ಸನ್ಮಾರ್ಗ ವಾರ್ತೆ
ನವದೆಹಲಿ: ದೇಶದ ಐದು ರಾಜ್ಯಗಳಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗವು ಇಂದು ಪ್ರಕಟಿಸಬಹುದು. ಚುನಾವಣಾ ಆಯೋಗವು ಶನಿವಾರ ಮಧ್ಯಾಹ್ನ 3.30ಕ್ಕೆ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲಿದೆ. ಇನ್ನೆರಡು ಮೂರು ತಿಂಗಳಲ್ಲಿ ಈ ಎಲ್ಲ ರಾಜ್ಯಗಳ ಶಾಸಕರ ಅವಧಿ ಪೂರ್ಣಗೊಳ್ಳಲಿದೆ.
ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ 6 ರಿಂದ 8 ಹಂತಗಳಲ್ಲಿ, ಪಂಜಾಬ್ನಲ್ಲಿ 3 ಹಂತಗಳಲ್ಲಿ ಚುನಾವಣೆ ನಡೆಸುವ ಯೋಜನೆ ಇದೆ. ಉತ್ತರಾಖಂಡ ಮತ್ತು ಗೋವಾದಲ್ಲಿ ಒಂದೇ ಹಂತದಲ್ಲಿ, ಮಣಿಪುರದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂಬುದಾಗಿ ವರದಿಯಾಗಿದೆ.
ಚುನಾವಣಾ ಆಯೋಗವು(ಇಸಿಐ) ಶುಕ್ರವಾರ ಅಭ್ಯರ್ಥಿಗಳ ಪ್ರಚಾರಕ್ಕಾಗಿ ವೆಚ್ಚದ ಮಿತಿಯನ್ನು ಹೆಚ್ಚಿಸಿದೆ. ಈಗ ಲೋಕಸಭೆ ಚುನಾವಣೆ ವೇಳೆ ಅಭ್ಯರ್ಥಿಗಳು ತಮ್ಮ ಸಂಸದೀಯ ಕ್ಷೇತ್ರಗಳಲ್ಲಿ 2014ರಲ್ಲಿ ನಿಗದಿಪಡಿಸಿದ್ದ 70 ಲಕ್ಷ ರೂಪಾಯಿ ಬದಲು 95 ಲಕ್ಷ ರೂಪಾಯಿ ಹಾಗೂ 54 ಲಕ್ಷ ರೂಪಾಯಿ ಬದಲು 75 ಲಕ್ಷ ರೂಪಾಯಿ ಖರ್ಚು ಮಾಡಬಹುದು. ಅದೇ ರೀತಿ ವಿಧಾನಸಭೆ ಚುನಾವಣೆ ವೇಳೆ 28 ಲಕ್ಷದ ಬದಲು 40 ಲಕ್ಷ, 20 ಲಕ್ಷದ ಬದಲು 28 ಲಕ್ಷ ಖರ್ಚು ಮಾಡಬಹುದು. ಆಯೋಗವು ತನ್ನ ಸಮಿತಿಯೊಂದರ ಶಿಫಾರಸುಗಳ ಆಧಾರದ ಮೇಲೆ ಈ ವೆಚ್ಚದ ಮಿತಿಯನ್ನು ಹೆಚ್ಚಿಸಿದೆ.
ಕೊರೋನಾ ನಡುವಿನ ಚುನಾವಣೆಯಲ್ಲಿ, ಮತಗಟ್ಟೆಗಳಲ್ಲಿ ಲಸಿಕೆಯ ಎರಡೂ ಡೋಸ್ ಪಡೆಯದವರ ಪ್ರವೇಶವನ್ನು ಮುಚ್ಚಬಹುದು. ಆದರೆ, ಈ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇದಕ್ಕಾಗಿ ಚುನಾವಣಾ ಆಯೋಗ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ನಡುವೆ ಗುರುವಾರ ನಡೆದ ಸಭೆಯಲ್ಲಿ ಚರ್ಚೆಯಾಗಿದೆ. ಈ ಸಭೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಪರಿಸ್ಥಿತಿಯ ಸಂಪೂರ್ಣ ವಿಶ್ಲೇಷಣೆ ಮಾಡಲಾಗಿದೆ. ಇದರೊಂದಿಗೆ ಈ ಅವಧಿಯಲ್ಲಿ ಚುನಾವಣೆ ನಡೆಸುವುದರಿಂದ ಆಗಬಹುದಾದ ಪರಿಣಾಮಗಳ ಕುರಿತು ಚರ್ಚಿಸಲಾಗಿದ್ದು, ದೇಶದಲ್ಲಿನ ಕೋವಿಡ್ ಪರಿಸ್ಥಿತಿಯ ಬಗ್ಗೆ ಆರೋಗ್ಯ ಕಾರ್ಯದರ್ಶಿ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.












