ಓರ್ವ ಪ್ರಧಾನಿ ಆಡುವ ಮಾತಾ ಇದು?

0
259

✍️ ಅರಫಾ ಮಂಚಿ

ಸನ್ಮಾರ್ಗ ವಾರ್ತೆ

ಕಮಲ ಬಟನ್ ಹೇಗೆ ಒತ್ತಬೇಕು ಎಂದರೆ ವಿರೋಧಿಗಳಿಗೆ ಫಾಸಿ ಆಗಬೇಕು ಹಾಗೆ… ಎಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ತಾನದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ದಯನೀಯ ಪರಿಸ್ಥಿತಿಯನ್ನು ಇದು ತೋರಿಸುತ್ತದೆ. ಒಬ್ಬ ಪ್ರಧಾನಿ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಕಮಲದ ಬಟನ್‌ನಿಂದ ಫಾಸಿ ಕೊಡುವಂತಿರಬೇಕೆನ್ನುವುದು ಭಾರತದ ಇತಿಹಾಸದಲ್ಲಿ ಮೊದಲನೆಯದು.

ಪ್ರಧಾನಿ ಕಮಲದ ಬಟನ್ ಒತ್ತಿ ಫಾಸಿ ಕೊಡಲು ಹೇಳಿದ್ದಾ ಅಥವಾ ಕತ್ತಿ ಎತ್ತಿಕೊಂಡು ಸ್ಪರ್ಧಿಸಲು ಹೇಳಿದ್ದಾ? ಹೌದು, ಮತದಾರರಿಗಿಂತಲೂ ಬಿಜೆಪಿ ಕಾರ್ಯಕರ್ತರಿಗೆ ಮೋದಿಯ ಮಾತು ಹೆಚ್ಚು ಅರ್ಥವಾಗಬಹುದು.
ಬಿಜೆಪಿಯವರು ಇಂತಹ ಥರ್ಡ್ ಡಿಗ್ರಿ ಮಾತುಗಳಿಗೆ ಕುಖ್ಯಾತರಿದ್ದಾರೆ. ಅದು ಸಂಸತ್ತಿರಲಿ, ಚುನಾವಣಾ ಪ್ರಚಾರ ಸಭೆ ಇರಲಿ,  ಪತ್ರಿಕಾಗೋಷ್ಠಿ ಇರಲಿ ಇಂತಹ ಭಾಷೆಗಳನ್ನು ಬಳಸುತ್ತಿದ್ದಾರೆ. ಅವರಿಗೆ ಆಕ್ರಮಣಶೀಲ ಹಿಂದುತ್ವ ಬಹಳ ಇಷ್ಟ. ಇದನ್ನು ಒಂದು ಸಂದರ್ಶನದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು.

ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಆಗಿನ ಉನ್ನತ  ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಅವರು ಟಿಪ್ಪುವನ್ನು ಹೊಡೆದುರುಳಿಸಿದಂತೆ ಸಿದ್ದರಾಮಯ್ಯರನ್ನು ಉರುಳಿಸಬೇಕೆಂದಿದ್ದರು. ನಂತರ  ಸಿ.ಟಿ. ರವಿ ಅವರು ಸಿದ್ದರಾಮಯ್ಯರನ್ನು ಸಿದ್ರಾಮುಲ್ಲ ಖಾನ್ ಎಂದರು. ಹೀಗೆ ಎಷ್ಟೇ ಪ್ರಚೋದಕವಾಗಿ ಮಾತಾಡಿದರೂ ಕರ್ನಾಟಕದ  ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಸೋಲಿಸಿದರು. ಕರ್ನಾಟಕ ಚುನಾವಣೆಯಲ್ಲಿ ಬಜರಂಗ್ ಬಲಿ, ಕೇರಳ ಸ್ಟೋರಿಯನ್ನು ಮೋದಿ ತಂದರೂ ಗೆಲ್ಲಲು ಆಗಲಿಲ್ಲ.

