✍️ ಏ.ಕೆ. ಕುಕ್ಕಿಲ
ಸಿದ್ದರಾಮಯ್ಯ
ಡಿಕೆಶಿ
ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಅವಕಾಶ ರಾಜ್ಯ ಬಿಜೆಪಿಗೆ ಸಿಕ್ಕರೆ ಅದು ಯಾರನ್ನು ಆಯ್ಕೆ ಮಾಡಬಹುದು? ಖಂಡಿತ ಸಿದ್ದರಾಮಯ್ಯ. ಯಾಕೆಂದರೆ, ಬಿಜೆಪಿ ರಾಜಕೀಯಕ್ಕೆ ಅತೀ ಹೆಚ್ಚು ಅಪಾಯ ಇರುವುದು ಡಿಕೆಶಿಯಿಂದಲೇ ಹೊರತು ಸಿದ್ದರಾಮಯ್ಯರಿಂದಲ್ಲ. ಆದ್ದರಿಂದಲೇ, ಡಿಕೆಶಿ ಮುಖ್ಯಮಂತ್ರಿಯಾಗುವ ಸೂಚನೆ ಸಿಕ್ಕ ಕೂಡಲೇ ಬಿಜೆಪಿಯೊಳಗೆ ಸಂಚಲನ ಸೃಷ್ಟಿಯಾಗಿದೆ. ರಾಜ್ಯಾಧ್ಯಕ್ಷ್ಯ ವಿಜಯೇಂದ್ರರನ್ನು ಬದಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಬಿಜೆಪಿಯ ಬಗ್ಗೆ ಒಲವು ಇರುವ ಜನಸಾಮಾನ್ಯರಲ್ಲೂ ನಿಷ್ಠೆ ಬದಲಾವಣೆಯ ಸೂಚನೆಗಳು ಸಿಗುತ್ತಿವೆ. ಬಿಜೆಪಿ ಪರ ಒಲವಿರುವ ದೊಡ್ಡದೊಂದು ಗುಂಪು ಸೋಶಿಯಲ್ ಮೀಡಿಯಾದಲ್ಲಿ ಡಿಕೆಶಿಗೆ ಬೆಂಬಲ ಸಾರಿ ಬಹಿರಂಗ ಅಭಿಪ್ರಾಯ ಹಂಚಿಕೊಂಡಿರುವುದೇ ಇದಕ್ಕೆ ಸಾಕ್ಷಿ. ನಿಜವಾಗಿ,
ಬಿಜೆಪಿಯಲ್ಲಿ ಡಿಕೆಶಿ ಭಯ ಹುಟ್ಟಿಕೊಳ್ಳುವುದಕ್ಕೆ ಮೂರು ಕಾರಣಗಳಿವೆ.
- ಧರ್ಮನಿಷ್ಠೆ
- ಎದೆಗಾರಿಕೆ
- ಪಕ್ಷನಿಷ್ಠೆ
ಸಿದ್ದರಾಮಯ್ಯರಿಗೆ ಹೋಲಿಸಿದರೆ ತೀರಾ ವಿರುದ್ಧ ದಿಕ್ಕಿನಲ್ಲಿರುವವರು ಡಿಕೆಶಿ. ಸಿದ್ದರಾಮಯ್ಯರಿಗೆ ಧರ್ಮ ಎಂಬುದು ಮುಂಚೂಣಿ ಸಂಗತಿ ಆಗಿರಲಿಲ್ಲ. ಸ್ವಾಮೀಜಿಗಳನ್ನಾಗಲಿ, ಮೌಲಾನಗಳನ್ನಾಗಲಿ ಅಷ್ಟಾಗಿ ಹಚ್ಚಿಕೊಂಡೂ ಇರಲಿಲ್ಲ. ಮಂದಿರಗಳಿಗೆ ನಿಯತ್ತಾಗಿ ಭೇಟಿ ಕೊಡುತ್ತಲೂ ಇರಲಿಲ್ಲ. ಅವರು