ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರ ಶೀಘ್ರದಲ್ಲೇ ಹಳಿತಪ್ಪಲಿದೆ: ಸಚಿನ್ ಪೈಲಟ್

0
209

ಸನ್ಮಾರ್ಗ ವಾರ್ತೆ

ಶಿಮ್ಲಾ: ಭಾರತೀಯ ಜನತಾ ಪಕ್ಷದ ‘ಡಬಲ್ ಇಂಜಿನ್ ಸರ್ಕಾರ’ ಶೀಘ್ರದಲ್ಲೇ ಹಳಿತಪ್ಪಲಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.

ನವೆಂಬರ್ 12ರಂದು ನಡೆಯಲಿರುವ ಹಿಮಾಚಲ ಪ್ರದೇಶ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಅವರು ಹೇಳಿದ್ದಾರೆ. ಡೂನ್ ಮತ್ತು ಜುಬ್ಬಲ್ ಕೋಟ್ಖೈ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, ಕುಲು ಸೇರಿದಂತೆ ಹಲವೆಡೆ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು.

“ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಶೀಘ್ರದಲ್ಲೇ ಹಳಿತಪ್ಪಲಿದೆ. ಹಿಮಾಚಲ ಪ್ರದೇಶದಲ್ಲಿ ಅದರ ಮೊದಲ ಇಂಜಿನ್ ನವೆಂಬರ್ 12ರಂದು ಮತ್ತು ಎರಡನೇ ಇಂಜಿನ್ 2024ರಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಹಿಮಾಚಲ ಪ್ರದೇಶಕ್ಕೆ ಬಿಜೆಪಿಯ ಉನ್ನತ ನಾಯಕರ ಸತತ ಭೇಟಿಗಳು ಆಡಳಿತ ಪಕ್ಷವು ಆತಂಕದಲ್ಲಿದೆ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪೈಲಟ್ ಆರೋಪಿಸಿದರು. ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಕಳಪೆಯಾಗಿದೆ ಮತ್ತು ಐದು ವರ್ಷಗಳ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹಿಮಾಚಲ ಪ್ರದೇಶದ ಜನರ ಭವಿಷ್ಯವನ್ನು ಭದ್ರಪಡಿಸಲು ಕಾಂಗ್ರೆಸ್ ನಂಬಲರ್ಹವಾದ ಆಯ್ಕೆಯಾಗಿರುವುದರಿಂದ ಜನರು ಅದನ್ನು ಆಯ್ಕೆ ಮಾಡಬೇಕೆಂದು ಅವರು ಒತ್ತಾಯಿಸಿದರು.

‘ಕಳೆದ ಐದು ವರ್ಷಗಳಲ್ಲಿ ಅವರ ಸಾಧನೆಯ ಆಧಾರದ ಮೇಲೆ ಮತ ಕೇಳುವಂತಿದ್ದರೆ ದೆಹಲಿಯಿಂದ ಇಷ್ಟೊಂದು ನಾಯಕರನ್ನು ಕರೆಸಿಕೊಳ್ಳುತ್ತಿರಲಿಲ್ಲ’ ಎಂದು ಕಾಂಗ್ರೆಸ್ ನಾಯಕರು ಬಿಜೆಪಿಯ ವಿರುದ್ಧ ಹರಿಹಾಯ್ದರು.