ಬಿಜೆಪಿ ಸಂಸದ ರಮೇಶ್ ಬಿದುರಿ ಕೂಡ ರಾಜಸ್ತಾನದಲ್ಲಿ ಪ್ರಚೋದಕ ಮಾತಾಡಿದರು. ಬಿಜೆಪಿ ಗೆದ್ದರೆ ಭಾರತದಲ್ಲಿ ಪಟಾಕಿ  ಸಿಡಿಯುತ್ತದೆ, ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನದಲ್ಲಿ ಪಟಾಕಿ ಸಿಡಿಯುತ್ತದೆ ಎಂದರು. ಹೊಸ ಸಂಸತ್ತಿನಲ್ಲಿ ಇದೇ ರಮೇಶ್ ಬಿದುರಿ ಸಂಸದ ಡ್ಯಾನಿಶ್ ಅಲಿಯವರನ್ನು ಭಯೋತ್ಪಾದಕ, ತಲೆಹಿಡುಕ ಎಂದಿದ್ದರು. ಬಿಜೆಪಿ ಈ ವ್ಯಕ್ತಿಗೇ ರಾಜಸ್ತಾನದ ಚುನಾವಣಾ ಉಸ್ತುವಾರಿ ವಹಿಸಿಕೊಟ್ಟಿತು. ಅಂದರೆ ಬಿಜೆಪಿಯ ಆಸ್ಥಾನದಲ್ಲಿ ಇನ್ನೊಬ್ಬರ ಮೇಲೆ ದಾಳಿ ಮಾಡುವವರೇ ಹೀರೋಗಳು ಎಂದರ್ಥ.

ರಾಜಸ್ತಾನದ ಚುನಾವಣಾ ಭಾಷಣದಲ್ಲಿ ಬಿಜೆಪಿಯನ್ನು ಎತ್ತಿಕೊಂಡು ಪ್ರಿಯಾಂಕ ಗಾಂಧಿ ಹೇಳಿದ್ದು ಹೀಗೆ: ಯಾವುದೇ ಧರ್ಮ ಮನುಷ್ಯರನ್ನು ಕಡಿಯಲು ಕೊಲ್ಲಲು ಹೇಳುವುದಿಲ್ಲ. ಇತರರಿಗೆ ಸಹಾಯ ಮಾಡು ಎನ್ನುತ್ತದೆ. ಚುನಾವಣೆಯ ಸಮಯದಲ್ಲಿ ಧರ್ಮದ ಮಾತು ಹೇಳುವುದು ಯಾಕೆ ಗೊತ್ತಾ? ಧರ್ಮ ಮತ್ತು ಜಾತಿಯನ್ನು ವೋಟಿಗಾಗಿ ಬಳಸುತ್ತಾರೆ. ನೀವು ಇದಕ್ಕೆ ಮರಳಾದರೆ ಇನ್ನೂ ಐದು ವರ್ಷ ನರಳುತ್ತೀರಿ… ಧರ್ಮದ ಆಧಾರದಲ್ಲಿ ವೋಟು ಸಿಗುವುದಾದರೆ ಅಭಿವೃದ್ಧಿ ಯಾಕೆ ಮಾಡಬೇಕು? ಸುಮ್ಮನೆ ಅವರಿಗೆ  ವೋಟು ಸಿಗುತ್ತದೆ…

ಬಿಜೆಪಿಯ ಹಿಂದುತ್ವವಾದದ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಚುನಾವಣೆ ನಡೆದ ಐದು ರಾಜ್ಯಗಳಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್  ಗಾಂಧಿ ಮಾತ್ರವಲ್ಲ ಕಾಂಗ್ರೆಸ್ಸಿನ ಪ್ರತಿಯೊಬ್ಬ ನಾಯಕರು ಯಶಸ್ವಿಯಾಗಿದ್ದಾರೆ. ಹೀಗಾಗಿ  ಬಿಜೆಪಿಯವರಿಗೆ ಉತ್ತರಿಸುವುದು ಕಷ್ಟ  ಆಗುತ್ತಿದೆ. ಹಾಗೆಯೇ ಮುನಿಸಿಕೊಂಡಿದ್ದ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್‌ರನ್ನು ರಾಜಿ ಮಾಡಿಸುವಲ್ಲಿ ಪ್ರಿಯಾಂಕಾ ಮತ್ತು  ರಾಹುಲ್ ಯಶಸ್ವಿಯಾದದ್ದು ರಾಜಸ್ತಾನದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್.