ಆಸ್ತಿಕ ಮತ್ತು ನಾಸ್ತಿಕ- ಈ ಎರಡರ ಸಂಗದಂತೆ ಕಾಣಿಸುತ್ತಿದ್ದರು. ತನಗೆ ಸರಿ ಕಂಡಂತೆ ಮಾತಾಡುವುದು ಸಿದ್ದರಾಮಯ್ಯ ಶೈಲಿ. ಫಿಲ್ಟರ್ ಇಲ್ಲದೇ ಮಾತಾಡುವುದನ್ನು ಅವರು ರೂಢಿಸಿ ಕೊಂಡಿದ್ದರು. ಆದ್ದರಿಂದಲೇ,
ವಿವಾದಗಳೂ ಹುಟ್ಟಿಕೊಳ್ಳುತ್ತಿದ್ದವು. ಬಿಜೆಪಿಗೆ ಇವರ ಈ ಫಿಲ್ಟರ್ ರಹಿತ ವರ್ತನೆ ಮತ್ತು ಬಿಡು ಬೀಸು ಹೇಳಿಕೆಗಳು ಸಾಕಷ್ಟು ಲಾಭವನ್ನು ತಂದುಕೊಟ್ಟದ್ದೂ ಇದೆ. ಅವರು ಏಕವಚನವನ್ನು ಬಳಸುತ್ತಾರೆ. ಒರಟನಂತೆಯೂ ವರ್ತಿಸುತ್ತಾರೆ. ‘ಮೀನು ತಿಂದು ಮಂದಿರ ಪ್ರವೇಶಿಸಿದರೆ ಏನು ತಪ್ಪು..’ ಎಂದು ಸಿದ್ದರಾಮಯ್ಯ ಕೇಳಬಹುದೇ ಹೊರತು ಡಿಕೆಶಿ ಕೇಳಲ್ಲ. ‘ಕೇಸರಿ ಶಾಲನ್ನು ಹೊದೆಯಲು ಬಂದವರನ್ನು ತಡೆಯುವ’ ಸಾಹಸವನ್ನು ಸಿದ್ದರಾಮಯ್ಯರಿಂದಷ್ಟೇ ಮಾಡಲು ಸಾಧ್ಯ. ಡಿಕೆಶಿ ಹಾಗೆ ಎಂದೂ ಮಾಡಲ್ಲ. ಧಾರ್ಮಿಕತೆ ಮತ್ತು ಸೆಕ್ಯುಲರ್ ಸಿದ್ಧಾಂತ- ಈ ಎರಡರ ಬಗ್ಗೆ ಈ ಇಬ್ಬರೂ ನಾಯಕರಲ್ಲಿ ವೈಚಾರಿಕ ವ್ಯತ್ಯಾಸ ಇದೆ. ಈ ಎರಡನ್ನೂ ಈ ಇಬ್ಬರೂ ನಾಯಕರು ಭಿನ್ನಭಿನ್ನವಾಗಿಯೇ ನೋಡುತ್ತಾ ಬಂದಿದ್ದಾರೆ. ಸಿದ್ದರಾಮಯ್ಯರಿಗಿಂತ ಭಿನ್ನವಾಗಿ ಅಳೆದೂ ತೂಗಿ ಮಾತಾಡುವುದನ್ನು ಡಿಕೆಶಿ ರೂಢಿಸಿಕೊಂಡಿದ್ದಾರೆ. ವಿವಾದವಾಗ ಬಹುದಾದ ಯಾವುದೇ ಮಾತುಗಳಿಗೂ ಅವರು ಅವಕಾಶ ಕೊಡುವುದೇ ಇಲ್ಲ. ಆದ್ದರಿಂದ ಸಿದ್ದರಾಮಯ್ಯರನ್ನು ಅವರ ಮಾತುಗಳ ಕಾರಣಕ್ಕಾಗಿ ಕಟಕಟೆಯಲ್ಲಿ ನಿಲ್ಲಿಸಿದಂತೆ ಡಿಕೆಶಿಯನ್ನು ನಿಲ್ಲಿಸಲು ಬಿಜೆಪಿಗೆ ಸಾಧ್ಯವಿಲ್ಲ. ಇನ್ನೊಂದು,
