✍️ ಅಮಾನ್ ಕೆ.
ಡಿಸೆಂಬರ್ ಆರನ್ನು ಶೌರ್ಯ ದಿವಸವೆಂದು ಎಲ್ಲಾ ಶಾಲೆಗಳಲ್ಲಿ ಆಚರಿಸುವಂತೆ ರಾಜಸ್ಥಾನ ಬಿಜೆಪಿ ಸರಕಾರ ಹೊರಡಿಸಿದ ಸುತ್ತೋಲೆಯನ್ನು 12 ಗಂಟೆಗಳ ಬಳಿಕ ಹಿಂಪಡೆಯಲಾಗಿದೆ. ಹೀಗೆ ಹಿಂಪಡೆಯುವುದಕ್ಕೆ ಕಾರಣವನ್ನೂ ಕೊಡಲಾಗಿದೆ. ಅದೇನೆಂದರೆ ಈಗ ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಕಾರ್ಯಕ್ರಮ ಮಾಡುವುದಕ್ಕೆ ಸೂಕ್ತ ಸಂದರ್ಭ ಅಲ್ಲ ಎಂದು ಹೇಳಲಾಗಿದೆ ಮತ್ತು ಸುತ್ತೋಲೆಯನ್ನು ರದ್ದು ಪಡಿಸದೆ ಮುಂದೂಡಲಾಗಿದೆ.
ಈ ಸುತ್ತೋಲೆಯ ಪ್ರಕಾರ ವಿದ್ಯಾರ್ಥಿಗಳಲ್ಲಿ ಮತ್ತು ಸರಕಾರಿ ಉದ್ಯೋಗಿಗಳಲ್ಲಿ ದೇಶಪ್ರೇಮವನ್ನು ಮೂಡಿಸುವುದು, ರಾಷ್ಟ್ರೀಯತೆ, ಧೈರ್ಯ, ಸಂಸ್ಕೃತಿ ಮೇಲೆ ಅಭಿಮಾನ ಮೂಡಿಸುವುದು ಮತ್ತು ರಾಷ್ಟ್ರೀಯ ಐಕ್ಯವನ್ನು ಪ್ರೋತ್ಸಾಹಿಸುವುದು ಎಂದು ಹೇಳಲಾಗಿದೆ. ಭಾರತೀಯ ಸಂಸ್ಕೃತಿ ಮತ್ತು ರಾಮಜನ್ಮಭೂಮಿ ಯಾತ್ರೆಯ ಕುರಿತಾಗಿ ಭಾಷಣ ಸ್ಪರ್ಧೆ, ಅಯೋಧ್ಯೆಯ ರಾಮಮಂದಿರವನ್ನು ಕೇಂದ್ರೀಕರಿಸಿ ಚಿತ್ರ ರಚನೆ, ಪೋಸ್ಟರ್ ರಚನೆ, ಭಕ್ತಿ ಗೀತೆ, ನೃತ್ಯ, ಇತಿಹಾಸ ಅಥವಾ ಪುರಾಣಗಳನ್ನು ಆಧಾರವಾಗಿಸಿ ನಾಟಕಗಳನ್ನು ರಚಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿತ್ತು. ಇದೀಗ ಸುತ್ತೋಲೆಯನ್ನು ಮುಂದೂಡಲಾಗಿದೆ.
1992 ಡಿಸೆಂಬರ್ ಆರರಂದು ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಲಾಗಿತ್ತು. ಬಾಬರಿ ಮಸೀದಿಗೆ ಹಾನಿಯಾಗಲು ಬಿಡಲ್ಲ ಎಂದು ಆಗ ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದ ಬಿಜೆಪಿಯ ಕಲ್ಯಾಣ್ ಅವರು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಆದರೆ ಈ ಧ್ವಂಸ ಕೃತ್ಯದ ಹಿಂದೆ ಅವರ ಶಾಮೀಲಾತಿ ಇದೆ ಎಂಬ ಅನುಮಾನದಲ್ಲಿ ಉತ್ತರ ಪ್ರದೇಶ ಸರ್ಕಾರವನ್ನೇ ಆಗಿನ ಕೇಂದ್ರ ಸರಕಾರ ವಜಾ ಮಾಡಿತ್ತು.