ಇನ್ನೊಂದು ಕಡೆ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಒಬಿಸಿಗಳಿಗಾದ ಮೋಸವನ್ನು ಎತ್ತಿ ಹಿಡಿಯುತ್ತಿದ್ದಾರೆ. ಅದರಲ್ಲೂ ಕೊರೋನ ಸಂದರ್ಭದಲ್ಲಿ ತಟ್ಟೆ ಬಡಿಯಲು ಹೇಳಿ ಮೋದಿ ಜನರನ್ನು ಮೂರ್ಖ ಮಾಡಿದ್ದೆಂದು ರಾಹುಲ್ ಗಾಂಧಿ ಜನರ ಮುಂದೆ ಹೇಳಿದ್ದಾರೆ. ಪ್ರಧಾನಿ ಜನರನ್ನು ತಪ್ಪುದಾರಿಗೆಳೆದದ್ದು ಮಾತ್ರವಲ್ಲ ಅದಾನಿಯಂತಹ ಉದ್ಯಮಿಗಳನ್ನು ಮಾತ್ರ ಮೋದಿ ಬೆಳೆಸಿದ್ದನ್ನು ಅರ್ಥವಾಗುವ ಭಾಷೆಯಲ್ಲಿ ಜನರ ಮುಂದಿಟ್ಟಿದ್ದಾರೆ.

ನಿಜವಾಗಿ, ಪ್ರಧಾನಿಯ ಫಾಸಿ ಕೊಡುವ ಮಾತು ತೀರ ಅಪಾಯಕಾರಿಯಾದುದು. ಈ ಆಕ್ರಮಣಾಶೀಲತೆ ಖಂಡನಾರ್ಹವಾದುದು.  ಬಿಜೆಪಿಯವರು ಭಾಷೆ ಹಿಡಿತದಲ್ಲಿಟ್ಟುಕೊಳ್ಳಬೇಕು. ರಾಜಕಾರಣಿಗಳ ದ್ವೇಷ ಪ್ರಚಾರದ ವಿರುದ್ಧ ಕ್ರಮ ಜರಗಿಸಬೇಕೆಂದು ಸುಪ್ರೀಂ ಕೋರ್ಟು ಚುನಾವಣಾ ಆಯೋಗಕ್ಕೆ ಹೇಳಿಯೂ ಅದು ಕೇವಲ ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸಿದೆ.

