ಸ್ಕೂಟರ್ ನಿಲ್ಲಿಸುವ ವಿಷಯದಲ್ಲಿ ಜಗಳ: ಮಂದಿರಕ್ಕೆ ಹಾನಿ- ಮೂವರ ಬಂಧನ

0
1099

ಹೊಸದಿಲ್ಲಿ, ಜು.3: ಸ್ಕೂಟರ್ ನಿಲ್ಲಿಸುವ ವಿಷಯದಲ್ಲಿ ದಿಲ್ಲಿಯ ಚಾವಡಿ ಬಝಾರ್ ನಲ್ಲಿ ನಡೆದ ಜಗಳ ಕೋಮು ಗಲಭೆಯ ಬಣ್ಣ ಪಡೆದುಕೊಂಡು ಒಂದು ಮಂದಿರಕ್ಕೆ ಹಾನಿಯೆಸಗಲಾಗಿದ್ದು ಮೂವರನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬ ಅಪ್ರಾಪ್ತ ವಯಸ್ಕ ಹುಡುಗನೂ ಸೇರಿದ್ದಾನೆಂದು ದಿಲ್ಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಉಪಸ್ಥಿತಿಯಲ್ಲಿ ತಡರಾತ್ರೆ ಎರಡು ಕೋಮಿನವರ ನಡುವೆ

ಸಭೆ ನಡೆದಿದ್ದು ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸುವ ಯತ್ನ ನಡೆದಿದೆ. ರವಿವಾರ ರಾತ್ರೆ ನಡೆದ ಘಟನೆಯ ಬಳಿಕ ಇಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿತ್ತು.

ಪೊಲೀಸ್ ಉಪಾಯುಕ್ತ ಮಂದೀಫ್ ಸೀಂಗ್ ರಾಂಧವರು, “ಎರಡು ಸಮುದಾಯದವರ ನಡುವೆ ಸಭೆ ನಡೆದಿದ್ದು ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಆಗ್ರಹ ಕೇಳಿಬಂದಿದೆ. ಪ್ರತಿಯೊಬ್ಬರು ಶಾಂತಿಯಿಂದ ಇರಲಿದ್ದಾರೆ. ಬುಧವಾರ ಅಂಗಡಿ ಮುಂಗಟ್ಟು ತೆರೆಯಲಿದೆ” ಎಂದು ತಿಳಿಸಿದ್ದಾರೆ. ವಿಶ್ವಹಿಂದು ಪರಿಷತ್ ದಿಲ್ಲಿ ವಿಭಾಗದ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ನೇತೃತ್ವದಲ್ಲಿ ಪ್ರತಿನಿಧಿಗಳ ತಂಡವೊಂದು ಪೊಲೀಸ್ ಅಯುಕ್ತ ಅಮೂಲ್ಯಪತ್ನಾಯಾಕ್ ರನ್ನು ಭೇಟಿಯಾಗಿದ್ದು ದಿಲ್ಲಿ ಹೌಜ್ ಕಾಜಿಯಲ್ಲಿ ಮಂದಿರಕ್ಕೆ ಹಾನಿ ಮಾಡಿದ ಘಟನೆಯಲ್ಲಿ ಪಾಲ್ಗೊಂಡವರನ್ನು ಬಂಧಿಸಲು ಆಗ್ರಹಿಸಿದೆ. ಘಟನೆಯ ಹಿಂದೆ ದೊಡ್ಡ ಸಂಚು ಇರಬಹುದು ಎಂದು ವಿಹಿಂಪ ಸಂದೇಹ ವ್ಯಕ್ತಪಡಿಸಿದೆ.

ಜನರಲ್ಲಿ ಶಾಂತಿಯಿಂದಿರಲು ಮನವಿ ಮಾಡಿದ ಆಮ್ ಆದ್ಮಿ ಪಾರ್ಟಿ ನಾಯಕ ಸಂಜಯ್ ಸಿಂಗ್ ಮಂದಿರಕ್ಕೆ ಹಾನಿಯೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮಂದಿರಕ್ಕೆ ಹಾನಿಯೆಸಗಿದ್ದು ಅಕ್ಷಮ್ಯವಾಗಿದೆ. ಕಾನೂನು ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರಗಿಸುತ್ತದೆ ಎಂದು ಸಂಜಯ್ ಸಿಂಗ್ ಹೇಳಿದರು.