2019 ರಂದು ಬಾಬರಿ ಮಸೀದಿಯ ಇದ್ದ ಜಾಗದ ಹಕ್ಕನ್ನು ಮುಸ್ಲಿಮರಿಗೆ ನಿರಾಕರಿಸಿ ತೀರ್ಪು ನೀಡುವಾಗಲೂ ಸುಪ್ರೀಂ ಕೋರ್ಟ್ ಒಂದು ಪ್ರಮುಖ ಅಂಶವನ್ನು ಎತ್ತಿ ಹೇಳಿತ್ತು. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿರುವುದು ಕ್ರಿಮಿನಲ್ ಅಪರಾಧ ಎಂದು ಅದು ಹೇಳಿತ್ತು. ಇದೀಗ ಈ ಕ್ರಿಮಿನಲ್ ಅಪರಾಧವನ್ನೇ ರಾಜಸ್ಥಾನ ಸರಕಾರ ಶೌರ್ಯ ದಿವಸ ಎಂದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಲು ಯೋಚನೆ ಮಾಡಿದೆ. ಪರೀಕ್ಷೆಯ ಕಾರಣದಿಂದಾಗಿ ಈಗ ಅದು ಜಾರಿಗೆ ಬಂದಿಲ್ಲವಾದರೂ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಕ್ರಿಮಿನಲ್ ಅಪರಾಧ ಎಂದು ಹೇಳಿದ ಕೃತ್ಯವನ್ನು ಶೌರ್ಯದ ಕೆಲಸ ಎಂದು ಬಿಂಬಿಸಲು ಖಂಡಿತ ಶ್ರಮಿಸಬಹುದು.
ಶ್ರೀರಾಮ ಆದರ್ಶ ಪುರುಷನಾಗಿ ಈ ದೇಶದಲ್ಲಿ ಗುರು ತಿಸಿಕೊಂಡಿದ್ದಾನೆ. ಆದರ್ಶ ಎಂಬ ಪದದಲ್ಲಿ ದ್ವಂಸ, ಹಿಂಸೆ, ದುಷ್ಕೃತ್ಯ ಇತ್ಯಾದಿಗಳು ಒಳಪಡುವುದಿಲ್ಲ. ಡಿಸೆಂಬರ್ ಆರರಂದು ನಡೆದಿರುವುದು ಧ್ವಂಸ ಕಾರ್ಯ. ಸುಪ್ರೀಂಕೋರ್ಟಿನ ಪ್ರಕಾರ ಕ್ರಿಮಿನಲ್ ಅಪರಾಧ. ಬಾಬರಿ ಮಸೀದಿ ಇದ್ದ ಜಾಗ ಯಾರಿಗೆ ಸೇರಬೇಕು ಎಂಬ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಸಮರ ನಡೆಯುತ್ತಿರುವಾಗಲೇ ಈ ಧ್ವಂಸ ಕಾರ್ಯ ನಡೆದಿದೆ. ಅದರಲ್ಲಿ ಭಾಗಿಯಾದವರನ್ನು ನ್ಯಾಯಾಲಯ ಕ್ರಿಮಿನಲ್ ವಿಚಾರಣೆಗೂ ಒಳಪಡಿಸಿದೆ. ಇಂತಹ ಕೃತ್ಯವನ್ನು ಒಂದು ಸರಕಾರವೇ ಮುಂದೆ ನಿಂತು ಶೌರ್ಯದ ಕೆಲಸ ಎಂದು ಮಕ್ಕಳಿಗೆ ಕಲಿಸುವುದಾದರೆ ಅದು ಸಾರುವ ಸಂದೇಶ ಏನು? ಶ್ರೀ ರಾಮನ ಆದರ್ಶಗಳಿಗೆ ಈ ಆದೇಶ ಒಪ್ಪುವುದೇ?
ಶ್ರೀರಾಮ ಅತ್ಯಂತ ಜನಪರ ಆಡಳಿತಕ್ಕಾಗಿ ಗುರುತಿಸಿಕೊಂಡವ. ಈ ದೇಶದ ಕೋಟ್ಯಂತರ ಮಂದಿಯ ಹೃದಯದಲ್ಲಿರುವವ. ಇಂತಹ ಘನ ವ್ಯಕ್ತಿತ್ವವನ್ನು ಒಂದು ದುಷ್ಕೃತ್ಯದ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳುವುದು ಎಷ್ಟು ಸರಿ? ಧ್ವಂಸ ಕಾರ್ಯದ ಹಿನ್ನೆಲೆಯಲ್ಲಿ ಮಕ್ಕಳಿಗೆ ಶ್ರೀ ರಾಮನನ್ನು ನೆನಪಿಸುವುದರಿಂದ ಮಕ್ಕಳ ಮನಸ್ಸಲ್ಲಿ ಯಾವ ಭಾವನೆ ಮೂಡಬಹುದು?
ಶ್ರೀರಾಮನನ್ನು ಸ್ಮರಿಸಿಕೊಳ್ಳುವುದಕ್ಕೆ ಈ ದೇಶದಲ್ಲಿ ಅನೇಕ ಸಂದರ್ಭಗಳಿವೆ. ಅದರಲ್ಲಿ ರಾಮನವಮಿಯೂ ಒಂದು. ಇಂತಹ ಸಂದರ್ಭಗಳಲ್ಲಿ ಶ್ರೀ ರಾಮನ ಆದರ್ಶಗಳನ್ನು ಸ್ಮರಿಸುವುದಕ್ಕೆ ಕಾರ್ಯಕ್ರಮಗಳನ್ನು ಏರ್ಪಡಿಸುವ ಬದಲು ಕಾನೂನುಬಾಹಿರ ಕೃತ್ಯವನ್ನು ಎಸೆಗಿದ್ದ ದಿನವನ್ನು ಶೌರ್ಯ ದಿವಸ ಎಂದು ಹೇಳಿ ಅದರ ನೆಪದಲ್ಲಿ ಮಕ್ಕಳಿಗೆ ಕಾರ್ಯಕ್ರಮಗಳನ್ನು ಆಯೋಜಿಸುವುದೆಂದರೆ ಅದು ಶ್ರೀರಾಮನ ಆದರ್ಶಗಳಿಗೆ ವಿರುದ್ಧ ಅಲ್ಲವೇ?
ರಾಜಸ್ಥಾನ ಸರ್ಕಾರದ ನಡೆ ಮಕ್ಕಳಲ್ಲಿ ಶ್ರೀರಾಮನನ್ನು ನೆನಪಿಸುವುದಕ್ಕಿಂತ ಹಿಂದೂ ಮುಸ್ಲಿಂ ಆಗಿ ಸಮಾಜವನ್ನು ಒಡೆಯುವ ದುರುದ್ದೇಶವೇ ಇದೆ ಅನ್ನುವುದು ಗೊತ್ತಾಗುತ್ತದೆ. ಇಲ್ಲದಿದ್ದರೆ ಬಾಬರಿ ಮಸೀದಿಯನ್ನು ಒಡೆದ ದಿನವನ್ನೇ ಶೌರ್ಯ ದಿವಸವಾಗಿ ಅದು ಆಚರಿಸಲು ಸಾಧ್ಯವೇ ಇರಲಿಲ್ಲ. ನ್ಯಾಯಾಲಯವೇ ಕ್ರಿಮಿನಲ್ ಕೃತ್ಯ ಎಂದು ಹೇಳಿದ್ದನ್ನು ಸರಕಾರ ಒಂದು ಶೌರ್ಯದ ಕೃತ್ಯ ಎಂದು ಹೇಳಲು ಹೊರಟಿರುವುದು ಈ ದೇಶದ ಕಾನೂನಿಗೆ ಬಗೆಯುವ ದ್ರೋಹ. ಶ್ರೀರಾಮನ ಆದರ್ಶಗಳಿಗೆ ಮಾಡುವ ಅವಮಾನ. ಇದನ್ನು ಸರ್ವ ಶ್ರೀರಾಮ ಭಕ್ತರೂ ವಿರೋಧಿಸಬೇಕು. ರಾಮನ ಆದರ್ಶಗಳಿಗೆ ಕಳಂಕ ತರುವಂತೆ ಡಿಸೆಂಬರ್ ಆರನ್ನು ವೈಭವಿಕರಿಸುವುದಕ್ಕೆ ಅವಕಾಶ ಕೊಡಬಾರದು.