ವಿಷಯ ಬದಲಿಸೋಣ:
ಈಗ ಮಣಿಪುರದ ಸ್ಥಿತಿ ಬೇರೆಯೇ ಆಗಿದೆ. ಕೇಂದ್ರ ಮತ್ತು ರಾಜ್ಯದ ಸರಕಾರದ ಮುಂದೆ ಕುಕಿ-ಝೊ ವಿಭಾಗ ತಮ್ಮ ಆಧಿಪತ್ಯದ ಪ್ರದೇಶದಲ್ಲಿ ಸ್ವಯಂ ಆಡಳಿತವನ್ನು ಘೋಷಿಸಿ ದೊಡ್ಡ ಸವಾಲಾಗಿ ನಿಂತಿದೆ. ಹೌದು ಆರು ತಿಂಗಳಿನಿಂದ ಅಲ್ಲಿ ರಕ್ತರಂಜಿತ ಅಧ್ಯಾಯ ನಡೆಯುತ್ತಿದೆ. ಮಣಿಪುರ ಉರಿದರೂ ಪ್ರಧಾನಿ ಮೋದಿ ಒಮ್ಮೆಯೂ ಅಲ್ಲಿಗೆ ಭೇಟಿ ನೀಡಿಲ್ಲ. ಕೋಮುದ್ವೇಷವು ಮಣಿಪುರವನ್ನು ಎರಡು  ಭಾಗವಾಗಿ ವಿಭಜಿಸಲ್ಪಟ್ಟದ್ದನ್ನು ರಾಹುಲ್ ಗಾಂಧಿ ಅಲ್ಲಿಗೆ ಭೇಟಿಕೊಟ್ಟು ಬಂದು ಸಂಸತ್ತಿನಲ್ಲಿ ವಿವರಿಸಿದ್ದರು. ಆದರೆ ಮೋದಿ ಈವರೆಗೂ ಹೋಗಿಲ್ಲ. ಇಬ್ಬರು ಮಹಿಳೆಯರನ್ನು ನಗ್ನವಾಗಿ ನಡೆದಾಡಿಸಿದ ವೀಡಿಯೋ ಹೊರ ಬಂದಾಗ ಮಾತಾಡಿದ್ದು ಬಿಟ್ಟರೆ ಮೋದಿ ಮಾತಾಡಿಯೇ ಇಲ್ಲ. ಇಂತಹ ಮೋದಿ ವಿಪಕ್ಷಕ್ಕೆ ಫಾಸಿ ಕೊಡುವ ಮಾತುಗಳನ್ನು ಚುನಾವಣೆ ಇರುವಲ್ಲಿ ಹೋಗಿ ಘೋಷಿಸುತ್ತಾರೆ.

ಮಣಿಪುರ ರಾಜ್ಯದಲ್ಲಿ ಶೇ. 40ರಷ್ಟಿರುವ ಕುಕಿ-ಝೋಗಳು ಹೆಚ್ಚಾಗಿರುವ ಪ್ರದೇಶಗಳಾದ ತೆನ್‌ಗುನುಪಾಲ್. ಕಾಂಗ್‌ಪೊಪಿ, ಚುರಾ  ಚಂದ್‌ಪುರ ಜಿಲ್ಲೆಯಲ್ಲಿ ಅವರು ಸ್ವಯಮಾಡಳಿತ ಘೋಷಿಸಿದ್ದಾರೆ. ಇಲ್ಲಿಗೆ ಅವರದ್ದೇ ಮುಖ್ಯಮಂತ್ರಿ ಮತ್ತು ಅಧಿಕಾರಿಗಳ ಕೂಟ ಇರಲಿದೆ. ಪ್ರಮುಖ ಆದಿವಾಸಿ ವಿಭಾಗವಾದ ಇಂಡಿಜನ್ಸ್ ಟ್ರೈಂಬಲ್ ಲೀಡರ್ಸ್ ಫಾರಂ (ಐಟಿಎಲ್‌ಎಫ್) ಸ್ವಯಮಾಧಿಕಾರವನ್ನು  ಘೋಷಿಸಿದೆ. ಕೇಂದ್ರ ಸರಕಾರದ ನೀತಿಯಿಂದಾಗಿ ಇಂಫಾಲ ಮುಂತಾದಲ್ಲಿಂದ ಓಡಿಸಲ್ಪಟ್ಟು ವಂಶಹತ್ಯೆಗೆ ಗುರಿಯಾದ ಈ ಕುಕಿಗಳಿಗೆ  ಬೇರೆ ದಾರಿ ಇಲ್ಲ ಎಂದು ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿ ತೊಂಬಿಂಗ್ ಹೇಳಿದ್ದಾರೆ.

