ಅರ್ನಾಬ್ ಗೆ ಮತ್ತೊಂದು ಸಂಕಷ್ಟ: ಬಾಂದ್ರಾ ಪ್ರತಿಭಟನೆಯೊಂದಿಗೆ ಮಸೀದಿ ತಳಕು- ಎಫ್ ಐ ಆರ್ ದಾಖಲು

0
1557

ಸನ್ಮಾರ್ಗ ವಾರ್ತೆ

ಮುಂಬೈ ಮೇ 7-  ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ವಿರುದ್ಧ ಮುಂಬೈ ಪೊಲೀಸರು ಹೊಸ ಪ್ರಕರಣವನ್ನು ದಾಖಲಿಸಿದ್ದಾರೆ. ಧಾರ್ಮಿಕ ದ್ವೇಷವನ್ನು ಪ್ರಚಾರ ಮಾಡಿರುವುದಕ್ಕೆ ಪೈದೋನಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಏಪ್ರಿಲ್ 14ರಂದು ಮುಂಬಯಿಯ ಬಾಂದ್ರಾ ರೈಲ್ವೇ ಸ್ಟೇಷನ್ ನಲ್ಲಿ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಆದರೆ ರಿಪಬ್ಲಿಕ್ ಟಿವಿಯಲ್ಲಿ ಅರ್ನಾಬ್ ಗೋಸ್ವಾಮಿ ಅವರು ರೈಲ್ವೆ ಸ್ಟೇಷನ್ ಸಮೀಪದ ಮಸೀದಿಗೆ ಜೋಡಿಸಿ ಪ್ರತಿಭಟನೆಯ ಕುರಿತಂತೆ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಈ ಕೇಸನ್ನು ದಾಖಲಿಸಲಾಗಿದೆ. ರಾಸ್ ಎಜುಕೇಶನ್ ವೆಲ್ಫೇರ್ ಸೊಸೈಟಿಯ ಕಾರ್ಯದರ್ಶಿ ಇರ್ಫಾನ್ ಅಬೂಬಕ್ಕರ್ ಶೈಖ್ ಅವರು ಈ ಕೇಸನ್ನು ನೀಡಿದ್ದರು.

ಅರ್ನಾಬ್ ಗೋಸ್ವಾಮಿ ಯ ವಿರುದ್ಧ ಕೇಸು ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ. ಇದರ ಭಾಗವಾಗಿ ಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪೈದೋನಿ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.

ಬಾಂದ್ರಾ ರೈಲ್ವೆ ಸ್ಟೇಷನ್ ನಲ್ಲಿ ನಡೆದ ವಲಸೆ ಕಾರ್ಮಿಕರ ಪ್ರತಿಭಟನೆಗೂ ಮಸೀದಿಗೂ ನಡುವೆ ಯಾವ ಸಂಬಂಧವೂ ಇಲ್ಲ. ಮಸೀದಿಯ ಎದುರು ಭಾಗದ ವಿಶಾಲ ಜಾಗದಲ್ಲಿ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಆದರೆ ಅರ್ನಬ್ ಗೋಸ್ವಾಮಿ ಧಾರ್ಮಿಕ ದ್ವೇಷವನ್ನು ಬಿತ್ತುವ ಉದ್ದೇಶದಿಂದ ಮಸೀದಿಯನ್ನು ಕೇಂದ್ರೀಕರಿಸಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.