ಸರ್ಜಿಕಲ್ ಸ್ಟ್ರೈಕ್; ದಿಗ್ವಿಜಯ ಸಿಂಗ್ ಹೇಳಿಕೆ ಅಂತರ ಕಾಯ್ದುಕೊಂಡ ಕಾಂಗ್ರೆಸ್

0
127

ಸನ್ಮಾರ್ಗ ವಾರ್ತೆ

ಜಮ್ಮು; ಭಾರತದ ಸರ್ಜಿಕಲ್ ಸ್ಟ್ರೈಕ್ ಪ್ರಶ್ನಿಸುವ ದಿಗ್ವಿಜಯ ಸಿಂಗ್ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪುವುದಿಲ್ಲ ಹಾಗೂ ಅವರ ಹೇಳಿಕೆ “ಹಾಸ್ಯಾಸ್ಪದ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಹಿರಿಯ ನಾಯಕನ ವಿವಾದಾತ್ಮಕ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಂಡಿದೆ. ಸಶಸ್ತ್ರ ಪಡೆಗಳು ಪುರಾವೆಗಳನ್ನು ನೀಡುವ ಅಗತ್ಯವಿಲ್ಲ ಎಂದು ರಾಹುಲ್ ಹೇಳಿದ್ದಾರೆ.

ನಾವು ದಿಗ್ವಿಜಯ ಸಿಂಗ್‌ರ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ. ಪಕ್ಷದ ಅಭಿಪ್ರಾಯಗಳು ದಿಗ್ವಿಜಯ ಸಿಂಗ್ ಅವರ ಅಭಿಪ್ರಾಯಗಳಿಗಿಂತ ದೊಡ್ಡದು ” ಎಂದು ಜಮ್ಮುವಿನಲ್ಲಿ ತಮ್ಮ ಭಾರತ್ ಜೋಡೊ ಯಾತ್ರೆಯ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದರು. “ಪಕ್ಷದ ಅಭಿಪ್ರಾಯಗಳು ಮಾತುಕತೆಯಿಂದ ಹುಟ್ಟಿಕೊಂಡಿವೆ. ದಿಗ್ವಿಜಯ ಸಿಂಗ್‌ರ ಅಭಿಪ್ರಾಯಗಳು ಹೊರಗಿನ ದೃಷ್ಟಿಕೋನಗಳಾಗಿವೆ. ಅವು ಪಕ್ಷವು ಹೊಂದಿರುವ ಅಭಿಪ್ರಾಯಗಳಲ್ಲ. ಸಶಸ್ತ್ರ ಪಡೆಗಳು ತಮ್ಮ ಕೆಲಸವನ್ನು ಮಾಡುತ್ತವೆ ಹಾಗೂ ಆ ಕೆಲಸವನ್ನು ಅವರು ಅತ್ಯುತ್ತಮವಾಗಿ ಮಾಡುತ್ತಾರೆ. ಅದಕ್ಕೆ ಅವರು ಪುರಾವೆಗಳನ್ನು ನೀಡುವ ಅಗತ್ಯವಿಲ್ಲ ಎಂಬ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇದೆ ”ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಸೋಮವಾರ ನಡೆದ ಭಾರತ್ ಜೋಡೊ ಯಾತ್ರಾ ರ‍್ಯಾಲಿಯಲ್ಲಿ ದಿಗ್ವಿಜಯ ಸಿಂಗ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಭಾರೀ ಟೀಕೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ಸ್ಪಷ್ಟನೆ ನೀಡಿದ್ದಾರೆ.”ಕೇಂದ್ರ ಸರಕಾರವು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತದೆ. ಆದರೆ ಅದಕ್ಕೆ ಯಾವುದೇ ಪುರಾವೆಗಳಿಲ್ಲ. ಅವರು ಸುಳ್ಳಿನ ಕಂತೆ ಕಟ್ಟಿಕೊಂಡು ಆಡಳಿತ ನಡೆಸುತ್ತಿದ್ದಾರೆ” ಎಂದು ಸಿಂಗ್ ಹೇಳಿದ್ದರು