‘ಇಸ್ರೇಲ್ ವಿಶ್ವ ಶಾಂತಿಗೆ ತೀವ್ರ ಬೆದರಿಕೆ’; ಶೇಕಡಾ 78 ರಷ್ಟು ಬ್ರಿಟಿಷರು ಇಸ್ರೇಲಿಗೆ ವಿರೋಧ: ಸಮೀಕ್ಷೆ ವರದಿ

0
44

ಸನ್ಮಾರ್ಗ ವಾರ್ತೆ

ಲಂಡನ್: ಬ್ರಿಟನ್‌ನಲ್ಲಿ ಶೇಕಡಾ 78 ರಷ್ಟು ಜನರು (ಐವರಲ್ಲಿ ನಾಲ್ವರು) ಇಸ್ರೇಲ್ ವಿಶ್ವ ಶಾಂತಿಗೆ ತೀವ್ರ ಬೆದರಿಕೆಯಾಗಿದೆ ಎಂದು ನಂಬಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ಕಂಡುಕೊಂಡಿದೆ. ಯುಕೆ ಯ ರಾಷ್ಟ್ರೀಯ ಸಾಮಾಜಿಕ ಸಂಶೋಧನಾ ಕೇಂದ್ರ (NatCen) ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ ಈ ಮಾಹಿತಿ ಹೊರಬಿದ್ದಿದೆ. ಇಪ್ಪತ್ತು ವರ್ಷಗಳ ಹಿಂದೆ, ಕೇವಲ ಶೇಕಡಾ 48 ರಷ್ಟು ಜನರು ಇಸ್ರೇಲ್ ಅನ್ನು ಬೆದರಿಕೆ ಎಂದು ಪರಿಗಣಿಸಿದ್ದರು. ಕಳೆದ ಒಂದು ವರ್ಷದಲ್ಲೇ ಈ ಪ್ರಮಾಣ ಶೇಕಡಾ 10 ರಷ್ಟು ಹೆಚ್ಚಾಗಿದೆ.

ಈ ಮಧ್ಯೆ, ಬ್ರಿಟಿಷರು ರಷ್ಯಾವನ್ನು (89%) ವಿಶ್ವ ಶಾಂತಿಗೆ ಅತಿ ದೊಡ್ಡ ಬೆದರಿಕೆ ಎಂದು ನೋಡುತ್ತಾರೆ. ಇಸ್ರೇಲ್ ಎರಡನೇ ಸ್ಥಾನದಲ್ಲಿದೆ. ಈ ಹಿಂದೆ ಉತ್ತರ ಕೊರಿಯಾ ಎರಡನೇ ಸ್ಥಾನದಲ್ಲಿತ್ತು. ಅಮೆರಿಕವನ್ನು ಬೆದರಿಕೆ ಎಂದು ಪರಿಗಣಿಸುವ ಜನರ ಸಂಖ್ಯೆ ಶೇಕಡಾ 74 ಕ್ಕೆ ಏರಿಕೆಯಾಗಿದೆ. 2024 ರಲ್ಲಿ, ಇದು ಕೇವಲ ಶೇಕಡಾ 35 ರಷ್ಟಿತ್ತು. ಕೇವಲ ಎರಡೇ ವರ್ಷಗಳಲ್ಲಿ ಇದು ಎರಡಕ್ಕಿಂತ ಹೆಚ್ಚು ಪಟ್ಟು ಹೆಚ್ಚಾಗಿದೆ. ವಿಶ್ವ ಶಾಂತಿಗೆ ಅತಿ ದೊಡ್ಡ ಬೆದರಿಕೆ ಎಂದು ಪರಿಗಣಿಸಲಾದ ದೇಶ ರಷ್ಯಾ 89% ಜನರ ಅಭಿಪ್ರಾಯವಾಗಿದೆ.

ಮಧ್ಯಪ್ರಾಚ್ಯದಲ್ಲಿ ಇತ್ತೀಚಿನ ಸಂಘರ್ಷಗಳಲ್ಲಿ ಇಸ್ರೇಲ್‌ನ ನಿರಂತರ ಭಾಗವಹಿಸುವಿಕೆಯೇ ಅದರ ಇಮೇಜ್ ಕುಸಿಯಲು ಪ್ರಮುಖ ಕಾರಣ ಎಂದು ನ್ಯಾಟ್‌ಸೆನ್ ಬೆಟ್ಟು ಮಾಡಿದೆ. “ಅಕ್ಟೋಬರ್ 7, 2023 ರ ಹಮಾಸ್ ಸಡನ್ ದಾಳಿಯ ನಂತರ ಗಾಝಾದಲ್ಲಿ ಇಸ್ರೇಲಿ ಆಕ್ರಮಣವು ಸಾರ್ವಜನಿಕರಲ್ಲಿ ಭಾರಿ ಕಳವಳವನ್ನು ಉಂಟುಮಾಡಿತು. ನಂತರ, ಇರಾನ್ ಜೊತೆಗಿನ ಸರಣಿ ಬಾಂಬ್ ದಾಳಿಗಳೊಂದಿಗೆ ಸೇರಿ, ಇಸ್ರೇಲ್ ವಿಷಯವು ಮಧ್ಯಪ್ರಾಚ್ಯದಲ್ಲಿ ಪ್ರಮುಖ ಪ್ರಾದೇಶಿಕ ಯುದ್ಧಕ್ಕೆ ಕಾರಣವಾಗಬಹುದು ಮತ್ತು ಜಾಗತಿಕ ಅಸ್ಥಿರತೆಗೆ ಕೊಡುಗೆ ನೀಡಬಹುದು ಎಂದು ಬ್ರಿಟಿಷ್ ಸಾರ್ವಜನಿಕರು ಭಯಪಟ್ಟರು,” ಎಂದು ಸಮೀಕ್ಷೆ ಹೇಳುತ್ತದೆ.

ಈ ಮಧ್ಯೆ, ಬ್ರಿಟನ್‌ನಲ್ಲಿನ ರಾಜಕೀಯ ಪಕ್ಷದ ಬೆಂಬಲಿಗರಲ್ಲಿ ಇಸ್ರೇಲ್ ಮತ್ತು ಅಮೆರಿಕದ ಕುರಿತಾದ ಅಭಿಪ್ರಾಯಗಳಲ್ಲಿ ದೊಡ್ಡ ವ್ಯತ್ಯಾಸಗಳಿವೆ. ಗ್ರೀನ್, ಲೇಬರ್ ಮತ್ತು ಲಿಬರಲ್ ಡೆಮಾಕ್ರಾಟ್ ಬೆಂಬಲಿಗರು ಇಸ್ರೇಲ್ ಮತ್ತು ಅಮೆರಿಕವನ್ನು ವಿಶ್ವ ಶಾಂತಿಗೆ ಬೆದರಿಕೆ ಎಂದು ನೋಡುತ್ತಾರೆ. ಆದರೆ ಕನ್ಸರ್ವೇಟಿವ್ ಮತ್ತು ರಿಫಾರ್ಮ್ ಯುಕೆ ಬೆಂಬಲಿಗರು ಇಸ್ರೇಲ್‌ಗಿಂತ ಚೀನಾ, ಉತ್ತರ ಕೊರಿಯಾ ಮತ್ತು ಇರಾನ್ ಅನ್ನು ಹೆಚ್ಚಿನ ಬೆದರಿಕೆ ಎಂದು ನೋಡುತ್ತಾರೆ. ಸಮೀಕ್ಷೆಯ ವರದಿಯನ್ನು ಕಳೆದ ವಾರ ಬಿಡುಗಡೆ ಮಾಡಲಾಗಿತ್ತು.