✍️ ಎ.ಕೆ.ಸಿ.
ಮರಣ ಎಂಬ ವಾಸ್ತವವನ್ನು ನಾವು ಹೇಗೆ ನೋಡುತ್ತೇವೆ? ಸಾಮಾನ್ಯ ಮನುಷ್ಯನು ಮರಣದ ಕುರಿತು ಆಸ್ಪತ್ರೆ ಮತ್ತು ಸ್ಮಶಾನದಲ್ಲಿ ಚಿಂತಿಸುತ್ತಾನೆ. ಅನಿರೀಕ್ಷಿತವಾಗಿ ಓರ್ವರು ಮರಣ ಹೊಂದಿದಾಗ ಅಪಘಾತದ ಸುದ್ದಿ ವಾರ್ತೆಗಳಲ್ಲಿ ನೋಡಿದಾಗ ಮಾತ್ರ ನಮ್ಮನ್ನು ಮರಣವು ಸ್ಪರ್ಷಿಸುತ್ತದೆ. ಆದರೆ ಕುರ್‌ಅನ್ ಮರಣವನ್ನು ಒಂದು ಅಪೂರ್ವವಾದ ಘಟನೆಯಾಗಿ ಚಿತ್ರಿಸುವುದಿಲ್ಲ. ಬದಲಾಗಿ ಅದು ಸಾಮಾನ್ಯವಾಗಿ ಸನ್ನಿಹಿತವಾಗುವ ಸತ್ಯವಾಗಿ ಗುರುತಿಸುತ್ತದೆ. ಅಲ್ಲಾಹನು ಹೇಳುತ್ತಾನೆ. ಪ್ರತಿಯೊಂದು ಜೀವಿಗೂ ಮೃತ್ಯುವಿನ ರುಚಿಯನ್ನು ಸವಿಯಲಿಕ್ಕಿದೆ. (ಅಲ್ ಅಂಕಬೂತ್: 57) ಈ ಸೂಕ್ತದಲ್ಲಿ ದಾಇಖ ಎಂಬ ಪದ ಬಂದಿದೆ. ಅದರ ಅರ್ಥ ಸವಿಯಿರಿ ಎಂದಾಗಿದೆ. ಆಹಾರ ವನ್ನು ಸವಿದಂತೆ ಪ್ರತೀಯೋರ್ವರೂ ಮರಣ ವನ್ನು ಸವಿದು ಅನುಭವಿಸುವರು. ಉದ್ಯೋಗ, ವೇತನ, ನಿವೃತ್ತಿ ಆದರೆ ಮರಣ..?
ಒಂದು ಸರಕಾರಿ ನೌಕರ ವಿಷಯವನ್ನೇ ತೆಗೆದುಕೊಳ್ಳಿ. ಆತ ತನ್ನ ಬದುಕಿನ ಬಗ್ಗೆ ಯೋಜನೆ ರೂಪಿಸಿರುತ್ತಾನೆ. ಎಷ್ಟು ವರ್ಷ ನೌಕರಿ, ಯಾವಾಗ ಭಡ್ತಿ, ಯಾವಾಗ ನಿವೃತ್ತಿ, ಎಷ್ಟು ಪೆನ್ಶನ್ ದೊರೆ ಯುತ್ತದೆ ಎಂದು ಯೊಜನೆ ರೂಪಿಸುತ್ತಾನೆ. ಆದರೆ ಯಾರೂ ಕೂಡಾ ತನ್ನ ಮರಣವನ್ನು ಲೆಕ್ಕ ಹಾಕಿ ಯೋಜನೆ ರೂಪಿಸುವುದಿಲ್ಲ.
ಕುರ್‌ಅನ್ ಹೇಳುತ್ತದೆ- ವಮಾತದ್ರೀ ನಫ್ಸುನ್ ಮಾದಾತಕ್ಸಿಬು ಗದಾ ವಮಾ ತದ್ರೀ ನಫ್ಸುನ್ ಬಿ ಅಯ್ಯಿ ಅರ್ಲಿನ್ ತಮೂತ್ “ಯಾವ ಜೀವಿಯೂ ತಾನು ನಾಳೆ ಏನನ್ನು ಗಳಿಸುವೆನು ಎಂಬುದನ್ನು ತಿಳಿದಿರುವುದಿಲ್ಲ. ಮತ್ತು ತನಗೆ ಯಾವ ಭೂ ಭಾಗದಲ್ಲಿ ಮರಣ ಬರುವುದೆಂಬ ಅರಿವು ಯಾರಿಗೂ ಇಲ್ಲ.” (ಲುಕ್ಮಾನ್: 34)
ಸಂಪತ್ತಿನ ಸಂಗ್ರಹ: ಬ್ಯಾಂಕ್ ಅಕೌಂಟ್ ಅಂತಿಮ ದಿನವನ್ನು ಓರ್ವ ಮನುಷ್ಯನು ತನ್ನ ಬ್ಯಾಂಕ್ ಬ್ಯಾಲೆನ್ಸ್ ನಿರಂತರ ಪರಿಶೀಲಿಸುತ್ತಾನೆ. ಆದರೆ ತನ್ನ ಕಾರ್ಯ ಚಟುವಟಿಕೆಯ ಅಕೌಂಟ್ ಎಷ್ಟು ಎಂದು ಕೇಳುವವರು ಬಹಳ ಕಡಿಮೆ ಅಲ್ಲವೇ.
