‘ಇಫ್ತಾರ್’ಗೆ ಸ್ವಲ್ಪ ಮುಂಚೆ ಡಾ. ಜಫರುಲ್ ಇಸ್ಲಾಂ ಖಾನ್‌ರ ಮನೆಯ ಮೇಲೆ 40 ಕ್ಕೂ ಹೆಚ್ಚು ಪೊಲೀಸರ ದಿಢೀರ್ ದಾಳಿ: ಖಾನ್ ಕುಟುಂಬವನ್ನು ಭೀತಿಗೆ ತಳ್ಳುತ್ತಿದೆಯೇ ಬಿಜೆಪಿ ಸರಕಾರ!

0
5444

ಸನ್ಮಾರ್ಗ ವಾರ್ತೆ

ನವದೆಹಲಿ,ಮೇ ,7: ದೆಹಲಿ ಪೊಲೀಸ್ ವಿಶೇಷ ತನಿಖಾ ವಿಭಾಗದ 40 ಪೋಲಿಸರ ತಂಡವು ದೆಹಲಿ ಅಲ್ಪಸಂಖ್ಯಾತ ಆಯೋಗದ (ಡಿಎಂಸಿ) ಅಧ್ಯಕ್ಷ ಡಾ.ಜಫರುಲ್ ಇಸ್ಲಾಂ ಖಾನ್ ಅವರ ಮನೆಗೆ ನಿನ್ನೆ(ಮೇ,6) ಇಫ್ತಾರ್ ಸಮಯಕ್ಕೆ ಅರ್ಧ ಗಂಟೆಯ ಮೊದಲು ದಿಢೀರ್ ದಾಳಿ ಮಾಡಿದೆ.

ಡಾ. ಖಾನ್ ಅವರನ್ನು ಬಂಧಿಸಲು ಈ ತಂಡವು ಬಂದಿತ್ತು. ಅವರ ವಿರುದ್ಧ ದಾಖಲಾದ ದೇಶದ್ರೋಹದ ಪ್ರಕರಣದಲ್ಲಿ ಪ್ರಶ್ನಿಸಲು ಬಯಸಿದ್ದರಿಂದ ಅವರೊಂದಿಗೆ ಬರಲು ಹೇಳಿದರು. ಆದರೆ, ಡಾ.ಖಾನ್ ಅವರನ್ನು ಬೆಂಬಲಿಸಿ ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಅವರನ್ನು ಬಂಧಿಸುವ ಯೋಚನೆಯನ್ನು ಕೈಬಿಟ್ಟರು ಎಂದು ಅವರ ಕುಟುಂಬ ಸದಸ್ಯರು ಇಂಡಿಯಾ ಟುಮಾರೋಗೆ ತಿಳಿಸಿದ್ದಾರೆ.

ಪೊಲೀಸರು ಡಾ. ಖಾನ್ ಅವರೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ವಿವಿಧ ವಿಷಯಗಳ ಕುರಿತು ಮಾತನಾಡಿದ್ದಾರೆ ಎಂದು ಅವರ ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದಾರೆ. “ಡಾ.ಖಾನ್ ಅವರನ್ನು ಪ್ರಶ್ನಿಸಲಿಕ್ಕಾಗಿ ಸೋಮವಾರ ತಮ್ಮ ಕಚೇರಿಗೆ ಬರಲು ಪೊಲೀಸರು ಹೇಳಿದ್ದಾರೆ” ಎಂದು ಕುಟುಂಬ ಸದಸ್ಯರೊಬ್ಬರು ಹೇಳಿದರು. ಪೊಲೀಸರು ಯಾವುದೇ ಲಿಖಿತ ಆದೇಶ ನೀಡಿಲ್ಲ ಎಂದೂ ಅವರನ್ನು ಮೌಖಿಕವಾಗಿ ಮಾತ್ರ ಕರೆದಿದ್ದಾರೆಂದೂ ಕುಟುಂಬದ ಸದಸ್ಯರು ಹೇಳಿದ್ದಾರೆ.

ಡಾ. ಖಾನ್ ಅವರ ನಿವಾಸದ ಪಕ್ಕದಲ್ಲಿರುವ ಜಾಮಿಯಾ ನಗರದ ಅಬುಲ್ ಫಜಲ್ ಎನ್‌ಕ್ಲೇವ್‌ನ ಡಿ ಬ್ಲಾಕ್‌ನಲ್ಲಿ ವಾಸಿಸುವ ನೆರೆಹೊರೆಯವರು, ಡಾ. ಖಾನ್ ಕಳೆದ 35 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಯಾವಾಗಲೂ ಎಲ್ಲರಿಗೂ ಸಹಾಯ ಮಾಡಿದ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

