ದ.ಕ‌ ಜಿಲ್ಲೆಯಲ್ಲಿ ನಾಳೆಯಿಂದ ‘ಟಫ್ ರೂಲ್ಸ್’ ಜಾರಿಗೊಳಿಸಲು ಜಿಲ್ಲಾಡಳಿತ ಚಿಂತನೆ

0
509

ಸನ್ಮಾರ್ಗ ವಾರ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ‘ಟಫ್ ರೂಲ್ಸ್ ‘ ಜಾರಿಗೊಳಿಸಲು ಜಿಲ್ಲಾಡಳಿತ ಚಿಂತನೆ ನಡೆಸಿರುವ ಬಗ್ಗೆ ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಮೇ 7 ರಿಂದ ಬೆಳಗ್ಗೆ 6 ರಿಂದ 9 ರವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, 10 ಗಂಟೆ ಒಳಗೆ ವ್ಯಾಪಾರಸ್ಥರು ಹಾಗೂ ಖರೀದಿದಾರರು ಮನೆ ಸೇರಬೇಕು ಎಂದು ಸೂಚಿಸಬೇಕೆ ಎನ್ನುವ ಸಲಹೆ ಸಭೆಯಲ್ಲಿ ವ್ಯಕ್ತವಾಗಿದ್ದು, ಅಂತಿಮ ತೀರ್ಮಾನ ಸಂಜೆಯೊಳಗೆ ಪ್ರಕಟವಾಗುವ ನಿರೀಕ್ಷೆಯಿದೆ.

ಮೆಡಿಕಲ್ ಗೆ ಹೋಗುವವರು ತಮ್ಮ ಹತ್ತಿರದ ಮೆಡಿಕಲ್ ಗಷ್ಟೆ ಹೋಗಬೇಕು‌. ವಾಹನಗಳಲ್ಲಿ ಅನಗತ್ಯವಾಗಿ ಬೇರೆ ಕಡೆ ಹೋದರೆ ವಾಹನ ಸೀಜ್ ಮಾಡುವ ಬಗ್ಗೆಯೂ ಅಭಿಪ್ರಾಯ ವ್ಯಕ್ತವಾಗಿದ್ದು, ಜನರ ಅನಗತ್ಯ ಓಡಾಟಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆಯೂ ಚಿಂತಿಸಲಾಗಿದೆ ಎಂದು ತಿಳಿದು ಬಂದಿದೆ.

ಮೇ.15 ಬಳಿಕ ಯಾವ ಕಾರ್ಯಕ್ರಮಗಳಿಗೂ ಅವಕಾಶ ನಿರಾಕರಿಸಲಾಗಿದ್ದು, ಮದುವೆ, ಗೃಹಪ್ರವೇಶ, ಹುಟ್ಟಿದ ಹಬ್ಬ ಸೇರಿದಂತೆ ಯಾವ ಕಾರ್ಯಕ್ರಮ ಮಾಡುವಂತಿಲ್ಲ. ಈಗಾಗಲೇ ಮೇ.15 ರ ಮೇಲೆ ಅನುಮತಿ ನೀಡಿರುವ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲು ಚಿಂತಿಸಲಾಗಿದೆ. ಕಾರ್ಯಕ್ರಮ ಇದ್ದವರ ಮನವೊಲಿಸಿ ಅದನ್ನು ಮುಂದಕ್ಕೆ ಹಾಕಿಸಲು ತಿಳಿಸುವ ಬಗ್ಗೆಯೂ ಕ್ರಮ ಕೈಗೊಳ್ಳುವ ಬಗ್ಗೆ ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.