ಕುರ್‌ಆನ್ ಹೇಳುತ್ತದೆ, `ಯೌಮ ತಜಿದೂ ಕುಲ್ಲು ನಪ್ಸಿನ್ ಮಾ ಅಮಲತ್ ಮಿನ್ ಖೈರಿನ್ ಮುಹ್ದರ’- (ಪುಣ್ಯ ಮಾಡಿರಲಿ ಅಥವಾ ಪಾಪವೆಸಗಿರಲಿ ಪ್ರತಿಯೊಬ್ಬನೂ ತನ್ನ ಕರ್ಮ ಫಲವನ್ನು ಪ್ರತ್ಯಕ್ಷ ಪಡೆಯುವ ದಿನ ಬರಲಿದೆ.) (ಆಲೆ ಇಮ್ರಾನ್: 30)
ಮರಣವನ್ನು ಒಮ್ಮೆ ನೋಡಿದವನಲ್ಲಿನ ಬದಲಾವಣೆ:
ಓರ್ವ ಆಪ್ತ ಸಂಬಂಧಿಕನ ಮರಣವನ್ನು ಕಂಡರೆ ಕೆಲವು ದಿನಗಳವರೆಗೆ ಆತನಲ್ಲಿ ಬದಲಾ ವಣೆ ಉಂಟಾಗುತ್ತದೆ. ಆದರೆ ಸಮಯ ಕಳೆದಂತೆ ಆ ಪ್ರಜ್ಞೆಯು ಮಾಯವಾಗುತ್ತದೆ. ಕುರ್‌ಆನ್ ಹೇಳುತ್ತದೆ, “ಅಲ್ ಹಾಕುಮುತ್ತಕಾಸುರು- ಹೆಚ್ಚು ಹೆಚ್ಚಾಗಿ ಇತರರಿಗಿಂತ ಅಧಿಕವಾಗಿ ಸಂಪಾದಿಸುವ ಚಿಂತೆಯು ನಿಮ್ಮನ್ನು ಅನಾಸ್ಥೆಗೆ ಒಳಪಡಿಸಿ ಬಿಟ್ಟಿದೆ. ಹತ್ತಾ ಝುರುತುಮುಲ್ ಮಕಾಬಿರ್ ಕೊನೆಗೆ (ಇದೇ ಚಿಂತೆಯಲ್ಲಿ) ನೀವು ಗೋರಿಯ ಅಂಚನ್ನು ತಲುಪುತ್ತೀರಿ.” (ಅತ್ತಕಾಸುರು; 1-2)
ಪ್ರವಾದಿವರ್ಯರು(ಸ) ಹೇಳಿದರು- “ಈ ಲೋಕದ ಎಲ್ಲಾ ಸುಖಲೋಲುಪತೆಗಳನ್ನು ಇಲ್ಲದಾಗಿಸುವ ಮರಣವನ್ನು ಹೆಚ್ಚು ಸ್ಮರಿಸಿರಿ.
(ತಿರ್ಮಿದಿ)
ರೈಲ್ವೆ ನಿಲ್ದಾಣದಲ್ಲಿರುವ ಪ್ರಯಾಣಿಕನು ನಿಲ್ದಾಣದಲ್ಲಿ ಮನೆಯನ್ನು ನಿರ್ಮಿಸುವುದಿಲ್ಲ. ಅವನ ನಿಜವಾದ ಗುರಿ ಮತ್ತೊಂದಾಗಿದೆ. ಕುರ್‌ಆನ್ ಹೇಳುತ್ತದೆ- ವಮನ್ ಹಯಾತುದ್ದುನ್ಯ ಇಲ್ಲಾ ಮತಾಉಲ್ ಗುರೂರ್- “ಈ ಲೋಕದ ಜೀವನವಂತೂ ಭ್ರಾಮಕ ಸಂಪತ್ತಾಗಿದೆ.”
(ಆಲೆ ಇಮ್ರಾನ್; 185)
ಸತ್ಯವಿಶ್ವಾಸಿಯ ಮರಣ:
ನಷ್ಟವೋ? ಅಥವಾ ಬದಲಾವಣೆಯೋ? ಸತ್ಯವಿಶ್ವಾಸಿಗೆ ಮರಣವೆಂಬುದು ಶಾಲೆಯಿಂದ ಕಾಲೇಜಿಗಿರುವ ಬದಲಾವಣೆಯಂತೆ ಆಗಿದೆ.