“ಖಾನ್‌ರವರ ಮನೆಗೆ 40 ಪೋಲಿಸರನ್ನೊಳಗೊಂಡ ತಂಡವನ್ನು ಕಳುಹಿಸುವ ಮೂಲಕ ಡಾ. ಖಾನ್ ಮತ್ತು ಅವರ ಕುಟುಂಬದ ಸದಸ್ಯರನ್ನು ಭಯಭೀತಗೊಳಿಸಲು ಸರಕಾರ ಯತ್ನಿಸುತ್ತಿದೆ. ತನ್ನ ವಿರುದ್ಧ ಧ್ವನಿ ಎತ್ತುವ ಪ್ರತಿಯೊಬ್ಬರನ್ನು ಬಂಧಿಸುವ ಮೂಲಕ ಮುಸ್ಲಿಮರನ್ನು ನಿಗ್ರಹಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಸಿಎಎ ವಿರೋಧಿ ಆಂದೋಲನವನ್ನು ಮುನ್ನಡೆಸಿದ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪೀಡಿತರಿಗೆ ಸಹಾಯ ನೀಡಿದ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸುತ್ತಿರುವುದನ್ನು ಕಾಣುವಾಗ ಖಾನ್ ಅವರ ಮೇಲೆ ಕೈಗೊಂಡ ಕ್ರಮವೂ ಇಂತಹುದ್ದೇ ಆಗಿದೆ “ಎಂದು ಅವರ ನೆರೆಹೊರೆಯವರು ಹೇಳಿದರು.

ವಸಂತ್ ಕುಂಜ್‌ನ ನಿವಾಸಿಯೊಬ್ಬರ ದೂರಿನ ಮೇರೆಗೆ ಸಮುದಾಯಗಳ ನಡುವೆ ದ್ವೇಷ ಮತ್ತು ಹಗೆತನವನ್ನು ಉತ್ತೇಜಿಸುವ ಸೆಕ್ಷನ್ 124 ಎ (ದೇಶದ್ರೋಹ) ಮತ್ತು 153 ಬಿ ಅಡಿಯಲ್ಲಿ ಪ್ರಕರಣವನ್ನು ಖಾನ್ ರವರ ವಿರುದ್ಧ ನೋಂದಾಯಿಸಲಾಗಿದೆ.

ಡಾ. ಖಾನ್ ಅವರು ಭಾರತದಲ್ಲಿ ನಡೆಯುತ್ತಿರುವ ಇಸ್ಲಾಮೋಫೋಬಿಯಾ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದಕ್ಕಾಗಿ ಕುವೈಟ್‌ಗೆ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದರು‌. ಭಾರತದಲ್ಲಿ ಇಸ್ಲಾಮೋಫೋಬಿಯಾ ಬಗ್ಗೆ ಭಾರತೀಯ ಮುಸ್ಲಿಮರು ತಮ್ಮ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಂಗ ಮತ್ತು ಇತರ ಸಂಸ್ಥೆಗಳು ಸಾಕು ಎಂದು ನಂಬಿದ್ದರಿಂದ ಭಾರತದ ಹೊರಗಿನ ಯಾವುದೇ ದೇಶ ಅಥವಾ ಯಾವುದೇ ಏಜೆನ್ಸಿಗೆ ದೂರು ನೀಡಿಲ್ಲ ಎಂದು ಉಲ್ಲೇಖಿಸಿದ್ದರಲ್ಲದೇ, ತಾನು ಏನೇ ಮಾಡಿದರೂ ಅದು ರಾಷ್ಟ್ರದ ಹಿತದೃಷ್ಟಿಯಿಂದಲೇ ಹೊರತು ದೇಶದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ಡಾ.ಖಾನ್ ಸ್ಪಷ್ಟಪಡಿಸಿದ್ದರು.

ಈ ಹಿಂದೆ ಡಾ. ಖಾನ್‌, ಮುಸ್ಲಿಮರ ಮೇಲಿನ ಮಿತಿ ಮೀರಿದ ವಿರೋಧ, ಮಸೀದಿಗಳು ಮತ್ತು ಮುಸ್ಲಿಂ ವ್ಯಾಪಾರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಗಮನ ಸೆಳೆದಿದ್ದರು. ಸರಕಾರಿ ಸಂಸ್ಥೆಗಳು ಮತ್ತು ಮಾಧ್ಯಮಗಳು ಪದೇ ಪದೇ ಹಜರತ್ ನಿಜಾಮುದ್ದೀನ್‌ನ ಪ್ರಧಾನ ಕಚೇರಿಯಲ್ಲಿ ನಡೆದ ತಬ್ಲಿಗೀ ಸಭೆಯು ಕೊರೋನಾ ಹರಡುವಿಕೆಗೆ ಕಾರಣವಾಗಿದೆ ಎಂದು ಪ್ರಚಾರ ಮಾಡಿದ ನಂತರ ಹಾಗೂ ದೆಹಲಿ ಮತ್ತು ದೇಶದ ಉಳಿದ ಭಾಗಗಳಲ್ಲಿ ಹಾಗೂ ಹರ್ಯಾಣದ ಗಡಿಯಲ್ಲಿರುವ ಪ್ರದೇಶಗಳಲ್ಲಿ ನಡೆದ ಮುಸ್ಲಿಮ್ ವಿರೋಧೀ ದಾಳಿಗಳು, ‘ಅಜಾನ್’ ಕರೆಯನ್ನು ನಿಷೇಧಿಸಲು ಶ್ರಮಿಸಿದ ಕೆಲವು ಕೆಳ ಹಂತದ ಪೊಲೀಸ್ ಸಿಬ್ಬಂದಿಗಳ ವರ್ತನೆಗೆ ಸಂಬಂಧಿಸಿದಂತೆ ಅವರು ಪೊಲೀಸರಿಗೆ ಪತ್ರಗಳನ್ನು ಬರೆದು ಗಮನ ಸೆಳೆದಿದ್ದರು.

ಈ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಪುನಃ ಸ್ಥಾಪಿಸಬೇಕೆಂದೂ ಮುಸ್ಲಿಮರ ಮೇಲಿನ ದಾಳಿಗಳ ಬಗ್ಗೆ ಶೀಘ್ರವಾಗಿ ಪರಿಶೀಲನೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗಬೇಕೆಂದು ಅವರು ಆಗ್ರಹಿಸಿದ್ದರು.

ಧರ್ಮದ ಆಧಾರದ ಮೇಲೆ COVID-19 ಪ್ರಕರಣಗಳನ್ನು ಗುರುತಿಸುವ ಮೂಲಕ ಇಸ್ಲಾಮೋಫೋಬಿಯಾವನ್ನು ಉತ್ತೇಜಿಸಲು ಅವಕಾಶ ನೀಡ ಬೇಡಿರಿ ಎಂದು ಡಾ. ಖಾನ್ ಸರ್ಕಾರಿ ಏಜೆನ್ಸಿಗಳಿಗೆ ಮನವಿ ಸಲ್ಲಿಸಿದ್ದರು. ಮಾಧ್ಯಮಗಳು ಸೋಂಕು ಬಾಧಿತರು ಮುಸ್ಲಿಮರಾದಾಗ ತಳೆದ ಧೋರಣೆಗಳು, ವರದಿ ಮಾಡುವ ರೀತಿಯನ್ನು ಮುಂದಿಟ್ಟು ಅದರಿಂದಾದ ದಬ್ಬಾಳಿಕೆ ಮತ್ತು ಮುಸ್ಲಿಮ್ ವಿರೋಧೀ ದಾಳಿಗಳನ್ನೂ ಕೂಡ ಅವರು ಸರಕಾರದ ಗಮನಕ್ಕೆ ತಂದರು‌.

ದೆಹಲಿಯಲ್ಲಿನ “ಅಕ್ರಮ ಮಸೀದಿಯ ಕುರಿತು ಡಾ. ಖಾನ್ ನಡೆ

ದೆಹಲಿಯ ಸರ್ಕಾರಿ ಭೂಮಿಯಲ್ಲಿ “ಅಕ್ರಮ ಮಸೀದಿಗಳಿಲ್ಲ” ಎಂಬ ವಿಷಯದ ಬಗ್ಗೆ ಬಿಜೆಪಿಯ ನಡೆಯನ್ನು ಅವರು ಬಹಿರಂಗಪಡಿಸಿದ್ದರು. ಬಿಜೆಪಿ ಸಂಸದ ಪ್ರವೀಶ್ ವರ್ಮಾ ಅವರು ಸರ್ಕಾರಿ ಭೂಮಿಯಲ್ಲಿ “ಅಕ್ರಮ ಮಸೀದಿಗಳು” ಎಂಬ ವಿಷಯವನ್ನು ಎತ್ತುವ ಮುಲಕ ಅಂತಹ 54 ಮಸೀದಿಗಳು ಮತ್ತು ಇತರ ಮುಸ್ಲಿಂ ಧಾರ್ಮಿಕ ಆಸ್ತಿಗಳ ಪಟ್ಟಿಯನ್ನು 2019 ರ ಜುಲೈನಲ್ಲಿ ದೆಹಲಿ ಎಲ್.ಜಿ. ಅನಿಲ್ ಬೈಜಾಲ್‌ರವರಿಗೆ ಸಲ್ಲಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಕಟ್ಟಡಗಳನ್ನು ನೆಲಸಮಗೊಳಿಸಲಾಗುವುದು ಎಂಬ ಮುಸ್ಲಿಮ್ ವಿರೋಧಿ ನಿಲುವನ್ನು ಘೋಷಿಸಿದಾಗ ದೆಹಲಿ ಚುನಾವಣೆಯ ನಂತರ, ಡಾ. ಖಾನ್ ತಕ್ಷಣ ದೆಹಲಿಯ ಮಸೀದಿಗಳ ಸಮೀಕ್ಷೆಗೆ ಆದೇಶಿಸಿ ದೆಹಲಿಯಲ್ಲಿ ಎಲ್ಲಿಯೂ ಅಕ್ರಮ ಮಸೀದಿಗಳಿಲ್ಲ ಎಂದು ಸಾಬೀತು ಪಡಿಸುವ ಮೂಲಕ ಎಲ್‌ಜಿ‌ಗೆ ವರದಿಯನ್ನು ಸಲ್ಲಿಸಿದ್ದರು. ಇದು ಬಿಜೆಪಿಗೆ ಭಾರೀ ಹಿನ್ನಡೆಯನ್ನು ನೀಡಿತ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.