ಮೂವರು ಮಕ್ಕಳಿಗೆ ಆಶ್ರಯದಾತರಾದ ದುಬೈ ಪೊಲೀಸರು

0
51

ಸನ್ಮಾರ್ಗ ವಾರ್ತೆ

ಅಬುಧಾಬಿ: ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲು ಪಾಲಾದ ವಿಧವೆಯ ಮೂವರು ಮಕ್ಕಳಿಗೆ ದುಬೈ ಪೊಲೀಸರು ಆಶ್ರಯದಾತರಾದ ಮನಮಿಡಿಯುವ ಘಟನೆ ವರದಿಯಾಗಿದೆ. ತನ್ನ ಮೂವರು ಮಕ್ಕಳು ಅಪಾರ್ಟ್ ಮೆಂಟ್ ನಲ್ಲಿದ್ದಾರೆ ಎಂಬುದನ್ನು ಆ ವಿಧವೆ ತಾಯಿ ಪೊಲೀಸರಿಂದ ಮುಚ್ಚಿಟ್ಟಿದ್ದಳು. ಮಕ್ಕಳನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದರೆ ಎಲ್ಲಿ ಮಕ್ಕಳು ತನ್ನಿಂದ ಕಳೆದುಹೋಗುವವರೋ ಎಂಬ ಭೀತಿಯಿಂದ ಆಕೆ ಇದನ್ನು ಮುಚ್ಚಿಟ್ಟಿದ್ದರು ಎಂದು ವರದಿಯಾಗಿದೆ.

ತಾನು ತಕ್ಷಣ ಜೈಲಿನಿಂದ ಬಿಡುಗಡೆ ಹೊಂದುವೆ ಎಂದು ಆಕೆ ಭಾವಿಸಿದ್ದಳು. ಆದರೆ ಈ ಬಿಡುಗಡೆ ತಡವಾಗುತ್ತದೆ ಎಂದು ಗೊತ್ತಾದಾಗ ತನ್ನ ಮಕ್ಕಳು ಅಪಾರ್ಟ್ ಮೆಂಟ್ ನಲ್ಲಿದ್ದಾರೆ ಎಂಬುದನ್ನು ಜೈಲು ಅಧಿಕಾರಿಗಳಿಗೆ ತಿಳಿಸಿದ್ದಳು. ಆರ್ಥಿಕ ಸಂಕಷ್ಟದಿಂದಾಗಿ ಹಣ ಪಾವತಿಸದ ಕಾರಣ ಇವರು ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ನ ನೀರು ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಜೈಲಿಗೆ ಹೋಗುವುದಕ್ಕಿಂತ ಮೊದಲು ತನ್ನ ಗೆಳೆಯರಲ್ಲಿ ಆಕೆ ತನ್ನ ಮಕ್ಕಳನ್ನು ನೋಡಿಕೊಳ್ಳುವಂತೆ ವಿನಂತಿಸಿದ್ದಳು. ಇದು ಗೊತ್ತಾದ ಕೂಡಲೇ ಪೊಲೀಸರು ಅಪಾರ್ಟ್ ಮೆಂಟ್ ಗೆ ಧಾವಿಸಿ 9 ,12 ಮತ್ತು 15 ವರ್ಷದೊಳಗಿನ ಮೂವರು ಮಕ್ಕಳನ್ನು ರಕ್ಷಿಸಿದ್ದಾರೆ. ಹ್ಯುಮಾನಿಟೇರಿಯನ್ ಕೇರ್ ಡಿಪಾರ್ಟ್ ಮೆಂಟ್ ಈ ಸಂದರ್ಭದಲ್ಲಿ ಮೂವರು ಮಕ್ಕಳ ಖರ್ಚಿಗೆ ತಗಲುವ ಮೊತ್ತವನ್ನು ನೀಡುವುದಾಗಿ ವಹಿಸಿಕೊಂಡಿದ್ದು ಅಪಾರ್ಟ್ ಮೆಂಟ್ ನ ಎಲ್ಲಾ ಬಾಡಿಗೆ ಮೊತ್ತವನ್ನು ಕೂಡ ನೀಡಲು ಮುಂದೆ ಬಂದಿದೆ.