ಡಿಕೆಶಿಯ ಧರ್ಮನಿಷ್ಠೆ. ಡಿಕೆಶಿಯಷ್ಟು ನಿಷ್ಠಾವಂತ ಧರ್ಮಾನುಯಾಯಿ ಬಿಜೆಪಿಯಲ್ಲಿ ಸದ್ಯ ಯಾರೂ ಇಲ್ಲ ಎಂದೇ ಹೇಳಬಹುದು. ಪ್ರಮಾಣ ವಚನ ಸಮಾರಂಭಕ್ಕೆ 55 ಸ್ವಾಮೀಜಿಗಳನ್ನು ಡಿಕೆಶಿ ಕರೆತಂದಿದ್ದರು. ಸಿದ್ದರಾಮಯ್ಯ ಹೀಗೆ ಮಾಡಿದ್ದೇ ಇಲ್ಲ. ಇಷ್ಟೇ ಅಲ್ಲ, ಪ್ರಮಾಣ ವಚನಕ್ಕಿಂತ ಮೊದಲು ಅವರು ಅಪ್ಪಟ ಧಾರ್ಮಿಕ ವ್ಯಕ್ತಿಯಾಗಿಯೇ ನಡೆದುಕೊಂಡರು. ಸಾಷ್ಟಾಂಗ ನಮಸ್ಕಾರದೊಂದಿಗೆ ಅವರು ಮುಖ್ಯಮಂತ್ರಿ ಕಚೇರಿ ಪ್ರವೇಶಿಸಿದರು. ಅದಕ್ಕಿಂತ ಮೊದಲು ಪೂಜೆಯಲ್ಲಿ ಭಾಗಿಯಾದರು. ಸ್ವಾಮೀಜಿಗಳನ್ನು ಅಕ್ಕಪಕ್ಕ ಇಟ್ಟುಕೊಂಡೇ ಮತ್ತು ಮಂದಿರಗಳಿಗೆ ಭೇಟಿ ಕೊಟ್ಟುಕೊಂಡೇ ಬದುಕುತ್ತಿರುವವರು ಡಿಕೆಶಿ.
ಬಿಜೆಪಿಗೆ ಸವಾಲಾಗಿರುವುದೇ ಡಿಕೆಶಿಯ ಈ ಧರ್ಮಭಕ್ತಿ.
ಬಿಜೆಪಿ ಧರ್ಮ ರಾಜಕಾರಣವನ್ನೇ ಉಸಿರಾಗಿಸಿ ಬದುಕುತ್ತಿರುವ ಪಕ್ಷ. ಅದರ ರಾಜಕೀಯ ಯಶಸ್ಸು ಎದುರಾಳಿಯ ಧರ್ಮವನ್ನೇ ಅವಲಂಬಿಸಿಕೊಂಡಿದೆ. ಧರ್ಮದ ವಿರುದ್ಧ ಎದುರಾಳಿ ನಡಕೊಳ್ಳುವುದನ್ನು ಅದು ಮನಸಾರೆ ಬಯಸುತ್ತದೆ. ಸಿದ್ದರಾಮಯ್ಯರನ್ನು ಬಿಜೆಪಿ ಇಷ್ಟಪಡುವುದಕ್ಕೆ ಕಾರಣವೇ ಇದು. 2028ರ ವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಬೇಕು ಎಂಬುದು ಬಿಜೆಪಿಯ ಆಂತರಿಕ ಬಯಕೆಯಾಗಿತ್ತು. ಅವರನ್ನು ಹಿಂದೂ ವಿರೋಧಿಯಂತೆ ಬಿಂಬಿಸುವುದು ಮತ್ತು ಮುಸ್ಲಿಮ್ ಓಲೈಕೆಯ ಸಾಂಪ್ರದಾಯಿಕ ಸ್ಲೋಗನ್ನನ್ನು ಮುಂಚೂಣಿಗೆ ತರುವುದು ಬಿಜೆಪಿಯ ಸ್ಟ್ರಾಟಜಿಯೂ ಆಗಿತ್ತು.