ಕುರ್‌ಆನ್ ವಾಗ್ದಾನ ನೀಡುತ್ತದೆ..
“ಓ ಶಾಂತ ಚಿತ್ತವೇ, ನೀನು(ನಿನ್ನ ಸದ್ಗತಿ ಯಿಂದ) ಸಂತುಷ್ಟನೂ (ನಿನ್ನ ಪ್ರಭುವಿನ ಬಳಿ) ಮೆಚ್ಚುಗೆಗೆ ಪಾತ್ರನೂ ಆಗಿರುವ ಸ್ಥಿತಿಯಲ್ಲಿ ನಿನ್ನ ಪ್ರಭುವಿನ ಬಳಿಗೆ ನಡೆ. ನನ್ನ (ಸಜ್ಜನ) ದಾಸ ರೊಂದಿಗೆ ಸೇರಿಕೋ. ಮತ್ತು ನನ್ನ ಸ್ವರ್ಗದೊಳಗೆ ಪ್ರವೇಶಿಸು.” (ಅಲ್ ಫಜ್ರ್: 27-30)
ಪ್ರಾಯೋಗಿಕ ಮಾರ್ಗಗಳು:
ಪ್ರತೀ ದಿನವೂ ಮರಣವನ್ನು ಸ್ಮರಿಸಿರಿ. “ಇಂದು ನನ್ನ ಅಂತಿಮ ದಿನವಾಗಿದ್ದರೆ…?”
ಗೋರಿಯನ್ನು ಸಂದರ್ಶಿಸಿರಿ. ಪ್ರವಾದಿ(ಸ) ಹೇಳಿದರು: ಗೋರಿಗಳನ್ನು ಸಂದರ್ಶಿಸಿರಿ. ಅದು ನಿಮಗೆ ಪರಲೋಕವನ್ನು ಸ್ಮರಿಸುತ್ತದೆ.” (ಮುಸ್ಲಿಮ್)
ಸಂಬಂಧಗಳನ್ನು ಜೋಡಿಸಿರಿ- ಇಂದು ರಾತ್ರಿ ನನ್ನ ಮರಣ ಸಂಭವಿಸಿದರೆ ಎಂಬ ಚಿಂತೆಯು ಕ್ಷಮಿಸಲು ಪ್ರೇರೇಪಿಸಬಹುದು.
ಕೊನೆಯ ಕಾರ್ಯ ಚಟುವಟಿಕೆ:
ನನ್ನ ಪ್ರತಿಯೊಂದು ಚಟುವಟಿಕೆಯನ್ನೂ ಇದು ನನ್ನ ಕೊನೆಯ ಕಾರ್ಯ ಚಟುವಟಿಕೆಯಾಗಿ ಲೆಕ್ಕ ಹಾಕಿರಿ.
ಉಯಿಲು(ವಸಿಯ್ಯತ್) ಸಿದ್ಧಪಡಿಸಿರಿ. ಪ್ರವಾದಿ(ಸ) ಹೇಳಿದರು: “ಎರಡು ರಾತ್ರಿ ಕಳೆದರೆ ಉಯಿಲು ಬರೆಯದೇ ಇರಬೇಡಿರಿ.”
ರಾತ್ರಿ ಲೆಕ್ಕಾಚಾರ ಮಾಡಿರಿ:
ಉಮರ್(ರ) ಹೇಳಿದರು. “ಲೆಕ್ಕಾಚಾರ ಪಡೆಯುವುದಕ್ಕಿಂತ ಮುಂಚಿತವಾಗಿ ಸ್ವಯಂ ಲೆಕ್ಕಾಚಾರ ಮಾಡಿರಿ.
ಉತ್ತಮ ಮರಣಕ್ಕಾಗಿ ಪ್ರಾರ್ಥಿಸಿರಿ:
“ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಹುಸ್ನುಲ್ ಖಾತಿಮ.”
ಮರಣವೆಂಬುದು ಭಯ ಪಡುವ ವಿಚಾರವಲ್ಲ. ಪ್ರಜ್ಞೆಯೊಂದಿಗೆ ಬದುಕಲು ಇರುವ ಸ್ಮರಣೆಯಾಗಿದೆ. ಕುರ್‌ಆನ್ ಮರಣದೆಡೆಗೆ ಕಾದು ನಿಲ್ಲಲು ಹೇಳುವುದಿಲ್ಲ. ಮರಣದ ಬೆಳಕಿನಲ್ಲಿ ಬದುಕನ್ನು ಸರಿಪಡಿಸಲು ಹೇಳುತ್ತದೆ. ಮರಣ ಬರುವುದು ಖಚಿತ ಎಂಬ ವಾಸ್ತವವನ್ನು ಒಪ್ಪಿದವನು ಅರ್ಥವತ್ತಾದ ಬದುಕನ್ನು ನಡೆಸಲು ಪ್ರಾರಂಭಿಸುತ್ತಾನೆ.