ಈ ಹಿಂದೆ ಹತ್ತು ಕುಕಿ ಶಾಸಕರು ಕುಕಿಗಳಿಗೆ ಸ್ವಯಮಾಡಳಿತ ಬೇಕು ಎಂದಿದ್ದರು. ಇವರಲ್ಲಿ ಬಿಜೆಪಿಯವರೇ ಅಧಿಕ. ಮಣಿಪುರ  ವಿಭಜಿಸಲ್ಪಟ್ಟಿದೆ ಎಂದು ಸಂಸತ್ತಿನಲ್ಲಿ ರಾಹುಲ್ ಹೇಳಿದ್ದರಲ್ಲ, ಅದು ಇದುವೇ. ಆಗ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿ ಸುಳ್ಳು  ಹೇಳುತ್ತಿದ್ದಾರೆ ಎಂದು ಉರಿದೆದ್ದಿದ್ದರು.

ಇದೇವೇಳೆ, ಉಡುಪಿ ನೇಜಾರಿ ನಲ್ಲಿ ಒಂದೇ ಮನೆಯ ನಾಲ್ವರನ್ನು ಪ್ರವೀಣ್ ಎಂಬಾತ ಹತ್ಯೆ ನಡೆಸಿದ್ದಾರೆ. ಆದರೂ ಕರಾವಳಿಯ ಮುಸ್ಲಿಂ ಸಮುದಾಯ ಶಾಂತಿ ಕಾಪಾಡಿ ಸಹನೆ ವಹಿಸಿತು. ಒಂದುವೇಳೆ ಈ ಘಟನೆ ಉಲ್ಟಾ ಆಗಿರುತ್ತಿದ್ದರೆ ಬಿಜೆಪಿಯವರು ಇಡೀ  ಕರಾವಳಿಯನ್ನೇ ಉರಿಸಿ ಹಾಕುತ್ತಿದ್ದರು.

ಇಂಟರ್ ಪಾರ್ಲಿಮೆಂಟರಿ ಯೂನಿಯನ್ ಸಂಗ್ರಹಿಸಿದ ಲೆಕ್ಕದ ಪ್ರಕಾರ ಹದಿನೇಳನೆ ಲೋಕಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ.  14.4 ಮಾತ್ರ ಇದೆ. ಲೋಕಸಭೆಯಲ್ಲಿ 78 ಮಹಿಳೆಯರಿದ್ದಾರೆ. ರಾಜ್ಯ ಸಭೆಯಲ್ಲಿ 24. ಇವೆಲ್ಲ ಇಟ್ಟುಕೊಂಡು ಮೋದಿ ಸರಕಾರ ವಿಶೇಷ ಅಧಿವೇಶನ ಕರೆದು ಶೇ.33 ಮೀಸಲಾತಿ ಜಾರಿಯ ಮಸೂದೆ ಪಾಸು ಮಾಡಿತು. ಆದರೆ ಇದು ಜನಗಣತಿ ಆದ ಮೇಲೆ  ಜಾರಿಗೆ ಬರುವುದು ಎಂದೂ ಹೇಳಿತು. ಪ್ರಜಾಪ್ರಭುತ್ವದಲ್ಲಿ ಇಂತಹ ಮೋಸ ಬೇರೆ ಉಂಟಾ? ಯಾಕೆಂದರೆ ಸಂಸತ್ತಿನಲ್ಲಿ ಪಾಸಾಗಿಯೂ ಅದು ಜಾರಿಗೆ ಬರದಂತೆ ನೋಡಿಕೊಳ್ಳಲಾಗಿದೆ.