ಅನ್ನ ಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಶಾದಿ ಭಾಗ್ಯ, ಅನಿಲ ಭಾಗ್ಯ ಇತ್ಯಾದಿ ಅದ್ಭುತ ಜನಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿರುವುದರ ಹೊರತಾಗಿಯೂ 2019ರ ಅಸೆಂಬ್ಲಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರಕಾರ ಪತನಗೊಂಡಿದ್ದರೆ ಅದರ ಹಿಂದೆ ಬಿಜೆಪಿಯ ಈ ಸ್ಟ್ರಾಟಜಿಯೇ ಕೆಲಸ ಮಾಡಿತ್ತು. ‘27 ಹಿಂದೂಗಳನ್ನು ಹತ್ಯೆ ಮಾಡಿದ ಸಿದ್ದರಾಮಯ್ಯ’ ಎಂಬ ಪ್ರಚಾರದೊಂದಿಗೆ ಬಿಜೆಪಿ ಚುನಾವಣೆಯನ್ನು ಎದುರಿಸಿತ್ತು. 2028ರ ಚುನಾವಣೆಗೂ ಬಿಜೆಪಿ ಇಂಥದ್ದೇ ಸ್ಟ್ರಾಟಜಿ ತಯಾರಿಸುವ ಸಾಧ್ಯತೆ ಇತ್ತು. ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಸಿದ್ದರಾಮಯ್ಯರನ್ನೇ ಟಾರ್ಗೆಟ್ ಮಾಡಿ, ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಮತ ಧ್ರುವೀಕರಣ ಮಾಡುವ ಯೋಜನೆದ್ದಾಗಿರಬಹುದಿತ್ತು. ಆದರೆ,
ಡಿಕೆಶಿಯ ಪ್ರವೇಶ ಬಿಜೆಪಿಯ ಈ ಎಲ್ಲ ಯೋಜನೆಯನ್ನು ತಲೆಕೆಳಗೆ ಮಾಡಿದಂತಿದೆ. ಸಿದ್ದರಾಮಯ್ಯರಂತೆ ಡಿಕೆಶಿಯನ್ನು ಹಿಂದೂ ವಿರೋಧಿ ಎಂದು ಹೇಳುವುದಕ್ಕೆ ಆಗುವುದೇ ಇಲ್ಲ. ಅವರು ಬಿಜೆಪಿ ನಾಯಕರಿಗಿಂತಲೂ ನಿಷ್ಠಾವಂತ ಹಿಂದೂ. ಮುಸ್ಲಿಮ್ ಓಲೈಕೆ ಎಂಬ ಪರಂಪರಾಗತ ಸ್ಲೋಗನ್ನೂ ಡಿಕೆಶಿ ಮುಂದೆ ಕೆಲಸ ಮಾಡಲ್ಲ. ಆದ್ದರಿಂದಲೇ ಬಿಜೆಪಿ ಒಳಗೆ ತಳಮಳ ಇದೆ. ಈ ಹಿಂದೆ,
ಕುಂಭಮೇಳದ ಸಮಯದಲ್ಲಿ ಕಾಂಗ್ರೆಸ್ನ ಹೈ ಕಮಾಂಡ್ ಧೋರಣೆ ಒಂದಾಗಿದ್ದರೆ, ಡಿಕೆಶಿಯದ್ದು ಇನ್ನೊಂದಾಗಿತ್ತು. ಕುಂಭಮೇಳದ ಅವ್ಯವಸ್ಥೆಯ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲಿನ ಕಾಲ್ತುಳಿತಕ್ಕೆ ಯೋಗಿ ಆದಿತ್ಯನಾಥ್ರನ್ನು ಹೊಣೆ ಮಾಡಿದ್ದರು. ಕುಂಭಮೇಳವನ್ನು ರಾಜಕೀಯಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿರುವುದರ ಬಗ್ಗೆ ಕಾಂಗ್ರೆಸ್ನಲ್ಲಿ ವ್ಯಾಪಕ ಅಸಮಾಧಾನವಿತ್ತು. ಆದರೆ, ಈ ಯಾವುದನ್ನೂ ಲೆಕ್ಕಿಸದೇ ಡಿಕೆಶಿ ತನ್ನ ಕುಟುಂಬದೊಂದಿಗೆ ನೇರ ಕುಂಭಮೇಳಕ್ಕೆ ಹೋಗಿದ್ದರು. ಗಂಗೆಯಲ್ಲಿ ಮಿಂದೆದ್ದು ಬಂದಿದ್ದರು. ಈ ಕುರಿತಾಗಿನ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಂಚಿಕೆಯಾಗಿತ್ತು. ದುರಂತ ಏನೆಂದರೆ, ರಾಜ್ಯ ಬಿಜೆಪಿ ನಾಯಕರಿಗೆ ಸಂಬಂಧಿಸಿ ಇಂಥದ್ದೊಂದು ಚಿತ್ರವೇ ಇಲ್ಲ.
