ಸನ್ಮಾರ್ಗ ವಾರ್ತೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ – ಕಟ್ಲ ಜನತಾ ಕಾಲನಿ ಇಲ್ಲಿನ 1.60 ಎಕ್ರೆ ಭೂ ಕಬಳಿಕೆ ಹಗರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ಹಗರಣದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಆದ ಬಳಿಕವೂ ಜಿಲ್ಲಾಡಳಿತ ಉನ್ನತ ಅಧಿಕಾರಿಗಳು ಶಾಲೆಗೆ ಭೇಟಿ ನೀಡದೇ ಭೂ ಹಗರಣವನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಸರಕಾರಿ ಶಾಲೆಗಳ ಸಂರಕ್ಷಣೆ ಬಗ್ಗೆ ಜಿಲ್ಲಾಡಳಿತಕ್ಕೆ ಇಚ್ಛಾಶಕ್ತಿ ಇಲ್ಲ ಎಂದು ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಸಂಚಾಲಕ, ಡಿವೈಎಫ್ಐ ಜಿಲ್ಲಾಧ್ಯಕ್ಷ ಆರೋಪಿಸಿದ್ದಾರೆ.
ಅವರು ಇಂದು ಹೋರಾಟ ಸಮಿತಿಯ ನೇತೃತ್ವದಲ್ಲಿ ನವೆಂಬರ್ 27ರಂದು ನಡೆಯಲಿರುವ ಪ್ರತಿಭಟನಾ ಧರಣಿಯ ಕರಪತ್ರ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಸರಕಾರಿ ಶಾಲೆಯ ಉಳಿವಿಗಾಗಿ ನಡೆಯುವ ಹೋರಾಟವನ್ನು ನಾಗರಿಕ ಸಮಾಜ ಬೆಂಬಲಿಸಬೇಕೆಂದು ಕರೆ ನೀಡಿದರು.
ಮಾಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾರಿಜ ಅಧ್ಯಕ್ಷತೆ ವಹಿಸಿದ್ದರು. ಹೋರಾಟ ಸಮಿತಿ ಪ್ರಮುಖರಾದ ಶರೀಫ್, ಫಾರೂಕ್ ಜನತಾ ಕಾಲನಿ, ಶ್ರೀನಾಥ್ ಕುಲಾಲ್, ಬಿ.ಕೆ ಮಕ್ಸೂದ್, ಆಸೀಫ್, ಅಶ್ರಫ್, ಶಬನಾ, ಸಿಸಿಲಿ ಡಿಸೋಜಾ, ಶೈಫರ್ ಆಲಿ, ಅಸ್ಕಾಫ್, ಐ ಮೊಹಮ್ಮದ್, ಸಾದಿಕ್ ಕಿಲ್ಪಾಡಿ, ಹನೀಫ್ ಇಡ್ಯಾ, ಮುಂತಾದವರು ಉಪಸ್ಥಿತರಿದ್ದರು.