ಆಕ್ಸಿಜನ್ ಸಿಲಿಂಡರ್‌ನ ನೆಪದಲ್ಲಿ ವಂಚನೆ: ಇಬ್ಬರ ಬಂಧನ

0
313

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೋನ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಆಕ್ಸಿಜನ್ ಸಿಲಿಂಡರ್ ನೀಡಲಾಗುವುದು ಎಂದು ಹೇಳಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ಯುವಕನನ್ನು ಬಂಧಿಸಲಾಗಿದೆ. ಆನ್‍ಲೈನ್ ಮೂಲಕ ಈತ ವಂಚನೆ ನಡೆಸಿದ್ದು ಆಕ್ಸಿಜನ್ ಸಿಲಿಂಡರ್‌ಗಳು, ಹೋಮ್ ಡೆಲಿವರಿ ನೀಡಲಾಗುವುದೆಂದು ಈತ ಹೇಳಿಕೊಂಡಿದ್ದ.

ರಿತಿಕ್ ಕುಮಾರ್ ಸಿಂಗ್ ಮತ್ತು ಆತನ ಸಂಗಡಿಗ ಸಂದೀಪ್ ಪಾಂಡೆ ಈ ರೀತಿ ಹೇಳಿ 50 ಮಂದಿಯನ್ನು ವಂಚಿಸಿದ್ದಾನೆಂದು ದಿಲ್ಲಿ ಪೊಲೀಸರು ಹೇಳಿದರು. ಹದಿನೆಂಟು ಸದಸ್ಯರ ಯುವಜನ ಸಂಘಟನೆಯಾದ ಇಂಡಿಯಾ ಯೂತ್ ಐಕಾನ್ ಟೀಂ ಅಧ್ಯಕ್ಷ ರಿತಿಕ್ ಕುಮಾರ್ ಸಿಂಗ್ ಎಪ್ರಿಲ್‍ನಿಂದ ವಂಚನೆ ಆರಂಭಿಸಿದ್ದ. ಈತನ ವಿರುದ್ಧ ವಿವೇಕ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ಹೇಳಿ ವಂಚಿಸಿದ್ದಾನೆಂದು ದೂರು ಬಂದಿತ್ತು.

ದೂರು ನೀಡಿದ ಸಂಜೋತ್ ಅಗರ್ವಾಲ್ ತನ್ನ ಅಮ್ಮ ರೋಗಿಯಾಗಿದ್ದು ಆಕ್ಸಿಜನ್ ಸಿಲೆಂಡರ್ ಬೇಕಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ನಂಬರಿಗೆ ಫೋನ್ ಕರೆ ಮಾಡಿದ್ದೆ. ಅವರು 14000 ರೂಪಾಯಿ ಕೇಳಿದ್ದರು. ಈ ಹಣವನ್ನು ಅವರ ಖಾತೆಗೆ ಕಳುಹಿಸಿದ್ದೆ. ಆದರೆ, ಸಿಲೆಂಡರ್ ಲಭಿಸಲಿಲ್ಲ. ಫೋನ್ ಕರೆ ಮಾಡಿದಾಗ ಸ್ವಿಚ್ಛ್ ಆಫ್ ಆಗಿತ್ತು ಎಂದು ಸಂಜೋತ್ ಅಗರ್‍ವಾಲ್ ದೂರಿನಲ್ಲಿ ಹೇಳಿದ್ದಾರೆ. ನಂತರ ಅವರು ರಿತಿಕ್ ಕುಮಾರ್ ಸಿಂಗ್ ವಿರುದ್ಧ ದೂರು ನೀಡಿದ್ದಾರೆ. ರಿತಿಕ್ ಸಿಂಗ್ ವಿವಿಧ ರಾಜ್ಯಗಳಲ್ಲಿ ಕೆಲವರಿಗೆ ಈ ರೀತಿ ವಂಚಿಸಿರುವುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.