ಉತ್ತರಪ್ರದೇಶ| ಸರಕಾರಿ ಆಸ್ಪತ್ರೆಯ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ: ಮೂವರು ನೈರ್ಮಲ್ಯ ಕಾರ್ಮಿಕರ ಮೇಲೆ ದೂರು ದಾಖಲು!

0
152

ಮಗುವಿನ ಮೃತದೇಹ ಕಚ್ಚಿ ಹಿಡಿದು ವರಾಂಡದಲ್ಲಿ ಓಡಾಡಿದ ನಾಯಿ!

ಸನ್ಮಾರ್ಗ ವಾರ್ತೆ

ಮಹಾರಾಜಗಂಜ್: ಇಲ್ಲಿನ ಜಿಲ್ಲಾ ಮಹಿಳಾ ಆಸ್ಪತ್ರೆಯ ಶೌಚಾಲಯದ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ(ಸಿಎಂಎಸ್) ಡಾ ಎ.ಕೆ ದ್ವಿವೇದಿ ಮೂವರು ನೈರ್ಮಲ್ಯ ಕಾರ್ಮಿಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಕರ್ತವ್ಯ ನಿರತ ನರ್ಸ್ ಮತ್ತು ವೈದ್ಯರು ಸೇರಿದಂತೆ ಆಸ್ಪತ್ರೆಯ ಆರು ಸಿಬ್ಬಂದಿಗಳಿಗೆ ನೋಟಿಸ್ ನೀಡಲಾಗಿದೆ. ಮಗುವಿನ ಶವವನ್ನು ಯಾರು ಎಸೆದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಆಸ್ಪತ್ರೆಯ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಜಿಲ್ಲಾ ಮಹಿಳಾ ಆಸ್ಪತ್ರೆಯ ಕಸದ ತೊಟ್ಟಿಯಲ್ಲಿ ಎಸೆದಿದ್ದ ಮಗುವಿನ ಮೃತದೇಹವನ್ನು ನಾಯಿಯೊಂದು ಕಚ್ಚಿಕೊಂಡು ವರಾಂಡದಲ್ಲಿ ಓಡಾಡಿದಾಗ ಈ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ನಾಯಿಯ ಬಾಯಲ್ಲಿ ನವಜಾತ ಶಿಶುವಿನ ಮೃತದೇಹ ನೋಡಿ ಜನರು ಚೀರಾಡಲು ಆರಂಭಿಸಿದರು. ಇದರಿಂದ ಗಾಬರಿಗೊಂಡ ಆಸ್ಪತ್ರೆ ಸಿಬ್ಬಂದಿಗಳು ಎಚ್ಚೆತ್ತುಕೊಂಡು ನಾಯಿಯನ್ನು ಓಡಿಸಿದ್ದು, ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಸೋಮವಾರ ನಾಲ್ಕು ಸಾಮಾನ್ಯ ಹೆರಿಗೆಗಳು ನಡೆದಿದ್ದು, ಇದರಲ್ಲಿ ಎರಡು ನವಜಾತ ಶಿಶುಗಳು ಸಾವನ್ನಪ್ಪಿದ್ದವು. ಒಂದು ಮಗು ಮಧ್ಯಾಹ್ನ 2.50ಕ್ಕೆ ಮತ್ತು ಎರಡನೆಯದು ರಾತ್ರಿ 9ಕ್ಕೆ ಜನಿಸಿತ್ತು. ಎರಡೂ ಮೃತದೇಹಗಳೊಂದಿಗೆ ಸಂಬಂಧಿಕರು ತೆರಳಿದ್ದರು ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಆದರೆ ಈ ನವಜಾತ ಶಿಶುವಿನ ಮೃತದೇಹ ಎಲ್ಲಿಂದ ಬಂತು ಎಂಬುದು ತನಿಖೆಯ ವಿಷಯವಾಗಿದೆ.

ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಶವವನ್ನು ಎಸೆದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಎ.ಕೆ.ದ್ವಿವೇದಿ, ಡಾ. ಎ.ವಿ ತ್ರಿಪಾಠಿ ಸೇರಿದಂತೆ ಇತರ ವೈದ್ಯರು ಆಗಮಿಸಿ ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಮೂವರು ನರ್ಸ್‌ಗಳಿಂದ ಸ್ಪಷ್ಟನೆ ಪಡೆದುಕೊಂಡಿದ್ದಾರೆ ಮತ್ತು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲು ದೂರು ನೀಡಲಾಗಿದೆ ಎಂದು ವರದಿಯಾಗಿದೆ.