2019ರಲ್ಲಿ ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯಿತು. ಕಾಂಗ್ರೆಸ್ ಬೆಂಬಲಿತ ಸರಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ನ 10 ಮಂದಿ ಶಾಸಕರು ಮತ್ತು ಸಚಿವರು ರಾಜೀನಾಮೆ ನೀಡಿ ನೇರ ಮುಂಬೈಯ ಹೊಟೇಲ್ನಲ್ಲಿ ಅವಿತುಕೊಂಡರು. ಆಗ ಡಿಕೆಶಿ ನೀರಾವರಿ ಸಚಿವರಾಗಿದ್ದರು. ಅವರು ಹಿಂದು-ಮುಂದು ನೋಡಲಿಲ್ಲ. ನೇರ ಮುಂಬೈಗೆ ತೆರಳಿದರು. ಹೊಟೇಲ್ ಬುಕ್ಕಿಂಗ್ ಮಾಡಿದರು. ಹೊಟೇಲ್ನಲ್ಲಿ ಅವಿತುಕೊಂಡಿದ್ದ ಶಾಸಕರನ್ನು ಬೆಳಗ್ಗೆ ಭೇಟಿಯಾದರು. ಇದೇವೇಳೆ, ತಮ್ಮ ತಂತ್ರ ವಿಫಲಗೊಳ್ಳುತ್ತಿದೆ ಎಂದು ದೃಢವಾದ ಕೂಡಲೇ ಬಿಜೆಪಿ ಹೈಕಮಾಂಡ್ ಮಧ್ಯ ಪ್ರವೇಶಿಸಿತು. ಹೊಟೇಲ್ ಬುಕಿಂಗನ್ನೇ ರದ್ದುಪಡಿಸುವಂತೆ ನೋಡಿಕೊಂಡಿತು. ಡಿಕೆಶಿಗೆ ಹೊಟೇಲ್ ಒಳಗೆ ಹೋಗದಂತೆ ತಡೆ ಹೇರಲಾಯಿತು. ಡಿಕೆಶಿ ಶರಣಾಗಲಿಲ್ಲ. ಅಲ್ಲಿಂದ ಕದಲಲೂ ಇಲ್ಲ. ಹೊಟೇಲ್ ಎದುರುಗಡೆ ಗಂಟೆಗಟ್ಟಲೆ ಪ್ರತಿಭಟನಾರ್ಥ ನಿಂತರು. ಕೊನೆಗೆ ಪೊಲೀಸರೇ ಅವರನ್ನು ತೆರವುಗೊಳಿಸಿದರು. ಇದರ ಬೆನ್ನಿಗೇ,
ಅಕ್ರಮ ಹಣ ವರ್ಗಾವಣೆಯ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ED) 2019ರಲ್ಲಿ ಡಿಕೆಶಿ ಮೇಲೆ ದಾಳಿ ನಡೆಸಿತು. ‘ಬಿಜೆಪಿ ಸೇರುವುದಾದರೆ ಪ್ರಕರಣವನ್ನು ಹಿಂತೆಗೆದುಕೊಳ್ಳುತ್ತೇವೆ’ ಎಂದು ಈಡಿ ಅಧಿಕಾರಿಗಳು ಆಫರ್ ನೀಡಿದರು. ಆದರೆ, ಡಿಕೆಶಿ ಒಪ್ಪಲಿಲ್ಲ. 50 ದಿನಗಳ ಕಾಲ ತಿಹಾರ್ ಜೈಲಲ್ಲಿದ್ದು, ಕೊನೆಗೆ ಜಾಮೀನು ಪಡೆದು ಹೊರ ಬಂದರು. ಮಾತ್ರವಲ್ಲ, ಬಿಜೆಪಿಯನ್ನು ಈ ಹಿಂದಿಗಿಂತಲೂ ತೀವ್ರವಾಗಿ ಪ್ರಶ್ನಿಸತೊಡಗಿದರು. ಇದು ಅವರ ಎದೆಗಾರಿಕೆ ಮತ್ತು ಪಕ್ಷನಿಷ್ಠೆಗೆ ಸಾಕ್ಷ್ಯವನ್ನು ನೀಡುತ್ತದೆ. ಉದ್ಯಮಿಯಾಗಿ ಅವರು ಪಕ್ಷನಿಷ್ಠೆಗಿಂತ ಉದ್ಯಮ ನಿಷ್ಠೆಯನ್ನು ತೋರಿ ಬಿಜೆಪಿ ಸೇರಿಕೊಳ್ಳಬಹುದಿತ್ತು. ಆ ಮೂಲಕ ತನ್ನ ಮೇಲಿನ ಪ್ರಕರಣವನ್ನು ರದ್ದುಪಡಿಸಿಕೊಳ್ಳಬಹುದಿತ್ತು. ಮುಖ್ಯಮಂತ್ರಿಯಾದ ಈ ಸಮಯದಲ್ಲೂ ಅವರ ಮೇಲೆ 19 ಕ್ರಿಮಿನಲ್ ಪ್ರಕರಣಗಳಿವೆ. ಈಡಿ ಮತ್ತು ಐಟಿ ಪ್ರಕರಣಗಳೂ ಇದರಲ್ಲಿ ಸೇರಿವೆ.
ಬಿಜೆಪಿಗೆ ಇನ್ನು ಮುಂದೆ ಇರುವ ಅವಕಾಶ ಏನೆಂದರೆ, ಈ ಪ್ರಕರಣಗಳಿಗೆ ಮರುಜೀವ ಕೊಟ್ಟು ಡಿಕೆಶಿಗೆ ತೊಂದರೆ ಕೊಡುವುದು. ಆದರೆ, ಇದೂ ಸುಲಭ ಅಲ್ಲ. ಒಂದನೆಯದಾಗಿ, ಜೈಲನ್ನು ತೋರಿಸಿ ಡಿಕೆಶಿಯ ಪಕ್ಷನಿಷ್ಠೆಯನ್ನು ಬದಲಿಸಲು ಸಾಧ್ಯವಿಲ್ಲ. ಒಂದುವೇಳೆ, ಪಕ್ಷನಿಷ್ಠೆಗಿಂತ ಪ್ರಕರಣಗಳಿಂದ ಹೊರಬರುವುದೇ ಮುಖ್ಯ ಆಗಿರುತ್ತಿದ್ದರೆ, ಈ ಹಿಂದೆ 2019 ರಲ್ಲಿ ಅವರು ಅದನ್ನು ಮಾಡಬೇಕಿತ್ತು. ಆಗ ಅವರು ಬರೇ ನೀರಾವರಿ ಸಚಿವರಷ್ಟೇ ಆಗಿದ್ದರು. ಆದರೆ, ಈಗ ಮುಖ್ಯಮಂತ್ರಿ. ಆದ್ದರಿಂದ ಅಂಥ ಅವಕಾಶಕ್ಕೆ ಆಸ್ಪದವೇ ಇಲ್ಲ. ಇನ್ನೊಂದು,
ಒಕ್ಕಲಿಗ ಸಮುದಾಯ. ಈಗ ಡಿಕೆಶಿಯ ಮೇಲೆ ಈಡಿ, ಐಟಿ ದಾಳಿ ನಡೆಸುವುದೆಂದರೆ ಅಥವಾ ಈ ಹಿಂದಿನ ಪ್ರಕರಣಗಳಿಗೆ ಮರುಜೀವ ನೀಡಿ ಸತಾಯಿಸಲು ಹೊರಡುವುದೆಂದರೆ, ಇಡೀ ಒಕ್ಕಲಿಗ ಸಮುದಾಯವನ್ನೇ ಎದುರು ಹಾಕಿಕೊಂಡಂತೆ. ಒಂದುಕಡೆ, ದೇವೇಗೌಡರ ಮೂಲಕ ಒಕ್ಕಲಿಗ ಸಮುದಾಯವನ್ನು ತನ್ನೆಡೆಗೆ ಸೆಳೆಯಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಹೀಗಿರುವಾಗ, ಡಿಕೆಶಿಯ ವಿರುದ್ಧ ಕೈಗೊಳ್ಳುವ ಯಾವುದೇ ಕ್ರಮವೂ ಇಡೀ ಒಕ್ಕಲಿಗ ಸಮುದಾಯವನ್ನು ಕಾಂಗ್ರೆಸ್ ತೆಕ್ಕೆಗೆ ಹಾಕಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೂ ಡಿಕೆಶಿ ಬಿಜೆಪಿ ಪಾಲಿಗೆ ಗಂಟಲ ಮುಳ್ಳೇ ಆದಂತೆ ಕಾಣಿಸುತ್ತದೆ. ನಿಜವಾಗಿ,
ಸಿದ್ದರಾಮಯ್ಯರ ನೇತೃತ್ವದಲ್ಲಿ 2028ರ ಅಸೆಂಬ್ಲಿ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಿರುತ್ತಿದ್ದರೆ ಗೆಲುವು ಕಷ್ಟಸಾಧ್ಯವಿತ್ತು. ಗ್ಯಾರಂಟಿ ಬಲವೊಂದೇ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಅದರ ಧರ್ಮ ರಾಜಕಾರಣಕ್ಕೆ ಪ್ರಬಲ ಪ್ರತಿತಂತ್ರವನ್ನು ಹೆಣೆಯಬೇಕಾಗುತ್ತದೆ. ಸಿದ್ದರಾಮಯ್ಯರನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಮತ ಧ್ರುವೀಕರಣ ಮಾಡುವುದೇ ಬಿಜೆಪಿ ಸ್ಟ್ರಾಟಜಿ ಆಗಿರುವುದರಿಂದ ಅದನ್ನು ಎದುರಿಸುವುದಕ್ಕೆ ಸಿದ್ದರಾಮಯ್ಯರ ಕಾಂಗ್ರೆಸ್ ಹೆಣಗಾಡಬೇಕಿತ್ತು. ವೈಯಕ್ತಿಕವಾಗಿ ಸಿದ್ದರಾಮಯ್ಯ ಕಟು ಧಾರ್ಮಿಕರಲ್ಲದಿರುವುದು ಬಿಜೆಪಿಗೆ ಈವರೆಗೆ ವರವಾಗುತ್ತಲೂ ಬಂದಿತ್ತು. ಆದರೆ ಇದೀಗ ಒಟ್ಟು ಚಿತ್ರಣವೇ ಬದಲಾಗಿದೆ. ಆದ್ದರಿಂದ 2028ರ ಚುನಾವಣೆಗೆ ಬಿಜೆಪಿ ತನ್ನ ಸ್ಟ್ರಾಟಜಿಯನ್ನೇ ಬದಲಿಸಬೇಕಾಗಿದೆ. ಅದರ ಬತ್ತಳಿಕೆಯಲ್ಲಿರುವ ಅಸ್ತ್ರಗಳನ್ನೆಲ್ಲ ಮುಖ್ಯ ಮಂತ್ರಿ ಬದಲಾವಣೆ ಮೂಲಕ ಕಾಂಗ್ರೆಸ್ ಹೈಕಮಾಂಡ್ ಧೂಳೀಪಟ ಮಾಡಿದೆ. ಈ ಹೊಡೆತದಿಂದ ರಾಜ್ಯ ಬಿಜೆಪಿ 2028ರೊಳಗೆ ಚೇತರಿಸಿಕೊಳ್ಳುವ ಸಾಧ್ಯತೆ ಕಾಣಿಸುತ್ತಿಲ್ಲ.












