ್ಣ ಪ್ರತಿಫಲವನ್ನು ನೀಡಲಾಗುವುದು ಮತ್ತು ಅವರಿಗೆ ಅನ್ಯಾಯ ಮಾಡಲಾಗುವುದಿಲ್ಲ.” (ಕುರ್‌ಆನ್ 2:281)

“ಆ ದಿನ ಜನರು ತಮ್ಮ ಕರ್ಮಗಳನ್ನು ತೋರಿಸಲ್ಪಡುವುದಕ್ಕಾಗಿ ಗುಂಪು ಗುಂಪಾಗಿ ಹೊರಡುವರು. ಆದ್ದರಿಂದ ಅಣುವಿನಷ್ಟಾದರೂ ಸತ್ಕರ್ಮ ಮಾಡಿದವನು ಅದನ್ನು ಕಾಣುವನು; ಅಣುವಿನಷ್ಟಾದರೂ ದುಷ್ಕರ್ಮ ಮಾಡಿದವನು ಅದನ್ನೂ ಕಾಣುವನು.” (ಕುರ್‌ಆನ್ 99:7-8)

ಕುರ್‌ಆನ್ ಒಂದು ಆಳವಾದ ಪ್ರಶ್ನೆಯನ್ನು ಮುಂದಿಡುತ್ತದೆ: “ಮನುಷ್ಯನು ತಾನು ಪ್ರಶ್ನಿಸಲ್ಪಡದೆ ಹಾಗೆಯೇ ಬಿಡಲ್ಪಡುವೆನೆಂದು ಭಾವಿಸುತ್ತಾನೆಯೇ?” (ಕುರ್‌ಆನ್ 75:36)

ಅದು ಮುಂದುವರಿದು ಹೀಗೆ ಘೋಷಿಸುತ್ತದೆ: “ಸರ್ವಾಧಿಕಾರ ಯಾರ ಕೈಯಲ್ಲಿದೆಯೋ ಅವನು ಅತ್ಯಂತ ಧನ್ಯನು. ಅವನು ಎಲ್ಲದರ ಮೇಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. ನಿಮ್ಮಲ್ಲಿ ಯಾರು ಕರ್ಮದಲ್ಲಿ ಅತ್ಯುತ್ತಮರೆಂದು ಪರೀಕ್ಷಿಸುವುದಕ್ಕಾಗಿ ಮರಣ ಮತ್ತು ಜೀವನವನ್ನು ಸೃಷ್ಟಿಸಿದವನು ಅವನೇ.” (ಕುರ್‌ಆನ್ 67:1-2)

ನ್ಯಾಯವು ಮಾನವ ಆತ್ಮದ ಮೂಲಭೂತ ಹಂಬಲವಾಗಿದೆ. ಇದೇ ಕಾರಣಕ್ಕಾಗಿ ನಾವು ಕೆಳ ನ್ಯಾಯಾಲಯಗಳಿಂದ ಜಿಲ್ಲಾ ನ್ಯಾಯಾಲಯಗಳು, ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದವರೆಗೆ ವಿಶಾಲವಾದ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸಿದ್ದೇವೆ.

ಆದರೆ ಮಾನವ ನ್ಯಾಯವು ಅನೇಕ ಬಾರಿ ತನ್ನ ಕರ್ತವ್ಯವನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ವಿಫಲವಾಗುತ್ತದೆ. ಭ್ರಷ್ಟಾಚಾರವು ಅಪರಾಧಿಗಳನ್ನು ರಕ್ಷಿಸಬಹುದು. ಪ್ರಭಾವವು ಸತ್ಯದ ಧ್ವನಿಯನ್ನು ಅಡಗಿಸಬಹುದು. ಅಧಿಕಾರವು ನ್ಯಾಯದ ಹಾದಿಗೆ ಅಡ್ಡಿಯಾಗಬಹುದು. ಆದರೆ ಸೃಷ್ಟಿಕರ್ತನನ್ನು ಯಾರೂ ವಂಚಿಸಲು ಸಾಧ್ಯವಿಲ್ಲ; ಆತನ ಜ್ಞಾನದಿಂದ ಯಾವುದನ್ನೂ ಮರೆಮಾಡಲು ಸಾಧ್ಯವಿಲ್ಲ; ಆತನ ಅಂತಿಮ ತೀರ್ಪಿನಿಂದ ಯಾರೂ ತಪ್ಪಿಸಿಕೊಳ್ಳಲಾರರು.

ನಂಬಿಕೆ, ಪ್ರಾಮಾಣಿಕತೆ ಮತ್ತು ಸದಾಚಾರದೊಂದಿಗೆ ಬದುಕುವವರಿಗೆ ಆ ದಿನವು ಕೇವಲ ಹೊಣೆಗಾರಿಕೆಯ ದಿನವಲ್ಲ; ಅದು ಶಾಶ್ವತ ಯಶಸ್ಸಿನ ಭರವಸೆಯೂ ಹೌದು. ಅವರ ಆಳವಾದ ಆಧ್ಯಾತ್ಮಿಕ ಆಕಾಂಕ್ಷೆಗಳು ಪೂರ್ಣಗೊಳ್ಳುವ ದಿನವೂ ಅದೇ ಆಗಿದೆ.