ಅಸ್ಸಾಂ | ಮುಸ್ಲಿಂ ಕುಟುಂಬದ ಮನೆ ಧ್ವಂಸಗೊಳಿಸಿದ ನಂತರ ವ್ಯಂಗ್ಯ ಪೋಸ್ಟ್ ಮಾಡಿದ ಸಿಎಂ; ವ್ಯಾಪಕ ಆಕ್ರೋಶ

0
55

ಸನ್ಮಾರ್ಗ ವಾರ್ತೆ

ಗುವಾಹಾಟಿ: ಮುಸ್ಲಿಂ ಕುಟುಂಬವೊಂದರ ಮನೆಯನ್ನು ಬುಲ್ಡೋಜರ್‌ನಿಂದ ಧ್ವಂಸಗೊಳಿಸಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಲಖಿಂಪುರದಲ್ಲಿ ಮನೆಯೊಂದನ್ನು ಧ್ವಂಸಗೊಳಿಸಿದ ವೀಡಿಯೊವನ್ನು ಮುಖ್ಯಮಂತ್ರಿಗಳು ಭಾನುವಾರ ರಾತ್ರಿ ಹಂಚಿಕೊಂಡಿದ್ದಾರೆ. ದೀಪಾವಳಿಗೆ ಮುನ್ನ ಈ ಪೋಸ್ಟ್‌ಗೆ ‘ಮನೆ ಸ್ವಚ್ಛಗೊಳಿಸುವಿಕೆ’ (House cleaning) ಎಂಬ ವ್ಯಂಗ್ಯ ಶೀರ್ಷಿಕೆಯನ್ನು ನೀಡಲಾಗಿತ್ತು.

ಬುಲ್ಡೋಜರ್ ತನ್ನ ಮನೆಯನ್ನು ಧ್ವಂಸಗೊಳಿಸುತ್ತಿದ್ದಂತೆ ಮುಸ್ಲಿಂ ಯುವಕನೊಬ್ಬ ಅಸಹಾಯಕನಾಗಿ ನಿಂತಿರುವ ದೃಶ್ಯಗಳೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಹಿನ್ನೆಲೆಯಲ್ಲಿ ಹಬ್ಬದ ಸಂಗೀತವನ್ನೂ ಸೇರಿಸಲಾಗಿದೆ.

ಮುಖ್ಯಮಂತ್ರಿಗಳ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಕುಟುಂಬವೊಂದು ತಮ್ಮ ಮನೆಯನ್ನು ಕಳೆದುಕೊಳ್ಳುವುದನ್ನು ಸಂಭ್ರಮಿಸುವ ರೀತಿಯಲ್ಲಿ ವೀಡಿಯೊವನ್ನು ಪ್ರಸ್ತುತಪಡಿಸಲಾಗಿದೆ ಎಂದು ವಿಮರ್ಶಕರು ಬೆಟ್ಟು ಮಾಡಿದ್ದಾರೆ. ಮುಸ್ಲಿಂ ವಿರೋಧಿ ಭಾವನೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ಈ ಪೋಸ್ಟ್ ಅನ್ನು ವಿಮರ್ಶಿಸಲಾಗಿದೆ.

ಹಿಮಂತ ಬಿಸ್ವ ಶರ್ಮಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೇಳಿಕೆಗಳು ಮತ್ತು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡ ನೀತಿಗಳಿಗಾಗಿ ಹಿಂದೆ ಅನೇಕ ಬಾರಿ ಟೀಕೆಗಳನ್ನು ಎದುರಿಸಿದ್ದಾರೆ. ರಾಜ್ಯದ ಮುಸ್ಲಿಂ ಸಮುದಾಯದ ಮೇಲೆ ಪರಿಣಾಮ ಬೀರುವ ನೀತಿಗಳು ಮತ್ತು ಕ್ರಮಗಳು ಪ್ರಮುಖ ರಾಜಕೀಯ ಚರ್ಚೆಗಳಿಗೆ ಕಾರಣವಾಗಿವೆ.