ಪಡಿತರ ಚೀಟಿಯಲ್ಲಿ ದುರ್ಲಾಭ ಪಡೆಯುವವರ ವಿರುದ್ದ ಕಾನೂನು ಕ್ರಮ: ದ.ಕ ಜಿಲ್ಲಾಧಿಕಾರಿ

0
445

ಸನ್ಮಾರ್ಗ ವಾರ್ತೆ

ಮಂಗಳೂರು: ಪಡಿತರ ಚೀಟಿಯಲ್ಲಿ ಸೇರ್ಪಡೆಗೊಂಡಿರುವ ಸದಸ್ಯರುಗಳಲ್ಲಿ ಮರಣ ಹೊಂದಿರುವವರ ಮತ್ತು ಕುಟುಂಬದಿಂದ ಹೊರಗೆ ಹೋದವರ ಹೆಸರನ್ನು ಇರಿಸಿಕೊಂಡಿರುವವರು ಅಂತಹ ಹೆಸರುಗಳನ್ನು ಕೂಡಲೇ ಪಡಿತರ ಚೀಟಿಯಿಂದ ತೆಗೆದುಹಾಕಬೇಕು. ಒಂದೇ ಮನೆಯಲ್ಲಿರುವವರು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದ್ದಲ್ಲಿ ಅದು ಅಪರಾಧವಾಗಿದ್ದು, ಕೂಡಲೇ ಒಂದೇ ಪಡಿತರ ಚೀಟಿಗೆ ಹೆಸರುಗಳನ್ನು ವಿಲೀನಗೊಳಿಸಬೇಕು.

ಪಡಿತರ ಚೀಟಿಯಲ್ಲಿ ಮೃತರ ಹಾಗೂ ಕುಟುಂಬದಿಂದ ಹೊರ ಹೋದವರ ಹೆಸರುಗಳನ್ನು ರದ್ದುಪಡಿಸಲು ಮತ್ತು ಒಂದೇ ಕುಟುಂಬದವರನ್ನು ವಿಲೀನಗೊಳಿಸಲು ಕೊನೆಯ ಅವಕಾಶವನ್ನು ನೀಡಲಾಗಿದ್ದು, ತ್ವರಿತವಾಗಿ ಈ ತಿಂಗಳಾತ್ಯದೊಳಗೆ ಅಗತ್ಯ ತಿದ್ದುಪಡಿ ಮಾಡಿಸಬೇಕು.
ಪಡಿತರ ಚೀಟಿಗಳಲ್ಲಿ ಸುಳ್ಳು ಮಾಹಿತಿ ನೀಡಿ ದುರ್ಲಾಭ ಪಡೆಯುತ್ತಿರುವವರ ಪಡಿತರ ಚೀಟಿಯನ್ನು ಅನರ್ಹಗೊಳಿಸಿ ದಂಡ ವಸೂಲಿ ಮಾಡಲಾಗುವುದಲ್ಲದೇ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.