ವಿಷಯಕ್ಕೆ ಬರೋಣ:
ಮೋದಿ ಎಷ್ಟೇ ತಾಕತ್ತು ಹಾಕಲಿ, ಚುನಾವಣೆ ನಡೆಯುವ ಐದು ರಾಜ್ಯ ಗಳಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂಬ ವಿದ್ಯಮಾನಗಳು  ನಡೆಯುತ್ತಿವೆ. ಹಿಂದೂ ಮುಸ್ಲಿಂ ಮಾಡಲು ಈ ಸಲ ಬಿಜೆಪಿಗೆ ಸಾಧ್ಯವಾಗಿಲ್ಲ. ಅಲ್ಲದೇ, ಪಠಾಣ್, ಪಾಸ್‌ಮಂದ್ ಮುಸ್ಲಿಮರು ಕೂಡ  ಈ ಸಲ ಕಾಂಗ್ರೆಸ್‌ಗೆ ಒಲವು ತೋರಿಸಿದ್ದು ಸ್ಪಷ್ಟವಾಗಿದೆ. ಹೀಗಾಗಿ ಸೋಲಿನ ಹತಾಶೆಯಿಂದ ಕಾಂಗ್ರೆಸ್ಸಿಗೆ ಫಾಸಿ ಕೊಡುವುದಕ್ಕೆ ಮೋದಿ ಹೇಳಿರಬಹುದಾ?

ಇನ್ನೊಂದು ಕುತೂಹಲ ಅಂದರೆ ಅಜ್ಮೀರಿನಲ್ಲಿ ವಿಶ್ವ ಹಿಂದೂ ಪರಿಷತ್ ಘರ್ ವಾಪಸ್ ಮಾಡಿಸಿದ ಅಭಿಷೇಕ್ ಸಿಂಗ್ ಚೌಹಾನ್‌ಗೆ (ಹಿಂದಿನ ಹೆಸರು ಅಬ್ದುಲ್ಲ ಚೌಹಾನ್) ಅಜ್ಮೀರಿನ ಮಸೂದಾ ಕ್ಷೇತ್ರದ ಟಿಕೆಟು ಕೊಟ್ಟ ಬಿಜೆಪಿ ಇದೀಗ ಹಿಂಪಡೆದಿದೆ. ಅಬ್ದುಲ್ಲ ಚೌಹಾನ್ ಹಿಂದೂ ಧರ್ಮಕ್ಕೆ ಘರ್‌ವಾಪಸಿ ಆಗಿಯೂ ಅವರನ್ನು ಹಿಂದೂ ಎಂದು ಒಪ್ಪಲು ಬಿಜೆಪಿ ಸಿದ್ಧವಾಗಿಲ್ಲ.

ಇವತ್ತು ಖಂಡಿತ ಬಿಜೆಪಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಹೆದರುತ್ತಿದೆ. ಖುದ್ದು ಪ್ರಧಾನಿ ರಾಹುಲ್ ಗಾಂಧಿಯನ್ನು  ಕಾಂಗ್ರೆಸ್ಸಿನ ಜ್ಞಾನಿ ಎಂದು ಅಣಕಿಸಿದರು. ಇದನ್ನೇ ನೆಟ್ಟಿಗರು ಹಿಂದೆ ಪಪ್ಪು ಎಂದ ವ್ಯಕ್ತಿಯನ್ನೇ ಇಂದು ಜ್ಞಾನಿ ಎಂದು ಮೋದಿ ಹೇಳುತ್ತಿದ್ದಾರೆ ಎಂದು ಟ್ರಾಲ್ ಮಾಡಿದರು.

ಜನ ಬುದ್ಧಿವಂತರು. ಬಿಜೆಪಿಯ ದುರಾಡಳಿತ, ತಪ್ಪು ನೀತಿಗಳಿಂದ ಬಸವಳಿದ ಜನರಿಗೆ ಇಂತಹ ಪ್ರಚೋದಕ ಮಾತುಗಳು ಪ್ರಯೋಜನವಿಲ್ಲದ್ದು ಎಂದು ಎಂದೋ ಅರ್ಥವಾಗಿದೆ. ಈ ಹಿಂದಿನ ಕರ್ನಾಟಕ, ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಜನ ಬಿಜೆಪಿಯನ್ನು  ಅಧಿಕಾರದಿಂದ ಕಿತ್ತು ಹಾಕಿ ಪ್ರತಿರೋಧ ತೋರಿಸಿದ್ದಾಗಿದೆ. ಇನ್ನು ಐದು ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಕಾಯೋಣ.