ಸನ್ಮಾರ್ಗ ವಾರ್ತೆ
ದುಬೈ,ಸೆ.20: ಐದು ವರ್ಷದ ಗಂಡು ಮಗು ದುಬೈ ಶಾಪಿಂಗ್ ಮಾಲ್ನಲ್ಲಿ ಹೆತ್ತವರಿಲ್ಲದೆ ಅನಾಥನಂತೆ ನಿಂತಿದ್ದ ಘಟನೆಗೆ ಹೊಸ ತಿರುವು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ದುಬೈ ಪೊಲೀಸರು ನಾಲ್ವರು ಮಹಿಳೆಯರನ್ನು ಬಂಧಿಸಿದ್ದಾರೆ.
ಐದು ವರ್ಷ ಮೊದಲು ಹುಟ್ಟಿದ ಎರಡನೆ ದಿನವೇ ತಾಯಿ ತೊರೆದು ಹೋಗಿದ್ದ ಮಗು ಇದು. ಹೆತ್ತಮ್ಮ ಮಗುವನ್ನು ಗೆಳತಿಯ ಕೈಗೆ ಕೊಟ್ಟು ಊರು ಸೇರಿದ್ದಳು. ಮಗುವಿನ ತಾಯಿ ಎಂದಾದರೊಂದು ದಿವಸ ಬರಬಹುದು ಎಂಬ ನಿರೀಕ್ಷೆಯಲ್ಲಿ ಶಾರ್ಜದ ಆಕೆಯ ಗೆಳತಿ ಮಗುವನ್ನು ಸಾಕಿದ್ದಳು. ಆದರೆ ಶಾಲೆಗೆ ಸೇರಿಸುವ ಪ್ರಾಯವಾದಾಗ ಸಾಕು ತಾಯಿಗೆ ಸಮಸ್ಯೆ ಸೃಷ್ಟಿಯಾಯಿತು.
ಇನ್ನೊರ್ವ ಮಹಿಳೆಗೆ ಮಗುವನ್ನು ಒಪ್ಪಿಸಲು ಆಕೆ ಗೆಳತಿ ಸೂಚಿಸಿದ್ದಳು. ಆದರಂತೆ ಮಗುವನ್ನು ಸ್ವಲ್ಪ ದಿವಸ ಆ ಮಹಿಳೆ ನೋಡಿಕೊಂಡರು. ಆಕೆ ಗೆಳೆಯನೊಬ್ಬ ಕಳೆದು ಹೋದ ಮಗು ಸಿಕ್ಕಿದ್ದೆಂದು ಮಗುವನ್ನು ಪೊಲೀಸರಿಗೆ ಒಪ್ಪಿಸಲು ಸಲಹೆ ನೀಡಿದ. ಅದರಂತೆ ಸೆಪ್ಟಂಬರ್ ಆರರಂದು ರಿಫಾ ಮಾಲ್ಗೆ ಕರೆ ತಂದು ಒಂದು ಮಗು ಒಂಟಿಯಾಗಿ ನಿಂತಿದೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಳು.
ಪೊಲೀಸರು ದುಬೈ ಮುರಖಬತ್ ಠಾಣೆಗೆ ಕರೆ ತಂದು ಇರಿಸಿದರು. ತಂದೆ ತಾಯಿಯ ಕುರಿತ ಮಗುವನ್ನು ಕೇಳಿದರೆ ಅವನಿಗೆ ಹೇಳಲು ಗೊತ್ತಿರಲಿಲ್ಲ. ತನ್ನ ತಂದೆ ಒಬ್ಬ ಸೂಪರ್ ಮ್ಯಾನ್ ಎಂದು ಮಾತ್ರ ಹೇಳುತ್ತಿದ್ದ. ನಂತರ ದುಬೈ ಪೌಂಡೇಶನ್ ಫಾರ್ ವಿಮನ್ ಆಂಡ್ ಚಿಲ್ಡ್ರನ್ ಸಂಸ್ಥೆಯ ಸಂರಕ್ಷಣೆಗೆ ಮಗುವನ್ನು ವಹಿಸಲಾಗಿತ್ತು.
ಮಗುವಿನ ಹೆತ್ತವರನ್ನು ಪತ್ತೆ ಹಚ್ಚುವುದಕ್ಕಾಗಿ ಮಾಧ್ಯಮಗಳಲ್ಲಿ ಫೋಟೊ ಪ್ರಕಟಿಸಲಾಯಿತು. ಅಂದೇ ಓರ್ವ ಏಷ್ಯನ್ ಮಹಿಳೆಯೊಂದಿಗೆ ಮಗು ಶಾರ್ಜದಲ್ಲಿ ನೋಡಿದ್ದೇವೆ ಎಂದು ಪೊಲೀಸರಿಗೆ ಕೆಲವರು ಫೋನ್ ಕರೆ ಮಾಡಿದ್ದರು ಎಂದು ಮುರಖಬತ್ ಪೊಲೀಸ್ ಠಾಣೆಯ ನಿರ್ದೇಶಕ ಬ್ರಿಗೇಡಿಯರ್ ಅಲಿ ಗಾನಿಂ ಹೇಳಿದರು. ತದನಂತರ ನಡೆದ ತನಿಖೆಯಲ್ಲಿ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದ್ದರೂ ಹೆತ್ತ ತಾಯಿ ಸಿಕ್ಕಿಲ್ಲ. ಬಂಧನಕ್ಕೊಳಗಾದ ಮಹಿಳೆಯರನ್ನು ದುಬೈ ಪಬ್ಲಿಕ್ ಪ್ರಾಸಿಕ್ಯೂಟರ್ಗೆ ಹಸ್ತಾಂತರಿಸಲಾಗಿದೆ.












